ಆತನ ಅಪರಾಧ ಏನು ಗೊತ್ತೆ? ಇಲಿಯನ್ನು ಕೊಂದದ್ದು! ಅದೂ ಹೇಗೆ? ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದದ್ದು! ಕೇಸ್ ದಾಖಲಿಸಿದ ಪೊಲೀಸರು ಈಗ 30 ಪುಟಗಳ ಜಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಏನಿದು ಪ್ರಕರಣ ಮುಂದೆ ಓದಿ…
ಉತ್ತರ ಪ್ರದೇಶದ ಬದೌನ್‍ನಲ್ಲಿ ನಡೆದ ಘಟನೆ ಇದು. ವ್ಯಕ್ತಿಯೊಬ್ಬ ಇಲಿಯ ಬಾಲಕ್ಕೆ ಕಲ್ಲುಕಟ್ಟಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ. ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ. ಈ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡ್ತು. ಅದುವೇ ಈ ವ್ಯಕ್ತಿಗೆ ಸಮಸ್ಯೆ ತಂದೊಡ್ಡಿತು. ಇದನ್ನು ಕ್ರೌರ್ಯ ಎಂಬ ಭಾವದಲ್ಲಿ ನೋಡಲಾಯಿತು.
ಮನೋಜ್ ಕುಮಾರ್
ಈ ರೀತಿ ಕ್ರೌರ್ಯ ತೋರಿದ ವ್ಯಕ್ತಿಯ ಹೆಸರು ಮನೋಜ್ ಕುಮಾರ್. ಮೂವರು ಹೆಣ್ಣು ಮಕ್ಕಳ ಅಪ್ಪ. ಆತ ಈ ಕೃತ್ಯವೆಸಗಿದ್ದು 2022ರ ನವೆಂಬರ್ ತಿಂಗಳಲ್ಲಿ. ಇದರ ವಿಡಿಯೋ ಮಾಡಿಸಿಕೊಂಡ ಆತ ಅದರಲ್ಲಿ ಇಲಿಯ ಬಾಲಕ್ಕೆ ಕಲ್ಲುಕಟ್ಟಿ ನೀರಿನಲ್ಲಿ ಮುಳುಗಿಸಿ ವಿವರಣೆ ನೀಡಿದ ದೃಶ್ಯಗಳಿವೆ. ಇದೇ ವಿಡಿಯೋ ಮುಂದಿಟ್ಟುಕೊಂಡು ಸ್ಥಳೀಯ ಪ್ರಾಣಿ ಹಕ್ಕು ಕಾರ್ಯಕರ್ತರು ದೂರು ದಾಖಲಿಸಿದರು.
https://www.youtube.com/watch?v=fLXj4cb-qIU
ಈ ದೂರು ಆಧರಿಸಿ ಪೊಲೀಸರು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 429, ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (1) ರ ಪ್ರಕಾರ ಕೇಸ್ ದಾಖಲಿಸಿದರು. ಇಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು, ಅದರ ವರದಿಯನ್ನೂ 30 ಪುಟಗಳ ಜಾರ್ಚ್‍ಶೀಟ್ ಜತೆಗೆ ಇರಿಸಿ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಲಿ ಶವ ಪರೀಕ್ಷೆ ಮಾಡುವುದಕ್ಕೆ ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಯವರು ನಿರಾಕರಿಸಿದರು. ಹೀಗಾಗಿ ಅದನ್ನು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಿದ್ದು, ಅಲ್ಲಿ ಫಾರೆನ್ಸಿಕ್ ಪರೀಕ್ಷೆಯಲ್ಲಿ ಇಲಿಯ ಶ್ವಾಸಕೋಶ ಊದಿಕೊಂಡಿದೆ. ಶ್ವಾಸಕೋಶದ ಸೋಂಕಿನಿಂದ ಇಲಿ ಸಾವನ್ನಪ್ಪಿದೆ ಎಂಬ ವರದಿ ಬಂತು.
ಇಲಿ ಕೊಂದದ್ದಕ್ಕೆ ನನ್ನ ಮಗನ ಮೇಲೆ ಕೇಸ್ ದಾಖಲಿಸುವುದಾದರೆ, ಆಡು, ಕೋಳಿ ಕಡಿಯುವವರ ವಿರುದ್ಧವೂ ಕೇಸ್ ದಾಖಲಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮನೋಜ್ ಕುಮಾರ್ ತಂದೆ ಮಥುರಾ ಪ್ರಸಾದ್ ಎಂದು ವರದಿ ಹೇಳಿದೆ. ಒಟ್ಟಿನಲ್ಲಿ ಇದೊಂದು ವಿಚಿತ್ರ ಪ್ರಕರಣವಾಗಿ ಸುದ್ದಿ ವೈರಲ್ ಆಗಿದೆ.
- ಆಕೃತಿ ನ್ಯೂಸ್