ಆಶ್ರಿಫ್ ನಿಗೆ ತನ್ನ ಹೆಂಡತಿ ಸಮೀರಾ ಮೇಲೆ ಯಾಕೆ ಅನುಮಾನ ಬಂದಿತ್ತು?. ಸಮೀರಾ ಮೈಮೇಲಿದ್ದ ಬಿಳಿಗೆರೆಗಳೇ ಕಾರಣವಾಗಿತ್ತಾ? … ಆಶ್ರಿಫ್ ಮತ್ತು ಸಮೀರಾಳ ಬದುಕು ಏನಾಯಿತು, ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಅಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾನೂನು ಸಲಹೆಗಾರ ಆಫೀಸ್ ಕಛೇರಿಯ ನನ್ನ ಛೆಂಬರ್ ನಲ್ಲಿ ಕುಳಿತ್ತಿದೆ. ನಾನು ಅಲ್ಲಿ ಸಲಹೆಗಾರಳಾಗಿ ಹೋಗುವುದು ವಾರದಲ್ಲಿ ಎರಡು ದಿನ, ಮಂಗಳವಾರ ಮತ್ತು ಶುಕ್ರವಾರ ಮಾತ್ರ ಕರ್ತವ್ಯದ ಅವಧಿ ಇರುವಂತಹದ್ದು. ಉಳಿದಂತೆ ಅದರ ಮಧ್ಯದ ದಿನಗಳಲ್ಲಿ ತುರ್ತು ಸಲಹೆ ಬೇಕಿದ್ದರೆ ನನ್ನ ಕಛೇರಿ ಬರುತ್ತಾರೆ. ಈ ಇಲಾಖೆಗೆ ಸಂಬಂಧಿಸಿದಂತೆ ಕಿರುಕುಳ ಅನುಭವಿಸುವ ನೊಂದ ಮಹಿಳೆಯರು ಮತ್ತು ಮಕ್ಕಳು ಮಾತ್ರ ದೂರು ಸಲ್ಲಿಸಬೇಕು…ಅವುಗಳನ್ನು ಹೈಕೋರ್ಟ್ ನಿಯಮದನ್ವಯ ಜಿಲ್ಲಾ ನ್ಯಾಯಾಲಯದಿಂದ ನೇಮಕವಾದ ತಾಲೂಕಿಗೆ ಒಬ್ಬ ಮಹಿಳಾ ವಕೀಲರು ಕಾನೂನು ಸಲಹೆಗಾರರು ಇರುತ್ತಾರೆ.. ಅದರಂತೆ ನಮ್ಮ ತಾಲೂಕಿನಲ್ಲಿ ನಾನು ಕಾನೂನು ಸಲಹೆಗಾರಳಾಗಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವೆ.
ಅಲ್ಲಿ ಬರುವ ಸಾಕಷ್ಟು ಮಹಿಳೆಯರಿಗೆ ಸಾಂತ್ವಾನ, ಪರಿಹಾರ ಮತ್ತು ನ್ಯಾಯ ನಿಷ್ಪಕ್ಷಪಾತವಾಗಿ ಸಿಕ್ಕಿದೆ. ಕೆಲವು ಬಗೆ ಹರಿಯದ ಸಮಸ್ಯೆಗಳಿಗೆ ನ್ಯಾಯಾಲಯದ ಮುಖಾಂತರ ನ್ಯಾಯ ಸಿಗುವಂತೆ ನೋಡಿಕೊಂಡ ತೃಪ್ತಿ ಇದೆ.
ಈಗ ಹೇಳಲು ಹೊರಟ ವಿಷಯವೆನೆಂದರೆ ನಾನು ಕುಳಿತ ಟೇಬಲ್ ಮೇಲೆ ದೂರುದಾರರು ಅಂದು ಬರದೆ ಇದ್ದ ದೂರಿನ ಕಡತಗಳು ಇದ್ದವು. ಕಾನೂನು ಸಲಹೆಯ ಪ್ರಕ್ರಿಯೆ ಮುಗಿದ ಮೇಲೆ ದೂರುದಾರರು ಇಲ್ಲದ ಕೆಲವು ಕಡತಗಳನ್ನು ಪರಿಶೀಲಿಸುವಾಗ ಒಂದು ವಿಚಿತ್ರವಾದ ಕಿರುಕುಳ ಹೊಂದಿರುವ ನವವಿವಾಹಿತೆ ದೂರು ಸಲ್ಲಿಸಿದ್ದು ಗಮನಕ್ಕೆ ಬಂತು.. ಅದನ್ನು ಓದಿ… ದೂರುದಾರನಿಗೆ ಮತ್ತು ದೂರಿನಲ್ಲಿ ಉಲ್ಲೇಖಗೊಂಡಿದ ಎಲ್ಲ ನಾಮಧೇಯಗಳಿಗೆ ನೋಟಿಸ್ ಕೊಟ್ಟು. ದೂರುದಾರಳನ್ನು ಮುಂದಿನ ಶುಕ್ರವಾರ ಅಂದ್ರೆ ನೋಟಿಸ್ ಕೊಟ್ಟು ಹತ್ತುದಿನಗಳ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಗೆ ಬರಲು ತಿಳಿಸಿದೆ.
ಅಂದು ಶುಕ್ರವಾರ ಬೆಳಿಗ್ಗೆ ನಮ್ಮ ಊರಿನ ಪ್ರಸಿದ್ಧ ರಾಜಕೀಯ ಮುಖಂಡರಿಂದ ಒಂದು ಕರೆ ಬಂತು. ‘ಲಾಯರೇ’…ಅಂದ್ರು. ಹೇಳಿ ಅಣ್ಣ… ಅಂದೆ. ‘ನೋಡಿ, ಇವತ್ತು ನಮ್ಮ ಹುಡ್ಗನ ಕೇಸು ನಿಮ್ಮಂದೆ ಇದೆಯಂತೆ… ಆ ಹುಡುಗಿಯದೆ ತಪ್ಪು ಸ್ವಲ್ಪ ವಿಚಾರಿಸಿ ರಾಜಿ ಸಂಧಾನ ಮಾಡಿಸಿ ಬೇಗ ಕಳಿಸಿಕೊಡಿ. ಮಧ್ಯಾಹ್ನದ ಹೊತ್ತಿಗೆ ನಮ್ಮ ಹುಡುಗ ನಮಾಜ್ಗೆ ಹೋಗ್ಬೇಕು.!!
‘ಅಲ್ಲ ಅಣ್ಣಾ… ಆ ಕೇಸಿನಲ್ಲಿ ಹುಡುಗಿ ಆರೋಪಿಸಿರುವ ವಿಷಯ ತುಂಬಾ ವಿಚಿತ್ರ ಅನಿಸುತ್ತೆ… ಇಂತಹ ಗಂಡು ಮಕ್ಕಳು ಇದ್ದಾರ..?? ಅಷ್ಟು ಸುಲಭವಾಗಿ ರಾಜಿಸಂಧಾನ ಮಾಡಿಸು ಅಂತೀರಾ. ಸರಿ ನೀವೆಳಿದಂತೆ ರಾಜಿ ಸಂಧಾನ ಮಾಡಿಸುತ್ತೇವೆ. ಅವನು ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಜೊತೆಯಾಗಿ ಬಾಳ್ವೆ ಮಾಡ್ಬೇಕು ಆಗುತ್ತಾ?. ನೀವು ನಿಮ್ಮ ಹುಡುಗನಿಗೆ ಬುದ್ಧಿ ಹೇಳಿ’… ಅಂದೆ.
‘ಅಲ್ಲಾ ಲಾಯರೆ… ಆ ಹುಡುಗ ಇಡಿ ಸುಂಠಿಕೊಪ್ಪದಲ್ಲೆ ಪ್ರಸಿದ್ಧಿ ಪಡೆದಿದ್ದಾನೆ. ದೊಡ್ಡ ವ್ಯಾಪಾರಸ್ಥ ನನ್ನ ಮುಕ್ಕಾಲು ಭಾಗ ಓಟ್ ಬ್ಯಾಂಕ್ ಅವನ ಕಡೆ ಇದೆ ನೋಡಿ!! ಹೌದಾ ಯಾರವನು. ಅಷ್ಟು ಪ್ರಸಿದ್ಧ ಪಡೆದವನು ಈ ತರಹದ ಮಣ್ಣು ತಿನ್ನುವ ಕೆಲಸ ಯಾಕೇ ಮಾಡ್ತಾನೆ, ಕಟ್ಟಿಕೊಂಡುವಳನ್ನು ಎರಡೇ ದಿನಕ್ಕೆ ವಾಪಸ್ಸು ಮನೆಗೆ ಕಳಿಸಿದ್ದಾನಲ್ಲಾ.
ಇವನ್ಯಾವ ಸೀಮೆಯ ಮರ್ಯಾದಸ್ಥ. ಸರಿ ಬರೋಕೆ ಹೇಳಿ ಕಛೇರಿಗೆ, ಇಬ್ಬರನ್ನು ವಿಚಾರಿಸಿ ನೋಡ್ತೀನಿ.’.. ಅಂದು ಕರೆ ಸ್ಥಗಿತಗೊಳಿಸಿದೆ. ಪುನಃ ಹತ್ತು ಘಂಟೆ ಸಮಯಕ್ಕೆ ಅದೆ ರಾಜಕೀಯ ಪಕ್ಷದಿಂದ ಗುರುತಿಸಿಕೊಂಡಿದ್ದ ವಕೀಲರೊಬ್ಬರು ಕರೆ ಮಾಡಿ ಹೆಚ್.ಆರ್.ಪಿ, ಸಿ.ಡಿ.ಪಿ ಸೆಲ್ಗೆ ಅಶ್ರಫ್ ಕೇಸ್ಬಂದಿದ್ದೆಯಲ್ಲಾ..ಅದನ್ನು ನೋಡಿ ಸೆಟಲ್ ಮಾಡಿಸಿ, ಏನಾದರೂ ಒಳ್ಳೆಯ ಪರಿಹಾರ ಬೇಕಿದ್ದರೆ ಕೊಡಿಸೋಣ ಅಂದ್ರು!!
‘ಏನ್ ಲಾಯರೆ… ನೀವು ಹೀಗೆ ಹೇಳ್ತಿರಾ?… ಅವನು ಆಕೆಯನ್ನು ಬಿಡಲು ನೀಡಿರುವ ಕಾರಣ ಗೊತ್ತಾ ನಿಮಗೆ, ಇಷ್ಟು ಕೆಟ್ಟ ಮನಸ್ಸಿನ ವ್ಯಕ್ತಿಗಳಿಗೆ ನೀವ್ಯಾಕೇ ಸಪೋರ್ಟ್ ಮಾಡ್ತಿರಾ!…
ಆ ಹೆಣ್ಣು ಮಗಳ ಭವಿಷ್ಯ ಏನಾಗ್ಬೇಕು…. ಬರ್ಲಿ ಇಬ್ಬರು ಮುಖಾಮುಖಿ ವಿಚಾರಿಸಿ ನಾನು ಏನ್ಮಾಡೋದು ಅಂತಾ ಡಿಸೈಡ್ ಮಾಡ್ತೀನಿ… ಅವನು ಬಗ್ಗಿಲ್ಲಾ ಅಂದ್ರೆ ಅವಳಿಗೆ ಪೋಲಿಸ್ ಕಂಪ್ಲೇಂಟ್… ಇಲ್ಲ ಕೊರ್ಟನಲ್ಲಿ ದಾವೆ ಹೂಡಲು ಹೇಳ್ತಿನಿ’ ಅಂದೆ. ನನ್ನ ಮಾತು ಖಾರವಾಗಿ ಇದ್ದಿದ್ದರಿಂದ ಅವರು ಕರೆ ಕಟ್ಮಾಡಿದ್ರು.
ಆ ಹುಡಗನ ಬಗ್ಗೆ ತಿಳಿದ್ದಿದ್ದು ‘ಅವನು ಮತ್ತು ಅವನ ಮನೆತನ ಸಾಕಷ್ಟು ಸಿರಿವಂತಿಕೆಯದು. ಜೊತೆಗೆ ಇವನು ದೊಡ್ಡಮಟ್ಟದ ಮರದ ವ್ಯಾಪಾರಿ ಜೊತೆಗೆ ರಾಜಕೀಯ ಮಾಡೋದು ನೊಂದವರಿಗೆ ಸಹಾಯ ಮಾಡೋದು, ರಕ್ತ ದಾನ ಶಿಬಿರ, ತಾಲ್ಲೂಕು, ಜಿಲ್ಲಾ ಪಂಚಾಯತಿಯಲ್ಲಿ ಜಮೀನು ಸಂಬಂಧ ಕೆಲಸಗಳನ್ನು ಮಾಡಿಸಿಕೊಡೋದು, ಅವರ ಸಮುದಾಯದ ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ ಮಾಡೋದು ಹೀಗೆ ಜನೋಪಯೋಗಿ ಕೆಲಸ ಮಾಡುತ್ತಾ ಪ್ರವಚನಗಳನ್ನು ನೀಡುತ್ತಾ ರಾಜಕೀಯ ಧುರೀಣರ ಜೊತೆಗೆ ಗುರುತಿಸಿಕೊಂಡಿದ.
ಒಟ್ಟಿನಲ್ಲಿ ಹೊರಗಿನವರಿಗೆ ತುಂಬಾ ಆದರ್ಶ ಯುವಕ ಅನ್ನಬಹುದು.
ಹುಡುಗಿ ಮನೆಯವರು ಸಹ ಇವನಷ್ಟೆ ಶ್ರೀಮಂತರು, ಹುಡುಗಿ ಅಣ್ಣ ಹಾಗು ಇವನು ಒಟ್ಟಿಗೆ ಮರದ ವ್ಯಾಪಾರ ಮಾಡುತ್ತಿದ್ದವರು. ಆ ಸ್ನೇಹದಿಂದಲೆ ರಫೀಕ್ ತನ್ನ ತಂಗಿ ಸಮೀರಾಳನ್ನು ಆಶ್ರಿಫ್ ಮದುವೆ ಮಾಡಿಕೊಟ್ಟಿದ್ದ. ಸಮೀರಾಳಿಗೆ ತುಂಬಾ ಚಿಕ್ಕ ವಯಸ್ಸು ಇಪ್ಪತ್ತು ತುಂಬಿರಲಿಲ್ಲಾ, ಗುಂಡು ಗುಂಡಾಗಿ ದಪ್ಪ ಇದ್ಲು… ಆ ಕಾರಣದಿಂದ ನಿಶ್ಚಿತಾರ್ಥ ಆದ್ಮೇಲೆ ದೇಹ ತೂಕವನ್ನು ಸಹಜವಾಗಿ ಎಲ್ಲಾ ಹುಡುಗಿರಂತೆ ಡಯಟ್ ಮಾಡಿ ಹದಿನೆಂಟು ಕೆಜಿ ತೂಕ ಇಳಿಸಿಕೊಂಡಿದ್ದಳು.
ಎಲ್ಲರ ಇಷ್ಟದಂತೆ ಮದುವೆ ನಡೆದು ಸಮೀರಾ ಆಶ್ರಿಫ್ ಪತ್ನಿಯಾಗಿದ್ದಳು. ಅಂದು ಅವರ ಮೊದಲ ರಾತ್ರಿ. ಆ ಸಮಯದಲ್ಲಿ ಹೆಂಡತಿಯನ್ನ ಮುದ್ದಿಸುತ್ತಿದ್ದವ ಸಡನ್ನಾಗಿ ಹೆಂಡತಿಯನ್ನು ದೂರ ತಳ್ಳಿದ್ದಾನೆ. ಇದರಿಂದ ಸಹಜವಾಗಿಯೇ ಗಾಬರಿಯಾಗಿದ್ದ ಸಮೀರಾ. ಏನು ಕೇಳದೆ ಸಾವಾರಿಸಿಕೊಂಡು ಅತ್ತು ಬೆಳಕು ಹರಿಸಿದ್ದಾಳೆ. ಎರಡನೇ ದಿನ ಆತ ಹೆಂಡತಿಯನ್ನು ತನ್ನ ಮಲಗುವ ಕೊಠಡಿಗೆ ಸೇರಿಸಿಲ್ಲ ಈತ. ಇದಾಗಿ ಮೂರನೇ ದಿನಕ್ಕೆ ಹೆಂಡತಿಯನ್ನು ತವರಿಗೆ ತಂದು ಬಿಟ್ಟ. ಯಾಕೇ ಎಂದು ಸಮೀರಳನ್ನ ಹೆತ್ತವರು ಪ್ರಶ್ನಿಸಿದ್ದರು. ಏನು ಅಂತಾ ಹೇಳಿಯಾಳು. ವಿಧಿ ಇಲ್ಲ ಹೇಳಲೆಬೇಕು. ಆದರೆ ಹೆತ್ತವರು ಬಳಿ ಹೇಳಲು ಸಂಕೋಚ, ಏನನ್ನೂ ಹೇಳದೆ ಒಂದೇ ಸಮನೆ ದುಃಖಿಸುವ ಮಗಳನ್ನು ಕಂಡು ಅವರಿಗೂ ಬಾಯಿ ಬರುತ್ತಿಲ್ಲಾ ಮಾತಾಡಲು, ಕೊನೆಗೆ ಅಣ್ಣ ರಫೀಕ್ ಬಳಿ ನಡೆದ ಘಟನೆಯನ್ನು ಹೇಳಿದ್ದಾಳೆ.

ಅಂದು ರಾತ್ರಿ ಹೆಂಡತಿಯ ಎರಡು ತೊಡೆಗಳ ಮೇಲೆ ಇದ್ದ ಬಿಳಿ ಗೆರೆಗಳನ್ನು ನೋಡಿ… ನೀನು ನನ್ನ ಮದುವೆ ಆಗುವ ಮೊದಲು ಯಾರಟ್ಟಿಗೋ ಅನೈತಿಕ ಸಂಬಂಧ ಹೊಂದಿ ಮಗುವನ್ನು ಪಡೆದಿರುವೆ. ನೀನು ಕನ್ಯೆಯಾಗಿಯೇ ಉಳಿದಿಲ್ಲ, ಮಗುವಿನ ತಾಯಿ ನೀನು ಅಂತ ಅವಳನ್ನು ಹೊರದಬ್ಬಿದ್ದಾನೆ, ಅಂತಹ ಅನುಮಾನಕ್ಕೆ ಇವಳು ಕಾರಣ ಕೇಳಿದಾಗ ಎರಡು ತೊಡೆಗಳು ಮತ್ತು ಪೃಷ್ಠಭಾಗದಲ್ಲಿ ಕಂಡು ಬಂದದ್ದ ಗೆರೆಗಳನ್ನು ತೋರಿಸಿ.. ನೀನು ಕನ್ಯೆಯಲ್ಲಾ ಎಂದು ಆರೋಪಿಸಿ ವಾಪಸ್ಸು ಮನೆಗೆ ಕಳುಹಿಸಿದ್ದಾನೆ. ಇದರ ಸಂಬಂಧವಾಗಿ ಆಶ್ರಿಫ್ ಹೆತ್ತವರು, ಹಿರಿಯರು ಬಂಧು ಬಳಗ, ಸ್ನೇಹಿತರು ಎಲ್ಲರೂ ರಾಜಿ ಸಂಧಾನ ಮಾಡಿ ಅವನ ಕಣ್ಣಿಗೆ ಮುಚ್ಚಿ ಕೊಂಡಿರುವ ಪೂರೆತೆಗೆಯುವ ಪ್ರಯತ್ನ ಮಾಡಿದರು ಎಲ್ಲವೂ ವ್ಯರ್ಥವಾಗಿದೆ, ಆಶ್ರಿಫ್ ಆತ್ಮೀಯ ಗೆಳೆಯ ರಫೀಕ್ನ ಮಾತಿಗೂ ಬೆಲೆ ಕೊಟ್ಟಿಲ್ಲ, ಇದರಿಂದ ಬೇಸತ್ತ ರಫೀಕ್ ಗೆಳೆಯನಿಗೆ ಸರಿಯಾಗಿ ಬುದ್ಧಿ ಕಲಿಸಲು ಪೋಲಿಸ್ ಕಂಪ್ಲೇಂಟ್, ಇಲ್ಲ ಯಾರ ಕೈಯಲಾದರೂ ಆಶ್ರಿಫ್ ಕೈ ಕಾಲು ಮುರಿಸ್ಬೇಕು ಅನ್ನುವ ತೀರ್ಮಾನಕ್ಕೆ ಬರುತ್ತಾನೆ. ತಂಗಿಯ ಕಣ್ಣೀರು ನೋಡಲಾಗದೆ.
ಸಮೀರಾಳ ಹೆತ್ತವರು ಮಗನಿಗೆ ಬುದ್ಧಿ ಹೇಳ್ತಾರೆ. ಪೊಲೀಸ್, ಕೋರ್ಟ್, ರೌಡಿಗಳು ಅಂತಾ ಹೋದ್ರೆ ನಮ್ಮ ಮಗಳ ಮರ್ಯಾದೆ ಹೋಗುವುದರ ಜೊತೆಗೆ ಎರಡು ಕುಟುಂಬಗಳ ಮರ್ಯಾದೆ, ಸ್ನೇಹ ಸಂಬಂಧ ಎಲ್ಲಾ ಹಾಳಾಗುತ್ತದೆ ಇವನ್ನೊಬ್ಬನಿಂದ. ಹಾಗಾಗಿ ಗುಪ್ತವಾಗಿ ಬಗೆ ಹರಿಸಿಕೊಳ್ಳಬೇಕೆಂಬ ಇಚ್ಚೆಯಿಂದ ಎಲ್ಲಾ ರಾಜೀ ತೀರ್ಮಾನಗಳು ಮುಗಿದ ಒಂದು ವರ್ಷದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದು, ಅದು ನನ್ನ ಮುಂದೆ ಬಂದಿತ್ತು. ಆಶ್ರಿಫ್ ಎಲ್ಲರ ಬಳಿಯು ಹೆಂಡತಿಗೆ ವಿವಾಹ ಪೂರ್ವ ದೈಹಿಕ ಸಂಬಂಧವಿತ್ತು. ಈಗ ನನ್ನನ್ನು ಮದುವೆ ಮಾಡಿಕೊಂಡಿದ್ದಾಳೆ. ನನಗವಳು ಬೇಡ ಅವಳಿಂದ ಮುಕ್ತಿ ಕೊಡಿಸಿ ಅಂತಾ ತನ್ನ ಪ್ರಭಾವ ಬೀರಿದ್ದ.
ನಾನು ನನ್ನ ಚೇಂಬರ್ನಲ್ಲಿ ಸಮೀರಾಳ ಅಣ್ಣ, ಹೆತ್ತವರು ಮತ್ತು ಅಶ್ರಫ್ ನ ಹೆತ್ತವರನ್ನು ಹೊರಗೆ ಕೂರಿಸಿ… ಇವರಿಬ್ಬರ ನನ್ನ ಎದುರಿಗೆ ಕೂರಿಸಿಕೊಂಡು… ಈ ಮೇಲಿನ ವಿಚಾರಗಳನ್ನು ತಿಳಿದ್ದಿದ್ದು… ನಾನು ಕೇಳಿದೆ ಅಶ್ರಫ್ ಏನು ಓದಿರುವೆ ನೀನು ಬಿ.ಕಾಂ.. ಎಂದಾ.. ಸಮೀರಾ ಸೆಕೆಂಡ್ ಪಿ.ಯು.ಸಿ, ಅಶ್ರಫ್ ಹೇಳು ಸಮೀರಾ ಮದುವೆ ಮುನ್ನ ತಾಯಿ ಆಗಿದ್ದಾಳೆ ಅಂತಾ ಯಾಕೇ ನಿನಗೆ ಡೌಟು..?
‘ಮೇಡಂ, ಅವಳ ತೂಡೆ ಮತ್ತು ಪೃಷ್ಠಭಾಗದಲಿ ಬಿಳಿಗೆರೆಗಳಿವೆ. ಹೌದಾ…ಗೆರೆಗಳಿಂದ ಹೆಣ್ಣೊಬ್ಬಳು ತಾಯಿ ಆಗಿದ್ದಾಳೆ ಅಂತ ಹೇಗೆ ಡಿಸೈಡ್ ಮಾಡಿದೆ.?
‘ಮೇಡಂ… ತುಂಬಾ ಪುಸ್ತಕ ಮತ್ತು ಸಿನಿಮಾ ನೋಡಿದ್ದೇನೆ, ಓದಿದ್ದೇನೆ… ಅದರಲ್ಲಿ ಹೆಣ್ಣು ಮಕ್ಕಳು ಗರ್ಭಿಣಿ ಆಗಿ ಮಗು ಹೆತ್ತಾಗ ಅವರ ದೇಹದ ಭಾಗದಲ್ಲಿ ಬಿಳಿ ಗೆರೆಗಳು ಬರುತ್ತೆ ಎಂದು.
ಒಂದು ಹೆಣ್ಣಿನ ಮೈಮೇಲೆ ಯಾವ ಯಾವ ಭಾಗದಲ್ಲಿ ಯಾಕೇ ಬಿಳಿಗೆರೆ ಬರುತ್ತೆ ಅಂತಾ ನಿನಗೆ ಗೊತ್ತಾ…?
‘ಇಲ್ಲ ಮೇಡಂ’…

ಸಾಂದರ್ಭಿಕ ಚಿತ್ರ ಫೋಟೋ ಕೃಪೆ : google
‘ಮತ್ತೇಕೆ, ಅವಳ ತೊಡೆ ಮತ್ತು ಪೃಷ್ಠ ಭಾಗದಲ್ಲಿರುವ ಗೆರೆಗಳು ತಾಯಿ ಆಗಿರುವುದಕ್ಕೆ ಸಾಕ್ಷಿ ಅಂದೇ?. ನನ್ನ ಸ್ನೇಹಿತರು ಹೇಳಿದ್ರು ಮೊದಲ ರಾತ್ರಿ ರಕ್ತದ ಕಲೆ ಬರದೆ ಇದ್ದರೆ ಆಕೆ ಕನ್ಯೆ ಅಲ್ಲಾ… ಅಂತಾ. ಅಂದು ಅದು ಆಗಲಿಲ್ಲಾ ಜೊತೆಗೆ ಮೈಮೇಲೆ ಈ ಗೆರೆಗಳಿರುವುದರಿಂದ ಇವಳು ನನ್ನ ಹೆಂಡತಿ ಆಗುವ ಮೊದಲು ಬೇರೆ ಸಂಬಂಧವಿರಿಸಿಕೊಂಡಿದ್ದಾಳೆ.
‘ನೋಡು… ನೀನು ತಿಳಿದುಕೊಂಡಿರೋದು ತುಂಬಾ ತಪ್ಪು.. ಸಮೀರಾ ತುಂಬಾ ಚಿಕ್ಕ ಹುಡುಗಿ ಮುದ್ದಾಗಿ ಸಾಕಿದ್ದಾರೆ. ಅದರ ಪರಿಣಾಮ ಅವಳು ನಿನ್ನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವಾಗ ದಪ್ಪ ಇದ್ದಳು, ನಿನ್ನ ಮದುವೆಯ ಸಮಯಕ್ಕೆ ಅವಳು ದೇಹದ ತೂಕ ಕಳೆದುಕೊಳ್ಳುವುದರ ಜೊತೆಗೆ ಸೈಕಲ್ತುಳಿಯೋದು, ಆಟ ಆಡೋದು, ಕುಣಿಯೋದು, ನೆಗೆಯೋದು ಇಂತಹ ಕೆಲಸಗಳನ್ನು ಮಾಡುವುದರಿಂದ ಕೆಲವು ಹೆಣ್ಣು ಮಕ್ಕಳ ಕನ್ಯಾಪೊರೆ ಹರಿದಿರುತ್ತದೆ. ಹಾಗಂದ ಮಾತ್ರಕ್ಕೆ ಹೆಣ್ಣು ಮಕ್ಕಳನ್ನು ವಿನಾಕಾರಣ ಅನುಮಾನಿಸಬಾರದು, ಅಲ್ಲದೆ ತೂಕ ಇಳಿಸಿಕೊಂಡ ಪರಿಣಾಮ ಚರ್ಮ ಎಳೆದಂತೆ ಆಗಿ ದೇಹದ ಯಾವ ಯಾವ ಭಾಗದಲ್ಲಿ ತೂಕ ಇಳಿದಿರುತ್ತದೆಯೋ, ಇಲ್ಲ ಅತಿಯಾದ ಭಾರದಿಂದ ಸಹ ಈ ಗೆರೆಗಳು ಎದೆ, ಪೃಷ್ಠ , ತೊಡೆ ಭಾಗದಲ್ಲಿ ಹುಡುಗಿಯರಿಗೆ ಕಾಣಿಸಿಕೊಂಡರೆ ಗರ್ಭಿಣಿ ಸ್ತ್ರೀಯರಿಗೆ ಹೊಟ್ಟೆ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಅಲ್ಲದೆ ಈ ಗೆರೆಗಳು ಗಂಡಸರ ದೇಹದಲ್ಲಿಯೂ ಕಾಣಿಸುತ್ತದೆ. ಸಮೀರಾ ಮಾತ್ರವಲ್ಲ.. ಹದಿಮೂರು.. ಹದಿನಾರು ವಯಸ್ಸಿನ ಹೆಣ್ಣು ಮಕ್ಕಳ ಮೈ ಮೇಲೆ ಸಹ ಇರುತ್ತದೆ. ಋತುಮತಿಯಾದಾಗ, ಬೆಳೆಯೋ ಟೈಮಿನಲ್ಲಿ ಚರ್ಮದ ಬದಲಾವಣೆ ಬೇಗ ಆಗೋದರಿಂದ ಎಳೆದಂತಾಗತ್ತೆ, ಜಿಮ್ ಜಾಸ್ತಿ ಮಾಡಿ ನಂತರ ಮಾಡದೇ ಇದ್ದಾಗ, ದಪ್ಪ ಇದ್ದು ತೆಳ್ಳಗೆ ಆದಾಗ… ಇವೆಲ್ಲಾ ಕಾರಣದಿಂದ ಮೈಮೇಲೆ ಬಿಳಿಗೆರೆಗಳು ಬರುತ್ತವೆ… ತಾಯಿ ಆದ್ರೆ ಮಾತ್ರವಲ್ಲ… ಅವರವರ ದೇಹನುಗುಣವಾಗಿ ಈ ತರಹದ ಬದಲಾವಣೆ ಆಗುತ್ತದೆ.
ಅದು ಮೇಡಂ….
‘ಏನ್ ಆಶ್ರಿಫ್… ಇಷ್ಟು ಹೇಳಿದ ಮೇಲೂ ನಿನಗೆ ಸಮೀರಾಳ ಮೇಲೆ ಅನುಮಾನವಿದ್ದರೆ ಡಾಕ್ಟರ್ ಕರೆಸುತ್ತೇನೆ. ಅವರೇ ನಿನಗೆ ಸರಿಯಾಗಿ ತಿಳಿಯುವ ಹಾಗೆ ಮಾಡ್ತಾರೆ ಯಾವುದು ಕೆಲಸಕ್ಕೆ ಬಾರದ ಪುಸ್ತಕ, ಸಿನಿಮಾ, ಮೊಬೈಲ್ನಲ್ಲಿ ಬರುವ ಪೋಲಿ ಕಥೆಗಳನ್ನು ಓದಿಕೊಂಡು ನಿನ್ನ ಬದುಕುನ್ನು ತೀರ್ಮಾನಿಸಬೇಡ. ಒಂದು ವೇಳೆ ನಾಳೆ ದಿನ ನಿನಗೊಬ್ಬಳು ಮಗಳು ಹುಟ್ಟಿ ಅವಳನ್ನು ಅವಳ ಗಂಡ ಇದೇ ಕಾರಣ ಕೊಟ್ಟು ಮನೆಯಿಂದ ನಿನ್ನ ಮನೆಗೆ ಕಳುಹಿಸಿದ್ರೆ ಸುಮ್ಮನಿರುತ್ತಿಯಾ?’.
‘ಸಮಾಜದಲ್ಲಿ ಧರ್ಮದ ಬಗ್ಗೆ ಪ್ರವಚನ ಕೊಡೋದು ಸಮಾಜಮುಖಿ ಕೆಲಸ ಮಾಡೋದು ಮಾಡಿ ಬಡ ಹೆಣ್ಣುಮಕ್ಕಳ ಕಣ್ಣಿಗೆ ಹೀರೋ ಆದ್ರೆ ಸಾಲದು. ನಂಬಿ ಬಂದವಳನ್ನು ಮನದುಂಬಿ ಪ್ರೀತಿಸಿ ಸಂಸಾರ ನಡೆಸಬೇಕು. ಇಷ್ಟೆಲ್ಲಾ ಬಿಡಿಸಿ ಹೇಳಿದ ಮೇಲೂ ನಿನ್ನಷ್ಟದಂತೆ ಅನ್ನುವ ಹಾಗಿದ್ದರೆ.. ಸಮೀರಾ, ಕಾನೂನಾತ್ಮಕ ಹೋರಾಟ ಮಾಡುತ್ತಾಳೆ ಅಷ್ಟೇ… ಯಾಕೆಂದರೆ ನಮಗೆ ಉಳಿದಿರೋದು ಇದೊಂದೇ ದಾರಿ… ನಿನಗೆ ಅವಳು ಬೇಡವಾಗಿರಬಹುದು… ಅವಳಿಗೆ ನೀನು ಬೇಕು… ಏನ್ಮಾಡ್ತಿಯಾ? ಅನ್ನೋದು ನಿನಗೆ ಬಿಟ್ಟಿದ್ದು’.
‘ಸರಿ ಮೇಡಂ …ಒಂದು ಅವಕಾಶ ಕೊಡಿ’…
‘ಆಯ್ತು, ಇನ್ನೂ ಮೂರು ದಿನದಲ್ಲಿ ಅಂದ್ರೆ ಮುಂದಿನ ಮಂಗಳವಾರ ಕಛೇರಿಗೆ ಬನ್ನಿ’… ಎಂದು ಕಳುಹಿಸಿ, ಮತ್ತೆ ಅವರೆಲ್ಲರೂ ತಿಳಿಸಿ ದಿನದಂದು ಮರಳಿ ಬಂದಾಗ ಸಮೀರಾಳ ತಂದೆ ಹಸನಬ್ಬ, ತಾಯಿ ಜರೀನಾ ಕಣ್ಣಲ್ಲಿ ಅಶ್ರುಧಾರೆ ಇತ್ತು. ಆಶ್ರಿಫ್ ಸಮೀರಾಳನ್ನು ಕರೆದುಕೊಂಡು ಹೋಗಿ ಸಂಸಾರ ಮಾಡುವುದಾಗಿ ಹೇಳಿದ. ಸಾಕೀರ ಎಂಬ ಮುದ್ದು ಹೆಣ್ಣು ಮಗುವಿನೊಂದಿಗೆ ಈಗ ಅವರದ್ದು ಸುಖೀ ಸಂಸಾರ.
ಆದರ್ಶಗಳು, ವೇದಾಂತಗಳು ತೋರಿಕೆಗೆ ಇರೋದಲ್ಲಾ… ಬಾಯಲ್ಲಿ ಹೋದ ಕಡೆ ಎಲ್ಲಾ ಪ್ರವಚನ ಕೊಟ್ರೇ ಸಾಲದು… ನಾವು ಅಳವಡಿಸಿಕೊಳ್ಳುವುದರ ಮೂಲಕ ಮೈಗೊಡಿಸಿಕೊಂಡ್ರೇ ಅಷ್ಟೇ ಸಾರ್ಥಕತೆ. ಇಲ್ಲದಿದ್ದರೆ ಬದುಕೆ ವ್ಯರ್ಥ.

ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು…ಹಿಂದಿನ ಸಂಚಿಕೆಗಳು :
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೧)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೨)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೩)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ ೪)
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು
