ಬದುಕಿಗೊಂದು ಸೆಲೆ (ಭಾಗ-೪೯)

ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಕ್ ಎಂದು ಹೇಳಿದ ತಕ್ಷಣ ಗಂಡ ಹೆಂಡತಿಯ ನಡುವಿನ ಭಾವ ಬಂಧನ ಹರಿದು ಹೋಗುತ್ತದೆಯೇ? ಎಂಬ ಆಕೆಯ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ನಿಜ ಜೀವನದ ವ್ಯಥೆಯ ಕಥೆ ಚಿತ್ರವಾಗಿ ಮೂಡಿ ಬಂದಾಗ ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ ವಿಷಯದ ಕುರಿತು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಸಮಾಜದ ಹಿರಿಯರ ಸಮ್ಮುಖದಲ್ಲಿ ಅನುಬಂಧ ಪತ್ರಕ್ಕೆ ಸಹಿ ಹಾಕಿರುವುದು ಬದುಕಿನ ಉದ್ದಕ್ಕೂ ಜೊತೆಯಾಗಿ ಸುಖ ದುಃಖಗಳನ್ನು ಹಂಚಿಕೊಂಡು ಸಾಗುತ್ತೇವೆ ಎಂದು ಹೇಳಿರುವುದು ಸುಳ್ಳೇ? ಎಂಬ ಆಕೆಯ ಪ್ರಶ್ನೆಗೆ ಮೌನವೇ ಉತ್ತರವಾಗುತ್ತದೆ.

ಗಂಡನನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳುತ್ತಿರುವವರಲ್ಲಿ ನೀನೇನು ಜಗತ್ತಿನ ಮೊದಲ ಮಹಿಳೆ ಅಲ್ಲ ಎಂಬ ಅತ್ತೆಯ ಮಾತಿಗೆ ಗಂಡ ಎಂಬ ವ್ಯಕ್ತಿ ಶೀರ ಕುರ್ಮಾ ಅಥವಾ ಬಿರಿಯಾನಿ ಅಲ್ಲ ಹಂಚಿಕೊಂಡು ತಿನ್ನಲು ಎಂಬ ಆಕೆಯ ನೋವಿನ ಆಕ್ರಂದನಕ್ಕೆ ಪ್ರತಿಕ್ರಿಯಿಸಲು ಅಲ್ಲಿ ಯಾರೂ ಇರಲಿಲ್ಲ. ಇದ್ದವರು ಕೂಡ ಆಕೆಯ ರೋದನಕ್ಕೆ ಕಿವುಡಾಗಿದ್ದರು.

ಇಲ್ಲಿದೆ ನಿನ್ನ ಮೆಹರ್ ನ ದುಡ್ಡು. ಇಂದಿನಿಂದ ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ…. ತಲಾಕ್ ತಲಾಕ್ ತಲಾಕ್ ಎಂದು ಆತ ಹೇಳಿದಾಗ ಅಲ್ಲಿದ್ದವರೆಲ್ಲ ಗಾಬರಿಗೊಂಡರೆ ಆಕೆಯ ಕಾಲ ಕೆಳಗಿನ ನೆಲವೇ ಕುಸಿದಂತಾಗಿ ಆಕೆಯ ದಾಂಪತ್ಯದ ಬದುಕು ಅನಿರೀಕ್ಷಿತವಾಗಿ ಅಂತ್ಯಗೊಂಡಿತು.

ಮಕ್ಕಳ ಹಾಗೂ ತನ್ನ ಪಾಲನೆ ಪೋಷಣೆಯ ಸಲುವಾಗಿ ಪತಿಯಿಂದ ಆರ್ಥಿಕ ಸಹಾಯದ ಅನುಕೂಲವನ್ನು ಅಪೇಕ್ಷಿಸಿದ ಆಕೆ ಕೋರ್ಟಿಗೆ ಹೋದಳು. ಕೋರ್ಟಿನಲ್ಲಿ ಸೆಕ್ಯುಲರ್ ಕಾನೂನು ಚಾಲ್ತಿಯಲ್ಲಿದ್ದು ನೀನು ನಿಮ್ಮ ಧರ್ಮದ ಶರಿಯಾ ಕಾನೂನನ್ನು ಪಾಲಿಸಬೇಕು. ನಿಮ್ಮ ಧರ್ಮದ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೋ ಎಂದು ಆಕೆಯನ್ನು ಮರಳಿ ಕಳುಹಿಸಿದರು. ಹಾಗೆ ತನ್ನ ತಂದೆಯೊಂದಿಗೆ ಖಾಜಿಗಳ ಬಳಿ ಬಂದ ಆಕೆಗೆ ” ಹೆಣ್ಣು ಮಕ್ಕಳು ಇಂತಹ ವಿಷಯದಲ್ಲಿ ಬಾಯಿ ಬಿಡಲೇಬಾರದು… ಆದರೆ ನೀನು ನಿನ್ನ ಗಂಡನ ವಿರುದ್ಧ ನ್ಯಾಯಾಲಯದ ಬಾಗಿಲನ್ನು ತಟ್ಟಿರುವೆ. ನೀನು ನಮ್ಮ ಕೋಮಿನ ವಿರುದ್ಧ ದ್ರೋಹ ಮಾಡಿದ್ದಲ್ಲದೆ, ವಿದ್ರೋಹಿಗಳೊಂದಿಗೆ ಕೈಜೋಡಿಸಿರುವೆ” ಎಂದು ಆಕೆಯ ಸಮುದಾಯದ ಹಿರಿಯರು ಆಕೆಯನ್ನು ಖಂಡಿಸಿದರು. ಒಂದು ಹಂತದ ಮೌನವಾದ ಸಾಮಾಜಿಕ ಬಹಿಷ್ಕಾರ ಆಕೆಯ ಕುಟುಂಬದ ಮೇಲಾಯಿತು. ಆಕೆಯ ಮನೆಯ ಮೇಲೆ ಕಲ್ಲು ತೂರಾಟ ಕೂಡ ನಡೆಯಿತು.

ಫೋಟೋ ಕೃಪೆ : ಅಂತರ್ಜಾಲ

ಒಬ್ಬ ಹೆಣ್ಣಿನ ಮೇಲೆ ಎಲ್ಲ ರೀತಿಯ ಧಾರ್ಮಿಕ ಕಾನೂನಾತ್ಮಕ ಒತ್ತಡಗಳನ್ನು ಹಾಕಲಾಗುತ್ತದೆ ಎನ್ನುವುದಾದರೆ ಪುರುಷನ ಮೇಲೆ ಏಕೆ ಇಲ್ಲ ಎಂಬ ಆಕೆಯ ಪ್ರಶ್ನೆಗೆ ಇಡೀ ಕೋರ್ಟ್ ರೂಮ್ ಮೌನವಾಯಿತು. ಶರಿಯಾ ಕಾನೂನನ್ನು ಅಷ್ಟೊಂದು ಮಾನ್ಯ ಮಾಡುವುದೇ ಆದರೆ ಕುರಾನಿನಲ್ಲಿ ತನ್ನ ಪತ್ನಿಯ ಒಪ್ಪಿಗೆ ಇಲ್ಲದೆ ಮತ್ತೊಂದು ವಿವಾಹವಾಗುವ ಪತಿಗೆ ಚಾಟಿ ಏಟನ್ನು ಕೊಡಬೇಕು ಎಂಬ ಕುರಾನಿನ ಶಿಕ್ಷೆಯನ್ನು ಎಷ್ಟು ಜನ ಗಂಡಸರಿಗೆ ನೀಡಲಾಗಿದೆ ಎಂಬ ಆಕೆಯ ಪ್ರಶ್ನೆಗೆ ಅಲ್ಲಿರುವ ಎಲ್ಲರೂ ನಿರುತ್ತರರಾಗಿದ್ದರು.

ಧಾರ್ಮಿಕ ಕಾನೂನನ್ನು ಪರಿಗಣಿಸದೆ ಇರುವ ಸೆಕ್ಯುಲರ್ ಲಾ ಎಂಬ ಜಾತ್ಯಾತೀತ ಕಾನೂನು ನಮ್ಮ ಧಾರ್ಮಿಕ ಕಾನೂನಿನ ಹಕ್ಕುಗಳ ಪಾಲನೆಗೆ ಅಡ್ಡ ಬಂದರೆ ನಾವು ಸುಮ್ಮನಿರಬೇಕೇ? ಎಂಬುದು ತನ್ನ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಆಕೆಯ ಪತಿ ಮಾಡುತ್ತಿದ್ದ ಮೊಂಡು ವಾದವಾಗಿದ್ದು ಇದಕ್ಕೆ ಆ ಧರ್ಮದ ಮೌಲ್ವಿಗಳು, ಖಾಜಿಗಳು ಅನುಮೋದನೆ ನೀಡುತ್ತಿದ್ದರು.

ಕಥೆ ಹೀಗಿದೆ 1970ರ ದಶಕದ ಈ ಕಥೆಯಲ್ಲಿ ಭಾರತ ದೇಶದಂತಹ ಜಾತ್ಯತೀತ ರಾಷ್ಟ್ರದಲ್ಲಿ ವಾಸಿಸುತ್ತಿರುವ ಮೌಲ್ವಿಗಳ ಮಗಳು ಶಾಜಿಯ ಬಾನು ಎಂಬ ಹೆಣ್ಣು ಮಗಳ ವಿವಾಹವನ್ನು ಅಬ್ಬಾಸ್ ಖಾನ್ ಎಂಬ ವಕೀಲರೊಂದಿಗೆ ಮಾಡಿಕೊಡಲಾಗುತ್ತದೆ. ಇವರಿಬ್ಬರ ಪ್ರೀತಿ ಪ್ರೇಮದ ದಾಂಪತ್ಯಕ್ಕೆ ಎರಡು ಮಕ್ಕಳಾಗಿದ್ದು ಮೂರನೇ ಮಗುವಿಗೆ ಆಕೆ ಗರ್ಭ ಧರಿಸಿದಾಗ ಪತಿ ಮತ್ತೊಂದು ಹೆಣ್ಣು ಮಗಳನ್ನು ವಿವಾಹವಾಗಿ ಮನೆಗೆ ಕರೆತರುತ್ತಾನೆ. ಭಾವನಾತ್ಮಕವಾಗಿ ನೊಂದುಹೋದರೂ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಶಾಜಿಯ ಮತ್ತು ಆಕೆಯ ಮಕ್ಕಳನ್ನು ಪತಿ ಸಂಪೂರ್ಣವಾಗಿ ಕಡೆಗಣಿಸುತ್ತಾನೆ.

ಅದೊಂದು ದಿನ ತನ್ನ ಮದುವೆಯ ವಾರ್ಷಿಕೋತ್ಸವದ ಸಂಭ್ರಮಕ್ಕೆ ಪತಿಯ ಬಳಿ ಹೋದಾಗ ಆತನಿಂದ ತಿರಸ್ಕರಿಸಲ್ಪಟ್ಟು ತೀವ್ರವಾಗಿ ನೊಂದುಕೊಳ್ಳುವ ಶಾಜಿಯ ತನ್ನ ಮಕ್ಕಳೊಂದಿಗೆ ತವರಿಗೆ ತೆರಳುತ್ತಾಳೆ. ಮೊದಲ ಕೆಲ ತಿಂಗಳುಗಳ ಕಾಲ ಮಕ್ಕಳ ನಿರ್ವಹಣೆಗಾಗಿ ಹಣವನ್ನು ಕಳುಹಿಸುವ ಆಕೆಯ ಪತಿ ನಂತರ ಅದನ್ನು ನಿಲ್ಲಿಸುತ್ತಾನೆ. ಇದರಿಂದ ಸಂಕಷ್ಟಕ್ಕೆ ಒಳಗಾದ ಆಕೆ ಪತಿಯನ್ನು ಭೇಟಿಯಾಗುವ ಹಲವಾರು ಪ್ರಯತ್ನಗಳಲ್ಲಿ ಸೋತು ಹೋಗುತ್ತಾಳೆ. ಕುಟುಂಬದ ನಿರ್ವಹಣೆಯ ಕಾರಣಕ್ಕಾಗಿ ಅನಿವಾರ್ಯವಾಗಿ ತನ್ನ ಹಕ್ಕಿಗಾಗಿ ಹೋರಾಡುವ ಹೆಣ್ಣು ಮಗಳಾಗಿ ಶಾಜಿಯ ಬದಲಾಗುತ್ತಾಳೆ.

ಓರ್ವ ಹೆಣ್ಣು ಮಗಳು ಭಾರತೀಯ ನ್ಯಾಯ ಸಂಹಿತೆ, ಮುಸ್ಲಿಮ್ ಸಮುದಾಯದ ಶರಿಯ ಕಾನೂನು ಹಾಗೂ ಸಂವಿಧಾನದ ನಡುವಣ ಹೋರಾಟಕ್ಕೆ ನಾಂದಿ ಹಾಡುತ್ತಾಳೆ.

ತನ್ನ ಮತ್ತು ಮಕ್ಕಳ ಖರ್ಚಿನ ನಿರ್ವಹಣೆಗಾಗಿ ಆಕೆ ಕೋರ್ಟಿನ ಮೊರೆ ಹೋದಾಗ ಅಂದು ಮುಸ್ಲಿಂ ಸಮಾಜದಲ್ಲಿ ಅತ್ಯಂತ ಶಕ್ತಿಯುತವಾಗಿದ್ದ ತೀನ ತಲಾಖ್ ನ ತಲಾಕ್ ತಲಾಕ್ ತಲಾಕ್ ಎಂಬ ವಾಕ್ಯಗಳನ್ನು ಮೂರು ಬಾರಿ ಉಚ್ಚರಿಸಿದ ವಿದ್ಯಾವಂತ ವಕೀಲ ಪತಿ ಆಕೆಯಿಂದ ತಮ್ಮೆಲ್ಲ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಈ ಮೂಲಕ ತಾನು ಆಕೆಗೆ ನಿರ್ವಹಣೆಯ ವೆಚ್ಚ ಕೊಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಫೋಟೋ ಕೃಪೆ : ಅಂತರ್ಜಾಲ

ಶೈಕ್ಷಣಿಕವಾಗಿ ಹೆಚ್ಚಿನ ವಿದ್ಯಾಭ್ಯಾಸ ಲಭ್ಯವಾಗಿಲ್ಲದೆ ಹೋದರೂ ಕೂಡ ಕುರಾನ್ ನ ಪ್ರತಿಯೊಂದು ಅಕ್ಷರಗಳನ್ನು ಪಠಿಸಿ ಮನನ ಮಾಡಿಕೊಂಡಿದ್ದ ಆಕೆ ನ್ಯಾಯಾಲಯದಲ್ಲಿ ಕುರಾನ್ ನ (ಇದ್’ ಎಂಬ ಅಕ್ಷರದ ಓದು ಎಂಬ ಪದದ ಅರ್ಥವನ್ನು ವಿವರಿಸಿ ಹೇಳಿ ಖುರಾನ್ ನ ವಾಕ್ಯಗಳನ್ನು ಅವರಿವರಿಂದ ಕೇಳಿ ತಪ್ಪಾಗಿ ಗ್ರಹಿಸುವ ಜನರಿಗೆ ಖುದ್ದಾಗಿ ಕುರಾನ್ ಅನ್ನು ಓದಿ ಮನನ ಮಾಡಿಕೊಂಡು ಅದನ್ನು ಆಚರಣೆಗೆ ತರುವ ನಿಟ್ಟಿನಲ್ಲಿ ಕರೆ ನೀಡುತ್ತಾಳೆ.

ತಾಯಿಯ ಗೊಣಗಾಟವಿದ್ದರೂ ಕೂಡ ತಂದೆಯ ಅಪಾರ ಬೆಂಬಲ ಮತ್ತು ಆಸರೆ ಆಕೆಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿರುತ್ತದೆ.

ಶಾಜಿಯಾ ಬಾನುವಿಗೆ ಬೇಲಾ ಜೈನ್ ಎಂಬ ಮಹಿಳಾ ವಕೀಲರ ಬೆಂಬಲ ದೊರೆತು ತನ್ನ ಮತ್ತು ಮಕ್ಕಳ ಬದುಕಿನ ನಿರ್ವಹಣೆಗಾಗಿ ಆಕೆ ಪತಿಯಿಂದ ಸೂಕ್ತ ಮೊತ್ತದ ಬೇಡಿಕೆಯನ್ನು ಸಲ್ಲಿಸುವ ಮೂಲಕ ಕೋರ್ಟಿನ ಮೊರೆ ಹೋಗುತ್ತಾಳೆ. ಹಲವಾರು ವರ್ಷಗಳ ಕಾಲ ನಡೆದ ಈ ಮೊಕದ್ದಮೆಯ ವಿಚಾರಣೆಯಲ್ಲಿ ಮಾನಸಿಕವಾಗಿ,ಭಾವನಾತ್ಮಕವಾಗಿ ಕುಸಿದು ಹೋದರೂ ಕೂಡ ದೃಢವಾಗಿ ಮತ್ತೆ ಎದ್ದು ನಿಲ್ಲುವ ಶಾಜಿಯ ಬಾನು ಮುಸ್ಲಿಂ ಸಮಾಜದ ಅಸಂಖ್ಯಾತ ನೊಂದ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಕಾಣುತ್ತಾಳೆ.

ಮಾನಸಿಕವಾಗಿ, ಭಾವನಾತ್ಮಕವಾಗಿ ನೊಂದುಹೋಗುವ ಇಂತಹ ಹೆಣ್ಣು ಮಕ್ಕಳು ಸಾಮಾಜಿಕ ಬಹಿಷ್ಕಾರವನ್ನು, ತಿರಸ್ಕಾರವನ್ನು ಎದುರಿಸಬೇಕಾಗಿ ಬಂದಾಗ ಆಕೆ ಅನುಭವಿಸುವ ನೋವು, ಅವಮಾನ ಮತ್ತು ಸಾಮಾಜಿಕ ವರ್ತನೆಗಳನ್ನು ಕಟುವಾಗಿ ಖಂಡಿಸಿ ತನ್ನ ಹಕ್ಕಿಗಾಗಿ ಹೋರಾಡುವ ಮತ್ತು ಅಂತಿಮವಾಗಿ ಭಾರತದ ಮುಸ್ಲಿಂ ಮಹಿಳೆಯಾಗಿ ತನಗೂ ಕೂಡ ಏಕ ರೂಪ ನಾಗರಿಕ ಸಂಹಿತೆಯ ಮೂಲಕ ತನ್ನ ಹಕ್ಕುಗಳನ್ನು ಮರಳಿಸಿ ಕೊಡಬೇಕು ಎಂಬ ಆಕೆಯ ವಾದ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪುರಸ್ಕರಿಸಲ್ಪಡುತ್ತದೆ.

ಆಕೆಯ ವೈಯುಕ್ತಿಕ ಹೋರಾಟ ಮುಂದೆ ತನ್ನ ಜನಾಂಗದ ಮುಸ್ಲಿಂ ಹೆಣ್ಣು ಮಕ್ಕಳ ಬದುಕಿನ ಸುಧಾರಣೆಯ ನಿಟ್ಟಿನಲ್ಲಿ ಸಾರ್ವತ್ರಿಕ ರೂಪವನ್ನು ಪಡೆಯುತ್ತದೆ

ವಿನೀತ್ ಜೈನ್ ನಿರ್ಮಾಣದ ಈ ಚಿತ್ರವನ್ನು ಸುಪರ್ಣ ಸೇನ್ ನಿರ್ದೇಶಿಸಿದ್ದು ಯಾಮಿ ಗೌತಮಿ ಶಾಜಿಯಾ ಬಾನುವಿನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಆಕೆಯ ಪತಿ ಅಬ್ಬಾಸ್ ಖಾನ್ ಆಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಅಂದಿನ ಸಾಮಾಜಿಕ ಸಂಪ್ರದಾಯಗಳಲ್ಲಿ ಬಂಧಿಯಾಗಿದ್ದ ಹೆಣ್ಣು ಮಕ್ಕಳ ಅಸ್ಮಿತೆ, ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಹಾಗೂ ಅಪರಾಧ ನಿರ್ಣಯ ಮತ್ತು ಕಾನೂನಿನ ಶಕ್ತಿಯನ್ನು ಪರಿಚಯಿಸುವ ಮಹಿಳಾ ವಕೀಲೆ ಬೇಲಾ ಜೈನ್ ಪಾತ್ರದಲ್ಲಿ ಶೀಬಾ ಚಡ್ಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೇ ಹೆಣ್ಣು ಹೆತ್ತ ಎಲ್ಲಾ ಪಾಲಕರ, ಹೆಂಗರುಳಿನ ಪುರುಷರ ಗಂಟಲನ್ನು ಕೂಡ ಉಬ್ಬಿಸುವ, ನ್ಯಾಯಕ್ಕಾಗಿ ಅವಡುಗಚ್ಚಿ ನಿಲ್ಲುವ ಆಕೆಯ ಮನದಾಳದ ನೋವುಗಳನ್ನು ತಾವು ಕೂಡ ಅನುಭವಿಸುವ ವೀಕ್ಷಕರಿಗೆ ಅಂತಿಮವಾಗಿ ಶಾಜಿಯಾ ಬಾನುವಿನ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಎತ್ತಿ ಹಿಡಿಯುವ ಮೂಲಕ ಆಕೆಯ ಹಕ್ಕನ್ನು ಮರಳಿ ಕೊಟ್ಟಾಗ ಸಮಾಧಾನದ, ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತೆ ಮಾಡುವಲ್ಲಿ ಸಫಲವಾಗಿದೆ ಎಂದರೆ ತಪ್ಪಿಲ್ಲ.

ಪರಿಣಾಮಕಾರಿಯಾದ ಸಂಭಾಷಣೆಗಳಿಗೆ ಭಾವನಾತ್ಮಕ ಒಳನೋಟಗಳಿಗೆ ಹೆಣ್ಣು ಮಕ್ಕಳ ಮನದ ತೊಳಲಾಟಗಳನ್ನು ಅರಿಯುವ ನಿಟ್ಟಿನಲ್ಲಿ ಒಂದೊಮ್ಮೆ ಈ ಚಿತ್ರವನ್ನು ನೋಡಿ.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW