ಇಂದು ವಧುದಕ್ಷಿಣೆ ಕೊಟ್ಟಿಲ್ಲ ಎಂದು ತಾಯಿಯೊಬ್ಬಳು ‘ಎದ್ ಬಾರೆ, ತಾಳಿ ಕಟ್ಟುಸ್ಕೋ ಬ್ಯಾಡ’ ಎನ್ನುವ ಪರಿಸ್ಥಿತಿ ಬಂದಾಗಿದೆ. ಮುಯ್ಯಿಗೆ ಮುಯ್ಯಿ ಎಂದು ಕೆಲವರಿಗೆ ಸಂತಸವಾಗಬಹುದು. ಆದರೆ ಶೋಷಣೆ ಯಾರು ಮಾಡಿದರೂ ಶೋಷಣೆಯೆ ಅಲ್ಲವೆ?…ಲೇಖಕಿ ಸ್ವರ್ಣಲತಾ ಎ ಎಲ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
‘ಓಗ್ ಬ್ಯಾಡ ಕಣವ್ವಾ, ನಿನ್ ಕಾಲ್ ಇಡ್ಕತ್ತೀವಿ, ನಿನ್ ದಮ್ಮಯ್ಯ ಅಂತೀವಿ’. ಹೀಗೆ ಪೊಲೀಸ್ ಠಾಣೆಯಲ್ಲಿ ಆ ಹೆಣ್ಣು ಮಗಳನ್ನು ಅಂಗಲಾಚಿ ಬೇಡಿಕೊಳ್ಳುತ್ತಿದ್ದವರು ಬೇರೆ ಯಾರು ಅಲ್ಲ, ಹೆತ್ತ ತಂದೆ ತಾಯಿಗಳು. ಮಗಳು ಕಟ್ಟಿಕೊಂಡ ಗಂಡನನ್ನು, ಹೆತ್ತ ಮಗನನ್ನು ಬಿಟ್ಟು, ಟ್ರ್ಯಾಕ್ಟರ್ ಚಾಲಕನೊಂದಿಗೆ ಹೋಗಿ ಜೀವನ ಕಟ್ಟಿಕೊಳ್ಳಲು ಸಿದ್ಧವಾಗಿದ್ದಳು. ಠಾಣೆಯ ಇನ್ಸಪೆಕ್ಟರ್ ನನ್ನ ಮಗಳೇನಾದರೂ ಇಂಥ ಕೆಲಸ ಮಾಡಿದ್ದರೆ ನೇಣುಗಟ್ಟುತ್ತಿದ್ದೆ ಎಂದು ಅವರ ಭಾಷೆಯಲ್ಲಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದರು.
ಇದು ಇತ್ತೀಚೆಗೆ ನಮ್ಮ ಪಕ್ಕದ ಹಳ್ಳಿಯ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ. ಹುಡುಗಿ ಹೋಗುವಾಗ ಗಂಡನ ಮೇಲೆ ವರದಕ್ಷಿಣೆ ಕಿರುಕುಳದ ಪ್ರಕರಣವನ್ನೂ ದಾಖಲಿಸಿ ಹೋಗಿದ್ದಾಳೆ. ಮತ್ತೊಂದು ಘಟನೆ ನೋಡಿ. ಈ ಹೆಣ್ಣುಮಗಳು ಮದುವೆಯಾಗಿ ಎರಡು ವರ್ಷವಾಗಿತ್ತು. ಮನೆಯಲ್ಲಿ ಏನು ತೊಂದರೆ ಇರಲಿಲ್ಲ, ಗಂಡನ ಮನೆ ಬಿಟ್ಟು ಹೊರಟೇ ಹೋದಳು. ಪುಣ್ಯಕ್ಕೆ ಇವಳಿಗೆ ಇನ್ನೂ ಮಗುವಿರಲಿಲ್ಲ. ಇದ್ದಿದ್ದರೆ ಅದರ ಬಾಳು ಅತಂತ್ರವಾಗಿರುತ್ತಿತ್ತು.

ಇಂಥ ಘಟನೆಗಳು ನಮ್ಮ ಹಳ್ಳಿಗಳಲ್ಲಿ ಮಾಮೂಲಾಗಿಬಿಟ್ಟಿವೆ. ಮನಸ್ಸಿಗೆ ನೋವಾಗುತ್ತದೆ. ಗಂಡು ಹುಡುಕಲು ಚಪ್ಪಲಿ ಸವೆಸುತ್ತಿದ್ದ ಕಾಲ ಇಷ್ಟು ಬೇಗ ಬದಲಾಗುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಸರಿಯಾಗಿ ವರದಕ್ಷಿಣೆ ಕೊಟ್ಟಿಲ್ಲವೆಂದು ಧಾರಾಮಂಟಪದಿಂದ ಗಂಡನ್ನು ಎಬ್ಬಿಸಿಕೊಂದು ಹೋಗುತ್ತಿದ್ದಂತೆಯೇ ಈಗ ನಮ್ಮ ಕಡೆ ಮಗಳನ್ನು ವಧುದಕ್ಷಿಣೆ ಕೊಟ್ಟಿಲ್ಲವೆಂದು , ‘ಎದ್ ಬಾರೆ, ತಾಳಿ ಕಟ್ಟುಸ್ಕೋ ಬ್ಯಾಡ’ ಎಂದು ತಾಯಿಯೊಬ್ಬಳು ಕರೆಯುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ. ಗಂಡಿನ ಕಡೆಯವರು, ಅಸಹಾಯಕರಾಗಿ ನೋಡುತ್ತಾ ನಿಲ್ಲುವಂತಾಗಿದೆ.
ಇದು ಖಂಡಿತ ಉತ್ಪ್ರೇಕ್ಷೆಯಲ್ಲ. ಮುಯ್ಯಿಗೆ ಮುಯ್ಯಿ ಎಂದು ಕೆಲವರಿಗಾದರೂ ಸಂತಸವಾಗಬಹುದು. ಆದರೆ ಶೋಷಣೆ ಯಾರು ಮಾಡಿದರೂ ಶೋಷಣೆಯೆ ಅಲ್ಲವೆ.
ಮೊದಲಿನ ಪ್ರಕರಣದಲ್ಲಿ ಹೆಣ್ಣುಮಗಳು ಗಂಡನ ಮನೆ ತೊರೆದು ಹೋಗುವಾಗ ,ವರದಕ್ಷಿಣೆ ಕಿರುಕುಳದ ಪ್ರಕರಣವನ್ನೂ ದಾಖಲಿಸಿ ಹೋಗಿದ್ದಾಳೆ. ಅಲ್ಲಿಗೆ ಆ ಹುಡುಗನ ಮನೆಯವರ ಕತೆ ಮುಗಿದಂತೆ. ಹೆಣ್ಣನ್ನು ವರದಕ್ಷಿಣೆಗಾಗಿ ಶೋಷಿಸಿ ,ಪ್ರಾಣ ತೆಗೆಯುತ್ತಿದ್ದ ಕಾಲವೊಂದಿತ್ತು.ಆದರೆ ಉತ್ತರ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ, ಅದರಲ್ಲೂ ನಮ್ಮ ಹಳೆ ಮೈಸೂರು ಹಳ್ಳಿಗಳಲ್ಲಂತೂ ಈಗ ಹೆಣ್ಣು ಮಕ್ಕಳದೇ ದರ್ಬಾರು.
ಒಂದು ಸಲ ವರದಕ್ಷಿಣೆ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾದರೆ, ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿಲ್ಲ. ವಾರಂಟ್ ಇಲ್ಲದೇ ಬಂಧಿಸಬಹುದು. ಜಾಮೀನು ಸಿಗುವುದೂ ಕಷ್ಟವೆ. ವಧು ದಕ್ಷಣೆಯದೇ ಕಾರುಬಾರು ನಡೆಯುತ್ತಿರುವಾಗ, ವರದಕ್ಷಿಣೆ ಕಿರುಕುಳವೆಲ್ಲಿ ಬಂತು. ಮೊನ್ನೆ ನಮ್ಮ ಊರಿನಲ್ಲಿ ಹೆಣ್ಣುಮಗಳ ಮದುವೆ ನಡೆಯಿತು. ಹುಡುಗಿಯ ಅಪ್ಪನೇನು ಭಿಕ್ಷುಕನಲ್ಲ, ಬರೋಬ್ಬರಿ ಏಳು ಎಕರೆ ತೆಂಗಿನ ತೋಟವಿದೆ. ತಾನಾಗಿ ಬಂದರೆ ಏಕೆ ಬಿಡಬೇಕು. ವರನ ಕಡೆಯವರು ತಾವೇ ಛತ್ರದಲ್ಲಿ ಜೋರಾಗಿ ಮದುವೆ ಮಾಡಿಕೊಂಡರು, ಹುಡುಗಿಗೆ ಚಿನ್ನವನ್ನೂ ಕೊಟ್ಟು, ಹೆಣ್ಣಿನ ಮನೆಯವರ ಮದುವೆ ಖರ್ಚಿಗೆಂದು ಅಂದರೆ ಬಟ್ಟೆ ಬರೆಗೆ ಎಂದು ಎರಡು ಲಕ್ಷ ಹಣವನ್ನೂ ಕೊಟ್ಟರು.
ಮತ್ತೊಂದು ಪ್ರಕರಣ : ನಮ್ಮ ಊರಿನ ಹುಡುಗನೊಬ್ಬನಿಗೆ ಬಳ್ಳಾರಿಯಿಂದ ಹೆಣ್ಣು ತಂದು ಮದುವೆ ಮಾಡಿಕೊಂಡರು. ದಳ್ಳಾಳಿಗೆ ಒಂದು ಲಕ್ಷ , ಹುಡುಗಿ ಮನೆಯವರಿಗೆ ಮದುವೆ ಖರ್ಚಿಗೆ ಒಂದು ಲಕ್ಷ ನಗದು, ಬಳ್ಳಾರಿಯಿಂದ ಧಾರಾಮಂಟಪಕ್ಕೆ ಹೆಣ್ಣು ಕರೆತರಲು ಟ್ಯಾಕ್ಸಿಯೇ ಬೇಕೆಂದು ಹಠ.
ಕಡೆಯದಾಗಿ ಪರಿಸ್ಥಿತಿ ಹೀಗೆ ಮುಂದುವರಿದರೆ ವರದಕ್ಷಿಣೆ ವಿರೋಧಿ ಕಾನೂನಿನ ಜೊತೆಗೆ ವಧು ದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತರಬೇಕಾಗಬಹುದು. ಆದರೂ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಹೆಣ್ಣನ್ನಾಗಲಿ, ಗಂಡನ್ನಾಗಲಿ ತಂದೆತಾಯಿಗಳು ಸರಿಯಾಗಿ ಬೆಳೆಸದಿದ್ದರೆ ಮೇಲೆ ಹೇಳಿದಂಥ ಪ್ರಕರಣಗಳು ಹೆಚ್ಚಾಗಿ, ದಾಂಪತ್ಯ ಜೀವನ ಅರ್ಥ ಕಳೆದುಕೊಳ್ಳುತ್ತದೆ. ಸಮಾಜದ ಸ್ವಾಸ್ತ ಹಾಳಾಗಿ ಹೋಗುತ್ತದೆ.
- ಸ್ವರ್ಣಲತಾ ಎ ಎಲ್
