ಚೇತನ ಭಾರ್ಗವ ಅವರ ಭಾವ ಲಹರಿ ಕವನ ಸಂಕಲನದಲ್ಲಿ ಗುಣಿತಾಕ್ಷರ ಕವನವಿದ್ದು, ಕೆಲವೊಂದು ಕವನಕ್ಕೆ ಹೊಂದಿಕೆಯಾಗುವ ಚಿತ್ರಗಳಿವೆ. ಇದರಲ್ಲಿ ಒಟ್ಟು 60 ಕವಿತೆಗಳಿವೆ. ಲೇಖಕಿ ಸುವರ್ಣಾ ಭಟ್ಟ ಅವರ ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಭಾವ ಲಹರಿ
ಪ್ರಕಾರ : ಕವನ ಸಂಕಲನ
ಲೇಖಕರು : ಚೇತನ ಭಾರ್ಗವ
ಬೆಲೆ : ೧೩೦₹
ಮೊದಲ ಮುದ್ರಣ : 2025
ವಿಘ್ನನಿವಾರಕ ಗಜಾನನ ಕುರಿತು ಆರಂಭವಾಗುವ ಕವನ, ೬೦ ಕವನಗಳ ಒಳಗೊಂಡಿದೆ. ಇದಕ್ಕೆ ಸುಂದರವಾಗಿ ಮುನ್ನುಡಿ ತಾರಾ ಸಂತೋಷ ಮೇರವಾಡೆ ಅವರು ಬರೆದಿದ್ದಾರೆ. ಹಾಗೂ ಬೆನ್ನುಡಿಯ ಶೃತಿ ಮಧುಸೂಧನ್ ಅವರು ಬರೆದಿದ್ದಾರೆ.
ನಗಲು ಕಾರಣ ತಿಳಿದರೆ – ಪುಟ್ಟ ಮಗಳು ಮದುವೆಯ ಸಂಭ್ರಮ ನೋಡಿ ತನ್ನ ಮದುವೆಯ ಮಾಡೆಂದು ಹಟ ಹಿಡಿದಾಗ ಉಪಾಯದಿ ಮಗುವ ಒಲಿಸುವ ತಾಯಿಯ ಮಾತು ಓದುಗನ ತುಟಿ ಅರಳಿಸುತ್ತೆ. ಜೀವ ಉಳಿಸುವ ವೈದ್ಯ ನಮಗೆ ಕಣ್ಣಿಗೆ ಕಾಣುವ ದೇವರು. ವೈದ್ಯರ ತ್ಯಾಗದ ಕುರಿತು ಸುಂದರ ಸಾಲುಗಳ ಕಾಣಬಹುದಾಗಿದೆ. ಅನ್ನದ ಜೊತೆ ಬಳಸಿ ಸಾಂಬಾರ್, ಅತಿಯಾದ ಜಂಕ್ ಫುಡ್ ಬಳಕೆ ವಿಷಕಾರಿ ಅದಕ್ಕೆ ಹೇಳಿ ಬಾಯ್ ಬಾಯ್ ಎಂದು ತಮ್ಮ ಕವನದ ಮೂಲಕ ತಿಳಿಸಿದ್ದಾರೆ ಕವಯತ್ರಿಯವರು. ಗುಣಿತಾಕ್ಷರ ಕವನವಿದೆ. ಕೆಲವೊಂದು ಕವನಕ್ಕೆ ಹೊಂದಿಕೆಯಾಗುವ ಚಿತ್ರಗಳಿವೆ. ಓದುಗನಿಗೆ ನಿರಾಸೆಯಾಗದೆ ಎಲ್ಲ ಕವನಗಳ ಓದಿಸಿಕೊಂಡು ಹೋಗುತ್ತದೆ. ಓದುಗನ ಮನಸ್ಸು ಗೆಲ್ಲುವುದು.

ಕಲ್ಪವೃಕ್ಷ
ಕೇಳಿದ್ದನ್ನು ಕೊಡುವ ಕಲ್ಪವೃಕ್ಷ
ಬಹು ಉಪಯೋಗಿ ಈ ವೃಕ್ಷ
ಇದರ ಗರಿಗಳಿಂದ ಕಟ್ಟುವರು ತೋರಣ
ಇದರ ಮೇಲೆಯೇ ನಮ್ಮ ಕೊನೆಯ ಪಯಣ
ಸ್ವಚ್ಛತೆಗೆ ಬಳಸುವರು ತೆಂಗಿನ ಪೊರಕೆ
ಛಾವಣಿಗೂ ಹೆಣೆದ ಗರಿಗಳ ಬಳಕೆ
ತೆಂಗಿನ ಸಿಪ್ಪೆಯಿಂದ ತಯಾರಿಸುವರು ಹಗ್ಗ
ಉರುವಲಾಗಿಯೂ ಇದೆ ಇದರ ಉಪಯೋಗ
ರುಚಿಯಾದ ಅಡುಗೆಗೆ ಬೇಕು ತೆಂಗಿನಕಾಯಿಯು
ತಿನ್ನಲು ಬಲು ರುಚಿ ಕೊಬ್ಬರಿಯು
ಎಳನೀರು ಆರೋಗ್ಯಕ್ಕೆ ಪೂರಕವು
ತೆಂಗಿನೆಣ್ಣೆ ನೋವಿಗೆ ರಾಮಬಾಣವು
ದೇವರ ಪೂಜೆಗೆ ಇದುವೇ ನೈವೇದ್ಯ
ಇದರಿಂದ ಮಾಡುವರು ಸಿಹಿ ಖಾದ್ಯ
ಯಾರಿಗೂ ತೊಂದರೆಕೊಡದ ಬಹುಉಪಯೋಗಿ ಮರ ತೆಂಗಿನ ಮರ. ಅಡುಗೆಯ ರುಚಿ ಹೆಚ್ಚಿಸುವುದೇ ಈ ತೆಂಗು. ಅನಾರೋಗ್ಯವಾದರು ಕುಡಿಯವರು ಎಳನೀರು. ಅಮೃತದಂತೆ ಕಾಪಾಡುವುದು ಮಾನವನ ಆರೋಗ್ಯವ. ಕಾಲು ನೋವು ,ಕೈ ನೋವು, ತಲೆ ನೋವಿಗೂ ರಾಮಬಾಣದಂತೆ ಕೆಲಸಮಾಡುತ್ತದೆ ತೆಂಗಿನೆಣ್ಣೆ. ದೇವರ ನೈವೇದ್ಯಕ್ಕೆ ಬೇಕೆಬೇಕು ತೆಂಗಿನಕಾಯಿ, ಹಲವು ಸಿಹಿ ಖಾದ್ಯಗಳಿಗೆ ಅಗತ್ಯ ತೆಂಗಿನ ತುರಿ. ಚೇತನಾ ಅವರು ತೆಂಗಿನ ಉಪಯೋಗವ ಸರಳ ಸುಂದರವಾಗಿ ಬರೆದಿದ್ದಾರೆ.

ಅಜ್ಜಿ ಮನೆ
ರಜೆ ಬಂದೊಡನೆ ಹೋಗುವೆವು ಅಜ್ಜಿ ಮನೆಗೆ
ಕಾಯುತ ನಿಂತಿರುವಳು ಒರಗಿ ಬಾಗಿಲಿಗೆ
ನೋಡಿದೊಡನೆ ಉಕ್ಕುವುದು ಅವಳಿಗೆ ಹರುಷ
ಅವರೊಂದಿಗೆ ಸಮಯ ಕಳೆಯುವುದೇ ಸಂತೋಷ
ಮಾಡಿಹರು ನಮಗೆಂದು ಬಗೆಬಗೆಯ ತಿಂಡಿತಿನಿಸು
ಇಷ್ಟು ದಿನ ಬರಲಿಲ್ಲದಕೆ ತೋರುತ ಹುಸಿ ಮುನಿಸು
ಅಜ್ಜನ ಜೊತೆಗುಂಟು ತೋಟದ ಓಡಾಟ
ನಡುವೆ ಹರಿವ ತೊರೆಯಲಿ ಈಜು ಮೋಜು ನೀರಾಟ
ರಾತ್ರಿಯ ಊಟಕ್ಕೆ ಅಜ್ಜಿ ನೀಡುವರು ಆ ಕೈತುತ್ತು
ಉಂಡವರಿಗಷ್ಟೇ ಗೊತ್ತು ಅದರ ರುಚಿ ಗಮ್ಮತ್ತು
ಇಲ್ಲಿಲ್ಲ ಗಡಿಬಿಡಿಯ ನಗರ ಜೀವನದ ಕಾಟ
ಅಜ್ಜ ಅಜ್ಜಿಯವರ ಅನುಭವವೇ ನಮಗೆ ನೀತಿಪಾಠ
ರಜೆ ಮುಗಿಯೆ ಮನೆಗೆ ಹೋಗಲು ನಮಗೆ ಬೇಜಾರು
ಮತ್ತೆ ರಜೆ ಬರಲು ಅಜ್ಜಿ ಮನೆಗೆ ಹೊರಡಲು ತಯಾರು
ಅಜ್ಜಿ ಮನೆ ಸಾಹಿತ್ಯ ಸೃಷ್ಟಿ ಬಳಗದಲ್ಲಿ ದಿನದ ಪದ ಬರೆದಾದ ಮೇಲೆ ಚೇತನಾರವರ ಪುಸ್ತಕ ಓದಲು ಅವರ ಬರಹದಲ್ಲೂ ಕಾಣಿಸಿತು ಅಜ್ಜಿ ಮನೆ ಕವನ. ಮಕ್ಕಳ ಪ್ರೀತಿಯ ತಾಣ ಅಜ್ಜಿಮನೆ. ಯಾವುದೇ ಪ್ರವಾಸಿ ಸ್ಥಳ, ಸಮುದ್ರ ಇವುಗಳ ತೋರಿಸದೆ ಇದ್ದರು ಮಕ್ಕಳು ಮತ್ತೊಮ್ಮೆ ಹೋದರಾಯಿತು ಅಂತ ಸುಮ್ಮನಾಗುವರು. ಆದರೆ, ಅಜ್ಜಿ ಮನೆಗೆ ಮಾತ್ರ ಅವರ ಕರೆದುಕೊಂಡು ಹೋಗಲೆ ಬೇಕು. ಮಕ್ಕಳಿಗೆ ರಜೆಯ ಆರಂಭದಿಂದ ಅಂತ್ಯದವರೆಗೂ ಬೇಸರತರದ ಸ್ಥಳ. ಅಜ್ಜ ಅಜ್ಜಿಯ ಜೊತೆಗೆ ಮೊಮ್ಮಕ್ಕಳ ಸಂಬಂಧ ತೋರಿಸುವ ಕವನ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನೂ ಹಲವು ಕೃತಿ ನಿಮ್ಮಿಂದ ಬರಲಿ ಎಂದು ಆಶಿಸುವೆ.
- ಸುವರ್ಣಾ ಭಟ್ಟ
