ಅವರೇಕಾಳು ಸೀಸನ್ ನಲ್ಲಿ ಅವರೆಕಾಯಿಯದ್ದೇ ಹಬ್ಬ. ಪಲ್ಯ, ರೊಟ್ಟಿ, ಪಲಾವ್ ಹೀಗೆ ನಾನಾ ತರ ಅಡುಗೆ ಬಾಯಿಗೆ ರುಚಿಕೊಡುತ್ತವೆ. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಅವರೆಕಾಳು ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟನ್ನು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಸಾಮಾನುಗಳು :
- ಅವರೆಕಾಳು – ಒಂದು ಕಪ್
- ಮೀಡಿಯಂ ರವೆ – ಒಂದು ಪಾವು
- ಸಬ್ಬಸಿಗೆ ಸೊಪ್ಪು – ಒಂದು ಕಂತೆ
- ಈರುಳ್ಳಿ – ಎರಡು ದೊಡ್ಡದು
- ಹಸಿ ಮೆಣಸಿನಕಾಯಿ – ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ತೆಂಗಿನತುರಿ – ಸ್ವಲ್ಪ
- ಲಿಂಬೆಹಣ್ಣು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಸ್ವಲ್ಪ
- ತುಪ್ಪ – ಸ್ವಲ್ಪ
ಮಾಡುವ ವಿಧಾನ :
ಮೊದಲಿಗೆ ಅವರೆಕಾಳು ಬೇಯಿಸಿಕೊಳ್ಳಿ. ರವೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಒಂದು ಬಾಣಲಿಗೆ ಎಣ್ಣೆ ಹಾಕಿ ಸಾಸಿವೆ,ಉದ್ದಿನಬೇಳೆ, ಕಡ್ಲೆಬೇಳೆ, ಕರಿಬೇವಿನಸೊಪ್ಪು, ಹಸಿಮೆಣಸಿನಕಾಯಿ ಈರುಳ್ಳಿ, ಹಾಕಿ ಫ್ರೈ ಮಾಡಿ ಸಬ್ಬಸಿಗೆ ಸೊಪ್ಪು ಕೂಡ ಹಾಕಿ ಫ್ರೈ ಮಾಡಿ. ಬೆಂದ ಅವರೆಕಾಳು ಸೇರಿಸಿ.
ನಂತರ ಮೂರುವರೆ ಗ್ಲಾಸ್ ನೀರು , ಉಪ್ಪು ಹಾಕಿ ಕುದಿಯಲು ಬಿಡಿ. ಈಗ ಕುದಿಯುತ್ತಿರುವ ನೀರಿಗೆ ರವೆ ಹಾಕಿ ಗಂಟಿಲ್ಲದಂತೆ ಕಲಸಿ. 5 ನಿಮಿಷ ಮುಚ್ಚಿಡಿ. ಈಗ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಹಾಗೂ ಲಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಮುಚ್ಚಿಡಿ.
ಈಗ ರುಚಿಯಾದ ಅವರೆಕಾಳು ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟು ರೆಡಿ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.
