ಅಪಾರ ಧೈರ್ಯಶಾಲಿನಿ, ಶ್ರಿತಜನಪಾಲಿನಿ, ಮಹಾಬಲಾದ್ರಿವಾಸಿನಿ, ಮಹಿಷಾಸುರ ಮರ್ದಿನಿ, ಮೈಸೂರು ಒಡೆಯರ ಕುಲದೇವತೆ, ರಕ್ಷಣಾದೇವತೆ, ಅಧಿದೇವತೆ, ಮಹಾಬಲಾದ್ರಿ ತಾಯಿ ಚಾಮುಂಡೇಶ್ವರಿಯ ಜನುಮದ ಪರಮ ಪುಣ್ಯದಿನವಿಂದು. – ಸೌಮ್ಯ ಸನತ್ ಅವರು ತಾಯಿ ಶ್ರೀಚಾಮುಂಡೇಶ್ವರಿ ಮಹಿಮೆ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶಕ್ತಿಪೀಠಗಳಲ್ಲೊಂದಾದ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಜಯಂತಿಯನ್ನು ಪ್ರತೀ ಆಷಾಢ ಮಾಸದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ದಿನದಂದು ತಾಯಿ ಚಾಮುಂಡಿಯನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ. ಹೂವು, ಹಣ್ಣುಗಳಿಂದ ವಿಶೇಷವಾಗಿ ಅಲಂಕೃತಗೊಂಡ ದೇವಿಯು ಗರ್ಭಗುಡಿಯಿಂದ ಭಕ್ತರಿಗೆ ನೇರ ದರ್ಶನವನ್ನು ನೀಡುತ್ತಾಳೆ. 1820 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇವಿಯ ವಿಗ್ರಹವನ್ನು ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ ದಿನದ ಸ್ಮರಣಾರ್ಥವಾಗಿ ಆಷಾಢದಲ್ಲಿ ಮಂಗಳಕರವಾದ ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ವರ್ಧಂತಿಯನ್ನು ಆಚರಿಸಲಾಗುತ್ತದೆ.
ವೈದಿಕ ಸ್ತೋತ್ರಗಳ ಪಠಣಗಳೊಂದಿಗೆ ದೇವಾಲಯದಲ್ಲಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ಆಚರಣೆಗಳು ಪ್ರಾರಂಭವಾಗುತ್ತವೆ. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ, ಮಂಗಳಾರತಿ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಧಾರ್ಮಿಕ ವಿಧಿವಿಧಾನಗಳ ನಡುವೆ ಚಿನ್ನದ ಪಲ್ಲಕ್ಕಿ ತಾಯಿ ವಿರಾಜಮಾನಳಾಗಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾಳೆ.

ಫೋಟೋ ಕೃಪೆ : google
ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, “ದೇವಿ ಮಹಾತ್ಮೆ”ಪುರಾಣದಲ್ಲಿನ ಪ್ರಮುಖ ದೇವತೆ. ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ “ದೇವಿ ಮಹಾತ್ಮೆ” ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಸ್ಥಳಪುರಾಣ : ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ “ಮಹಿಷಾಸುರ”ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ.ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.

ಫೋಟೋ ಕೃಪೆ : google
ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವನಂಜುಂಡೇಶ್ವರ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ.
ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಚಾಮುಂಡಿ-ಗೌರಿಯರ ಜಗಳ ಜನಪದ ಸಾಹಿತ್ಯದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ.
ಇದರಿಂದ ಕಂಗಾಲಾದ ಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರ ಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ.
“ಸ್ಕಂದ ಪುರಾಣ, ವರಾಹ ಪುರಾಣ, ಶ್ರೀದೇವಿ ಭಾಗವತ, ಕಾಳಿಕಾ ಪುರಾಣ, ವಿಷ್ಣು ಧರ್ಮೋತ್ತರ ಪುರಾಣ, ಸನತ್ಕುಮಾರ ಶಿಲ್ಪರತ್ನ ಪುರಾಣ ,ಮಾರ್ಕಂಡೇಯ ಪುರಾಣ”-ಮುಂತಾದ ಶಿಷ್ಟಪುರಾಣಗಳಲ್ಲಿ ಚಾಮುಂಡಿಯ ಪುರಾಣವು ಅನಾವರಣಗೊಳಿಸುತ್ತದೆ.

ಫೋಟೋ ಕೃಪೆ : google
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ “ಗೋಪುರ” ಮತ್ತು ಗರ್ಭಗುಡಿಯ ಮೇಲೆ “ವಿಮಾನ” ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.
ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು “ಮಾರ್ಖಂಡೇಯ ಋಷಿಗಳು” ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. “ಸಿಂಹವಾಹನ” ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. “ಸಿಂಹ ವಾಹನ” ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.

ಫೋಟೋ ಕೃಪೆ : google
ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ವಿಘ್ನರಾಜನಿಗೆ ನಮಿಸಿ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಮಾತೆ ಚಾಮುಂಡಿಯನ್ನು ಅದು ವೀಕ್ಷಿಸುತ್ತಾ ಕುಳಿತಿದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.
ಗರ್ಭಗುಡಿಗೆ ಮುಂಚೆ ಇರುವ ಅ0ತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ.
ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ. ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.
ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ.
ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ ‘ವಿಮಾನವನ್ನು’ ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

ಫೋಟೋ ಕೃಪೆ : google
ಮಹಿಷಾಸುರ ಪ್ರತಿಮೆ: ವರ್ಣರಂಜಿತ ಮಹಿಷಾಸುರ ಪ್ರತಿಮ ಹಾವು ಮತ್ತು ಖಡ್ಗವನ್ನು ಹಿಡಿದುಕೊಂಡು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸುತ್ತದೆ. ಜನರನ್ನು ಪೀಡಿಸುತ್ತಿದ್ದ ಮಹಿಷಾಸುರನನ್ನು ದುರ್ಗಾ ದೇವಿ ಸಂಹರಿಸಿದ ಕಾರಣ ದುರ್ಗಾ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ.

ಫೋಟೋ ಕೃಪೆ : google
ನಂದಿ ಪ್ರತಿಮೆ: ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ನಂದಿಯ ದೊಡ್ಡ ಏಕಶಿಲೆಯ ಪ್ರತಿಮೆಯನ್ನು ನೋಡಬಹುದು, 15 ಅಡಿ ಎತ್ತರ, 25 ಅಡಿ ಅಗಲವಿದ್ದು ಕುತ್ತಿಗೆಯಲ್ಲಿ ಆಭರಣಗಳ ಕೆತ್ತನೆಯಿದೆ. ನಂದಿ ಪ್ರತಿಮೆ ಬಿಳಿ ಬಣ್ಣದ್ದಾದರೂ ತೈಲ ಸಾಂದ್ರತೆಯಿಂದಾಗಿ ಕಪ್ಪು ಬಣ್ಣದಲ್ಲಿ ಕಾಣಿಸುತ್ತದೆ.

ಫೋಟೋ ಕೃಪೆ : google
ವ್ಯೂ ಪಾಯಿಂಟ್: ಚಾಮುಂಡಿ ಹಿಲ್ ಕೆಳಗಿನ ಮೈಸೂರು ನಗರದ ಪಕ್ಷಿಗಳ ನೋಟವನ್ನು ನೀಡುತ್ತದೆ.
ಸಮಯ: ಚಾಮುಂಡೇಶ್ವರಿ ದೇವಸ್ಥಾನವು ಭಕ್ತರಿಗೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ರವರೆಗೆ, ಮಧ್ಯಾಹ್ನ 3.30 ರಿಂದ ಸಂಜೆ 6 ರವರೆಗೆ ಮತ್ತು ಸಂಜೆ 7.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ತೆರೆದಿರುತ್ತದೆ. ಭಾನುವಾರದ ಸಮಯ ಬೆಳಿಗ್ಗೆ 7.30 ರಿಂದ ಸಂಜೆ 6 ರವರೆಗೆ ಮತ್ತು ಸಂಜೆ 7.30 ರಿಂದ ರಾತ್ರಿ 9 ರವರೆಗೆ.

ಫೋಟೋ ಕೃಪೆ : google
ತಲುಪುವ ಬಗೆ : ಚಾಮುಂಡೇಶ್ವರಿ ದೇವಸ್ಥಾನವು ಮೈಸೂರಿನಿಂದ 12 ಕಿ.ಮೀ ಮತ್ತು ಬೆಂಗಳೂರಿನಿಂದ 154 ಕಿ.ಮೀ ದೂರದಲ್ಲಿದೆ. ಮೈಸೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಮೈಸೂರು ವಾಯು, ರೈಲು ಮತ್ತು ರಸ್ತೆ ಜಾಲದಿಂದ ಉತ್ತಮವಾಗಿ ಸಂಪರ್ಕ ಹೊಂದಿದೆ. ಮೈಸೂರಿನಿಂದ ಚಾಮುಂಡಿ ಬೆಟ್ಟವನ್ನು ತಲುಪಲು ಬಸ್ಸುಗಳು ಲಭ್ಯವಿದೆ. ಮೈಸೂರಿನಿಂದ ಟ್ಯಾಕ್ಸಿಯನ್ನು ಸಹ ಬಾಡಿಗೆಗೆ ಪಡೆಯಬಹುದು. ಬೆಟ್ಟದ ಬುಡದಿಂದ ಒಂದು ಸಾವಿರ ಮೆಟ್ಟಿಲುಗಳನ್ನು ಏರುವ ಮೂಲಕ ಸಹ ಚಾಮುಂಡೇಶ್ವರಿ ದೇವಸ್ಥಾನ ತಲುಪಬಹುದು.
- ಸೌಮ್ಯ ಸನತ್
