ನಮ್ಮ ಮನೆಯ ಕೊಟ್ಟಿಗೆಯ ಸುತ್ತ



ಎಷ್ಟು ಹಾಲು ಕೊಡಲಿ, ಏನೇ ಮಾಡಲಿ, ಎಮ್ಮೆಗೆ ಮಾತ್ರ ಪೂಜೆಯ ಭಾಗ್ಯವಿಲ್ಲ.ಜಾಸ್ತಿ ಹಾಲು ಕೊಡುವ ಎಮ್ಮೆ ಬರೀ ಎಮ್ಮೆ!ಎಮ್ಮೆ ಕರುವನ್ನು ಮುದ್ದು ಮಾಡದೇ ತಾರತಮ್ಯ ಮಾಡುತ್ತಿದ್ದರು. ನಿಜವಾಗಲೂ ಸ್ಥಿತಪ್ರಜ್ಞ ಎಂದರೆ ಎಮ್ಮೆ! – ಎನ್.ವಿ.ರಘುರಾಂ ಅವರ ಲೇಖನಿಯಲ್ಲಿ ಮೂಡಿ ಬಂದ ಕೊಟ್ಟಿಗೆಯ ಸುತ್ತ ಒಂದು ಲೇಖನ, ಮುಂದೆ ಓದಿ…

ನನ್ನ ಬಾಲ್ಯ ಸ್ನೇಹಿತ ರಾಮಣ್ಣ ಸಂಜೆ ಮನೆಯ ಹತ್ತಿರ ಬಂದಾಗ ಈ ದಿನ ಎಂದಿನ ಉತ್ಸಾಹ ಕಾಣಲಿಲ್ಲ. ಅತ ಕಾಫೀ ಕುಡಿದು ಸ್ವಲ್ಪ ಸಮಯವಾಯಿತೆಂದು ಇದು ತೋರಿಸುತ್ತದೆ ಅಷ್ಟೇ. ನನ್ನ ಮನದನ್ನೆ ಕಾಫೀ ಕೊಟ್ಟು ಮಾತಿಗೆ ಎಲ್ಲರೂ ಕೂತುಕೊಂಡಾಗ, ರಾಮಣ್ಣ ಮತ್ತೆ ಉತ್ಸಾಹದಿಂದ ಮಾತನಾಡಲು ಪ್ರಾರಂಭ ಮಾಡಿದೆ. “ಎಲೆಕ್ಟ್ರೀಕಲ್ ಇಂಜನೀಯರ್ ಮುಖದಲ್ಲಿ ಈಗ ಲೈಟ್ ಬಂತು” ಎಂದ ನನ್ನ ಮನೆಯವಳ ಮಾತಿಗೆ “ನಿಮ್ಮ ಕೈಯ ಕಾಫಿ ಗುಣ” ಎಂದು ರಾಮಣ್ಣ ನಕ್ಕ. “ಸ್ವಲ್ಪ ಈ ನಿಮ್ಮ ಫ್ರೆಂಡ್ಗೂ ಹೇಳಿ, ಎಷ್ಟು ಚೆನ್ನಾಗಿ ಕಾಫೀ ಮಾಡಿದರೂ ಇವರಿಗೆ ಮಾತ್ರ ಮೆಚ್ಚಿಸಲು ನನ್ನ ಕೈಲಿ ಆಗಿಲ್ಲ. ಹಳ್ಳಿಯ ನೊರೆಹಾಲಿನ ಕಾಫೀಯ ಜಪ ಕಳೆದ ಮೂವತ್ತು ವರ್ಷಗಳಿಂದ ಮಾಡುತ್ತಲೇ ಇರುತ್ತಾರೆ.” ಎಂದು ನಕ್ಕಳು. “ರಾಮಣ್ಣ ನೀನೆ ಹೇಳು! ಬೆಳಿಗ್ಗೆ ಅಮ್ಮ ಆಗ ತಾನೆ ಕರೆದು ತಂದಿಟ್ಟ ಎಮ್ಮೆ ಹಾಲಿಗೆ ಬೆಲ್ಲ ಹಾಕಿ ಮಾಡಿದ ಫಿಲ್ಟರ್ ಕಾಫಿ ಡಿಕಾಕ್ಷನ್ ಹಾಕಿ ಕುಡಿಯುವ ಮಜ ಇನ್ಯಾವ ಕಾಫೀಯಲ್ಲಿ ಬರುವುದು ಸಾಧ್ಯ”. ರಾಮಣ್ಣ ಈಗ ಹುಷಾರ್ ಆಗಿ ಯಾವುದೇ ಉತ್ತರ ಕೊಡುವ ಗೋಜಿಗೆ ಹೋಗದೆ “ನಡಿ, ವಾಕಿಂಗ್ ಗೆ ತಡವಾಗುತ್ತದೆ” ಎಂದು ಎಬ್ಬಿಸಿದ.

ಫೋಟೋ ಕೃಪೆ : Nohot

ಬೆಂಗಳೂರಿನ ಬಹುಮಹಡಿ ಕಟ್ಟಡದ ಫ್ಲಾಟ್ ಒಂದರಲ್ಲಿ ವಾಸವಾಗಿರುವ ನನಗೆ ಕರೆದ ನೊರೆ ಹಾಲು ಎಲ್ಲಿ ಸಿಗಲು ಸಾಧ್ಯ! ಈ ಫ್ಲಾಟ್ನಲ್ಲಿ ಎಲ್ಲಾ ಅನುಕೂಲವೇನೋ ಇದೆ. ಆದರೆ ಕೊಟ್ಟಿಗೆ ಇಲ್ಲವಲ್ಲ. ಈಗಂತೂ ಎಲ್ಲಾ ಕಡೆ ಸೀಮೆ ಹಸುನೇ ಸಾಕುವುದು. ಬೆಂಗಳೂರಿನಲ್ಲಿ ಹಸು ನೋಡಲು ಹುಡುಕಿಕೊಂಡು ಹೋಗಬೇಕು. ಸಣ್ಣ ಜಾಗದಲ್ಲಿ ನಾಲ್ಕೈದು ಹಸು ಕಟ್ಟಿದರೆ ಅದೇ ಕೊಟ್ಟಿಗೆ. ಅಲ್ಲಿ ಸುತ್ತಲೂ ಸೆಗಣಿ, ಗಂಜಲದ ವಾಸನೆ, ನೊಣ ಇದೆಲ್ಲಾ ಅಲ್ಲಿ ಸಾಮಾನ್ಯ. ಆದರೆ ಊರಿನಲ್ಲಿ ನಮ್ಮ ಮನೆಯ ಕೊಟ್ಟಿಗೆ ಹೀಗಿರುತ್ತಿರಲಿಲ್ಲ. ಬಹಳವೇ ಸ್ವಚ್ಛವಾಗಿರುತ್ತಿತ್ತು. ಒಂದೇ ಒಂದು ನೊಣ ಕೂಡ ಇರಲಿಲ್ಲ. ಅದಕ್ಕೆಲ್ಲಾ ಕಾರಣ ನಮ್ಮಮ್ಮ.

ಫೋಟೋ ಕೃಪೆ : india today

ಹೌದು! ಅಮ್ಮನಿಗೆ ಬಹುಶಃ ಬಹಳ ಇಷ್ಟವಾದ ಜಾಗ ಅಂದರೆ ನಮ್ಮ ಮನೆಯ ಕೊಟ್ಟಿಗೆ. ನಮ್ಮ ಮನೆಯ ತರಹ ಕೊಟ್ಟಿಗೆ ಕೂಡ ದೊಡ್ಡದಿತ್ತು. ಸುಮಾರು 30 ಅಡಿ ಉದ್ದ 20 ಅಡಿ ಅಗಲದ ಕೊಟ್ಟಿಗೆ. ಬೆಂಗಳೂರಿನಲ್ಲಿ ಇಷ್ಟು ಜಾಗವಿದ್ದರೆ ಮೂರು ಮಹಡಿ ಮನೆ ಕಟ್ಟಿಬಿಟ್ಟಿರುತ್ತಿದ್ದರು.

ಈ ಕೊಟ್ಟಿಗೆ ಕಟ್ಟಿರುವುದು ಕೂಡ ಬಹಳವೇ ಸುಲಭದಲ್ಲಿ. ಒಂದು ಕಡೆ ಜಂಬ್ಬಿಟ್ಟಿಗೆ ಗೋಡೆ. ಇನ್ನೊಂದು ಗೋಡೆ ಚಪ್ಪಡಿ ಕಲ್ಲಿನಲ್ಲಿ. ಹೌದು! ಹನ್ನೆರಡು ಅಡಿ ಗೋಡೆಗೂ ಚಪ್ಪಡಿಕಲ್ಲು. ನೆಲಕ್ಕೆ ಚಪ್ಪಡಿಕಲ್ಲು ಎಂದು ಹೇಳಬೇಕೇನಿದೆ? ಅದು ಸಾಮಾನ್ಯ ಬಿಡಿ. ಒಂದು ಕಡೆ ಎರಡು ಕಿಟಕಿ, ನೀರು ಇಡುವಂತ ಬಾನಿ, ಹುಲ್ಲು ಹಾಕಲು ಕಟ್ಟೆ. ಇನ್ನೊಂದು ಕಡೆ ನೀರು ಹರಿದು ಹೊರಗೆ ಹೋಗುವಂತೆ ಒಂದು ಸಣ್ಣ ಮೋರಿ. ಬಲಗಡೆ ಗೋಡೆಯ ತುದಿಯಲ್ಲಿ ಅಟ್ಟಕ್ಕೆ ಮೇಲೆ ಹೋಗಲು ಏಣಿ. ಮರದ ಅಟ್ಟದಲ್ಲಿ ಒಂದು ವರ್ಷಕ್ಕೆ ಆಗುವಸ್ಟು ಇಟ್ಟಿರುವ ಹುಲ್ಲಿನ ದಾಸ್ತಾನು! ಕೊಟ್ಟಿಗೆಯಿಂದ ಹಿಂದಿನ ರಸ್ತೆಗೆ ಹೋಗಲು ಬಾಗಿಲು ತೆರೆದರೆ ಕಾಣುವುದು “ಆಸ್ತಿಕ” ಮತ್ತು ” ನಾಳೆ ಬಾ” ಎಂಬ ಬರಹ!

ಫೋಟೋ ಕೃಪೆ : Nan magand

ಊರಿನ ಸಂತೆ ನಡೆಯುತ್ತಿದ್ದುದು ಸೋಮವಾರದಂದು. ಭಾನುವಾರ ರಾತ್ರಿ ಲಾರಿಯಲ್ಲಿ ದಾವಣಗೆರೆಯಿಂದ ಭಟ್ರು ಎಮ್ಮೆಗಳನ್ನು ತುಂಬಿಸಿಕೊಂಡು ತರುತ್ತಿದ್ದರಂತೆ. ಊರಿನವರೆಲ್ಲ ಅವರಿಗೆ “ಎಮ್ಮೆ ಭಟ್ರು” ಎಂದೇ ಕರೆಯುತ್ತಿದ್ದರು! ಅವರಿಗೆ ಆದು ಗೊತ್ತಿದ್ದರೂ ಅದರ ಬಗ್ಗೆ ತಲೆಕೆಡಸಿಕೊಳ್ಳದೇ ಸಂತೋಷವಾಗಿಯೇ ಸ್ವೀಕರಸಿದ್ದರು. ದಾರಿಯಲ್ಲಿ ಸಿಕ್ಕಾಗ “ನಾನು ಸಂಜೆ ಬರುತ್ತೇನೆ ಎಂದು ಅಪ್ಪನಿಗೆ ಹೇಳು” ಎಂದು ಹೇಳುತ್ತಾ “ಎಮ್ಮೆ ಭಟ್ರು ಎಂದು ಹೇಳು, ಊರ ತುಂಬ ಭಟ್ರು ಇದ್ದಾರೆ, ಯಾರು ಎಂದು ಗೊತ್ತಾಗಬೇಕಲ್ಲ!” ಎಂದು ಜೋರಾಗಿ ನಗುತ್ತಿದ್ದರು!

ಊರಿನವರೆಲ್ಲಾ ಎಮ್ಮೆ ತೆಗೆದುಕೊಳ್ಳುವುದು ಇವರ ಕೈಯಲ್ಲೇ. ಅಪ್ಪನೇ ಪ್ರತಿ ಸಾರಿನೂ ಎಮ್ಮೆ ಆರಿಸಲು ಹೋಗುತ್ತಿದ್ದರು. ಅಪ್ಪ ಆರಿಸಿದ ಹೊಸ ಎಮ್ಮೆ ಮತ್ತು ಹುಟ್ಟಿ ಇನ್ನೂ ಒಂದೆರಡು ದಿನ ಆಗಿರುವ ಕರು ಕರೆದುಕೊಂಡು ಭಟ್ಟರ ಆಳು ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಳೆಯ ಎಮ್ಮೆ ಮತ್ತು ಕರು ಕರೆದುಕೊಂಡು ಹೋಗುತ್ತಿದ್ದ. ಇದೊಂದು ಈಗಿನ ಕಾಲದ ಎಕ್ಸ್‌ಚೇಂಜ್ ವ್ಯಾಪಾರದ ತರಹೇ ಇತ್ತು.

ಫೋಟೋ ಕೃಪೆ : indiamart

ಪ್ರತಿ ಸಾರಿನೂ ಅಪ್ಪನೇ ಎಮ್ಮೆ ಆರಿಸಲು ಹೋಗುತ್ತಿದ್ದರು. ಒಂದು ಸಾರಿ ಬೇರೆ ಏನೋ ಕೆಲಸ ಬಂದಿದ್ದರಿಂದ ಹೋಗಿರಲಿಲ್ಲ. ಆಗ ಭಟ್ರು ಒಂದು ಎಮ್ಮೆ ಮತ್ತು ಕರು ತಂದು ಬೆಳಿಗ್ಗೆ ಕೊಟ್ಟಿಗೆಯಲ್ಲಿ ಕಟ್ಟಿ ಹೋಗಿದ್ದರು. ಎಲ್ಲಿಗೋ ಹೋಗಿದ್ದ ಅಪ್ಪ ಸುಮಾರು 11ಗಂಟೆಯ ಹೊತ್ತಿಗೆ ಮನೆಗೆ ಬಂದು ಕೊಟ್ಟಿಗೆಯಲ್ಲಿ ಕಟ್ಟಿದ ಎಮ್ಮೆ ನೋಡಿ, “ಈ ಎಮ್ಮೆ ಬೇಡ ಇದಕ್ಕೆ ಕೋಣದ ಕಣ್ಣು” ಇದೆ ಎಂದರು!. ಈ ಮೊದಲು ಅವರು ಎಮ್ಮೆಯ ಬಾಯಲ್ಲಿ ಇರುವ ಹಲ್ಲನ್ನು ನೋಡಿ ಅದರ ವಯಸ್ಸು ನಿರ್ಧಾರ ಮಾಡುವುದನ್ನು ನೋಡಿದ್ದೆ. ಈಗ ಕಣ್ಣು ಕೂಡ ನೋಡ ಬೇಕು ಎಂದು ಗೊತ್ತಾಯಿತು. ಕೋಣದ ಕಣ್ಣು ಇದ್ದರೆ ಎಲ್ಲರಿಗೂ ಹಾಯುತ್ತೆ! ಆಗ ಬೇರೊಂದು ಎಮ್ಮೆ ಮತ್ತು ಒಂದು ಸಣ್ಣ ಕರು ಅದರ ಜಾಗದಲ್ಲಿ ಎಮ್ಮೆ ಭಟ್ಟರು ಕಳುಹಿಸಿದರು.

ಎಮ್ಮೆ ಬಂದ ತಕ್ಷಣ ಅಮ್ಮನ ಸಂಭ್ರಮ ಪ್ರಾರಂಭ ಆಗುತ್ತಿತ್ತು. ಅಮ್ಮ ಬೆಳಿಗ್ಗೆ ಎದ್ದಾಗ ಮಾಡುತ್ತಿದ್ದ ಮೊದಲ ಕೆಲಸ ಎಮ್ಮೆ ಮತ್ತು ಕರುಗೆ ಹುಲ್ಲು ಹಾಕುವುದು. ಅಮ್ಮ ಕೊಟ್ಟಿಗೆ ಬಾಗಿಲ ಹತ್ತಿರ ಬಂದ ತಕ್ಷಣ ಎದ್ದು ನಿಂತು ಕುತ್ತಿಗೆ ಅಲ್ಲಾಡಿಸಿದಾಗ ಕುತ್ತಿಗೆಗೆ ಕಟ್ಟಿದ ಗೆಜ್ಜೆ ಶಬ್ದ ಮಾಡಿ ಅಮ್ಮನಿಗೆ ಸ್ವಾಗತ ಕೋರುತ್ತಿತ್ತು! ಅಗ ಎಮ್ಮೆಗೆ ಎರಡು ಕಟ್ಟು, ಕರುಗೆ ಅರ್ಧ ಕಟ್ಟು ಭತ್ತದ ಒಣ ಹುಲ್ಲು ಹಾಕುತ್ತಿದ್ದರು. ಸ್ವಲ್ಪ ಹೊತ್ತು ಬಿಟ್ಟು ಹಾಲು ಕರೆದು ಕೊಂಡು ಬರುತ್ತಿದ್ದರು. ಮೊದಲ ದಿನ ಬೆಳಿಗ್ಗೆ ಎರಡು ಸೇರು ಹಾಲು ಕೊಟ್ಟಿದ್ದ ಎಮ್ಮೆ ಸಂಜೆಯ ಹೊತ್ತಿಗೆ ಹಾಲು ಎರಡು ಪಾವಿಗೆ ಇಳಿದಿರುತಿತ್ತು. “ಕೆಚ್ಚಲು ಕಟ್ಟಿಸಿದ್ದಾರೆ ವ್ಯಾಪಾರ ಮಾಡಕ್ಕೆ” ಎಂದು ಅಮ್ಮ ಹೇಳುತ್ತಿದ್ದರು. ವ್ಯಾಪಾರ ಮಾಡಲು ಬಂದವರಿಗೆ ಕೆಚ್ಚಲು ಜೋರಾಗಿ ಕಾಣಲಿ ಎಂಬ ಕಾರಣಕ್ಕೆ ಹಿಂದಿನ ದಿನ ಹಾಲು ಕರೆಯುತ್ತಿರಲಿಲ್ಲವಂತೆ! ಹೊಸದಾಗಿ ಕರು ಹಾಕಿರುವ ಎಮ್ಮೆ ಇನ್ನೆಷ್ಟು ಹಾಲು ಕೊಡಲು ಸಾಧ್ಯ. ಅದರೆ ಅಮ್ಮನ ಆರೈಕೆಯಲ್ಲಿ ಅದು ಮೂರು ನಾಲ್ಕು ದಿನಗಳಲ್ಲಿಯೇ ಸುಧಾರಿಸಿಕೊಂಡು ದೊಡ್ಡ ಕೊಳದಪ್ಪಲೆ ತುಂಬ ಹಾಲುಕೊಡುತ್ತಿತ್ತು. ಸ್ವಲ್ಪ ಹೊತ್ತಿಗೆ ಮನೆಯ ಕೆಲಸದವಳಾದ ಲಕ್ಷ್ಮೀ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಳು. “ಯಾವಾಗಲೂ ಸೆಗಣಿ ಮೇಲೆ ಬಿದ್ದುಕೊಂಡು ಮೈಯಲ್ಲಾ ಮೆತ್ತಿಕೊಳ್ಳುತ್ತೀಯಲ್ಲೋ, ಅದರೆಲ್ಲೇನು ಗಂಟಿದೆಯಾ?” ಎಂದು ಬೈಯುತ್ತಾ ಹುಲ್ಲಿನ ಚೆಂಡಿನಲ್ಲಿ ಮೈಯುಜ್ಜಿ ಸ್ನಾನ ಮಾಡಿಸಿ, ಆಗಾಗ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಮತ್ತೆ ಮಿರಿ, ಮಿರಿ ಮಿಂಚು ಹಾಗೆ ಮಾಡುತ್ತಿದ್ದಳು. ಆ ಮೇಲೆ ‘ಹಿಂಡಿ’ ಹಾಕುತ್ತಿದ್ದಳು. ‘ಹಿಂಡಿ’ ಹಾಕಿದರೆ ಚೆನ್ನಾಗಿ ಹಾಲು ಕೊಡುತ್ತದಂತೆ. ಮತ್ತೆ ಸಂಜೆಯ ಹೊತ್ತಿಗೆ ಅಮ್ಮ ಹುಲ್ಲು ಹಾಕಿ ಹಾಲು ಕರೆಯುತ್ತಿದ್ದರು. ಸಂಜೆ ಸ್ವಲ್ಪ ಹಾಲು ಕಡಿಮೆ. ರಾತ್ರಿ ಮಲಗುವಾಗ ಬಾನಿನಲ್ಲಿ ನೀರು ಇದೆಯಾ ಎಂದು ಪರೀಕ್ಷೆ ಮಾಡುತ್ತಿದ್ದರು. ಬೇಸಿಗೆಯಲ್ಲಿ ಕೆಲವೊಮ್ಮೆ ಹಸಿ ಹುಲ್ಲು ಮಾರಲು ಬರುತ್ತಿತ್ತು. ಕೆಲವೊಮ್ಮೆ ಅದನ್ನು ತೆಗೆದುಕೊಂಡು ಹಾಕಿರುವುದು ಉಂಟು. ಇದರ ಜೊತೆ ಅಕ್ಕಿ ತೊಳೆದ ನೀರು, ಅನ್ನ ಬಸಿದ ಗಂಜಿ ಇವೆಲ್ಲ ಎಮ್ಮೆಗೆ. ಆಗೆಲ್ಲಾ ಸೇರಿನಲ್ಲಿ ಅಕ್ಕಿ ಅಳೆದು ಅಡಿಗೆ ಮಾಡುತ್ತಿದ್ದ ಕಾಲ. ಹಾಗಾಗಿ ಇವೆಲ್ಲಾ ಬೇಕಾದಷ್ಟು ಇರುತ್ತಿತ್ತು. ಜೊತೆಗೆ ಆಗಾಗ ಅಕ್ಕಿ ನುಚ್ಚು, ಹತ್ತಿ ಬಿಡಿಸಿದಾಗ ಸಿಗುತ್ತಿದ್ದ ಬೀಜ, ಬೆಲ್ಲ ಕೂಡ. ಇಷ್ಟೆಲ್ಲ ಉಪಚಾರ ಮಾಡಿಸಿಕೊಂಡ ಎಮ್ಮೆ ಅಮ್ಮನಿಗೆ ಮಾತ್ರ ಹಾಲು ಕೊಡುತ್ತಿತ್ತು. ಅಮ್ಮ ಇಲ್ಲದಿದ್ದರೆ ಮನೆ ಕೆಲಸದ ಲಕ್ಷ್ಮೀಗೆ ಮಾತ್ರ ಹಾಲುಕೊಡುತ್ತಿತ್ತು. ಉಳಿದವರಿಗೆ ಏನು ಮಾಡಿದರೂ ಕೊಡುತ್ತಿರಲಿಲ್ಲ. ಮೂಕ ಪ್ರಾಣಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದವರು ಯಾರು?

ಫೋಟೋ ಕೃಪೆ :youtube

ಮಾರ್ಚ್, ಎಪ್ರಿಲ್ ನಲ್ಲಿ ಎತ್ತಿನ ಗಾಡಿಯಲ್ಲಿ ಒಣಗಿದ ಹುಲ್ಲು (ಭತ್ತದ ಹುಲ್ಲು) ಮಾರಲು ಬರುತ್ತಿತ್ತು. ಅದನ್ನು ಕೊಟ್ಟಿಗೆಯ ಹಿಂಬಾಗದ ಬಾಗಲಲ್ಲಿ ಹಾಕಿಸಿ ಕೊಂಡು, ನಂತರ ಮನೆಯವರೆಲ್ಲಾ ಸಾಲಾಗಿ ನಿಂತು, ಒಬ್ಬರಿಂದ ಇನ್ನೊಬ್ಬರಿಗೆ ಪಾಸ್ ಮಾಡಿ ಅಟ್ಟದಲ್ಲಿ ಶೇಖರಣೆ ಮಾಡತ್ತಿತ್ತು. ಈಗ ಲೆಕ್ಕ ಹಾಕಿ ಒಂದು ವರ್ಷಕ್ಕೆ ಎಸ್ಟು ಬೇಕಾಗುತ್ತೆ ಅಂಥ! ಹುಲ್ಲು ಮೇಲೆ ಸಾಗಿಸುವಾಗ ಮೈ, ಕೈ, ಮುಖ ಎಲ್ಲ ತಾಗುತ್ತಿತ್ತು. ಅಲ್ಲೆಲ್ಲಾ ಕಡಿತ ಬರುತ್ತಿತ್ತು! ಆ ಹುಲ್ಲು ಕಡ್ಡಿಯಲ್ಲಿ ನಾವು ಸ್ಟ್ರಾ ಮಾಡಿಕೊಂಡು ಸೋಪು ಗುಳ್ಳೆ ಮಾಡುವುದು, ಗಂಟಿನ ಹತ್ತಿರ ಸೀಳಿ ಪೀಪಿ ತರಹ ಊದುವುದು ಕೂಡ ನಡೆಯುತ್ತಿತ್ತು.

ಮೊದಲು ಬೆಳಿಗ್ಗೆ ಸುಮಾರು 9ಗಂಟೆಯ ಹೊತ್ತಿಗೆ ಎಮ್ಮೆ ಮೇಯಿಸುವವರು ಬರುತ್ತಿದ್ದರು. ಅವರು ಎಲ್ಲರ ಮನೆಯ ಎಮ್ಮೆಯನ್ನು ಹೊಡೆದು ಕೊಂಡು ಹೋಗಿ ಸಂಜೆ ಐದರ ಹೊತ್ತಿಗೆ ಹಿಂತಿರುಗಿ ಕರೆದುಕೊಂಡು ಬರುತ್ತಿದ್ದರು. ಈ ಎಮ್ಮೆಗಳು ಮಧ್ಯ ರಸ್ತೇಯಲ್ಲೇ ಹೋಗುವುದು. ಹಾಗಾಗಿ ವಾಹನದಲ್ಲಿ ಬರುವವರು ಇದನ್ನು “ಸ್ಪೀಡ್ ಬ್ರೇಕರ್” ಎಂದು ಕರೆಯುತ್ತಿದ್ದರು. ಕೆಲವೊಮ್ಮೆ ಎಮ್ಮೆ ಸಂಜೆ ಮನೆಗೆ ಬರದೆ ತಪ್ಪಿಸಿ ಕೊಳ್ಳುವುದು ಇತ್ತು. ಮಾರನೇ ದಿನ ಬೆಳಿಗ್ಗೆ ಆದರೂ ಪತ್ತೆ ಇರುತ್ತಿರಲಿಲ್ಲ. ಊರಿನ ದೊಡ್ಡಿಯಲ್ಲಿ ಮೊದಲು ಹೋಗಿ ನೋಡುತ್ತಿದ್ದರು. (ದೊಡ್ಡಿ ಅಂದರೆ ಎನು ಎಂದು ಮರೆತು ಹೋಗಿದೆಯಾ? ಬೇರೆಯವರ ತೋಟ/ಗದ್ದೆಗೆ ಮೇಯಲು ನುಗ್ಗಿದ ಹಸುಗಳು, ಎಮ್ಮೆಗಳನ್ನು ಇಲ್ಲಿ ತಂದು ಬಿಡುತ್ತಿದ್ದರು! ಫೈನ್ ಕಟ್ಟಿ ಬಿಡಿಸಿ ಕೊಂಡು ಹೋಗಬೇಕಿತ್ತು!). ಊರಿನ ಗಾಂಧಿ ಚೌಕದ ಹತ್ತಿರ ಒಬ್ಬ ಗಡ್ಡ ಬಿಟ್ಟು ಕೊಂಡು, ನೋಡಲು ಭಿಕ್ಷುಕನ ತರಹ ಇರುವ ಒಬ್ಬ ಮನುಷ್ಯ ಒಡಾಡಿಕೊಂಡು ಇರುತ್ತಿದ್ದ. ಅವನ ಹೆಸರೇನು? ಯಾರಿಗೂ ಗೊತ್ತಿಲ್ಲ. ಅವನಿಗೆ ಹೋಗಿ ಹೇಳಿ ಬಂದರೆ ಅರ್ಧ ಗಂಟೆ ಬಿಟ್ಟು ಬರುತ್ತಿದ್ದ. ಎಮ್ಮೆ ಕಟ್ಟುವ ಗೂಟದ ಹತ್ತಿರ ಮಣ, ಮಣ (ಅಭ್ರಟ ಕಟ!) ಎಂದು ಏನೇನೋ ಐದು ನಿಮಿಷ ಒದರುತ್ತಿದ್ದ. ನಂತರ ಅಲ್ಲಿ ಎರಡು ಊದಿನಕಡ್ಡಿ ಹಚ್ಚಿ, ನಿಂಬೆಹಣ್ಣು ಇಡುತ್ತಿದ್ದ. ಅವನು ಪೂಜೆ ಮಾಡಿ ಹೋದ ಸ್ವಲ್ಪ ಹೊತ್ತಿಗೆ ಎಮ್ಮೆ ಎಲ್ಲಿದ್ದರೂ ತಾನಾಗಿಯೇ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು! ಆ ಎಮ್ಮೆಗೆ ದಾರಿ ತೋರಿಸಿದವರು ಯಾರು? ಈ ವಿಚಿತ್ರ ಮಾತ್ರ ಯಾರಿಗೂ ಅರ್ಥವಾಗಿರಲಿಲ್ಲ.

ಫೋಟೋ ಕೃಪೆ : inext live

ಎಲ್ಲೆಲ್ಲೂ ಏನೇನೊ ತಿಂದು ಕೊಂಡು ಬಂದರೆ ನಮಗೆ ಹೊಟ್ಟೆ ಕೆಡುವಂತೆ ಎಮ್ಮೆಗೊ ಹೊಟ್ಟೆ ಕೆಡುತ್ತಿತ್ತು. ಹೊಟ್ಟೆ ಕೆಟ್ಟರೆ ಆ ಮಂತ್ರವಾದಿಯೇ ವೈದ್ಯ! ಅವನೇ ಏನೋ ಒಂದು ಹಸಿರು ಬಣ್ಣದ ಔಷಧಿ ಮಾಡಿ, ಮೂಗುದಾರ ಹಿಡಿದುಕೊಂಡು ಒಂದು ಇಡೀ ದೊಡ್ಡ ಪೌಂಡ್ ಬಾಟಲಿಯಲ್ಲಿ ಔಷಧಿ ಕುಡಿಸುತ್ತಿದ್ದ! ಆ ಔಷದಿ ಕುಡಿದು ಒಂದು ಗಂಟೆಯ ಒಳಗೆ ಮಲಗಿದ್ದ ಎಮ್ಮೆ ಚಂಗನೆ ನೆಗೆದು ಎದ್ದು ನಿಲ್ಲುತ್ತಿತ್ತು!. ಸ್ವಲ್ಪ ವರ್ಷಗಳ ನಂತರ ಸರ್ಕಾರಿ ಪಶುವೈದ್ಯ ಆಸ್ಪತ್ರೆಗೆ ವೈದ್ಯರೊಬ್ಬರು ಬಂದರು. ಅವರೇನು ಓದಿದ್ದರೋ ನನಗೆ ಆಗ ಗೊತ್ತಿರಲಿಲ್ಲ. ಆದರೆ ಎಲ್ಲರೂ ಅವರಿಗೆ “ದನದ ಡಾಕ್ಟರ್” ಎಂದೇ ಕರೆಯುತ್ತಿದ್ದರು! ಮುಂದೆ ಅವರ ಕೈಲಿ ಔಷಧಿ ತರುತ್ತಿತ್ತು. ಎಮ್ಮೆ ಮಾತ್ರೆ ನೋಡಿದ್ದೀರಾ,? ನಮಗೆ ಜ್ವರ ಬಂದಾಗ ಕೊಡುತ್ತಿದ್ದ ಮಾತ್ರೆ ಒಂದು ಐವತ್ತು ಹಾಕಿದರೆ, ಬಹುಶಃ ಒಂದು ಎಮ್ಮೆ ಮಾತ್ರೆ ಆಗುತ್ತೆ!. ಅಸ್ಟು ದಪ್ಪ! ಎಮ್ಮೆಗೆ ಇಂಜಕ್ಷನ್ ಕೊಡುವುದು ನೋಡಿದ್ದೀರಾ? ಮೂಗುದಾರ ಹಿಡಿದು ಕೊಂಡು ಒಬ್ಬರು ನಿಲ್ಲಬೇಕು. ಆಮೇಲೆ ಬರಿ ಸೂಜಿ ತೆಗೆದುಕೊಂಡು ಪಟ್ಟ್ ಎಂದು ಕುತ್ತಿಗೆ ಹತ್ತಿರ ಹೊಡೆಯುತ್ತಿದ್ದರು. ಒಂದೆರಡು ಸಾರಿ ಹೊಡೆದ ಮೇಲೆ ಆ ಸೂಜಿ ಒಳಗೆ ಹೋಗುತ್ತಿತ್ತು. ನಂತರ ಅದಕ್ಕೆ ಸಿರಿಂಜ್ ಹಾಕಿ ಇಂಜಕ್ಷನ್ ಕೊಡುತ್ತಿದ್ದರು. ನಮಗೆಲ್ಲಾ ಜ್ವರ ಬಂದಾಗ ಕೊಡುತ್ತಿದ್ದ ಪೆನ್ಸಿಲಿನ್ ಇಂಜಕ್ಷನ್ 5ML, ಎಮ್ಮೆಗೆ ಕೊಡುವ ಇಂಜಕ್ಷನ್ ಸುಮಾರು 100MLಆದರೂ ಇರುತ್ತಿತ್ತು! ಒಂದು ಸಾರಿ ಅದೇನೋ ಎಲ್ಲಾ ಜಾನುವಾರುಗಳಿಗೆ ” ಚಪ್ಪಟೆ ” ರೋಗವಂತೆ, ಬಂದಿತ್ತು. ಅದೊಂದು ಸಾಂಕ್ರಮಿಕ ರೋಗ. ಇಡೀ ತಾಲೂಕಿನ ಎಲ್ಲಾ ಸಾವಿರಾರು ಜಾನುವಾರುಗಳಿಗೆ ಈ ಒಬ್ಬರೇ “ದನದ ಡಾಕ್ಟರ್” ಹಳ್ಳಿ ಹಳ್ಳಿಗೆ ಹೋಗಿ ಲಸಿಕೆ ಹಾಕಿ ಎಲ್ಲಾ ಜಾನುವಾರುಗಳನ್ನು ಉಳಿಸಿದ್ದರು.

ಎಮ್ಮೆ ಕಾಯಿಸುವವನು ಬರದೇ ಇದ್ದಾಗ ಅದನ್ನು ಪಕ್ಕದ ಕಾಲಿ ಜಾಗದಲ್ಲಿ ಇದ್ದ ಮರಕ್ಕೆ ಕಟ್ಟು ಹಾಕಿ ಬಿಸಿಲು ಮೈಮೇಲೆ ಬಿಸಿಲು ಬೀಳಿಸುವ ಪ್ರಯತ್ನ ಆಗುತ್ತಿತ್ತು. ಮಲೆನಾಡಿನ ಮಳೆಗಾಲದಲ್ಲಿ ಅವು ಮನೆಗಳಲ್ಲೇ ಬಂದಿ. ಕಪ್ಪು ಬಣ್ಣದ ಎಮ್ಮೆ ಆಷಾಡ ಮಾಸ ಮುಗಿಯುವ ಹೊತ್ತಿಗೆ ಕೆಂಪಗೆ ಆಗಿರುತ್ತಿತ್ತು. ಗಣಪತಿ ಹಬ್ಬದ ಹೊತ್ತಿಗೆ ಮನೆಗೆ ಬರುತ್ತಿದ್ದ “ಎಮ್ಮೆ ಭಟ್ಟರು” ಕೊಟ್ಟಿಗೆಗೆ ಹೋಗಿ ಎಮ್ಮೆ ನೋಡಿಕೊಂಡು ಬಂದು “ಅಮ್ಮ, ನಿಮ್ಮ ಮನೆ ಎಮ್ಮೆ ಅಮೇರಿಕಾ ಎಮ್ಮೆ ಆಗಿದೆ” ಎಂದು ನಮ್ಮಮ್ಮನಿಗೆ ತಮಾಷೆ ಮಾಡುತ್ತಿದ್ದರು!



ಯಾವತ್ತೂ ಕೂಗದ ಎಮ್ಮೆ ದಸರಾನೋ ಅಥವ ದೀಪಾವಳಿಯ ಹೊತ್ತಿಗೆ ಬೆಳ್ಳಿಗ್ಗೆ ಮುಂಚೆ ” ಆsssಯ್” ಎಂದು ಜೋರಾಗಿ ಕೂಗುತ್ತಿತ್ತು. ಎರಡನೇಯ ದಿನವೂ ಹಾಗೆ ಕೂಗಿದರೆ ಆಳು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಅಲ್ಲೊಂದು ಇಂಜಕ್ಷನ್ ಹಾಕಿಸಿಕೊಂಡು ಬಂದರೆ ಅವು ಮತ್ತೆ ಕೂಗುತ್ತಿರಲಿಲ್ಲ! ನಂತರ ಕ್ರಮೇಣ ಹಾಲು ಕಡಿಮೆಯಾಗಿ ನಿಂತು ಹೋಗುತ್ತಿತ್ತು. ಆದರೂ ಅಮ್ಮನ ಉಪಚಾರ ಅದಕ್ಕೆ ಜೋರಾಗಿಯೇ ನಡೆಯುತ್ತಿತ್ತು. ಇನ್ನೆರಡು ತಿಂಗಳಲ್ಲಿ ಕರು ಹಾಕುತ್ತದೆ ಎಂದು ಹೇಳುತ್ತಿದ್ದರು. ಮನೆಗೆ ಹಾಲು ಬೇಕಲ್ಲ! ಆಗ “ಎಮ್ಮೆ ಭಟ್ಟರು” ಹೊಸ ಎಮ್ಮೆ ಮತ್ತು ಕರು ತಂದು ಕಟ್ಟಿ ಹಳೆಯದನ್ನು ಕರೆದುಕೊಂಡು ಹೋಗುತ್ತಿದ್ದರು.

ಎಷ್ಟು ಹಾಲು ಕೊಡಲಿ, ಏನೇ ಮಾಡಲಿ, ಎಮ್ಮೆಗೆ ಮಾತ್ರ ಪೂಜೆಯ ಭಾಗ್ಯವಿಲ್ಲ. ನಮ್ಮಮ್ಮ ಪೂಜೆ ಮಾಡಲು ಒಂದು ಹಸು ಮತ್ತು ಕರು ಕೂಡ ಇಟ್ಟು ಕೊಂಡಿದ್ದರು. ಇದು ಊರಿನ ಗಿಡ್ಡ ಜಾತಿ ಹಸು ಮತ್ತು ಕರು. ಒಂದೆರಡು ಸಣ್ಣ ಲೋಟದಷ್ಟು ಹಾಲು ಕೊಟ್ಟರೆ ಹೆಚ್ಚು. ಆ ಹಾಲು ಪೂಜೆಗೆ ಅಷ್ಟೇ. ಜಾಸ್ತಿ ಹಾಲು ಕೊಡುವ ಎಮ್ಮೆ ಬರೀ ಎಮ್ಮೆ! ಈ ಹಸುಗೆ ಒಬ್ಬೊಬ್ಬರು ಒಂದೊಂದು ಹೆಸರಿಟ್ಟು ಕರೆಯುತ್ತಿದ್ದರು. ಅದರಲ್ಲೂ ಗಂಗಾ, ತುಂಗ, ಭದ್ರ ಎಂದು ಒಳ್ಳೆಯ ನದಿ ಹೆಸರುಗಳೇ. ಹಸುವಿನ ಕರುವಿನ ಹತ್ತಿರ ಹೋಗಿ ಕುತ್ತಿಗೆ ಸವರಿ ಮುದ್ದು ಮಾಡಿ ಬರುವವರು ಪಕ್ಕದಲ್ಲೇ ಇರುತ್ತಿದ್ದ ಎಮ್ಮೆ ಕರುವನ್ನು ಮುದ್ದು ಮಾಡದೇ ತಾರತಮ್ಯ ಮಾಡುತ್ತಿದ್ದರು. ಆದರೆ ಎಮ್ಮೆ ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನ ಪಾಡಿಗೆ ತಾನು ಮಧ್ಯ, ಮಧ್ಯ ಬಾಯಾಡಿಸಿಕೊಂಡು ಮಲಗಿರುತ್ತಿತ್ತು. ನಿಜವಾಗಲೂ ಸ್ಥಿತಪ್ರಜ್ಞ ಎಂದರೆ ಎಮ್ಮೆ! ನಾನು ಪಾಠ ಓದದೇ ಯಾವಾಗಲೂ ಆಟ ಆಡಿಕೊಳ್ಳುತ್ತಾ ಇದ್ದರೆ ” ನಿಂಗೆ ಯಾಕೆ ಸ್ಕೂಲ್, ಹೋಗಿ ದನ ಕಾಯಿ” ಎಂದು ಅಮ್ಮನ ಕೈಯಲ್ಲಿ ಭೈಸಿಕೊಳ್ಳುತ್ತಿದ್ದೆ! ಎಸ್ಟು ಸಾರಿ ಈ ತರಹ ಬೈಸಿಕೊಂಡೆ ಎಂದು ಲೆಕ್ಕವೇ ಇಲ್ಲ ಬಿಡಿ! ಎಷ್ಟು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದಿದ್ದರೆ “ಎಷ್ಟು ಹೇಳಿದರೇನು ಎಮ್ಮೆ ಚರ್ಮದವನು, ಒಂದು ಮಾತು ಕಿವಿ ಮೇಲೆ ಹಾಕಿಕೊಳ್ಳಲ್ಲ” ಎಂದು ಬೈದು ಸಮ್ಮನಾಗುತ್ತಿದ್ದರು. ಹಸು ಮಾತ್ರ ಹಾಲು ಕೊಡದೇ ಇದ್ದರೂ ಮನೆಯಲ್ಲೇ ಇರುತ್ತಿತ್ತು. ನಂತರ ಅದು ಮನೆಯಲ್ಲೇ ಕರು ಹಾಕಿದಾಗ ಸಂಭ್ರಮ ನೋಡಬೇಕು. ಅಮ್ಮ ಅದರ ಪಾದವನ್ನು ಒಳ್ಳೆಯ ಚಾಕುವಿನಿಂದ ಕತ್ತರಿಸಿ ಸರಿ ಪಡಿಸುತ್ತಿದ್ದರು. ನಂತರ ಚಕ್ಕನೆ ಅದು ಎದ್ದು ನಿಲ್ಲುತ್ತಿತ್ತು. ನಂತರ ಒಂದು ದಿನದ ನಂತರ ನಮಗೆಲ್ಲಾ ಅಕ್ಕಿ ರೊಟ್ಟಿಯ ಜೊತೆ ಗಿಣ್ಣದ ಸಮಾರಾಧನೆ…..

ಫೋಟೋ ಕೃಪೆ :hindustan times

ಕೊಟ್ಟಿಗೆ ಇದ್ದ ಮೇಲೆ ಸೆಗಣಿ ತೊಟ್ಟಿ ಕೂಡ ಇರಲೇಬೇಕಲ್ಲ! ಇನ್ನೊಂದು ಮೂಲೆಯಲ್ಲಿ ಸುಮಾರು ಎರಡಾಳು ಉದ್ದ, ಅಗಲದ ಜೊತೆಗೆ ಎರಡಾಳು ಆಳದ ಗುಂಡಿ. ಇನ್ನೇನು ಅಲ್ಲ ಉದ್ದನೇಯ ಚಪ್ಪಡಿ ಕಲ್ಲಿನಿಂದ ಮಾಡಿದ್ದ ಗುಂಡಿ. ಇದರಲ್ಲಿ ಸೆಗಣಿಯ ಜೊತೆಗೆ ಊಟ, ತಿಂಡಿಗೆ ಹಾಕಿಕೊಳ್ಳುತ್ತಿದ್ದ ಬಾಳೆಎಲೆ, ಅಂಗಳದಲ್ಲಿ ಒಟ್ಟು ಮಾಡಿದ ದರಗು (ಒಣಗಿದ ಎಲೆಗಳು) ಎಲ್ಲಾ ಹಾಕುತ್ತಿತ್ತು. ಸೆಗಣಿಯಿದ್ದ ಮೇಲೆ ಬೆರಣಿ ಮಾಡದೇ ಇರಲು ಸಾಧ್ಯವೇ? ಚಪ್ಪಡಿಕಲ್ಲಿನ ಗೋಡೆಗೆ ಉಳಿದವರಲ್ಲಾ ವೃತ್ತಾಕಾರದ ಬೆರಣಿ ತಟ್ಟಿದರೆ, ನಾನು ಚೌಕಾಕಾರದ್ದು ಮಾಡುತ್ತಿದ್ದುದುಂಟು. ಆದರೆ ಅದೆಲ್ಲಾ ಎರಡು ದಿನದ ಆಟ ಅಷ್ಟೇ. ಆಗ ಮಾಡುವ ರಂಪ ತೆಗೆಯುವುದಕ್ಕೆ ಮತ್ತೇ ಕೆಲಸದ ಲಕ್ಷ್ಮೀಯೇ ಬರಬೇಕು. “ಇದೇನ್ ಕೆಲಸ ರಘಯ್ಯ, ಕೆಳಗಡೆ ಸೆಗಣಿ ಗದ್ದೆನೇ ಮಾಡಿದ್ದೀರಿ” ಎನ್ನುತ್ತಿದ್ದಳು. ಅವಳು ಬೆರಣಿ ಮಾಡಲು ಒಂದು ಸಾರಿ ಚಪ್ಪಡಿ ಕಲ್ಲಿನ ಗೋಡೆಗೆ ತಟ್ಟಿದರೆ ನಿಲ್ಲುತ್ತಿದ್ದ ಸೆಗಣಿ, ನಾನು ಒಂದು ಹತ್ತು ಸಲ ತಟ್ಟಿದರೆ ಒಂದು ಸಾರಿ ಮಾತ್ರ ನಿಲ್ಲುತ್ತಿತ್ತು. ಅದು ನನ್ನ ತಪ್ಪೇ? ಆಮೇಲೆ ವರ್ಷಕ್ಕೊಮ್ಮೆ ಹಳ್ಳಿಯಿಂದ ಬಂದ ಎತ್ತಿನಗಾಡಿ ಗೊಬ್ಬರವನ್ನು ತುಂಬಿಸಿಕೊಂಡು ಹೋಗುತ್ತಿತ್ತು. ಆದರೆ ಈ ಗೊಬ್ಬರದ ಗುಂಡಿಯಲ್ಲಿ ನೊಣವಿರಲಿಲ್ಲ. ಅದು ಹೇಗೆ ಸಾಧ್ಯವಾಯಿತು? ನನಗಿನ್ನು ಅರ್ಥವಾಗಿಲ್ಲ.

ಈಗ ಅಮ್ಮನೂ ಇಲ್ಲ, ಕೊಟ್ಟಿಗೆಯೂ ಇಲ್ಲ! ಆಗ ತಾನೇ ಕರೆದುಕೊಂಡು ಬಂದ ಬಿಸಿ ನೊರೆ ಹಾಲಿನಿಂದ ಮಾಡಿದ ಕಾಫೀಯೂ ಇಲ್ಲ! ಈಗ ಊರಲ್ಲೇ ಇಲ್ಲದ ಕೊಟ್ಟಿಗೆ ಬೆಂಗಳೂರಿನ ಆಕಾಶದಲ್ಲಿ (ಎರಡನೇಯ ಮಹಡಿಯಲ್ಲಿ) ಇರುವ ಒಂದು ಗೂಡಿನಲ್ಲಿ (ಫ್ಲಾಟ್ನಲ್ಲಿ) ಎಲ್ಲಿಂದ ಬರಬೇಕು?… ಆದರೂ ಆ ನೊರೆ ಹಾಲಿನ ಕಾಫೀಯ ರುಚಿ ಮನದಲ್ಲಿ ಸ್ಥಿರವಾಗಿ ನಿಂತಿದೆ.


  • ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading