ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)

ಎದೆ ಮಟ್ಟದ ರಸ್ತೆಯನ್ನು ಏರುತ್ತಾ ಹೋದೆ. ಸ್ವಲ್ಪವೇ ಆಯತಪ್ಪಿದರೂ.. ನಂದಿಯ ಜೊತೆ ನಾನು ಜಾರಿಕೊಂಡು ಬೆಟ್ಟದ ತಿರುವುಗಳಲ್ಲಿ ದೊಪ್ಪನೆ ಬಿದ್ದು ಅಪಘಾತವಾಗುವ ಭಯವಿತ್ತು ಆದರೂ “ನರ್ಮದೇ ಹರ್” ಎಂದು ಗುನುಗುತ್ತಾ… ಬೆಟ್ಟ ಏರತೊಡಗಿದೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ನಾನು ಉಳಿದುಕೊಂಡ ಭಾನಪುರದ ಆಶ್ರಮ ನೋಡಿಕೊಳ್ಳುವ “ಅಜಯ್” ಎಂಬುವ ವ್ಯಕ್ತಿ ಚಿಕ್ಕ ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ವ್ಯಾಪಾರಿ ಆದರೂ ಸೇವಾಭಾವದಿಂದ ಆಶ್ರಮ ನಡೆಸುತ್ತಿದ್ದಾರೆ‌.

ಆಶ್ರಮದಲ್ಲಿ ನಾನೊಬ್ಬನೆ ಉಳಿದುಕೊಂಡಿದ್ದರಿಂದ ರಾತ್ರಿ ಕಿಚಡಿ ತಂದು ಕೊಟ್ಟಿದ್ದರು, ಬೆಳ್ಳಂಬೆಳಿಗ್ಗೆ “ಚಹಾ” ತಂದಿದ್ದರು. ದಟ್ಟವಾಗಿ ಇಬ್ಬನಿ ಬಿದ್ದಿದ್ದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದಕ್ಕೆ ಬೆಳಿಗ್ಗೆ 9 ಕ್ಕೆ ಮುಂದಿನ ಪಯಣ ಶುರುಮಾಡಿದೆ. ಇವಾಗ ಚೂರು ರಸ್ತೆ ಕಾಣಸಿಗುತ್ತಿತ್ತು. “ಅಜಯ್” ಅವರಿಗೆ ಧನ್ಯವಾದ ತಿಳಿಸಿ ಮುಂದೆ ಹೊರಟೆ.

ಏರು ರಸ್ತೆಗಳು ತುಂಬಾ ಇಲ್ಲದ್ದರಿಂದ ವೇಗವಾಗಿ ಓಡುತ್ತಿದ್ದ “ನಂದಿ”. ನನ್ನ ಮುಂದಿನ ಲಕ್ಷ್ಯವೆಲ್ಲ “ಮಾಂಡವಘಡ” ಅಥವಾ “ಮಾಂಡವ” ಅಥವಾ “ಮಾಂಡು”ತಲುಪುವುದಿತ್ತು.
ಉಬರಬನ್- ಸುರಾಣಿ- ಬಂಧಾವ ಊರುಗಳನ್ನು ದಾಟಿದೆ. ಈ ಹಳ್ಳಿಗಳಲ್ಲಿ ಅಲ್ಲಲ್ಲಿ ರಸ್ತೆ ಕಾಮಗಾರಿ ಜೋರುದಾರಾಗಿ ನಡೆಯುತಿತ್ತು. ಎಲ್ಲೆಲ್ಲೂ “ಕಾಂಕ್ರಿಟ್” ರೋಡಗಳು, ಉಬರಬನ್”ಲ್ಲಿ ಹೆಚ್ಚಿರುವುದು “ಬುಡಕಟ್ಟು” ಜನಾಂಗ, ಆದರೂ ಮೂಲಭೂತ ಸೌಕರ್ಯಗಳನ್ನು ಅತ್ಯುತ್ತಮವಾಗಿ ಒದಗಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ತಲುಪಿದ್ದು “ಬ್ರಾಹ್ಮಣಪುರ” ಎಂಬ ಊರು‌. ಈ ಊರು ವಿಂದ್ಯಾ ಬೆಟ್ಟಗಳ ಸಾಲುಗಳನ್ನು ಬೆನ್ನಿಗೆ ಅಂಟಿಸಿಕೊಂಡಂತ್ತಿದೆ. ನೆತ್ತಿ ಸುಡುವ ಬಿಸಿಲು, ಚುರುಗುಟ್ಟುವ ಹಸಿವು.

ಅಂಗಡಿಯಲ್ಲಿ ಒಂದಿಷ್ಟು ಖರ್ಜೂರ ತಿಂದು, ಒಂದು ಗ್ಲಾಸ್ ಹಾಲು ಕುಡಿಯುತ್ತಾ ದೂರದಲ್ಲಿ ಕಾಣುತ್ತಿದ್ದ ಬೆಟ್ಟವನ್ನು ದಿಟ್ಟಿಸಿದೆ. ಬೆಟ್ಟಗಳ ಬೃಹತ್ ಮೇಳವೆ ಸೇರಿದಂತಿದೆ. ಒಂದಕ್ಕೊಂದು ಬೆಟ್ಟಗಳು ಸಯಾಮಿಯಂತೆ ಅಂಟಿಕೊಂಡು, ಸರಮಾಲೆಯನ್ನು ತಯಾರಿಸಿದಂತಿವೆ.

ಉದ್ದಕ್ಕೆ ಬೆಟ್ಟಗಳು ದೂರ ದೂರದವರೆಗೂ ಹರಡಿಕೊಂಡಿವೆ. ಕಣ್ಣು ಕಿರಿದಾಗಿಸಿ ನೋಡಿದರೂ ಇವುಗಳಿಗೆ ಅಂತ್ಯ ತಿಳಿಯಲಿಲ್ಲ. ಸರಿ… ಈ ಬೆಟ್ಟಗಳ ಸರಮಾಲೆಯ ಒಂದು ಬೃಹತ್ ಬೆಟ್ಟವನ್ನು “ಬ್ರಾಹ್ಮಣಪುರ” ಎಂಬ ತೊಪ್ಪಲು ಪ್ರದೇಶದಿಂದ ಹತ್ತಬೇಕು‌. ಈ ಬೆಟ್ಟದ ತುದಿಗೆ ತಲುಪಲು ರಸ್ತೆ ಮಾರ್ಗ ನಿರ್ಮಿಸಲಾಗಿದೆ. ಒಟ್ಟು 7 ಕಿ.ಮೀ ತಿರುವು, ಏರುಗಳನ್ನು ಏರಬೇಕಿತ್ತು‌. ನಮ್ಮ ಮೈಸೂರು ಬೆಟ್ಟವನ್ನು ಏರಿದಂತೆ.

ನನ್ನ ಜೊತೆ ನಂದಿ ಇದ್ದುದರಿಂದ ಅವನನ್ನು ಜೊತೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು.. ಬೆಟ್ಟದೆಡೆಗೆ ನಂದಿಯ ಜೊತೆ ನಡೆಯಲು ಶುರುಮಾಡಿದೆ… ಬೆಟ್ಟದ ರಸ್ತೆ ತಿರುವುಗಳನ್ನು ಬಳಸಿಕೊಂಡು ಹೋಗಿದೆ. ಸುತ್ತಲೂ ಕಾಡು ಇದೆ.

ಪದೇ ಪದೇ ಅಂಬ್ಯುಲೆನ್ಸ್ ಬೆಟ್ಟ ಏರಿ ಇಳಿಯುತ್ತಿತ್ತು ಕಾರಣ ಇಲ್ಲಿ ಅಪಘಾತಗಳು ಹೆಚ್ಚಂತೆ. ಬೆಟ್ಟದ ರಸ್ತೆ ನಿಧಾನವಾಗಿ ಎತ್ತರವನ್ನು ಏರಿಸಿಕೊಂಡು ಹೋಗುತ್ತಿತ್ತು. ನಂದಿಯನ್ನು ಒತ್ತಿಕೊಂಡು ನಾನು ನಡೆಯತೊಡಗಿದೆ. ಅಬ್ಬಬ್ಬಾ..!! ಅಲ್ಲಲ್ಲಿ ನಿಲ್ಲುತ್ತಾ ಜೋರಾಗಿ ಉಸಿರಾಡುತ್ತಾ, ಎದೆ ಮಟ್ಟದ ರಸ್ತೆಯನ್ನು ಏರುತ್ತಾ ಹೋದೆ. ಸ್ವಲ್ಪವೇ ಆಯತಪ್ಪಿದರೂ.. ನಂದಿಯ ಜೊತೆ ನಾನು ಜಾರಿಕೊಂಡು ಬೆಟ್ಟದ ತಿರುವುಗಳಲ್ಲಿ ದೊಪ್ಪನೆ ಬಿದ್ದು ಅಪಘಾತವಾಗುವ ಭಯವಿತ್ತು ಆದರೂ “ನರ್ಮದೇ ಹರ್” ಎಂದು ಗುನುಗುತ್ತಾ… ಬೆಟ್ಟ ಏರತೊಡಗಿದೆ.
ಸುಮಾರು 3 ಕಿ.ಮೀ ಏರುವುದರೊಳಗೆ ಏದುಸಿರು ಬಿಡುತ್ತಾ ರಸ್ತೆಯ ಪಕ್ಕ ಕೊತೆ. ಮೈಯೆಲ್ಲಾ ತೊಪ್ಪನೆ ತೊಯ್ದಿತ್ತು. ಜೊತೆಗಿದ್ದ ನೀರಿನ ಬಾಟಲ್’ನಿಂದ ಗಟಗಟನೆ ನೀರು ಕುಡಿದು. ಒಂದಿಷ್ಟು ಹೊತ್ತು ದಣಿವಾರಿಸಿಕೊಂಡೆ.

ಮತ್ತದೇ ತಿರುವು.. ಮತ್ತಷ್ಟು..ಮಗದಷ್ಟೂ… ಏರು.. ನಂದಿಯನ್ನು ತಳ್ಳಿಕೊಂಡು ಏರುವುದು ತುಂಬಾ ಚಾಲೆಂಜಿಂಗ್ ಅನ್ನಿಸತೊಡಗಿತು. ಪ್ರತಿ 500 ಮೀಟರ್’ಗೆ ಒಮ್ಮೆ ನಿಲ್ಲುವುದು ಅನಿವಾರ್ಯವಾಯಿತು. ಕೈಗಳು, ಬೆನ್ನು, ತೊಡೆಯಲ್ಲಿ ನೋವು ಕಾಣಿಸಿಕೊಂಡು ಬಾಧಿಸುತಿತ್ತು. ನಾನು ಮೇಲೆ ಏರುತ್ತಾ ಏರುತ್ತಾ ಹೋಗುತ್ತಿದ್ದಂತೆ.. ಬೆಟ್ಟದ ಎತ್ತರ ಕಡಿಮೆಯಾಗುತ್ತಾ ಹೋಯಿತು. ದೊಡ್ಡ ಬೆಟ್ಟ ಕಾಲಡಿಗೆ ಸರಿದುಹೋಗುತ್ತಿದೆ ಅನಿಸತೊಡಗಿತು. ಬೆಟ್ಟದ ಮೇಲೆ ಮೇಯುತ್ತಿರುವ ಹಸುಗಳ ಹಿಂಡು ಇತ್ತು. ಊರು ಹತ್ತಿರವಿದೆ ಎಂದಾಯ್ತು.

ಆಗಲೇ ನನ್ನಿಂದ 300 ಮೀಟರ್ ದೂರಕ್ಕೆ ಬೆಟ್ಟದ ಮೇಲಿಂದ ಕಲ್ಲೊಂದು ದೊಪ್ಪನೆ ಕೆಳಗೆ ಬಿತ್ತು. ಬದುಕಿತು ಬಡ ಜೀವ. ಅದೃಷ್ಟವಶಾತ್ ರಸ್ತೆಯಲ್ಲಿ ಬಸ್ಸು, ಕಾರು, ಸೈಕಲ್ ಮೋಟಾರುಗಳ ದಟ್ಟಣೆ ಕಡಿಮೆಯಿತ್ತು. ಆ ಕಲ್ಲು ಎಲ್ಲಿಂದ ಬಿತ್ತು ಎಂದು ಗೋಣೆತ್ತಿ ನೋಡಿದರೆ, ಬೆಟ್ಟದ ಆ ಭಾಗದಲ್ಲಿ ಭೂಕುಸಿತವಾಗುವಂತಿತ್ತು‌. ಉದುರು ಮಣ್ಣು, ರಾಶಿಗಟ್ಟಲೇ ಕಲ್ಲುಗಳು ಜೋಡಿಸಿಟ್ಟಂತೆ ಇದ್ದವು. ಬೇಗ ಬೇಗ ವೇಗ ಹೆಚ್ಚಿಸಿಕೊಂಡು ಬೆಟ್ಟವೇರಿದಾಗ ಸಮತಟ್ಟಾದ ಭೂಮಿಯ ತರಹದ ಸ್ಥಳ ಕಾಲಡಿಗೆ ದಕ್ಕಿತು.

ಬೆಟ್ಟದ ಮೇಲೆ ಸಮತಟ್ಟಾದ ನೆಲವಿದೆ ಆದು 13-15 ಕಿ.ಮೀ ವಿಸ್ತೀರ್ಣದ ಜಾಗ ಅದುವೇ “ಮಾಂಡವ”. ಮಾಂಡವ ಕ್ಷೇತ್ರವನ್ನು ನೆತ್ತಿಯ ಮೇಲೆ ಹೊತ್ತುಕೊಂಡ ಬೆಟ್ಟ ವಿಂಧ್ಯಾಚಲ ಪರ್ವತ ಶ್ರೇಣಿಗೆ ಸೇರಿದೆ. ಸಮುದ್ರ ಮಟ್ಟದಿಂದ 2079 feet ಎತ್ತರವಿದಲ್ಲಿದೆ. ಅದಕ್ಕೆ ಇಷ್ಪುದ್ದದ ದಾರಿ ಏರುವ ಹೊತ್ತಿಗೆ ಮೈ ನೋವು. ಬೆಟ್ಟದ ಮೇಲೆ ಬೃಹತ್ ಮಾಂಡವ ಪಟ್ಟಣವೆ ಜೀವಿಸುತ್ತಿದೆ.

ಜನರ ಯಥಾವತ್ತು ಬದುಕು, ಹೊಲ, ಗದ್ದೆ, ಜಾನುವಾರು, ಸಿಟಿ, ಮಾರ್ಕೆಟ್, ದೇವಸ್ಥಾನಗಳು, ಪುರಾತನ ಕಟ್ಟಡಗಳು, ಕೋಟೆ ಎಲ್ಲವೂ ಉಸಿರಾಡುತ್ತಿವೆ ಗೌಪ್ಯವಾಗಿ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ “ಮಾಂಡವ” ಇದೆ. ಜನಜೀವನ ಇಲ್ಲಿ ಇದ್ದರೂ.. ರಸ್ತೆಯಾಚೆ ಪ್ರಪಾತವಿದೆ. ಪ್ರಾಚೀನ ನಗರ ಮಾಂಡವ “ವಾಸ್ತುಶಿಲ್ಪಕ್ಕೆ” ಪ್ರಸಿದ್ದವಾಗಿದೆ. ಮಾಂಡವ ಪ್ರವೇಶದಲ್ಲಿ ದೂರಕುವ “ನೀಲಕಂಠ ಮಂದಿರಕ್ಕೆ” ಹೋದೆ.

ಸಂಪೂರ್ಣ ಬೃಹತ್ ಕಲ್ಲುಗಳಿಂದ ರಚಿತವಾದ ಸುಂದರ ಪ್ರಾಚೀನ ದೇವಾಲಯ. ಕೋಟೆಯಂತೆ ಭಾಸವಾಗುತ್ತಿತ್ತು. ಮೆಟ್ಟಿಲಿಳಿದು ನಡೆದರೇ ಶಿವಲಿಂಗದ ದಿವ್ಯ ದರ್ಶನವಾಗುತ್ತೆ.
ಮಂದಿರದ ಹೊರಗೆ ಹೆಣ್ಣುಮಕ್ಕಳು ಬುಟ್ಟಿಯಲ್ಲಿ “ದೊಡ್ಡ ಹುಣಿಸೆ ಹಣ್ಣು” ಮಾರುತ್ತಿದ್ದರು. ಬಾವೊಬಾಬ್ ಮರಗಳಲ್ಲಿ ಬಿಡುವ ಫಲವಿದು. ಇವುಗಳನ್ನು ” ಮಾಂಡು ಕಾ ಇಮ್ಲಿ” ಎಂದು ಕರೆಯುವರು. ಆಫ್ರಿಕಾದಲ್ಲಿ ಮಾತ್ರ ಸಿಗುವಂತ ಫಲವಿದು.. ಮಾಂಡುವಿನಲ್ಲೂ ದೊರೆಯುತ್ತವೆ.

ಬಾವೊಬಾಬ್ ಮರಗಳು ಬೃಹತ್ ಆಗಿರುತ್ತವೇ, ನಮ್ಮ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಈ ಬಾವೂಬಾಬ್ ಮರಗಳಿವೆ. ಮತ್ತೆಲ್ಲೂ ಇಲ್ಲ. ಮಾಂಡವನಲ್ಲಿ ಸುಮಾರು 1000 ಕ್ಕಿಂತ ಹೆಚ್ಚು ಮರಗಳು ಇವೆ. ಅವುಗಳ ಫಲವೆ ಇದು. ಉತ್ತರಕ್ಕೆ ಮಾಳ್ವಾ ಪ್ರಸ್ಥಭೂಮಿ ಮತ್ತು ದಕ್ಷಿಣಕ್ಕೆ ನರ್ಮದಾ ನದಿಯ ಕಣಿವೆಯನ್ನು ಹೊಂದಿರುವ “ಮಾಂಡವ” 10 ಮತ್ತು 11 ನೇ ಶತಮಾನದಲ್ಲಿ ಪರಮಾರರ ಅಡಿಯಲ್ಲಿ ಪ್ರಾಮುಖ್ಯತೆಯನ್ನು ಗಳಿಸಿತ್ತು.

ಮುಂದೆ… ಮಾಳ್ವ ಮುಸ್ಲಿಂರಿಂದ , ಮೊಘಲರಿಂದ ಕೊನೆಗೆ ಮರಾಠರ ಆಳ್ವಿಕೆಗೆ ಒಳಪಟ್ಟಿತು. ನೀಲಕಂಠ ಮಂದಿರ ದರ್ಶನ ಮುಗಿಸಿ ಹೊರಬರುವುದರೊಳಗೆ ಸೂರ್ಯ ಮುಳುಗುತ್ತಿದ್ದ.‌ ರಾತ್ರಿಯ ವಿಶ್ರಾಮಕ್ಕೆ “ಸಾಯಿ ಧಾಮ” ಹುಡುಕಿಕೊಂಡು ಹೊರಟೆ.

ಇನ್ನು ನಾಳೆ ಮಾಂಡವಘಡ ಸುತ್ತಿ ನೋಡುವ ಕೋಟೆಗಳು ಮತ್ತು ಪವಿತ್ರ ರೇವಾ ಕುಂಡ ಬಾಕಿ ಇದೆ. ಮಾಂಡವ “ಅಮರ ಪ್ರೇಮದ ನಗರ” ಎಂದೂ ಪ್ರಸಿದ್ಧ. ಕಾರಣ ನಾಳೆ ವಿವರಿಸುವೆ.

ಮಾಂಡು ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ “ನಂದಿ”ಯನ್ನು ಓಡಿಸಿದ್ದಾಯಿತು. ಕೋಟೆ, ನಗರ, ಮಾರ್ಕೆಟ್, ಮಂದಿರ, ಬಾವೋಬಾಬ್ ತೋಪು, ರೇವಾ ಕುಂಡ ಎಲ್ಲವನ್ನೂ ದವಳಾಡಿದ್ದಾಯಿತು. ಇಲ್ಲಿನ ಒಂದೊಂದು ಕೋಟೆಯದ್ದು ಒಂದೊಂದು ಕಥೆ. ಪಾರಮಾರರ ಆಡಳಿತದಲ್ಲಿ ರಚಿತವಾದ ಹಲವು ಕೋಟೆಗಳು ಮುಂದೆ ಮೊಘಲ್ ಆಡಳಿತಕ್ಕೆ ಒಳಪಟ್ಟಾಗ ಹೆಸರು ಮತ್ತು ಚೂರು ರಚನೆ ಬದಲಿಸಿಕೊಂಡವು ಎಂಬುದು ಇಲ್ಲಿನ “ಗೈಡ್’ಗಳ” ಮಾತು.

ಪಾರಮಾರ, ಮಾಳ್ವ ಮುಸ್ಲಿಂ, ಮೊಘಲ್, ಆಂಗ್ಲರು, ಮರಾಠಿಗರಿಂದ ಆಳ್ವಿಕೆಗೆ ಒಳಪಟ್ಟ ನಗರವಿದು. ಇಂದು ಎಲ್ಲ ಕೋಟೆಗಳು ಅನಾಥ ಮತ್ತು ಆರ್ತನಾದದಿಂದ ನರಳುತ್ತಿವೆ.
“ನರ್ಮದಾ ಪರಿಕ್ರಮ” ಮಾಡುವವರು “ರೇವಾ ಕುಂಡ”ವನ್ನು ಪೂಜಿಸಿ, ಮುಂದೆ ಹೋಗುವ ನಿಯಮವುಂಟು. ಪ್ರಪ್ರಥಮವಾಗಿ “ನರ್ಮದಾ ಪರಿಕ್ರಮ” ಕೈಗೊಂಡ “ಮಾರ್ಕಂಡೇಯ ಋಷಿಗಳು ಒಂದೊಮ್ಮೆ ಪರಿಕ್ರಮದಲ್ಲಿದ್ದಾಗ “ಚಾತುರ್ಮಾಸ”ದಲ್ಲಿದ್ಥರು. ಚಾತುರ್ಮಾಸದಲ್ಲಿದ್ದ ಮಾರ್ಕಂಡೆಯ ಋಷಿಗಳು, ಸಂಜೆಯಾದರೂ ಸ್ನಾನಕ್ಕೆಂದು ತಾಯಿ ನರ್ಮದಾ ನದಿ ತಲುಪುವುದು ಆಗುವುದಿಲ್ಲ, ಆವಾಗ ಬಹು ದುಃಖಿತರಾಗಿ ತಾಯಿ ನರ್ಮದೆಯನ್ನು ಬೇಡುವರು. ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವಿ, ನೀನು ಇಂತಹ ನಿರ್ಧಿಷ್ಟ ಜಾಗದಲ್ಲಿ ಕುಂಡವನ್ನು ರಚಿಸು, ತಾನು ಬರುವುದಾಗಿ ತಿಳಿಸಿದಳು.

ಋಷಿಗಳು ತಾಯಿ ಸೂಚಿಸಿದ ಸ್ಥಳದಲ್ಲಿ ನೆಲ ಅಗೆದು, ತಾಯಿಯನ್ನು ಬೇಡಿದಾಗ, ಅಲ್ಲಿಗೆ ನರ್ಮದಾ ನದಿಯು ಗುಪ್ತ ಮಾರ್ಗದಲ್ಲಿ ಬಂದು ಪುಟಿದು ಜಿನುಗಿದಳು ಅದುವೆ “ರೇವಾ ಕುಂಡ”.
ನದಿ ಇಲ್ಲಿಯವರೆಗೆ ಹರಿದು ಬಂದಿದ್ದರಿಂದ, ಅಲ್ಲಿಯ ತನಕವು ನದಿ ಇದೆಯೆಂದು ಭಾವಿಸಿಕೊಂಡು, ಪರಿಕ್ರಮವಾಸಿಗಳು “ಮಾಂಡು” ನಗರಕ್ಕೆ ಬರುವುದು ಕಡ್ಡಾಯ. ರೇವಾ ಕುಂಡ ಎಂದಿಗೂ ಬತ್ತದ “ಕುಂಡವಾಗಿದೆ”. ಬರ ಬಿದ್ದಾಗ ಇಲ್ಲಿಂದಲೇ ನಗರಕ್ಕೆ ನೀರು ಸರಬರಾಜು ಆಗುವುದಂತೆ..

ಇನ್ನೊಂದು ದಂತಕಥೆಯ ಪ್ರಕಾರ…

ರಾಣಿ “ರೂಪಮತಿ” ಅಮೋಘ ಸೌಂದರ್ಯ ರಾಶಿ ಹೊಂದಿದ್ದಳು, ಸ್ವತಃ ಕವಿಯತ್ರಿ ಕೂಡ ಹೌದು. ರಾಜ ಬಾಜ್ ಬಹಾದ್ದೂರ ಅವಳ ಸೌಂದರ್ಯದಲ್ಲಿ ಅನುರಕ್ತನಾದವ. ರಾಣಿ ರೂಪಮತಿ ನರ್ಮದಾ ದೇವಿಯ ಭಕ್ತೆಯಾಗಿದ್ದಳು, ತಾಯಿ ನರ್ಮದೆ ಬರುವಂತೆ ಬೇಡಿಕೊಂಡಾಗ ಅಲ್ಲಿಯೇ ಕುಂಡದಲ್ಲಿ ನರ್ಮದಾ ದೇವಿ ಹರಿದು ಬಂದಳು ಎಂಬುದು ಜಾನಪದ ಕಥೆ.
ತಾನು ಪ್ರತಿದಿನ “ನರ್ಮದಾ ನದಿಯನ್ನು” ನೋಡಬೇಕು ಅದಕ್ಕಾಗಿ ಎತ್ತರದಲ್ಲಿ ಕಟ್ಟಡ ಕಟ್ಟಲು ರಾಜನಿಗೆ ದುಂಬಾಲು ಬಿದ್ದಾಗ, ರಾಜ ಬಾಜ್ ಬಹಾದ್ದೂರ “ರೂಪಮತಿ ಪೆವಿಲಿಯನ್ ಕೋಟೆ” ನಿರ್ಮಿಸಿದ ಎಂಬುದು ಇತಿಹಾಸ.

ಈ ಕೋಟೆಯ ಮೇಲೆ ಹತ್ತಿ ನೋಡಿದರೆ ಸಂಪೂರ್ಣ ಮಾಂಡು ನಗರ ಕಾಣಸಿಗುತ್ತದೆ. ನರ್ಮದಾ ನದಿಯನ್ನು ನೋಡಬಹುದು. ಇದೊಂದು ವಾಚ್ ಟಾವರ್. ಇಲ್ಲಿ “ಚತುರ್ಭುಜ ರಾಮ” ಮಂದಿರವಿದೆ. ಚತುರ್ಭುಜ ರಾಮ ಬೇರೆ ಎಲ್ಲೂ ನೋಡಲು ಸಿಗುವುದಿಲ್ಲ. ನೀಲಕಂಠ ಮಹಾದೇವ ಮುಂದಿರವಂತೂ ಅಮೋಘ. ಬಾವೋಬಾಬ್ ಮರಗಳು ಬೃಹತ್ ಗಾತ್ರದಲ್ಲಿ ಹರಡಿಕೊಂಡಿವೆ. ಇನ್ನೂ ಅನೇಕ ಕೋಟೆಗಳಂತೂ ಅನಾಥ.

ಮಾಂಡು ಆಕರ್ಷಣೀಯ “ಪ್ರವಾಸಿ ತಾಣ”ವಾಗಿ ಮಾರ್ಪಟ್ಟಿದೆ. ಆದರೆ “ನರ್ಮದಾ ಪರಿಕ್ರಮ” ಯಾತ್ರಿಗಳಿಗೆ ಇದು ಶ್ರದ್ಧಾ ಕೇಂದ್ರ.

ಮುಂದುವರೆಯುವುದು……….

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ –  ವೈದ್ಯರು, ಲೇಖಕರು, ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading