ಬದುಕಿಗೊಂದು ಸೆಲೆ (ಭಾಗ – ೯)

ದೀಪ ತನ್ನ ಬೆಳಕಿನಿಂದ ಎಲ್ಲರನ್ನು ಆಕರ್ಷಿಸುತ್ತದೆ ಆದರೆ ದೀಪದ ಅಡಿಯ ಕತ್ತಲು ಬಹಳಷ್ಟನ್ನು ನಮ್ಮಿಂದ ಮುಚ್ಚಿಡುತ್ತದೆ. ಅಂತಹ ಅಮೆರಿಕಾ ಎಂಬ ದೀಪದ ಅಡಿಯ ಕತ್ತಲ ಒಂದು ವಿಷಯವನ್ನು ನಾನಿಲ್ಲಿ ಹೇಳಬಯಸುವೆ. ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ ಇಂದಿನ ಅಂಕಣದಲ್ಲಿ ಓದಿ…

ಅಮೇರಿಕಾ ದೇಶ ಎಂದರೆ ಸಾಕು ನಮ್ಮ ಭಾರತೀಯ ಯುವ ಜನತೆಗೆ ಅದೇನೋ ಒಂದು ವಿಶಿಷ್ಟ ಆಕರ್ಷಣೆ. ಬದುಕಿನಲ್ಲಿ ಒಮ್ಮೆಯಾದರೂ ಅಮೆರಿಕಕ್ಕೆ ಹೋಗಬೇಕು, ಅಲ್ಲಿಯ ಜೀವನವನ್ನು ಸವಿಯಬೇಕು, ಅಲ್ಲೇ ವಾಸಿಸಬೇಕು ಎಂಬ ಕನಸು ಕಾಣುವವರು ಲಕ್ಷಾಂತರ ಜನ.

ಒಂದು ಹಂತದಲ್ಲಿ ಅಮೆರಿಕಾದ ಸಾಕಷ್ಟು ಜನರು ಮನೆಯಲ್ಲಿ ಅಡುಗೆ ಮಾಡುವುದನ್ನು ನಿಲ್ಲಿಸಿದರು. ಆಗ ಅದರ ಪರಿಣಾಮಗಳು ಅಷ್ಟಾಗಿ ಕಂಡು ಬರದೇ ಹೋದರು ಮುಂದಿನ ದಿನಗಳಲ್ಲಿ ಏನಾಯಿತು ನೋಡಿ!

ಅದು 1980ರ ಸಮಯ. ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞರು ಸರ್ಕಾರವನ್ನು ಮತ್ತು ಅಮೆರಿಕಾದ ಪ್ರಜೆಗಳನ್ನು ಅಮೆರಿಕಾದ ಅಡುಗೆ ಮನೆಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತವೆ ಮತ್ತು ಹಿರಿಯರು ಮತ್ತು ಮಕ್ಕಳ ಕಾಳಜಿಯನ್ನು ಸರ್ಕಾರ ನಿರ್ವಹಿಸುತ್ತದೆ ಇದು ಹೀಗೆ ಮುಂದುವರೆದರೆ ಕುಟುಂಬದ ಪ್ರಾಮುಖ್ಯತೆ ಮತ್ತು ಕೌಟುಂಬಿಕ ಜವಾಬ್ದಾರಿಗಳ ಅರಿವು ಇಲ್ಲದೆ ಹೋಗಿ ಕುಟುಂಬ ಪದ್ಧತಿಯೇ ನಶಿಸಿ ಹೋಗಬಹುದು ಎಂದು ಎಚ್ಚರಿಸಿದರು. ಆದರೆ ಈ ಕುರಿತು ಬಹಳ ಕಡಿಮೆ ಜನರು ಲಕ್ಷ್ಯ ವಹಿಸಿದರು.

ಯಾವಾಗ ಮನೆಯಲ್ಲಿ ಅಡುಗೆ ಮಾಡುವುದು ನಿಂತು ಹೋಗಿ ಬಹುತೇಕ ಊಟ ಮತ್ತಿತರ ಆಹಾರ ಪದಾರ್ಥಗಳನ್ನು ಹೊರಗಿಂದ ತರಿಸುವುದು ರೂಢಿಯಾದಾಗ ಅಮೆರಿಕಾದ ಕೌಟುಂಬಿಕ ಪದ್ಧತಿ ಮಗುಚಿ ಬಿತ್ತು. ಮನೆಯಲ್ಲಿ ಅಡುಗೆ ತಯಾರಿಸುವುದು ಕೇವಲ ಆಹಾರದ ಕುರಿತಾದ ವಿಷಯವಲ್ಲ, ಬದಲಾಗಿ ಇದೊಂದು ಜವಾಬ್ದಾರಿ. ಕುಟುಂಬವನ್ನು ಒಂದೆಡೆ ಒಟ್ಟಾಗಿ ಕೂರಿಸುವ, ಪ್ರೀತಿ ವಿಶ್ವಾಸದಿಂದ ಒಡನಾಡುವ ಒಂದು ಪದ್ಧತಿ.

ಫೋಟೋ ಕೃಪೆ : ಅಂತರ್ಜಾಲ

ಅಡುಗೆ ಮಾಡುವುದು ಕೇವಲ ಒಂದು ಕಲೆ ಅಲ್ಲ ಇದು ಕುಟುಂಬದ ಸಂಸ್ಕೃತಿ, ಸಂಸ್ಕಾರ ಮತ್ತು ಸಂತೃಪ್ತಿಯ ವಿಷಯ. ಯಾವುದಾದರೂ ಒಂದು ಮನೆಯಲ್ಲಿ ಕೇವಲ ವರಾಂಡ, ಬೆಡ್ರೂಮ್ ಮತ್ತು ಬಾತ್ರೂಮ್ಗಳು ಇದ್ದು ಅಡುಗೆಕೋಣೆ ಇಲ್ಲದೆ ಹೋದರೆ ಅದು ಮನೆ ಎನ್ನಿಸಿಕೊಳ್ಳುವರಿಲ್ಲ, ಅಂತಹ ಮನೆಯಲ್ಲಿ ಕುಟುಂಬ ವಾಸಿಸುವುದಿಲ್ಲ. ಅದನ್ನು ಹಾಸ್ಟೆಲ್ ಅಥವಾ ಹೋಟೆಲ್ ಎಂದು ಕರೆಯಬಹುದು. ಹಾಗಾದರೆ ತಮ್ಮ ಅಡುಗೆ ಕೋಣೆಯನ್ನು ಬಂದ್ ಮಾಡಿ ಕೇವಲ ಬೆಡ್ರೂಮ್ ಮತ್ತು ಬಾತ್ರೂಮ್ ಗಳನ್ನು ಹೊಂದಿದ ಅಮೆರಿಕನ್ ಕುಟುಂಬದ ಜನರ ಕಥೆ ಏನಾಗಿರಬಹುದು?

1971ರಲ್ಲಿ ಅಮೆರಿಕಾದ 71 ಶೇಕಡಾ ಕ್ಕಿಂತಲೂ ಹೆಚ್ಚು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇದೀಗ 50 ವರ್ಷಗಳ ನಂತರ ಕೇವಲ 20 ಶೇಕಡ ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇರುತ್ತಿದ್ದಾರೆ. ಕುಟುಂಬಗಳು ಇದೀಗ ಪಾಲನ ಕೇಂದ್ರಗಳಲ್ಲಿ ವಾಸಿಸುತ್ತಿವೆ. ಪ್ರತಿ ನೂರು ಜನರಲ್ಲಿ ಶೇಕಡ 15 ಜನ ಮಹಿಳೆಯರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ಕುಟುಂಬವಿದ್ದು ಶೇಕಡ 12ರಷ್ಟು ಜನರು ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಶೇಕಡಾ 19 ರಷ್ಟು ಮನೆಗಳು ಸಿಂಗಲ್ ಪೇರೆಂಟ್ ಮನೆಗಳಾಗಿವೆ. ಕೇವಲ ಆರು ಶೇಕಡ ಮನೆಗಳು ಮಾತ್ರ ದಂಪತಿಗಳು ಜೊತೆಯಾಗಿ ವಾಸಿಸುವ ಮನೆಗಳಾಗಿವೆ. 41 ಶೇಕಡ ಮಕ್ಕಳು ಅವಿವಾಹಿತ ತಾಯಂದಿರಿಂದ ಜನಿಸಿದವರಾಗಿದ್ದಾರೆ.ಅದರಲ್ಲೂ ಅರ್ಧಕ್ಕಿಂತ ಹೆಚ್ಚು ತಾಯಂದಿರು ಇನ್ನು ಹದಿಹರೆಯದವರಾಗಿದ್ದು ಶಾಲೆಗಳಲ್ಲಿ ಓದುತ್ತಿರುವ ಅಬೋಧ ಬಾಲೆಯರಾಗಿದ್ದಾರೆ. ಇದು ಅತ್ಯಂತ ಕಟುವಾದ ವಾಸ್ತವ.

ಅಂಕಿ ಸಂಖ್ಯೆಗಳ ವಿಷಯಕ್ಕೆ ಬಂದರೆ 41 ಶೇಕಡಾ ಅವಿವಾಹಿತ ತಾಯಂದಿರು ಅನ್ನುವುದರ ಅರ್ಥ ವಿವಾಹ ಎಂಬ ಸಂಸ್ಥೆಯಲ್ಲಿ ಅವರಿಗೆ ನಂಬಿಕೆ ಇಲ್ಲ ಮತ್ತು ಪರಿಶುದ್ಧತೆ ಎಂಬುದು ಅವರಲ್ಲಿ ಉಳಿದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ, ಇದೆಲ್ಲದರ ಪರಿಣಾಮವಾಗಿ ಅಮೆರಿಕಾದಲ್ಲಿ ನಡೆಯುವ ಬಹುತೇಕ ಮೊದಲ ಮದುವೆಗಳಲ್ಲಿ ಶೇಕಡ 50ರಷ್ಟು ವಿಚ್ಛೇದನದಲ್ಲಿ ಪರಿಣಮಿಸುತ್ತಿವೆ. ಶೇಕಡ 67ರಷ್ಟು ಮರು ವಿವಾಹಗಳು ಅನೂರ್ಜಿತಗೊಳ್ಳುತ್ತಿವೆ. ಮತ್ತೆ 74% ನಷ್ಟು ಮೂರನೆಯ ಮದುವೆಗಳು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತವೆ.

ಫೋಟೋ ಕೃಪೆ : ಅಂತರ್ಜಾಲ

ಅಡುಗೆ ಮನೆ ಇಲ್ಲದೇ, ಕೇವಲ ಮಲಗುವ ಕೋಣೆ ಇದ್ದ ಮಾತ್ರಕ್ಕೆ ಅದು ಒಂದು ಕುಟುಂಬವಾಗುವುದಿಲ್ಲ. ಇದೀಗ ಅಮೇರಿಕ ದೇಶವು ಜಗತ್ತಿನಲ್ಲಿಯೇ ಅತಿ ಹೆಚ್ಚು ವಿಚ್ಛೇದಿತ ಮತ್ತು ಮುರಿದ ಕುಟುಂಬಗಳನ್ನು ಹೊಂದಿದ ದೇಶವಾಗಿದೆ.

ಇದೀಗ ನಮ್ಮ ದೇಶ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಈಗಾಗಲೇ ಸಾಕಷ್ಟು ಜನ ನೋ ಕಿಚನ್ ಎಂಬ ರೂಢಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಸಿದ್ದ ಆಹಾರದ ಪೊಟ್ಟಣಗಳನ್ನು ತಂದು ಬಿಸಿ ಮಾಡಿಕೊಳ್ಳುವ ಇಲ್ಲವೇ ಹೊರಗೆ ತಿಂದು ಮನೆಗೆ ಬರುವ ಜನರು ಹೆಚ್ಚಾಗಿದ್ದಾರೆ. ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುವ ಮನೆಗಳಲ್ಲಿ ಕೇವಲ ಹೆಣ್ಣು ಮಕ್ಕಳೇ ಅಡುಗೆ ಮಾಡಬೇಕು ಎಂಬ ಅನಾದಿ ಕಾಲದ ನಿಯಮಗಳಿಂದಾಗಿ ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ದುಡಿಯುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕೆಂದು ಬಯಸುವ ಹೆಣ್ಣು ಮಕ್ಕಳು ಅಡುಗೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಮಹಾನಗರಗಳಲ್ಲಿ ವಾಸಿಸುತ್ತಿರುವ ಬಹಳಷ್ಟು ಜನರಿಗೆ ನಮ್ಮ ಸಾಂಪ್ರದಾಯಿಕ ಅಡುಗೆಗಳು ಗೊತ್ತೇ ಇಲ್ಲ. ತಿನ್ನಲು ಇಷ್ಟ ಮಾಡೋದ್ ಕಷ್ಟ ಎಂಬಂತೆ ಆಗಿದೆ ಅವರ ಪರಿಸ್ಥಿತಿ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಭಾರತದಲ್ಲಿಯೂ ಕೂಡ ಅಮೆರಿಕಾದಂತಹ ಪರಿಸ್ಥಿತಿ ಬರಲು ತಡವಾಗುವುದಿಲ್ಲ. ಕುಟುಂಬ ಪದ್ಧತಿ ನಶಿಸಿ ಹೋದಾಗ ಮಾನಸಿಕವಾಗಿ ಮತ್ತು ದೈಹಿಕ ಆರೋಗ್ಯದ ಮೇಲೆ ಇದು ಅನೇಕ ಆರೋಗ್ಯ ಸಂಬಂಧಿಯಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.

ಹೊರಗಿನ ಸಿದ್ಧ ಆಹಾರವನ್ನು ಸೇವಿಸುವುದು , ಬೊಜ್ಜು ಮತ್ತು ಅಸಹಜ ಜೀವನ ಶೈಲಿಗೆ ಕಾರಣವಾಗುತ್ತದೆ. ಬೊಜ್ಜಿನ ಪರಿಣಾಮವಾಗಿ ಅನೇಕ ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡ ದೊಡ್ಡ ಕಾಯಿಲೆಗಳವರೆಗೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಡುಗೆಯನ್ನೇ ಮಾಡದೆ ಹೋದ ಮೇಲೆ ಅಡುಗೆ ಮನೆಯಲ್ಲಿರುವ ಆರೋಗ್ಯದಾಯಕ ಔಷಧೀಯ ಸಾಮಗ್ರಿಗಳ ಕುರಿತು ಅರಿವಾದರೂ ಹೇಗೆ ಉಂಟಾಗುತ್ತದೆ.

ಮನೆಯಲ್ಲಿ ಅಡುಗೆ ತಯಾರಿಸುವ ಮತ್ತು ಜೊತೆಯಾಗಿ ಇಡೀ ಕುಟುಂಬದವರು ಕುಳಿತು ಊಟ ಮಾಡುವುದು ಕುಟುಂಬದ ಆರೋಗ್ಯಕ್ಕೆ ಒಳ್ಳೆಯದು ಕೌಟುಂಬಿಕ ಪದ್ಧತಿಯ ಬೆಳವಣಿಗೆಗೆ ಒಳ್ಳೆಯದು. ಗಟ್ಟಿ ಮುಟ್ಟಾದ ಆರ್ಥಿಕತೆಯನ್ನು ಹೊಂದಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯವಶ್ಯಕ.

ಒಂದೆರಡು ದಶಕಗಳ ಹಿಂದೆ ಹೊರಗಿನ ಆಹಾರ ಸೇವಿಸುವುದು ಬಹುತೇಕ ನಿಶಿದ್ಧವಾಗಿತ್ತು. ಅವಮಾನದ ವಿಷಯ ಎಂದು ಕೂಡ ಪರಿಗಣಿತವಾಗಿತ್ತು. ಇದರ ಹಿಂದಿನ ಗುಟ್ಟು ಇಷ್ಟೆ. ಮನೆಯಲ್ಲಿ ಮಾಡಿದ, ಹಿತಮಿತವಾದ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಯಾರಾಗುವ ಆಹಾರ ನಮ್ಮ ದೇಹ ಮತ್ತು ಮನಸ್ಸು ಎರಡಕ್ಕೂ ಅತ್ಯುತ್ತಮವಾದದ್ದು. ಶುಚಿ-ರುಚಿಯಾಗಿ ಮಾಡಿರುವ ಮನೆಯ ಆಹಾರದಲ್ಲಿ ಪ್ರೀತಿ, ಮಮತೆ,ವಾತ್ಸಲ್ಯಗಳ ಆಗರವಿರುತ್ತದೆ. ಸರಳವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ,ಆದರೆ ವ್ಯವಹಾರಿಕ ದೃಷ್ಟಿಕೋನದಿಂದ ಮಾಡಿರುವ ಕೇವಲ ರುಚಿಗಷ್ಟೇ ಮಹತ್ವ ನೀಡುವ ತುಸು ಹೆಚ್ಛೇ ಎಣ್ಣೆ ಬೆಣ್ಣೆಯನ್ನು ಬಳಸಿ ಮಾಡುವ ಹೋಟೆಲ್ ಅಡುಗೆ ಅರಗಿಸಿಕೊಳ್ಳಲು ಹೆಚ್ಚು ಶಕ್ತಿಯ ವ್ಯಯವಾಗುತ್ತದೆ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ.

ಇದೀಗ ಮತ್ತೊಂದು ಹೊಸ ಬೆಳವಣಿಗೆಗಳನ್ನು ನಾವು ಈ ದಶಕದಲ್ಲಿ ಕಾಣುತ್ತಿದ್ದೇವೆ. ಇಂದು ಬಹುತೇಕ ಕುಟುಂಬಗಳು ತಮ್ಮ ಕುಟುಂಬದೊಂದಿಗೆ ಹೋಟೆಲಿಗೆ ಹೋಗಿ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿ ತಿಂದು ಬರುವ ರೂಢಿಯನ್ನು ಹೊಂದಿವೆ. ಯಾವಾಗಲೋ ಒಮ್ಮೆ ಆದರೆ ಪರವಾಗಿಲ್ಲ. ಇದು ಪ್ರತಿದಿನದ ರೂಢಿ ಆಗಬಾರದು.

ಫೋಟೋ ಕೃಪೆ : ಅಂತರ್ಜಾಲ

ಇದೀಗ ಹಗಲು ಮತ್ತು ರಾತ್ರಿ ಎನ್ನದೆ ಆಹಾರ ತಯಾರಿಸುವ ಕಂಪನಿಗಳು ಕೇವಲ ಹತ್ತು ನಿಮಿಷಗಳಲ್ಲಿ ಆಹಾರವನ್ನು ತಲುಪಿಸುತ್ತೇವೆ ಎಂದು ಹೇಳುವಾಗ ನಾವು ಕೇಳಿದೊಡನೆ ಆಹಾರವನ್ನು ತಯಾರಿಸುತ್ತವೆಯೇ? ಖಂಡಿತವಾಗಿಯೂ ಇಲ್ಲ. ಈ ಮೊದಲೇ ತಯಾರಿಸಿಟ್ಟ ಆಹಾರವನ್ನು ಬಿಸಿ ಮಾಡಿ ಸಮಯಕ್ಕೆ ಸರಿಯಾಗಿ ನಮಗೆ ತಲುಪಿಸುತ್ತವೆ…. ಹಾಗಾದರೆ ಆ ಆಹಾರ ಯಾವಾಗ ತಯಾರಿಸಿರಬಹುದು ಎಂದು ತುಸು ಯೋಚಿಸಿ?

ಅತ್ಯಂತ ಸುಶಿಕ್ಷಿತರು ಮತ್ತು ಮಧ್ಯಮ ವರ್ಗದವರಲ್ಲೂ ಕೂಡ ಹೊರಗಿನ ಸಿದ್ಧ ಆಹಾರವನ್ನು ತರಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಮುಂದಿನ ಭವಿಷ್ಯದಲ್ಲಿ ಈ ಟ್ರೆಂಡ್ ಭಾರತದ ಕೌಟಿಂಬಿಕ ಮತ್ತು ಸಾಮಾಜಿಕ ಪದ್ಧತಿಗೆ ಅತಿ ದೊಡ್ಡ ಸಮಸ್ಯೆಯಾಗಿ ನಮ್ಮನ್ನು ಬಿಕ್ಕಟ್ಟಿಗೆ ದೂಡುತ್ತದೆ. ಆನ್ಲೈನ್ ಕಂಪನಿಗಳು ಇದೀಗ ನಾವು ತಿನ್ನುವ ಆಹಾರವನ್ನು ನಿರ್ಧರಿಸುತ್ತವೆ ಮತ್ತು ಇದರ ಲಾಭ ವೈದ್ಯರು ಮತ್ತು ಔಷಧಿಯ ಕಂಪನಿಗಳಿಗೆ ಆಗುತ್ತಿದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ನಮ್ಮ ಹಿರಿಯರು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಾವು ಪ್ರಯಾಣಿಸುವಾಗ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಇಲ್ಲವೇ ಎಲ್ಲಾದರೂ ಅಡುಗೆಯನ್ನು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಮನೆಯ ಗೃಹಿಣಿ ತಯಾರಿಸಿದ ಆಹಾರದಲ್ಲಿ ಸಾತ್ವಿಕತೆಯ ಅಂಶಗಳು ಭರಪೂರವಾಗಿದ್ದರೆ ವ್ಯಾಪಾರಿ ಮನೋಭಾವದ ಹೋಟೆಲ್ ಗಳು ಮತ್ತು ಆನ್ಲೈನ್ ಸಂಸ್ಥೆಗಳು ತಯಾರಿಸುವ ಆಹಾರದಲ್ಲಿ ರಾಜಸಿಕ ಮತ್ತು ತಾಮಸಿಕ ಗುಣಗಳೇ ಹೆಚ್ಚು.

ಪ್ರತಿದಿನವೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ… ಯಾವಾಗಲೋ ಒಮ್ಮೆ ಹೊರಗಿನ ಆಹಾರವನ್ನು. ಬದಲಾದ ಕಾಲಘಟ್ಟದಲ್ಲಿ ಪತಿ-ಪತ್ನಿಯರಿಬ್ಬರೂ ದುಡಿಯುತ್ತಿರುವಾಗ ಹೆಣ್ಣು ಮಕ್ಕಳು ಮಾತ್ರ ಅಡುಗೆ ಮಾಡಬೇಕು ಎನ್ನುವುದು ಸರಿಯಲ್ಲ.. ಗಂಡಸರು ಕೂಡ ಹೆಣ್ಣು ಮಕ್ಕಳಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಅಡುಗೆ ಮಾಡುವ ಮೂಲಕ ತಮ್ಮ ವೈಯಕ್ತಿಕ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳಿಗೂ ಕೂಡ ಮನೆಯ ಆಹಾರದ ಮೌಲ್ಯಗಳ ಕುರಿತು ತಿಳಿಹೇಳಿ ಅವರಿಗೂ ಕೂಡ ಆಗಾಗ ಅಡುಗೆ ಮನೆಯಲ್ಲಿ ಅಡುಗೆಯನ್ನು ತಯಾರಿಸುವ ತರಬೇತಿಯನ್ನು ನೀಡಬೇಕು.

ಹೊರಗೆ ತರಿಸಿ ತಿನ್ನುವ ಪದ್ಧತಿ ಸಂಪೂರ್ಣ ಕಡಿಮೆಯಾಗಲಿ ಮನೆಯ ಆಹಾರ ಸೇವಿಸುವ ಪದ್ಧತಿ ಹೆಚ್ಚಾಗಲಿ. ಆ ಮೂಲಕ ಕೌಟುಂಬಿಕ ಬಾಂಧವ್ಯ, ಪ್ರೀತಿ, ವಿಶ್ವಾಸಗಳು ಹೆಚ್ಚಾಗಲಿ.

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW