ಲೇಖಕಿ ರೇಖಾ ಕಾಖಂಡಕಿ ಅವರು ತಮ್ಮ ವಿಶಿಷ್ಠವಾದ ಬರಹ ಶೈಲಿಯ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದುವರೆಗೂ ೩೫ ಕಾದಂಬರಿ ೩ ಕಥಾ ಸಂಕಲನ, ೩ ಗ್ರಂಥ ಸಂಪಾದನೆ ಮಾಡಿದ್ದಾರೆ. ಅನೇಕ ಕವನಗಳನ್ನು ಬರೆದಿದ್ದು, ಅವರ ‘ಕೋಟೆ’ ಮತ್ತು ‘ವೈವಸ್ವತ’ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಕೃತಿ : ಕೋಟೆ
ಲೇಖಕರು: ರೇಖಾ ಕಾಖಂಡಕಿ
ವಸಂತ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨೦೦೫
ಪುಟಗಳು: ೧೨೪
ಬೆಲೆ: ರೂ. ೭೦
ಲೇಖಕಿ ರೇಖಾ ಕಾಖಂಡಕಿ ಇವರು ತಮ್ಮ ವಿಶಿಷ್ಠವಾದ ಬರಹ ಶೈಲಿಯ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದುವರೆಗೂ ೩೫ ಕಾದಂಬರಿ ೩ ಕಥಾ ಸಂಕಲನ, ೩ ಗ್ರಂಥ ಸಂಪಾದನೆ ಮಾಡಿದ್ದಾರೆ. ಹಾಗೂ ಅನೇಕ ಕವನಗಳನ್ನು ಬರೆದಿದ್ದಾರೆ. ಇವರಿಗೆ ವಿವಿಧ ಪ್ರಶಸ್ತಿ- ಸನ್ಮಾನಗಳು ದೊರಕಿದೆ.
ಜಾತೀಯತೆಯ ಸಮಸ್ಯೆಯ ಸುತ್ತ ಹೆಣೆದಿರುವ ಈ ಕಥೆಯು ದುರ್ಗದಲ್ಲಿ ಹೋಳಿ ಹುಣ್ಣಿಮೆಯ ಆಚರಣೆಯ ಸಂಭ್ರಮವನ್ನು ವರ್ಣಿಸುವುದರೊಂದಿಗೆ ಶುರುವಾಗುತ್ತದೆ. ಅಂದೇ ಅಗ್ರಹಾರದ ರಾಮರಾಯರು ಮತ್ತು ಸೀತಮ್ಮನವರ ಹಿರಿ ಮಗಳು ಸಾವಿತ್ರಿ ಬೆಳಿಗ್ಗೆ ಕ್ಲಾಸಿಗೆ ಹೋದವಳು ಸಂಜೆಯಾದರೂ ವಾಪಸ್ ಬರದೇ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬ್ರಾಹ್ಮಣರ ಮಗಳಾದ ಆಕೆ ಲಿಂಗಾಯತರ ಹುಡುಗ ನೊಂದಿಗೆ ಓಡಿ ಹೋದಳೆಂಬ ಸುದ್ದಿ ತಿಳಿದು ಅವಮಾನ ದುಃಖದಿಂದ ಅವರು ಕುಸಿದು ಹೋಗಿದ್ದರು.

ಅಗ್ರಹಾರದ ಮುಖಂಡರೆಲ್ಲಾ ಸೇರಿ ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರು. ಮಗಳು ಮಾಡಿದ ತಪ್ಪಿಗೆ ಹೆತ್ತವರೂ ಶಿಕ್ಷೆ ಅನುಭವಿಸುವಂತಾಗಿತ್ತು. ಅವಮಾನದಿಂದ ಅವರು ಊರು ಬಿಟ್ಟು ಬೇರೆಡೆ ಹೋಗಿ ನೆಲೆಸಿದ್ದರು.
ಜಾತಿಯತೆಯೆಂಬ ಕೋಟೆಯೊಳಗೆ ನೆಲೆಸಿದ ಸಾವಿತ್ರಿ ಹಾಗೂ ರಫೀಕ್ ನನ್ನು ಪ್ರೀತಿಸುವ ಮಂಜುಳಾ ಇವರ ಸ್ನೇಹ ಇಲ್ಲಿ ಹಾಸು ಹೊಕ್ಕಾಗಿದೆ. ತನ್ನೆಲ್ಲಾ ಸಮಸ್ಯೆಯನ್ನೂ ಗೆಳತಿಯೊಂದಿಗೆ ಹಂಚಿ ಕೊಳ್ಳುವ ಸಾವಿತ್ರಿಯ ಅಸಹಾಯಕತೆ, ದುರ್ಗದ ಕೋಟೆಯನ್ನು ಮುಳ್ಳು ಬೇಲಿಗೆ ಹೋಲಿಸಿ, ಅದು ತಮ್ಮನ್ನು ಕಾಪಾಡುವ ಬದಲಿಗೆ ಮುಳ್ಳಿನಂತೆ ಚುಚ್ಚುತ್ತದೆ ಎಂಬ ಮಾತು ಅಲ್ಲಿನ ವಾಸ್ತವದ ಪ್ರಜ್ಞೆಯಾಗಿದೆ.
ವರ್ಷಗಳ ನಂತರ ಸಾವಿತ್ರಿ ಲಿಂಗಾಯಿತರ ಕೇರಿಯಲ್ಲಿ ಕಾಣಿಸಿ ಕೊಳ್ಳುತ್ತಾಳೆ. ಅಂದು ಓಡಿ ಹೋಗಿದ್ದಾಳೆಂದು ಕೊಂಡಿದ್ದ ಆಕೆಯನ್ನು ಅಸಲಿಗೆ ಮೋಸದಿಂದ ಲಿಂಗಾಯಿತರ ಮಗ ರಾಮಾಚಾರಿ ಅಪಹರಿಸಿ ಮಾನ ಹರಣ ಮಾಡಿದ್ದರು. ನಿಜ ವಿಷಯ ತಿಳಿದಾಗ ಪಂಚರು ಮತ್ತೆ ಸಭೆ ಕರೆಯುತ್ತಾರೆ. ಈಗ ಸಾವಿತ್ರಿ ಎಲ್ಲಿ ಉಳಿಯ ಬೇಕು! ಎನ್ನುವ ಬಗ್ಗೆ ಪಂಚರ ನಿರ್ಧಾರವೇನು? ಸಾವಿತ್ರಿಯ ಆತ್ಮಹತ್ಯೆಗೆ ಕಾರಣವೇನು? ಅಂತರ್ಜಾತಿಯ ಮದುವೆಯ ಸಮಸ್ಯೆಗಳು ಮತ್ತು ಪರಿಹಾರದ ಕುರಿತಂತೆ ರಚಿತವಾದ ಈ ಕಥೆಯಲ್ಲಿ ಒಂದು ಗಂಭೀರ ಚಿಂತನೆಯೂ ಇದೆ.

ನಾನು ಓದಿದ ಇವರದೇ ಮತ್ತೊಂದು ಕಾದಂಬರಿ.
ಕೃತಿ : ವೈವಸ್ವತ
ಲೇಖಕರು: ರೇಖಾ ಕಾಖಂಡಕಿ.
ಅಂಕಿತ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೬.
ಪುಟಗಳು: ೪೩೨.
ಬೆಲೆ: ರೂ.೩೫೦ .
ಇದೊಂದು ಐತಿಹಾಸಿಕ ಕಥೆಯುಳ್ಳ ಬೃಹತ್ ಕಾದಂಬರಿ. ಬಹುಮನಿ ಸುಲ್ತಾನರು ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ನಾಶ ಮಾಡಿದ ನಂತರ … ಅಲ್ಲಿನ ಜನ ಜೀವನವು ಹೇಗೆ ಅಸ್ತ್ಯವ್ಯಸ್ತವಾಗಿ ಮಾರ್ಪಟ್ಟಿತು ಎನ್ನುವಂತ ಸಂಪೂರ್ಣ ಚಿತ್ರಣವನ್ನು ಲೇಖಕಿ ಇಲ್ಲಿ ಅಧ್ಯಯನ ಪೂರ್ಣವಾಗಿ, ಅತ್ಯಂತ ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ.
ಯುದ್ಧದ ನಂತರ ದಿನಗಳು ಸಾಮಾನ್ಯ ಜನರ ಬದುಕು ಘೋರ ಕಷ್ಟದಿಂದ ಕೂಡಿತ್ತು ಮನೆ- ಮಠ -ಹೊಲಗಳನ್ನು ಕಳೆದುಕೊಂಡ ಜನರು ಹೊಟ್ಟೆ ಪಾಡಿಗಾಗಿ ಅಲೆಯುತ್ತಾ ಊರೂರು ತಿರುಗುತ್ತಾ ನೆಲೆಯನ್ನು ಕಾಣಲು ಒದ್ದಾಡುತ್ತಿದ್ದರು. ಅಂತಹ ಹಲವು ಕುಟುಂಬಗಳಲ್ಲಿ ‘ಬೊಮ್ಮಣಗಿ’ ಎನ್ನುವ ಮನೆತನಕ್ಕೆ ಸೇರಿದ ಜನರೂ ಇದ್ದರು. ಒಂದು ಕಾಲದಲ್ಲಿ ಧರ್ಮನಿಷ್ಟೆಯಿಂದ ಸುಖವಾಗಿ ಬಾಳಿ ಬದುಕಿದ ಜನರು ಈಗ ಕಾಡುಮೇಡು ಅಲೆದಾಡುವ ಕಷ್ಟದ ಜೀವನವನ್ನು ಲೇಖಕಿ ವಿವರಿಸಿದ ರೀತಿ ಮನ ಮಿಡಿಯುವಂತಿದೆ.

ತುಳಸ, ಗೋದಾ, ಗಂಗಾ ಎನ್ನುವ ತ್ಯಾಗಮಯಿ ಸ್ತ್ರೀಯರು ಇದೇ ಮನೆತನದ ಸಹೃದಯೀ ಹೆಂಗಳೆಯರು. ತುಳಜಾ ಕಿರಿಯ ವಯಸ್ಸಿನಲ್ಲಿಯೇ ದೇಶಮುಖ ಸಾವುಕಾರರ ಮನೆಗೆ ಸೊಸೆಯಾಗಿ ಬರುತ್ತಾಳೆ. ಸುಮಾರು ವರ್ಷಗಳ ಕಾಲ ಅವಳಿಗೆ ಮಕ್ಕಳ ಭಾಗ್ಯವಿಲ್ಲದಿದ್ದಾಗ ಆಕೆಯ ಗಂಡ ಎರಡನೇ ಮದುವೆಯಾಗುತ್ತಾನೆ. ಮನನೊಂದ ಆಕೆ ತನ್ನ ತವರಿಗೆ ಮರಳುತ್ತಾಳೆ.ಮುಂದೆ ಅಲ್ಲೇ ಬೇರು ಬಿಟ್ಟು ತಾಯಿಯಿಲ್ಲದ ತನ್ನ ಅಣ್ಣನ ಮಕ್ಕಳಿಗೆ ತಾಯಿ ಪ್ರೀತಿ ನೀಡುತ್ತಾ ಆ ಮನೆಯನ್ನು ಸಂಬಾಳಿಸುತ್ತಾಳೆ. ತಾನು ಕಲಿತ ದೇಸಿ ವೈದ್ಯಕೀಯ ಪದ್ಧತಿ ಮೂಲಕ ಊರ ಜನರಿಗೆ ಉಚಿತವಾಗಿ ಔಷಧ ಕೊಟ್ಟು ಎಲ್ಲರ ಪ್ರೀತಿಗೆ ಪಾತ್ರಳಾಗುತ್ತಾಳೆ.
ಆಕೆ ತನ್ನ ದುರದೃಷ್ಟಕ್ಕೆ ಎಂದೂ ಮರುಗದೇ , ಈ ಹೆಣ್ಣು ಜನ್ಮ ಭಗವಂತನ ಸೃಷ್ಟಿ. ‘ಜೀವಾ ಕೊಟ್ಟು ಜೀವಾ ತರೋ ಕಾಮಧೇನು ಆಕೆ’ ಎನ್ನುವ ಅವಳ ಪಾತ್ರಕ್ಕೆ ಲೇಖಕಿ ಜೀವ ತುಂಬಿ ಬರೆದಿದ್ದಾರೆ. ಇನ್ನೂ ಬಹಳಷ್ಟು ಆದರ್ಶ ವ್ಯಕ್ತಿತ್ವದ ಪಾತ್ರಗಳೂ ಇಲ್ಲಿ ಬರುತ್ತದೆ. ಅಧ್ಯಾಯಗಳು ಬದಲಾದರೂ ಚರಿತ್ರೆ ಎಂದೂ ಬದಲಾಗುವುದಿಲ್ಲ. ಎನ್ನುವಂತೆ ಸ್ತ್ರೀ ಶೋಷಣೆಯ ಇನ್ನೊಂದು ಮುಖದಂತೆ ಕಾಣುವ ಈ ಕಾದಂಬರಿಯಲ್ಲಿ ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು ಸಾಕಷ್ಟು ಕಾಣಸಿಗುತ್ತದೆ.
ಅತ್ಯಂತ ಪ್ರಬುದ್ಧವಾಗಿ, ಅಧ್ಯಯನಶೀಲತೆಯಿಂದ ಬರೆದ ಇದೊಂದು ಅತ್ಯುತ್ತಮ ಕಥಾವಸ್ತುವನ್ನು ಹೊಂದಿದ ಕಾದಂಬರಿ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
