‘ಸವಿ ಭಾವಲಹರಿ’ ಕವನ – ಡಾ.ಶ್ರೀನಿವಾಸ ಪ್ರಸಾದ್

ಕುಲ ನೆಲ ಜಲಗಳ ಹಂಗೇನು?…ಕವಿ ಡಾ.ಶ್ರೀನಿವಾಸ ಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಜನ ಮೆಚ್ಚಲೆಂದು ಬೀರದು
ಸೌಗಂಧ ಕಸ್ತೂರಿ
ಮನುಜರ ಕೇಳಿ
ಅರಳದು ನಿಸರ್ಗ ಸಿರಿ
ಕಾರಣವಿಲ್ಲದೆ ಕಾಡುವುದು
ನೆನಪುಗಳ ಲಹರಿ
//ಜನ ಮೆಚ್ಚಲೆಂದು //

ಹೊರಗಿನ ವೇಷಕೆ
ಸುಳ್ಳಿನ ಹೊದಿಕೆ
ಒಳದನಿ ಸತ್ಯವೇ
ಸಾಕ್ಷಿ ನಂಬಿಕೆ
ಆಡುವ ಉಸಿರಿಗೆ
ಹೆಸರೆಲ್ಲಿದೆ?
ಕಾಣುವ ಹಸಿರಿಗೆ
ನಾಮಕರಣವೇತಕೆ
//ಜನ ಮೆಚ್ಚಲೆಂದು//

ಮುದಿತನಕಾಸರೆಯಾಗಲೆಂದು
ಬಯಸುತ ಜನನಿ ಜನಕರು
ಬೆಳೆಸರು ಒಡಲ ಮಕ್ಕಳನು
ಎತ್ತರ ಬೆಳೆದರೂ ಕೊನೆಗೆ
ಬಾಗುವ ಬಾಳೆಗೊನೆಗಳ
ವಿನಯಕೆ ಎಣೆಯುಂಟೇನು
ಮುಗಿಲನು ಕಂಡು ಕುಣಿವ ನವಿಲಿನ
ಲಾಸ್ಯಕೆ ಮಿಗಿಲುಂಟೇನು
//ಜನ ಮೆಚ್ಚಲೆಂದು//

ಎಲ್ಲೆಡೆಯಲ್ಲೂ ನೆಲೆಯೂರಿರುವ
ಅಣುರೇಣು ತೃಣಕಾಷ್ಟದಲೂ
ಅನುರಣಿಸುವ ಗೀತ ಸಂಗೀತಕೆ
ಕುಲ ನೆಲ ಜಲಗಳ ಹಂಗೇನು?
ಮಾತೇ ಆಡದ ಶಿಲ್ಪ ಕಲಾಕೃತಿ
ವೈವಿಧ್ಯಮಯ ಕಲೆ ಸಂಸ್ಕೃತಿ
ಎದೆಯಲಿ ಉಳಿಸುವ ಸ್ಮೃತಿಗಳಿಗೆ
ಮರಣವೆಂಬುದು ಉಂಟೇನು
//ಜನ ಮೆಚ್ಚಲೆಂದು//

ಮಗುವಿನ ನಗುವಿನ ನಿತ್ಯ ಚೆಲುವಿಗೆ
ಹಿರಿಜೀವಗಳ ಮಾಗಿದ ಬದುಕಿಗೆ
ಬೆಲೆಯನು ಕಟ್ಟಬಹುದೇನು
ಅಂದು ಇಂದು ಮುಂದು
ಎಲ್ಲವ ಹೊಂದಿಕೊಂಡು
ಸಾಗುವುದೇ ಬದುಕು
ಬಂದಂತೆ ಬಾಳನು ಸ್ವೀಕರಿಸಿ
ತೆರಳುವುದೇ ಸುಖವು
//ಜನ ಮೆಚ್ಚಲೆಂದು//

ಬೆಟ್ಟ ಗುಡ್ಡ ಕಾಡು ಧ್ವನಿಸುವುದು
ಮೌನ ನಾದವು
ಮುಕ್ತಾನಂದದಿ ಕಂಡರೆ
ಸ್ವರ್ಗ ನಿಸರ್ಗವು
ಹಮ್ಮು ಬಿಮ್ಮು ಸೊಮ್ಮು
ಒಣಜಂಬ ಲೆಕ್ಕಕೆ ಬಾರವು
ಸ್ವಾರ್ಥಮಾನುಷರ ತಿಮಿರಿಗೆ
ತಾತ್ಸಾರವೇ ಭೂಷಣವು
// ಜನ ಮೆಚ್ಚಲೆಂದು//

ಇಂದೂಧರತನಯ


  • ಡಾ.ಶ್ರೀನಿವಾಸ ಪ್ರಸಾದ್ – ಕೋಲಾರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading