ರಾಮಣ್ಣ ಅಲ್ಮರ್ಸಿಕೇರಿ ಅವರ ‘ಬೆಟ್ಟ ಬಯಲಾದ ಪರಿ’ ಪುಸ್ತಕದ ಕುರಿತು ಅಲಿ.ಕೆ.ಎಮ್ ಪುಸ್ತಕದ ಪರಿಚಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ನನ್ನ ನೆಚ್ಚಿನ ಗುರುಗಳು, ಮಾರ್ಗದರ್ಶಕರು, ಹಿತೈಷಿಗಳು ಹಾಗೂ ನನ್ನ ಬದುಕಿನ ರೂವಾರಿಗಳಾದ ಶ್ರೀ ರಾಮಣ್ಣ ಅಲ್ಮರ್ಸಿಕೇರಿ ಗುರುಗಳ ಎರಡನೆಯ ಪುಸ್ತಕ ‘ಬೆಟ್ಟ ಬಯಲಾದ ಪರಿ’ ನಾಳೆ ದಿನಾಂಕ 13. 2.2021ರಂದು ಶನಿವಾರ ಸಂಜೆ 4.30 ಕ್ಕೆ ಲೋಕಾರ್ಪಣೆ ಗೊಳ್ಳುತ್ತಿರುವ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಕೂರಿಗಿ ತಾಳು ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಜಗತ್ತನ್ನು ಪ್ರವೇಶಿಸಿದ್ದ ನನ್ನ ಪ್ರೀತಿಯ ಗುರುಗಳು ಇಂದು ತಮ್ಮ ವೈಚಾರಿಕ ಬರಹಗಳನ್ನು ಒಳಗೊಂಡ ಸಂಕಲನವನ್ನು ಇದೀಗ ಲೋಕಾರ್ಪಣೆಗೊಳಿಸುತ್ತಿರುವುದು ನನಗೆ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.

ಈ ಪುಸ್ತಕದಲ್ಲಿ ಒಟ್ಟು 13 ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯವೂ ಕೂಡ ಓದುಗರನ್ನು ತಾರ್ಕಿಕ ಚಿಂತನೆಗೆ ಒಳಪಡಿಸುತ್ತವೆ. ಅಷ್ಟೇ ಅಲ್ಲದೆ ಪುಸ್ತಕದ ಪ್ರತಿ ಪುಟಗಳಲ್ಲಿ ಕೂಡ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳು, ಕಂಟಕಗಳು, ತಲ್ಲಣಗಳು ಹಾಗೂ ಸಮಾಜದಲ್ಲಿ ನಿತ್ಯ ನಡೆಯುತ್ತಿರುವ ಅನವಶ್ಯಕ ಆಡಂಬರದ ಡಂಬಾಚಾರಗಳು, ಮೂಡನಂಬಿಕೆಗಳು ಇವೆಲ್ಲವುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಓದುಗರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ನನ್ನ ಗುರುಗಳು ಯಶಸ್ಸನ್ನು ಕಾಣುತ್ತಾರೆ.
ಹದಿಹರೆಯದ ಮಕ್ಕಳು ಹಾಗೂ ಪಾಲಕರ ಜವಾಬ್ದಾರಿ ಎಂಬ ಅಧ್ಯಾಯದಲ್ಲಿ ಮಕ್ಕಳ ಬಗೆಗಿನ ಪಾಲಕರ ಜವಾಬ್ದಾರಿಗಳನ್ನು ಹಾಗೂ ಮಕ್ಕಳೊಂದಿಗೆ ಪಾಲಕರು ವ್ಯವಹರಿಸಬೇಕಾದ ರೀತಿಯ ಬಗ್ಗೆ ಹೇಳುತ್ತಾ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ ಎಂಬ ಕಿವಿಮಾತನ್ನು ಹೇಳುತ್ತಾರೆ ಅದರ ಜೊತೆ ಜೊತೆಗೆ “ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದಲ್ಲಿ ಮನೆ ಮಾತ್ರವಲ್ಲ ದೇಶವು ಅಳಿಯುತ್ತದೆ” ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ.ಕೊಪ್ಪಳ ಜನತೆಯ ಅಧ್ಯಾತ್ಮದ ಕೇಂದ್ರ,ದಕ್ಷಿಣ ಭಾರತದ ಕುಂಭಮೇಳವೆಂದೇ ಕರೆಸಿಕೊಳ್ಳುವ ಅಜ್ಜನ ಜಾತ್ರೆಯ ವಿಶೇಷತೆಗಳು ಹಾಗೂ ಶ್ರೀಗವಿಮಠದ ಕುರಿತು ನನ್ನ ಗುರುಗಳು ಬರೆದಿರುವ “ಅರಿವು ಆಚಾರಗಳ ಜಾಗೃತ ಜಾತ್ರೆ” ಬರಹದಲ್ಲಿ ಕೊಪ್ಪಳ ಅಜ್ಜನ ಜಾತ್ರೆಯ ಬಗೆಗೆ ಹಾಗೂ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀಗಳಾದ ಶ್ರೀ ಅಭಿನವ ಗವಿಶ್ರೀಗಳು ಧಾರ್ಮಿಕ ಚೌಕಟ್ಟಿನಲ್ಲಿ ಸಮಾಜವನ್ನು ತಿದ್ದಲು ಕೈಗೊಂಡ ಕಾರ್ಯಗಳ ಮೇಲೆ ಹಾಗೂ ಇಲ್ಲಿಯವರೆಗೆ ಶ್ರೀಗಳು ಕೈಗೊಂಡ ಅನೇಕ ಸಾಮಾಜಿಕ ಕಾರ್ಯಗಳಾದ ರಕ್ತದಾನ,ನೇತ್ರದಾನ,ವೃಕ್ಷ ಕ್ರಾಂತಿ, ತ್ರಿವಿಧ ದಾಸೋಹಗಳೊಂದಿಗೆ ಪ್ರತಿವರ್ಷ ಜಾತ್ರೆಯಲ್ಲಿ ವಿಶೇಷವಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಕುರಿತು ಶ್ರೀಮಠದ ಸಾಧನೆಗಳನ್ನು ಲೋಕಕ್ಕೆ ತಿಳಿಸುವ ಪ್ರಯತ್ನದಲ್ಲಿ ನನ್ನ ಗುರುಗಳು ಸಫಲರಾಗಿದ್ದಾರೆ.”ಸರಳವಾಗಿ ಜೀವಿಸು ಉದಾತ್ತವಾಗಿ ಯೋಚಿಸು” ಎಂಬ ತತ್ವದ ಹಿನ್ನೆಲೆಯಲ್ಲಿ ಜೀವನವನ್ನು ರೂಡಿಸಿಕೊಂಡು ಅದರಂತೆ ತಮ್ಮ ಬದುಕನ್ನು ಪಾಲಿಸಿಕೊಂಡು ಬರುತ್ತಿರುವ ನನ್ನ ಗುರುಗಳು ಇಂದ್ರ ಲೋಕವನ್ನು ನಾಚಿಸುವಂತೆ ನಡೆಯುವ ಇಂದಿನ ಅದ್ದೂರಿ ಮದುವೆಗಳ ಕುರಿತು ತಮ್ಮದೇ ಆದ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಅಂತಹ ಮದುವೆಗಳಿಗೆ ಸರ್ಕಾರವು ಕಡಿವಾಣ ಹಾಕಬೇಕೆಂದು ಹಾಗೂ ಜನತೆ ಕೂಡ ಅಂತಹ ಮದುವೆಗಳನ್ನು ಧಿಕ್ಕರಿಸಿ ಸರಳವಾದ ಮದುವೆಗಳನ್ನು ನೆರವೇರಿಸಲು ವಿನಂತಿಸಿಕೊಳ್ಳುತ್ತಾರೆ.

ಈ ಪುಸ್ತಕದ ಕೆಲವು ಬರಹಗಳು ಈಗಾಗಲೇ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬರಹಗಳಾಗಿದ್ದು, ಸಮಗ್ರವಾದ ಅಧ್ಯಯನ ಹಾಗೂ ವಿಸ್ತೃತವಾದ ವರದಿಗಳ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಬರೆದಂತಹ ಪುಸ್ತಕದ ಎಲ್ಲ ಬರಹಗಳು ನಾಳೆಯ ನಾಡಿನ ಭವಿಷ್ಯದ ಕುರಿತು ಒಂದು ಕ್ಷಣ ಚಿಂತನೆಗೆ ತೊಡಗಿಸಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತವೆ.
ತಮ್ಮ ಬದುಕಿನ ಪ್ರತಿ ಹಂತದಲ್ಲೂ ಮಾನವೀಯತೆ, ಮನುಷ್ಯತ್ವ, ಅಂತಃಕರಣಗಳನ್ನು ಮೈಗೂಡಿಸಿಕೊಂಡು. ತಮ್ಮ ಶಾಲೆಯ ಎಲ್ಲ ಮಕ್ಕಳಲ್ಲೂ ತಮ್ಮ ಸ್ವಂತ ಮಕ್ಕಳನ್ನು ಕಂಡು ಪ್ರೀತಿ, ಮಮಕಾರ, ವಾತ್ಸಲ್ಯಗಳಿಂದ ಅಕ್ಷರದ ಜೊತೆಜೊತೆಗೆ ಜೀವನಪ್ರೀತಿ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ನನ್ನಂತಹ ಅಸಂಖ್ಯಾತ ವ್ಯಕ್ತಿತ್ವಗಳನ್ನು ರೂಪಿಸಿದ ನನ್ನ ಮಹಾಗುರುಗಳಿಗೆ ಪ್ರೀತಿಪೂರ್ವಕ,ಅಭಿಮಾನ ಪೂರ್ವಕ ಶುಭಹಾರೈಕೆಗಳು.
ಇನ್ನೂ ಹೆಚ್ಚು ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುತ್ತಾ, ನಮ್ಮ ಜ್ಞಾನವನ್ನು ಪೊರೆಯುತ್ತಾ,ಸಾರಸ್ವತ ಲೋಕದ ಅಚ್ಚು ಮೆಚ್ಚಿನ ಕವಿ,ಲೇಖಕರಾಗಿ, ನಾಡಿನಾದ್ಯಂತ ತಮ್ಮ ಕೀರ್ತಿಯ ಬಳ್ಳಿ ಹಬ್ಬಲೆಂದು ಪ್ರಾರ್ಥಿಸುವೆ.
ನಿಮ್ಮ ಪ್ರೀತಿಯ ವಿದ್ಯಾರ್ಥಿ
- ಅಲಿ.ಕೆ.ಎಮ್ – ಮಂಗಳಾಪುರ
