ಡೈವೋರ್ಸ್ ಕೊಡೋಕೆ ಕಾರಣಗಳೇ‌ ಬೇಕಿಲ್ಲ…

ಡೈವೋರ್ಸ್ ಗೆ ಬಹುತೇಕ ಕಾರಣಗಳು ಜಾಲತಾಣಗಳ ಇನ್ ಫ಼್ಲೂಯೆನ್ಸೂರಗಳು ಇರಬಹುದು, ಭ್ರಮೆಯಲ್ಲಿ ಬದುಕುವ ಬಹುತೇಕ ಹೆಣ್ಣು – ಗಂಡು ಯಾರದೋ ಮಾತಿಗೂ ಆಕರ್ಷಿತರಾಗಿ ಡೈವೋರ್ಸ್ ಗಳತ್ತ ಮುಖ ಮಾಡುತ್ತಿದ್ದಾರೆ. ಇವುಗಳಿಗೆ ಡೈವೋರ್ಸ್ ಅಂತ್ಯವೇ ಅಥವಾ ಕೌನ್ಸೆಲ್ಲಿಂಗ್ ಗಳು ಬೇಕೇ ?… ಹಿರಿಯೂರು ಪ್ರಕಾಶ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಮೊನ್ನೆ ಭಾನುವಾರ ಬಹಳ ದಿನಗಳ ನಂತರ ಗೆಳೆಯನೊಬ್ಬನನ್ನು ಭೇಟಿಯಾಗಲು ಅವನ‌ ಮನೆಗೇ ಹೋಗಿದ್ದೆ. ಅವನೊಬ್ಬ ಅಡ್ವೋಕೇಟು‌. ಸಿಕ್ಕಾಪಟ್ಟೆ ಬಿಜ಼ಿ, ಭಾರೀ ಫ಼ೇಮಸ್ಸು ಅಂತೇನೂ ಅಲ್ಲದಿದ್ದರೂ ನಗರದಲ್ಲಿ‌ ಒಂದು ರೇಂಜಿಗೆ ತನ್ನದೇ ಹವಾ ಕ್ರಿಯೇಟು ಮಾಡಿಕೊಂಡು ವೃತ್ತಿಯಲ್ಲಿ‌ ಚೆನ್ನಾಗಿಯೇ ಹೆಸರು ಹಣ ಸಂಪಾದನೆ ಮಾಡಿದ್ದವ. ನಾನು ಅವನ‌ ಮನೆಯೊಳಗಿನ ಆಫ಼ೀಸಿನಂತಹ ಕೋಣೆಗೆ ಎಂಟ್ರಿ ಕೊಟ್ಟಾಗ ಅದಾಗಲೇ ಇಬ್ಬರು ಅವನ‌ ಟೇಬಲ್ಲಿನ‌ ಮುಂದೆ ಮುಂದೆ‌ ತುಂಬಾ ಬೇಸರದ ಛಾಯೆಯಲ್ಲಿ ಕೂತು ಮಾತನಾಡುತ್ತಿದ್ದರು. ನನ್ನನ್ನು‌ ಕಂಡೊಡನೇ “ಬಾರಯ್ಯಾ…. ಏನೂ ಅರ್ಜೆಂಟಿಲ್ಲವಾದರೆ ಒಂದು ಹತ್ತು ನಿಮಿಷ ಇಲ್ಲೇ ಕೂತ್ಕೋ. ಇವರನ್ನು ಅಟೆಂಡ್ ಮಾಡಿ ಆಮೇಲೆ‌ ಫ಼್ರೀಯಾಗಿ ಮಾತಾಡೋಣ.” ಎಂದವನೇ ನನ್ನ ರೆಸ್ಪಾನ್ಸಿಗೂ ಕಾಯದೇ ಅಲ್ಲೇ ಇದ್ದ ಒಬ್ಬ ಹುಡುಗನಿಗೆ ನಮಗೆಲ್ಲಾ ಕಾಫ಼ೀ ತರಲು ಹೇಳಿ ತನ್ನೆದುರಿಗೆ ಕೂತಿದ್ದ ಕ್ಲೈಂಟ್ಸ್ ಗಳನ್ನು‌ ಮಾತನಾಡಿಸತೊಡಗಿದ.

ಎದುರಿಗೆ ಕುಳಿತಿದ್ದ ಯುವಕನೊಬ್ಬ‌ ” ಸಾರ್, ನಾನು ಎಷ್ಟೇ ತಿಳಿ ಹೇಳಿದರೂ ಅವಳು ಕೇಳ್ತಾ ಇಲ್ಲ.‌ ಎರಡು ತಿಂಗಳಿಂದಲೂ ಹಠ ಮಾಡ್ತಾನೇ ಇದಾಳೆ. ಅವಳಿಗೆ ಅವರಮ್ಮನೂ ಸಪೋರ್ಟ್ ಕೊಡ್ತಾರೆ. ನನಗೂ ಸಹಿಸಿ ಸಹಿಸಿ ಸಾಕಾಗಿ ಹೋಗಿದೆ. ಇನ್ನು ಅವಳೊಂದಿಗೆ ಇರಲು ಆಗೋಲ್ಲ, ಈಗ ಏನು‌ ಮಾಡೋದೋ ಗೊತ್ತಾಗುತ್ತಿಲ್ಲ. ನೀವೇ ದಾರಿ ತೋರಿಸಬೇಕು‌”…ಎಂದು ನೋಡಲು ಸ್ವಲ್ಪ‌ ಪೀಚಾಗಿದ್ದರೂ ಗಡಸು ದನಿಯಲ್ಲೇ ಆ‌ ಯುವಕ‌ ಹೇಳುತ್ತಿದ್ದ .

ಅವನು ಎಂಥಾ ಆವೇಗದಲ್ಲಿ ಹೇಳುತ್ತಿದ್ದನೆಂದರೆ ಅದು ಬೇಡವೆಂದರೂ ನನ್ನ‌ ಕಿವಿಗೂ ಬೀಳುತ್ತಿತ್ತು. ಅವನ ಕತೆ ಎಲ್ಲಾ ಕೇಳಿದ ನಂತರ ನಿಟ್ಟುಸಿರು ಬಿಡುವುದರೊಳಗೇ ಕಾಫ಼ೀ ಬಂತು. ಆನಂತರ ಅವರಿಗೆ ಅದೇನೋ ಡಾಕ್ಯುಮೆಂಟ್ಸ್ ರೆಡಿ ಮಾಡಿಕೊಂಡು ತರಲು ಸೂಚಿಸಿ ಇಂಥಾ ದಿನ ಮತ್ತೆ ಬರುವಂತೆ ಹೇಳಿ ಕಳಿಸಿದ.

ಏನಂತೆ ಪ್ರಾಬ್ಲಮ್ಮು…? ಇನ್ನೂ‌ ಚಿಕ್ಕ‌ವಯಸ್ಸು. ಈಗಲೇ ಸಂಸಾರ ಸಾಕಾಗಿ ಹೋಗಿದೆಯಾ ? ಎಂಥಾ ಹುಡುಗರಪ್ಪಾ ಈ ಜನರೇಷನ್ನು! ತಾಳ್ಮೆ ಅನ್ನೋದನ್ನೆಲ್ಲಾ ಎಲ್ಲೋ ಕಟ್ಟಿಟ್ಟು ಬಿಸಾಡಿರುತ್ತಾರೆ ! ಎಂದೆ.

ಅದಕ್ಕೆ ಅಡ್ವೋಕೇಟ್ ಫ಼್ರೆಂಡು, ” ಪರವಾಗಿಲ್ಲಪ್ಪ , ಅಲ್ಪ ಸ್ವಲ್ಪ ಕೇಳಿಸಿಕೊಂಡೇ ಎಲ್ಲಾ ಅರ್ಥ ಮಾಡಿಕೊಂಡಿದ್ದೀಯಾ‌” ! ಎಂದು ನನಗೆ ಸರ್ಟಿಫ಼ಿಕೇಟ್ ಕೊಟ್ಟ‌.ಅದಿರಲಪ್ಪಾ, ಯಾಕಂತೆ ಇಷ್ಟು ಬೇಗ ಈ ಡಿಶಿಷನ್ನು ? ಹೊಂದಾಣಿಕೆಯ ಸಮಸ್ಯೆನಾ…? ಎಂದೆ.

ಅಲ್ಲಾ….‌ ಮೊದಲೆಲ್ಲಾ ಡೈವೋರ್ಸ್ ಗೆ ಅಂತ ಕೆಲವು‌ ನಿರ್ದಿಷ್ಟ ಕಾರಣಗಳಿರುತ್ತಿದ್ವು. ಅವು ಅಪರೂಪದ ಕೇಸುಗಳಾಗಿದ್ದವು. ಆದರೆ ಡೈವೋರ್ಸ್ ಗೆ ಈಗಿನ‌ವರ ಕಾರಣಗಳನ್ನು‌ ಕೇಳಿದರೇನೇ ನಗು ಬರುತ್ತೆ ಪ್ರಕಾಶ್.

ಹೌದೌದು…ನಗೂ ನೂ ಬರುತ್ತೆ , ಜೊತೆಗೆ ನಿಮಗೆ ಲಾಯರ್ ಗಳಿಗೆ “ನಗದು‌” ನೂ ಸಿಗುತ್ತೆ ಬಿಡಿ ‘ ಎಂದು‌ ನಗಾಡಿದೆ.

ಮೊಬೈಲ್‌‌‌ ಬಂದಮೇಲೆ ಕುತ್ತಿಗೆ ನರಗಳ ತಜ್ಞರಿಗೆ ಕಣ್ಣಿನ‌ ಡಾಕ್ಟರ್ ಗಳಿಗೆ ಹೇಗೆ ಡಿಮ್ಯಾಂಡು‌ ಜಾಸ್ತೀ ಆಯ್ತೋ ಹಾಗೆಯೇ ಈ ಇಂಟರ್‌ನೆಟ್ಟು, ಸೋಷಿಯಲ್‌ಮೀಡಿಯಾ ರೀಲ್ಸು ಇವೆಲ್ಲಾ ಬಂದ ಮೇಲೆ‌ ಈ‌ಥರಾ ಡೈವೋರ್ಸ್ ಕೇಸುಗಳೂ‌ ಜಾಸ್ತಿಯಾಗಿ ನಿಮ್ಮಂಥ ಲಾಯರ್ ಗಳಿಗೂ‌ ಕೆಲಸ ಜಾಸ್ತಿ ಆಯ್ತಲ್ಲವೇ ? ಹೀಗಾಗಿಯೇ ಮೊದಲೆಲ್ಲಾ ಖಾಲಿ‌ ಹೊಡೆಯುತ್ತಿದ್ದ ಫ಼್ಯಾಮಿಲಿ ಕೋರ್ಟುಗಳು ಈಗ ಸದಾ‌ ಗಿಜಿ‌ಗಿಜಿ ಅಂತ ಲವಲವಿಕೆಯಿಂದ‌ ಇವೆ ” ಎಂದೆ.

“ನೀನು ಹೇಳೋದು ಒಂದು‌ ಲೆವೆಲ್ಲಿಗೆ ಸರಿ ಪ್ರಕಾಶ್. ಈ‌ ಹುಡುಗನ‌ ಕೇಸೂ ಸಹಾ ಹೆಚ್ಚುಕಡಿಮೆ‌ ಅದೇ ಟ್ರ್ಯಾಕಲ್ಲೇ ಇದ್ದಂತಿದೆ ” ಎಂದ.

ನಾನು ಅವನಲ್ಲಿಗೆ ಹೋದ ಉದ್ದೇಶದ ಬಗ್ಗೆ ಬಿಟ್ಟು ಇದಾವುದೋ ಕುತೂಹಲಕಾರಿಯಾಗಿದೆ ಎಂದು ಆಸಕ್ತಿಯಿಂದ ಕೇಳುತ್ತಾ ಕೂತೆ, ಅವ ಹೇಳುತ್ತಾ ಹೋದ. ಈ‌ ಹುಡುಗ ತನ್ನ ಸಂಬಂಧದಲ್ಲೇ ಮದುವೆಯಾಗಿ ಹತ್ತಿರ‌ಹತ್ತಿರ ಮೂರು‌ ವರ್ಷವಾಯ್ತು. ಆರಂಭದಲ್ಲಿ ಎಲ್ಲವೂ‌ ಚೆನ್ನಾಗಿತ್ತು. ಈತ ನೋಡಲು ಅಂತಹಾ ಸ್ಫುರದ್ರೂಪಿಯಲ್ಲ, ಜೊತೆಗೆ ಸಣ್ಣ‌ಇದ್ದಾನೆ. ಯಾವುದೋ ಒಂದು‌ ಬಿಸಿನೆಸ್ ಮಾಡುತ್ತಿದ್ದಾನೆ.‌ ಸಂಸಾರ‌ ನಿರ್ವಹಣೆಗೆ ಸಾಕಾಗುವಷ್ಟು ಆದಾಯವೇನೋ ಬರುತ್ತೆ. ‌ಅದ್ದೂರಿಯಾಗಿ‌ ಮದುವೆ ಆಗಬೇಕೆಂಬ ಆಸೆಯಿಂದ ಮದುವೆಗೆ‌ ಮುನ್ನ ತಾನು‌ ಉಳಿಸಿದ್ದ ಹಣವನ್ನೆಲ್ಲಾ ಮದುವೆ‌ ಖರ್ಚಿಗೆ ಹಾಕಿದ . ಅದು ಸಾಕಾಗಲಿಲ್ಲವೆಂದು ಜೊತೆಗೆ ಒಂದಷ್ಟು ಸಾಲವನ್ನೂ ಮಾಡಿಕೊಂಡ . ಹೇಗೋ ಹೊಸದರಲ್ಲಿ ಖುಷಿ‌ಖುಷಿಯಾಗಿದ್ದ.

ಬರುಬರುತ್ತ ಅವನ‌ ಹೆಂಡತಿ ಸಣ್ಣ‌ಪುಟ್ಟ‌ ವಿಷಯಕ್ಕೂ‌ ಕಿರಿಕ್ ಶುರು ಮಾಡುತ್ತಿದ್ದಳಂತೆ ! ಇಡೀ ದಿನ ಮನೆಯಲ್ಲಿನ ಕೆಲಸ ನೆಟ್ಟಗೆ ಮಾಡದೇ‌ ಮೊಬೈಲ್‌ ನೋಡಿಕೊಂಡೇ ಕಾಲ‌ಕಳೆಯುತ್ತಲೇ ಒಂಥರಾ‌ ಭ್ರಮಾಲೋಕದಲ್ಲೇ ಇರುತ್ತಿದ್ದಳಂತೆ. ಹೀಗೆ ದಿನನಿತ್ಯ‌ ಒಂದಲ್ಲಾ ಒಂದು ವಿಷಯಕ್ಕೆ‌ ಶುರುವಾಗುತ್ತಿದ್ದ ಕಿರಿಕ್ಕು ಕೊನೆಗೆ‌ ವೈಯಕ್ತಿಕ ಅವಹೇಳನಕ್ಕೂ ತಿರುಗಿಕೊಂಡು ಅಸಲಿ ಪ್ರಾಬ್ಲಮ್ಮು ಅಲ್ಲಿಂದ ಶುರುವಾಯ್ತು . ಎಂದ !

ಅದಕ್ಕೆ ನಾನು ” ಅರ್ಥವಾಯ್ತು, ಈಗ ಡೈವೋರ್ಸ್ ಹಂತಕ್ಕೆ ತಲುಪಿದ್ದಕ್ಕೆ ಏನು ಮಹಾ ರಾಜಕಾರಣ…ಎಂದು‌ ಕೇಳಿದೆ.

ಅದಕ್ಕೆ ಅವನು‌ ಕೊಟ್ಟ ಉತ್ತರ ಕೇಳಿ ಶಾಕ್ ಅಷ್ಟೇ ಅಲ್ಲ, ಹೀಗೂ ಉಂಟಾ ಎಂದುಕೊಳ್ಳುವಂತಾಯ್ತು. ಈ ಹುಡುಗನ ‌ಹೆಂಡತಿ ಇವನು‌ ಸಣ್ಣ‌ ಇರುವುದನ್ನೇ‌ ಹಿಯ್ಯಾಳಿಸಿ ” ನೀನು‌‌ ನಿತ್ಯವೂ‌ ಜಿಮ್‌ ಗೆ ಹೋಗಿ ದಪ್ಪ ಆಗಲೇ‌ಬೇಕು. ಒಂದು‌ ಹೊಸ‌ ಮೋಟಾರ್‌ ಬೈಕು ಖರೀದಿಸಿ ಅದನ್ನು‌ ಕಲಿಯಬೇಕು.‌ ಇಂಗ್ಲಿಷ್ ಮಾತನಾಡಲಿಕ್ಕೆ‌ ಬರಲೇ ಬೇಕು. ಇಂತಿಷ್ಟು‌ ದಿನದೊಳಗೆ ಇದಾವುದೂ ಆಗದಿದ್ದರೆ ನಾನು‌ ಬಿಟ್ಟು ಹೋಗುತ್ತೇನೆ. ವಿಚ್ಛೇಧನ‌ ಕೊಡುತ್ತೇನೆ ಎಂದು‌ ಸೀರಿಯಸ್ಸಾಗಿಯೇ ಹೇಳಿದ್ದಳಂತೆ. ಶುರುವಿನಲ್ಲಿ ಅವಳ ಮಾತನ್ನು‌ ಪೂರಾ ನೆಗ್ಲೆಕ್ಟ್‌ ಮಾಡಿಕೊಂಡೇ ಬಂದಿದ್ದ ಈತನಿಗೆ ಈಗ ಅವಳು ಡೈವೋರ್ಸ್‌‌ಗೆ ಮುಂದಾಗಿ ಲಾಯರ್‌ ನೋಟೀಸು‌ ಕಳಿಸಿದ್ದಾಳಂತೆ.ಅದಕ್ಕೆ ನನ್ನ‌ ಬಳಿ‌ ಬಂದಿದ್ದಾನೆ. ಇದು ಸಂಕ್ಷಿಪ್ತ ಕಾರಣ.

ನೋಡಲು ಸಣ್ಣ ಇರುವುದಕ್ಕೆ , ಇಂಗ್ಲಿಷ್ ಬರದಿರುವುದಕ್ಕೆ ಮತ್ತು ಬೈಕ್ ಓಡಿಸಲು‌‌ ಬಾರದಿರುವುದಕ್ಕೆ ಗಂಡನ ಸಹವಾಸವೇ ಬೇಡ ಎಂದ ನೆಟ್ ‍ಜ಼ಮಾನಾದ ನಾರಿಯೊಬ್ಬಳ ಕತೆ ಕೇಳಿ ತಲೆ‌ ಗಿರ್ರ್ ಎಂದು ತಿರುಗಿತ್ತು.

ಅದಕ್ಕೆ ನನ್ನ ಅಡ್ವೋಕೇಟ್ ಗೆಳೆಯನಿಗೆ ಕೇಳಿದೆ. ಈಗ‌ ನೀನೇನು‌ ಮಾಡುತ್ತೀಯಾ..?

ಮಾಡೋಕೆ ಏನಿದೆಯಪ್ಪಾ….? ಇವನು ಸಹಾ ಮದುವೆಗೆ , ಅದಕ್ಕೆ‌ ಇದಕ್ಕೆ ಅಂತೆಲ್ಲಾ ಸಾಕಷ್ಟು ಸಾಲವನ್ನೂ‌ ಮಾಡಿಕೊಂಡು ಅವಳ‌ ವರ್ತನೆಯಿಂದ ಬೇಸರದಲ್ಲಿ ಕೋಪದಲ್ಲಿ ಅಪಮಾನಿತನಾಗಿದ್ದಾನೆ.‌ ಅವಳು ತಿದ್ದಿಕೊಳ್ಳೋಲ್ಲ ಎಂಬ ತೀರ್ಮಾನಕ್ಕೆ‌ ಬಂದಿದ್ದಾನೆ. ಸೋ…ಕೆಲ ಪೇಪರ್ಸ್ ತರೋಕೆ ಹೇಳಿದ್ದೇನೆ. ಎಲ್ಲವನ್ನೂ‌ ‌ ಪರಿಶೀಲಿಸಿ ಡೈವೋರ್ಸ್ ಕೊಡಿಸೋಕೆ‌‌ ಮೂವ್ ಮಾಡ್ತೀನಿ. ಆವಳೇ ಇದಕ್ಕೆ‌ ಮೊದಲು ಪ್ರಪೋಸ್ ಮಾಡಿರೋದ್ರಿಂದ ಕೋಡಬೇಕಾಗಿರೋ ಕಾಂಪೆನ್ಸೇಷನ್‌ ಕ್ಯಾನ್ಸಲ್ಲೋ ಅಥವಾ ಕಡಿಮೇನೋ‌ ಮಾಡಿಸೋಕೆ‌ ಟ್ತೈ‌ ಮಾಡ್ತೀನಿ…ಎಂದು ತನ್ನ.ಲಾಯರ್‌ ಪರಿಭಾಷೆಯಲ್ಲಿ‌ ಹೇಳಿದ.

ಸಾಕಷ್ಟು ಯೋಚಿಸಿ,” ನೀನೇನೂ‌ ತಪ್ಪು ತಿಳಿಯಲ್ಲ ಅಂದರೆ ಒಂದು‌ಮಾತು ಹೇಳಲಾ‌‌” ಎಂದು ನನಗೆ ತೋಚಿದ್ದು ಹೇಳಿದೆ.

ಇಡೀ ಸ್ಟೋರಿ ಕೇಳಿದ ಮೇಲೆ ಮತ್ತು ಆಕೆ ಬೇರೆಯಾಗಲು ಕೊಟ್ಟಿರೋ ಕ್ಷುಲ್ಲಕ ಕಾರಣ ಕೇಳಿದ ಮೇಲೆ ಇದು ಟೋಟಲೀ ಅಪಕ್ವ, ಅಪ್ರಬುದ್ಧ ಮನಸ್ಸಿನ‌ ಅವಿವೇಕದ ಮತ್ತು ಆತುರದ ನಿರ್ಧಾರ ಅನಿಸಿದೆ.‌ ಈತನಿಗೇ‌‍‌‌ ಚಿಕ್ಕ‌ವಯಸ್ಸು ಅಂದಮೇಲೆ ಅವಳಿಗೆ ಅಂದಾಜು ಇಪ್ಪತ್ತೈದರ ಒಳಗಿರಬಹುದು. ಜೊತೆಗೆ ಇಂದಿನ ರೀಲ್ಸು ಇನ್ಸ್ಟಾ ಗ್ರ್ಯಾಮ್‌ ಮುಂತಾದ ಜಾಲತಾಣಗಳ ಇನ್ ಫ಼್ಲೂಯೆನ್ಸೂ ಆಕೆಯ ನಿರ್ಧಾರದ ಹಿಂದೆ ಸಾಕಷ್ಟು ಪ್ರಭಾವಿಸಿವೆ ಎಂದು‌ ನನ್ನ‌‌ ಸೆನ್ಸ್ ಹೇಳುತ್ತಿದೆ. ಯಾವ್ಯಾವುದೋ ಸಲ್ಲದ ಕನಸುಗಳಿಂದ, ಸುಂದರ ಲೋಕದ ಭ್ರಮೆಗಳಿಂದ ಹೀಗೆ ಡೈವೋರ್ಸ್ ನಿರ್ಧಾರಕ್ಕೆ‌ ಬಂದಿದ್ದಿರಬಹುದು. ಅವರಿಗೆ ಒಂದೆರಡು‌ ಬಾರಿ‌ ಕೂರಿಸಿಕೊಂಡು‌ ಕೌನ್ಸೆಲ್ಲಿಂಗ್ ಮಾಡಲು ಪ್ರಯತ್ನಿಸು.‌ ಬೇಕಾದರೆ ಆಕೆ ಪರವಾಗಿ ನೋಟೀಸು‌ ಕೊಟ್ಟಿರುವ ಲಾಯರ್ ನನ್ನೂ ಇವರಿಬ್ಬರ ಎದುರಿಗೆ‌ ಕೂರಿಸಿ ಮನೆಯ ‌ಹಿರಿಯರ ರೀತಿ‌ ಬುದ್ದಿ‌ಹೇಳಿ‌ ಮುಂದಾಗಬಹುದಾದ ಅನಾಹುತಗಳ ಬಗೆಗೂ‌ ಮನವರಿಕೆ‌‌ ಮಾಡಿಕೊಡಿ.

ಇವರಿಬ್ಬರದ್ದೂ ಇನ್ನೂ ಜೀವನಾನುಭವದಲ್ಲಿ ಮಾಗಿರದ
ವಯಸ್ಸಾಗಿರುವುದರಿಂದ ನಾನಾ ದೃಷ್ಟಿಕೋನಗಳಿಂದ ಇವರಿಬ್ಬರಿಗೂ ತಿಳಿ ಹೇಳಿದರೆ‌ ಹಾಗೂ ಕಾನೂನಾತ್ಮಕ ವಾಗಿ ಕೋರ್ಟು ಕಚೇರಿ ಅಂತ ಅಲೆದು‌ ಮುಂದೆ ಸಂಬಂಧಗಳು ಮತ್ತಷ್ಟು‌ ಬಿಗಡಾಯಿಸುತ್ತೆ ಎಂದು ಹೇಳಿ ನಿಮ್ಮಲ್ಲೆ ಇತ್ಯರ್ಥ ಪಡಿಸು. ಪಾಪ.. ಅವರ ದುಡ್ಡು, ನೆಮ್ಮದಿ‌ ಹಾಗೂ‌ ಕುಟುಂಬದೊಳಗೆ ಮರ್ಯಾದೆ ಈ ಮೂರೂ‌ ಉಳಿಯುತ್ತೆ”. ಯೋಚಿಸಿ ನೋಡು ಎಂದೆ.

ಅದಕ್ಕೆ ಅವನು ” ಅಂತೂ‌ ನಮ್ಮ‌ಹೊಟ್ಟೆ ಮೇಲೆ ಹೊಡೆಯೋಕೆ ಪ್ಲಾನ್‌ ಮಾಡಿದ್ದೀಯಾ ! ನಾನು ನಮ್ಮ‌ ಕಕ್ಷಿದಾರರಿಗೆಲ್ಲಾ ಹೀಗೆ ಬುದ್ದಿ ಹೇಳಿ ಕಳಿಸಿದರೆ ನಮ್‌ ಪಾಡೇನಯ್ಯಾ.? ಎಂದು‌ ತಮಾಷೆ‌ ಮಾಡಿದ. ಅದಕ್ಕೆ ನಾನು ” ಜೋಕ್ಸ್ ಅಪಾರ್ಟ್, ಇದು ಅವರಿಬ್ಬರ ಸುಧೀರ್ಘ ಬಾಳಿನ‌ ಪ್ರಶ್ನೆ. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಅದು ಆವೇಶದಿಂದ ಕಿತ್ತುಹೋಗಬಾರದು. ನೀನೇನೂ‌‌‌ ಫ಼್ರೀಯಾಗಿ‌ ಕೌನ್ಸೆಲ್ಲಿಂಗ್ ಮಾಡಬೇಡ. ಫ಼ೀ ಪಡೆದೇ ಮಾಡಪ್ಪಾ. ಒಟ್ಟಾರೆ ತಲೆ ಸರಿ‌ಇಲ್ಲದೇ ಇಂಥ ನಿರ್ಧಾರಕ್ಕೆ‌ಬಂದಿರುವ ಆ‌ ಜೋಡಿಗೆ‌ ಬುದ್ದಿ‌ಹೇಳು. ಆರು‌ ತಿಂಗಳು‌ ಜಿಮ್‌ಗೆ ಹೋದರೆ ಎಂಥಾ ಕಾಶೀನಾಥ್ ಥರಾ ಇದ್ದ ಸಣಕಲು‌ ಮೈಯವನೂ ಸಹಾ ಯಶ್‌ ಥರಾ ಫಿಸಿಕಲೀ ಸ್ಟ್ರಾಂಗ್ ಆಗ್ತಾನೆ, ಅದೇ‌ ಒಂದು‌ವರ್ಷ ಕಾದರೆ ಬೈಕು ಮಾತ್ರ ಏನು‌, ಕಾರೇ ತಗೋಬಹುದು.‌ ಇಂಗ್ಲಿಷ್‌ ಮಾತಾಡೋದನ್ನು‌ ಕಲಿಯಲೆಂದೇ ನೂರೆಂಟು‌ ಕೋರ್ಸುಗಳಿವೆ. ಆದರೆ ಇವರ ಆತುರದ ನಿರ್ಧಾರದಿಂದ ಲೈಫ಼ಿಗಾದ ಡ್ಯಾಮೇಜು ತಿರುಗಿ ಬರುತ್ತಾ..?

ಹೀಗೆ ಇನ್ನೂ‌ ಏನೇನೊ‌ ಹೇಳಿ‌ ನನ್ನ‌ ಲಾಯರ್ ಗೆಳೆಯನನ್ನು ಒಪ್ಪಿಸಿದ್ದೆ. ಅವನೂ ಸಹಾ ನನ್ನ‌ ಮಾತಿಂದ‌ ಕನ್ವೀನ್ಸ್ ಆಗಿ ಹಾಗೇ ಮಾಡುವುದಾಗಿ ಹೇಳಿದ್ದೂ‌ ಅಲ್ಲದೇ ಈ‌ಕೇಸು ಇತ್ಯರ್ಥವಾದ ಮೇಲೆ‌‌ ತಿಳಿಸುವುದಾಗಿ , ಒಂದೊಮ್ಮೆ‌ ಮಧ್ಯದಲ್ಲಿ‌ ನನ್ನ‌ ಸಹಾಯ ಬೇಕಾದರೆ ಕರೆಸುವುದಾಗಿ ಹೇಳಿ ಇನ್ನೊಂದು‌ ಕಪ್‌ಕಾಫ಼ೀ ಕುಡಿಸಿ‌ ಕಳಿಸಿದ.‌ ಅಲ್ಲಿಂದ ಬರುವಾಗ ಮನದಲ್ಲಿ ಎಂತಹದೋ ಆತ್ಮತೃಪ್ತಿಯ ಅಲೆ ತೊಯ್ದಾಡುತ್ತಿತ್ತು.

* ಮರೆಯುವ ಮುನ್ನ‌*

ಜೀವನದಲ್ಲಿ‌ ನಮಗೆ ಸಿರಿ‌, ಸಂಭ್ರಮ, ಯಶಸ್ಸು‌, ಸಾಧನೆ, ಅಧಿಕಾರ ಅಂತಸ್ತು ಇತ್ಯಾದಿಗಳು ಸಿಕ್ಕಾಗ ಅವೆಲ್ಲವೂ ಸಾಕಷ್ಟು ಖುಷಿ ಕೊಡುವುದು ಸಹಜ. ಅದೇ ಮತ್ತೊಬ್ಬರ ಬಾಳಿನಲ್ಲಿನ ಸಂತೋಷಕ್ಕೆ ನೀವು ಬಿಂದುವಿನಷ್ಟು ಕಾರಣವಾಗಿದ್ದರೂ ಅದು ಮನಸ್ಸಿಗೆ ಅಗಾಧ ತೃಪ್ತಿ, ಅನಿರ್ವಚನೀಯ ಆನಂದ ಕೊಡುತ್ತದೆ. ಅಂಥವುಗಳನ್ನು‌ ಅನುಭವಿಸುವ ಒಂದು ಸೋಪಜ್ಞತೆ, ಸೂಕ್ಷ್ಮತೆ‌ ನಮ್ಮೊಳಗಿರಬೇಕಷ್ಟೇ‌!

ಆ ಯುವ ಜೋಡಿಗೆ ಒಳ್ಳೆಯದಾಗಲಿ.

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್  

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW