ಉದ್ಯೋಗವೇ ಸಿಗುತ್ತಿಲ್ಲ ಎಂದು ನೊಂದುಕೊಂಡು ಕೂತಾಗ ಸ್ವಾಮಿ ಜಗದಾತ್ಮಾನಂದ ಅವರು ಬರೆದ “ಬದುಕಲು ಕಲಿಯಿರಿ” ಪುಸ್ತಕವನ್ನು ಓದಿದ ಮೇಲೆ ಮನಸ್ಸಿನಲ್ಲಿಯಾದ ಪರಿಣಾಮವನ್ನು ಲೇಖಕರಾದ ಅರವಿಂದ ಬಾ ಕುಲಕರ್ಣಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಧಾರವಾಡದ ಕರ್ನಾಟಕ ಕಾಲೇಜಿನಿಂದ ಆಗಿ ನಮ್ಮ ಹಳ್ಳಿಗೆ ಬಂದೆ. ಇನ್ನು ಯಾವುದಾದರೂ ಸರಕಾರಿ ನೌಕರಿ ಹಿಡಿಯಬೇಕು. ಆ ಸಮಯದಲ್ಲಿ ಎಲ್ಲ ಕಡೆ ನಿರುದ್ಯೋಗದ ಸಮಸ್ಯೆ. ಅವಕಾಶಗಳು ತುಂಬಾ ಕಡಿಮೆ.
“ಈಗ ಎಲ್ಲರೂ ಡಿಗ್ರಿ ಮುಗಿಸಿ ಕೊಂಡು ಬರ್ತಾರೆ ಎಲ್ಲಿ ನೌಕರಿ ದೊರೆಯುತ್ತದೆ ” ಅನ್ನುವ ಮಾತೇ ಎಲ್ಲ ಕಡೆ ನಮ್ಮ ಗ್ರಾಮದಲ್ಲಿ ಈಗಾಗಲೇ ಎಂಟು ಹತ್ತು ಜನ ಬಿಎ, ಬಿಎಸ್ ಡಿಗ್ರಿ ಮುಗಿಸಿಕೊಂಡು ಬಂದವರೇ ಅವರು ಊರಿಗೆ ಬಂದು ನಾಲ್ಕು ಐದು ವರ್ಷ ಆಗಿದೆ.

ಅವರ ಕೆಲಸ ಪೇಪರಿನಲ್ಲಿ” ಬೇಕಾಗಿದ್ದರೆ ” ಕಾಲಂ ನೋಡುವದು ಅರ್ಜಿ ಗುಜರಾಯಿಸುವುದು ಅವರ ಸಾಲಿನಲ್ಲಿ ನಾನೂ ಸೇರಿದೆ. ಅವರೆಲ್ಲರದ್ದೂ ಒಂದೇ ಮಾತು ಎಲ್ಲಾ ಕಡೆ ವಸಿಲಿ, ಹಣ “ಕೆಲಸಗಳು ಮೊದಲೇ ತಮ್ಮ ತಮ್ಮ ಜನಕ್ಕೆ ನಿರ್ಣಯ ಆಗಿರತಾವ ” ನಮ್ಮನ್ನ ಸುಮ್ಮನ ಇಂಟರ್ವ್ಯೂ ಕರಿತಾರ ಸುಮ್ಮನ ಹೋಗುವದು ಬರುವದು “ಲಿಖಿತ ಪರೀಕ್ಷೆ ಕೂಡ ತಮಗೆ ಬೇಕಾದ ಅಭ್ಯರ್ಥಿ ಗಳನ್ನು ಪಾಸ್ ಮಾಡ್ತಾರ.” ಇಂತಹ ಎಲ್ಲ ನಕಾರಾತ್ಮಕ ಮಾತುಗಳನ್ನು ಅವರ ಬಾಯಿಂದ ಕೇಳಿ ಕೇಳಿ ನನ್ನ ಮನಸ್ಸಿನಲ್ಲಿ ಕೂಡ ಇದೆ ಯೋಚನೆ ತುಂಬಿಕೊಂಡೆ.
ಮುಂದೆ ಇನ್ನೂ ಎಂಸ್ಸಿ ಅಥವಾ ಎಲ್ ಎಲ್ ಬಿ ಏನಾದರೂ ಕಲಿಯಬೇಕೆಂದರೆ , ನಮ್ಮ ತಂದೆ ಕೃಷಿಕರು ಅವರಿಗೆ ಇಷ್ಟು ಕಲಿಸುದರಾಗ ಕೈ ಸೋತಿತ್ತು. ಯಾಕೆಂದರೆ ಅನಿಶ್ಚಿತ ಮಳೆ, ಕೃಷಿ ವರಮಾನ ಅಷ್ಟಕ್ಕಷ್ಟೆ. ಈಗ ಇರುವ ಸಾಲವೇ ಭಾರವಾಗಿರುವಾಗ ಜೀವನ ದುಸ್ತರ. ಮಗ ಏನಾದರೂ ಒಂದು ಸಣ್ಣ ನೌಕರಿ ಮಾಡಿದರೆ ಮನೆಗೆ ಅನುಕೂಲ ಆದೀತು ಅಂತ ಭಾವನೆ. ನಾನು ಈ ನಿರುದ್ಯೋಗಿ ಸಹಪಾಠಿಗಳೊಂದಿಗೆ ಕೆರೆ ಬಯಲಿನಲ್ಲಿ ಕ್ರಿಕೆಟ್ ಆಡುವುದು . ಅಲ್ಲಿ ಇಲ್ಲಿ ತಿರುಗಾಡುವುದು.
ಅರ್ಜಿ ಸಲ್ಲಿಸಲು ಶುಲ್ಕ ಸಹಿತ ತಂದೆಯನ್ನು ಕೇಳುವದು. ಖಾಸಗಿ ಕೆಲವು ಮಾರ್ಕೆಟಿಂಗ್ ಕಂಪನಿಯಲ್ಲಿ ಇಂಟರ್ವ್ಯೂ ಹೋದಾಗ ನಿಮಗೆ ಅನುಭವ ಏನಿದೆ , ಎಲ್ಲಿಯಾದರೂ ಕೆಲಸ ಮಾಡಿದ್ದೀರಾ? ಅನ್ನುವ ಪ್ರಶ್ನೆ. ಹೀಗೆ ನಿರಾಶೆಯಿಂದ ಇರುವ ಸಮಯದಲ್ಲಿ ಒಂದು ನಿಯತ ಕಾಲಿಕ ಓದಿದೆ.
ಅದರಲ್ಲಿ “ಸ್ವಾಮಿ ಜಗದಾತ್ಮಾನಂದ ” ಅವರು ಬರೆದ “ಬದುಕಲು ಕಲಿಯಿರಿ “ಎಂಬ ಪುಸ್ತಕದ ಬಗ್ಗೆ ಪರಿಚಯಾತ್ಮಕ ಲೇಖನ ಬಂದಿತ್ತು. ಆ ಪುಸ್ತಕ ತಂದು ಅದನ್ನು ಅಮೂಲಾಗ್ರವಾಗಿ ಓದಿದೆ. ಜೀವನ ಇರುವದು ” ನನ್ನಿಂದ ಏನಾದೀತು ಅನ್ನುವ ಹೇಡಿಗೆ ಅಲ್ಲ.” ಅದು ಇರುವದು ಧೀರರಿಗೆ ಮಾತ್ರ.”
“ಯಾರೂ ಕೂಡ ನಮಗೆ ಜಯವನ್ನು ಬೆಳ್ಳಿ ತಟ್ಟೆಯಲ್ಲಿ ತಂದು ಉಡುಗೊರೆಯಾಗಿ ಕೊಡುವುದಿಲ್ಲ.” ವಿಜಯವನ್ನು ಪ್ರಯತ್ನದಿಂದ ಹಕ್ಕಿನಿಂದ ಪಡೆಯಬೇಕು. ಸಕಾರಾತ್ಮಕ ಯೋಚನೆ ಮತ್ತು ಆ ದಿಕ್ಕಿನಲ್ಲಿ ಪೂರ್ಣ ಪ್ರಮಾಣದ ಪ್ರಯತ್ನ ನಿಶ್ಚಿತವಾಗಿ ಯಶ ಕೊಡುತ್ತದೆ.”ಯಾವದೇ ಕೆಲಸ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದನ್ನು ಪ್ರೀತಿಯಿಂದ ಮಾಡಬೇಕು”. ಇದು ಆ ಪುಸ್ತಕದ ಸಾರ.
ಈ ಅಮೂಲ್ಯವಾದ ಪುಸ್ತಕ ಓದಿದ ಮೇಲೆ ನನ್ನ ಯೋಚನೆಯ ದಿಕ್ಕೇ ಬದಲಾಯಿತು. ಆಗ ನಕಾರಾತ್ಮಕವಾಗಿ ಯೋಚಿಸುವ ನನ್ನ ಎಲ್ಲ ಗೆಳೆಯರ ಸಂಘವನ್ನು ಬಿಟ್ಟುಬಿಟ್ಟೆ. ಆ ಸಮಯದಲ್ಲಿ ನಮ್ಮ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಕಾರ್ಯ ಮಾಡುತ್ತಿತ್ತು.

ಆ ಸಂಘದ ಸೆಕ್ರೆಟರಿ ಕೆಲಸ ಖಾಲಿ ಇತ್ತು. ಅದೊಂದು ಸಾಧಾರಣ ಕೆಲಸ. ಆ ಕೆಲಸಕ್ಕೆ ಎಸ್ ಎಸ್ ಎಲ್ ಸಿ ಅಥವಾ ಅದಕ್ಕಿಂತ ಕಡಿಮೆ ವಿದ್ಯಾಭ್ಯಾಸ ಆದವರು ಮಾಡಬಹುದಾದ ಕೆಲಸ. ನಾನು ಆ ಸಂಘದ ಅಧ್ಯಕ್ಷರನ್ನು ಭೇಟಿಯಾಗಿ ಆ ಕೆಲಸ ನಾನು ಮಾಡುತ್ತೇನೆ ಎಂದು ವಿನಂತಿಸಿದೆ. ಆ ಕೆಲಸಕ್ಕೆ ಪಗಾರ ತಿಂಗಳಿಗೆ ಕೇವಲ 150. ರೂಪಾಯಿ ನೀನು ಪದವೀಧರ , ಇಷ್ಟು ಸಣ್ಣ ಪಗಾರಕ್ಕೆ ಹೇಗೆ ಕೆಲಸ ಮಾಡುತ್ತಿ? ಎಂದು ಕೇಳಿದರು.
“ನಡೆಯುತ್ತದೆ” ಎಂದು ಹೇಳಿದೆ. ಅದನ್ನೇ ಅತ್ಯಂತ ಶ್ರದ್ಧೆಯಿಂದ ಮಾಡಿದೆ. ಆ ಸಣ್ಣ ಕೆಲಸದಿಂದ ನನಗೆ ಬಹಳ ಪ್ರಯೋಜನ ಮತ್ತು ಅನುಭವ ಆಯಿತು. ಕೆಲಸದ ನಿಮಿತ್ತ ಬ್ಯಾಂಕಿಗೆ ಹೋಗುವದು. ಸಂಘದ ಸದಸ್ಯರಿಗೆ ಬ್ಯಾಂಕಿನಿಂದ ಎಮ್ಮೆ , ಹಸು ಕೊಳ್ಳುವ ಸಲುವಾಗಿ ಸಾಲ ವಿತರಣೆಗೆ ಸಹಾಯ ಮಾಡುವ ಅವಕಾಶ ದೊರೆಯಿತು.
ಅದೇ ಕೆಲಸ ಸಂತೋಷದಿಂದ ಮಾಡುತ್ತಾ ಒಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೆ. ಸುಮಾರು ಎರಡು ವರ್ಷಗಳ ನಂತರ ಗ್ರಾಮೀಣ ಬ್ಯಾಂಕ್ ನಲ್ಲಿ ಕ್ಲಾರ್ಕ್ ಹುದ್ದೆಗೆ ಅರ್ಜಿ ಕರೆದರು. ಅರ್ಜಿ ಹಾಕಿದೆ. ಲಿಖಿತ ಪರೀಕ್ಷೆ ಇತ್ತು. ಅತ್ಯಂತ ಸಕಾರಾತ್ಮಕ ಯೋಚಿಸಿ, ಸಂಬಂಧಿಸಿದ ಪುಸ್ತಕ ಓದಿ ಪರೀಕ್ಷೆಗೆ ಪೂರ್ಣ ಪ್ರಮಾಣದ ತಯಾರಿ ಮಾಡಿದೆ. ಪರೀಕ್ಷೆ ತೇರ್ಗಡೆ ಆಯಿತು.
ಇಂಟರ್ವ್ಯೂ ನಲ್ಲಿ ನನ್ನ ಸಹಕಾರ ಸಂಘದ ಅನುಭವ ತುಂಬಾ ನೆರವಿಗೆ ಬಂತು ಮತ್ತು ನಾನು ಅತ್ಯಂತ ನಿರೀಕ್ಷಿಸಿದ ಬ್ಯಾಂಕ್ ನೌಕರಿ ದೊರೆಯಿತು. ನಂತರ ಎರಡೇ ವರ್ಷದ ಅವಧಿಯಲ್ಲಿ ಅದೇ ಬ್ಯಾಂಕಿನಲ್ಲಿ ಅಧಿಕಾರಿ ಆಗಿ ಪುನರ್ನೆಮಕ ಆಯಿತು.
ಜೂನಿಯರ್ ಅಧಿಕಾರಿ ಆಗಿದ್ದ ನಾನು ಹಿರಿಯ ವ್ಯವಸ್ಥಾಪಕ ಹುದ್ದೆಯವರೆಗೆ ಪದೋನ್ನತಿ ಹೊಂದಿ 32 ವರ್ಷ ಸೇವೆ ಸಲ್ಲಿಸಿ ಅತ್ಯಂತ ಸಂತೃಪ್ತಿಯಿಂದ ನಿವೃತ್ತಿಯಾದೆ. ನನ್ನ ಜೀವನಕ್ಕೆ ತಿರುವು ಕೊಟ್ಟ “ಸ್ವಾಮಿ ಜಗದಾತ್ಮಾನಂದ ” ಅವರು ಬರೆದ “ಬದುಕಲು ಕಲಿಯಿರಿ” ಪುಸ್ತಕವನ್ನು ಅತ್ಯಂತ. ಕೃತಜ್ಞತೆಯಿಂದ ಸ್ಮರಿಸುತ್ತೇನೆ.
- ಅರವಿಂದ ಬಾ ಕುಲಕರ್ಣಿ – ಹುಬ್ಬಳ್ಳಿ.
