ಈ ಬಿದರಿನ ಜೋಕಾಲಿಯಲ್ಲಿ ಕೂತಾಗ ಪಕ್ಕದಲ್ಲಿ ಸಣ್ಣ ಧ್ವನಿಯ ಇಂಪಾದ ಸಂಗೀತ, ಕೈಯಲ್ಲಿ ಒಂದೊಳ್ಳೆ ಪುಸ್ತಕ ಇದ್ದರೇ ಸ್ವರ್ಗ ಸುಖ ಎನ್ನುತ್ತಾರೆ ಲೇಖಕಿ ಆತ್ಮ ಜಿ ಎಸ್ ಅವರು, ಜೋಕಾಲಿಯೊಂದಿಗಿನ ಬಾಂಧವ್ಯದ ಕುರಿತು ಬರೆದ ಲೇಖನ ತಪ್ಪದೆ ಓದಿ….
ಹೀಗೊಂದು ಭಾವ ಎಲ್ಲದಕ್ಕೂ ಬರುವುದಿಲ್ಲ. ವಸ್ತುಗಳಿಗೆ ಇರಬಹುದು ಅಥವಾ ಎಷ್ಟೋ ವೇಳೆ ವ್ಯಕ್ತಿಗಳಲ್ಲಿಯು. ಇನ್ನೂ ಕೆಲವೊಮ್ಮೆ ನಮ್ಮ ಪ್ರೀತಿ ಪಾತ್ರರು ಬಳಸುವ ವಸ್ತುಗಳಿಂದಲೂ ಆ ವಸ್ತುಗಳಿಗೂ ಅದರ ಪಟ್ಟ ದೊರಕಲು ಬಹುದು. ನನ್ನ ಮನೆಯ ಹಾಲಿನಲ್ಲಿ ಇರುವ ಜೋಕಾಲಿ ನೋಡಿದಾಗೆಲ್ಲ ಇಂಥದ್ದೊಂದು ಆಲೋಚನೆ ಬರುತ್ತೆ. ಜೋಕಾಲಿಗೆ ಹಲವು ಆಯಾಮ..ಮನಸ್ಸು. ಜೀವನ ಎಲ್ಲವೂ ಒಮ್ಮೊಮ್ಮೆ ಜೋಕಾಲಿ ಹಾಗೆಯೇ ಡೋಲಾಯಮಾನ ಅದೇ ರೀತಿ ಎಲ್ಲವೂ ಸುಸ್ಥಿತಿಯಲ್ಲಿ ಇದ್ದರೆ ಜೋಕಾಲಿ ಯಲ್ಲಿ ಜೀಕಿದ ನಂತರ ಉಳಿಯುವ ಸಮಾಧಾನ ಸ್ಥಿತಿ.
ಬೆತ್ತದ ಜೋಕಾಲಿ ರಜೆಯಲ್ಲಿ ಹೋದಾಗ ಅಜ್ಜನ ಮನೆಯಲ್ಲಿ ನನ್ನ ಖಾಯಂ ಸ್ಥಾನ. ಅಜ್ಜ ನಿತ್ಯವೂ ಅದರಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದರೆ .ಕೆಲಸ ಮುಗಿಸಿ ಸಣ್ಣ ವಿಶ್ರಾಂತಿಗೆ ಅದರಲ್ಲಿ ಕಣ್ಣು ಮುಚ್ಚಿ ಕುಳಿತರೆ ಓಡುತ್ತಿದ್ದೆ ನಾನೂ ತೊಡೆಯೇರಲು..ಒಮ್ಮೊಮ್ಮೆ ಕುಳಿತು ಅಜ್ಜ ಹೇಳುವ ಕಥೆ ಕೇಳುವುದು ಇತ್ತು. ಊಟ ತಿಂಡಿ ಆದ ನಂತರ ಮಾತ್ರ ಅಜ್ಜ ಅದರಲ್ಲಿ ಕೂರಲು ಬಿಡುತ್ತಿರಲಿಲ್ಲ..ಹೊಟ್ಟೆ ತೊಳೆಸುತ್ತೆ ತೂಗುವುದು ಬೇಡ ಹೇಳಿ. ಆಗಲೇ ಇದರ ಬಗ್ಗೆ ಇದ್ದ ಪ್ರೀತಿ, ನನಗೂ ಒಂದು ಬೇಕು ಎಂದು ನನ್ನ ಮನದಲ್ಲಿ ದಾಖಲಾಗಿಸಿತ್ತು..ಅಜ್ಜನ ಪ್ರೀತಿಗೂ ಇರಬಹುದು ಅಥವಾ ಅದರಲ್ಲಿ ಕುಳಿತು ನಿರಾತಂಕವಾಗಿ ಇರುತ್ತಿದ್ದ ಅಜ್ಜನ ನೋಡಿ ಇಲ್ಲಿ ಕುಳಿತರೆ ಆರಾಮ್ ಎಂಬ ಭಾವಕ್ಕೂ..!?
ಫೋಟೋ ಕೃಪೆ : google
ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡುವ ಆಲೋಚನೆ ಬಂದಿದ್ದೆ ,ಯಜಮಾನರಿಗೆ ಇಟ್ಟ ಮೊದಲ ಬೇಡಿಕೆ ಈ ಬೆತ್ತದ ಜೋಕಾಲಿ .ಒಂಥರಾ ಅಚ್ಚರಿ ಭರಿತ ಭಾವದಲ್ಲಿ ನೋಡಿ,ತೀರಾ ಮಕ್ಕಳ ಹಾಗೆ ಬೇಡಿಕೆ ಅನ್ನಿಸಿತ್ತಾ ಏನೋ ಜೋರಾಗಿ ನಕ್ಕಿದ್ದರು. ಇಷ್ಟು ವರ್ಷಕ್ಕೆ ಯಾವುದನ್ನೂ ಕೇಳದವಳಿಗೆ ಇದೂ ಒಂದು ವಸ್ತು ? ಕಂಡಿರಬೇಕು.ಮನೆ ಮಾಡಿದ್ದೆ ಕೊಳ್ಳಲು ಸಮಯ ಬಂದಿರದೆ ಒಮ್ಮೆ ಮಲ್ಲೇಶ್ವರಂ ಹೋದಾಗ ರಸ್ತೆ ಬದಿಯಲ್ಲಿ ತರಾವರಿ ಜೋಕಾಲಿ ನೋಡಿ ಮನಸ್ಸು ಜೀಕಿತ್ತು..ಮಕ್ಕಳು ಎಲ್ಲಾ ತರದ ಜೋಕಾಲಿಯಲ್ಲಿ ಕುಳಿತು ಎದ್ದರೆ ಗಂಡ ಮೈದುನನ ಲೆಕ್ಕಾಚಾರವೇ ಬೇರೆ..ಅತ್ತಿಗೆ ಈಗಾಗಲೇ ಅದಕ್ಕೆಂದೇ ಹಾಕಿದ ಹುಕ್ ಇರುವುದೇ ಹಾಲಿನಲ್ಲಿ .ತೀರಾ ಬುಟ್ಟಿಯ ಹಾಗೆ Big boss ನಲ್ಲಿ ಬರುವ ಜೋಕಾಲಿಗೆ ಸ್ಥಳ ಹೊಂದಿಕೆಯಾಗದು. ಇದೇ ಬೆಸ್ಟ್ ಹೇಳಿ ನಾ ಚಿಕ್ಕಂದಿನಲ್ಲಿ ಕುಳಿತು ಜೀಕಿದ್ದ ಜೋಕಾಲಿ ಮನೆ ಪ್ರವೇಶಿಸಿತ್ತು..
ಅಜ್ಜ ,ಮೊಮ್ಮಗಳು ಹೇಳಿ ನನಗೆ ಜಾಗ ಕೊಟ್ಟ ಹಾಗೆ ನನ್ನ ಮಕ್ಕಳು ಜಾಗ ಕೊಟ್ಟಾರ? ಮನೆಗೆ ತಂದ ಮೇಲೆ ಅದರ ಉಸ್ತುವಾರಿ ಏನಿದ್ದರೂ ಮಕ್ಕಳದ್ದು.ನಮ್ಮದೇನಿದ್ದರೂ ಅವರು ಶಾಲೆಗೆ ಹೋದ ನಂತರವೇ ಅದರ ಮೇಲೆ ಅಲಂಕರಿಸುವ ಸ್ಥಿತಿ..ಯಜಮಾನರು ಕುಳಿತು ಟಿವಿ ನೋಡಿದರೆ ನನ್ನದೇನಿದ್ದರೂ ಪುಸ್ತಕ ಓದಲು.ಮಕ್ಕಳ ಸ್ನೇಹಿತರು ಬಂದರೆ ಆಂಟಿ ನಾನೂ ಒಮ್ಮೆ ಕುಳಿತು ನೋಡಲಾ…? ಮೊದ ಮೊದಲು ಆಸೆ ಕಣ್ಣಿನಿಂದ ಕೇಳುವುದು ನೋಡಿದರೆ ನಾನೂ ಹೀಗೆಯೇ ಮಾಡುತ್ತಿದ್ದೆ ಎಂದು ನೆನಪಾಗುತ್ತಿತ್ತು..ಕೇಳುವುದು ಬೇಡ ಕುಳಿತುಕೊಳ್ಳಿ ಹೇಳಿದ್ದೆ ಅಂದಿನಿಂದ ಈವರೆಗೂ ಮಕ್ಕಳು ಬಂದರೆ ಸೀದಾ ಹೋಗುವುದೇ ಜೋಕಾಲಿ ಬಳಿ..ಕೆಲವೊಮ್ಮೆ ಅದಕ್ಕೂ ಜಗಳ ಮಾಡುವ ಮಕ್ಕಳ ಗೌಜಿ ನೋಡಿದರೆ ನಗು ಬರುತ್ತೆ.
ಫೋಟೋ ಕೃಪೆ : google
ನೀನು ಇಲ್ಲಿ ಕೂತರೆ ಏಳುವುದೆ ಇಲ್ಲ,ಒಬ್ಬಳು ಹೇಳಿದರೆ ಮತ್ತೊಬ್ಬಳು ಆಂಟಿ ಏನು ಹೇಳಲ್ಲ ನಿನ್ನದೇನು ಎಂಬಂತೆ ಗುರಾಯಿಸುವುದು ಇದೆ.ಅಂತೂ ಇಲ್ಲಿ ಇದ್ದಷ್ಟೂ ಹೊತ್ತು musical chair ರೀತಿಯಲ್ಲಿ ಮಕ್ಕಳೇ ಹೊಂದಾಣಿಕೆ ಮಾಡಿಕೊಂಡು ಕುಳಿತು ಹೋಗುತ್ತಾರೆ..
ಮೊನ್ನೆಯಿಂದ ಕೇಳುವುದೇ ಬೇಡ ಮನೆಯ ಕೆಲಸ ಮುಗಿಸಿ ಪುಸ್ತಕ ಹಿಡಿದು ಜೋಕಾಲಿ ಮೇಲೆ ಕೂತರೆ ಏಳುವುದೆ ಬೇಡ ಅನ್ನಿಸುತ್ತೆ..ಸಣ್ಣ ಧ್ವನಿಯ ಇಂಪಾದ ಸಂಗೀತ.ಒಂದೊಳ್ಳೆ ಪುಸ್ತಕ , ಕುಳಿತು ಓದುವ ಮನಸ್ಥಿತಿ ಇದ್ದರೆ ಸಮಯವೇ ತಿಳಿಯದು. ಒಮ್ಮೊಮ್ಮೆ ಡೋಲಾಯಮಾನದಿ ಓಡಾಡುವ ಮನಸ್ಸಿಗೆ ಸಾಂತ್ವನ ಹೇಳಿದ್ದು, ಅಜ್ಜ, ಗಂಡನ ನೆನಪು ಕೊಡುವ.,ಬೆಚ್ಚಗಿನ ಭಾವ ಕೊಡುವ ,ಮನಸ್ಸು ಎಲ್ಲಿಯೋ ಓಡಿದರೂ ಜೀಕುವ ಮನ ಸದಾ ಡೋಲಾಯಮಾನ ಎಂದೇ ಭಾವಿಸಿ ಭಾವನೆಗಳಿಗೆ ತಡೆ ಒಡ್ಡುವ,ತೂಗಿದ ಅಷ್ಟೂ ಹೊತ್ತು ಆಲೋಚಿಸಿ…ನಿಂತಾಗ ಸಮಸ್ಥಿತಿಗೆ ಮನಸ್ಸನ್ನು ತರುವ ಜೋಕಾಲಿ ಎಂದರೆ ಹಾಗಾಗಿಯೇ ಸದಾ “ಆಪ್ಯಾಯ”
- ಆತ್ಮ ಜಿ ಎಸ್