‘ಕಾಯಿ ಜೂಜು’ ಎಂಬ ಹಬ್ಬದ ಆಟ – ನೆಂಪೆ ದೇವರಾಜ್

ಮುವತ್ತು ನಲವತ್ತು ವರ್ಷಗಳ ಹಿಂದೆ ಆಡುತ್ತಿದ್ದಂತಹ ‘ಕಾಯಿ ಜೂಜು’ ಎಂಬ ಒಂದು ವಿಶೇಷವಾದ ಆಟ, ಇತ್ತೀಚಿಗೆ ಮರೆಯಾಗುತ್ತಿರುವ ಈ ಆಟದ ಕುರಿತು ಪತ್ರಕರ್ತ ನೆಂಪೆ ದೇವರಾಜ್ ಅವರು ಬರೆದ ಸುಂದರ ಲೇಖನ.ಮುಂದೆ ಓದಿ…

ಒಂದು ಕಾಲದಲ್ಲಿ‌ ತೆಂಗಿನ ಮರಗಳೆಂಬ ಕಲ್ಪತರುಗಳು ಮಲೆನಾಡಿನಲ್ಲಿ ಅಪರೂಪದಲ್ಲಪರೂಪ. ತೆಂಗು ಎಂಬ ನಿತ್ಯ ಸುಮಂಗಲೆಗೆ ಮಲೆನಾಡಿನ ವಾತಾವರಣ ಪೂರಕವಾಗಿರಲಿಲ್ಲವೇನೋ. ಕೊಡಾಮಾಸೆ ಗೌರಿ ಹಬ್ಬ, ಮಹಾಲಯ,ದಿಪಾವಳಿಯಲ್ಲಿ ಸಾರು ಪಲ್ಯಗಳಿಗೆ ತೆಂಗಿನ ಕಾಯಿ ಹಾಕಿ ಅಡುಗೆ ಮಾಡಿದರದನ್ನೇ ರಾಜ ಮಹಾರಾಜರುಗಳು ತಮ್ಮ ಅಂತಃಪುರದ ರಾಣಿಯರಿಗೆ ಮಾಡಿಸಿದ್ದಂತಹ ಭಕ್ಷ್ಯ ಭೋಜನಗಳಿಗೆ ಸರಿಸಮಾನವಾಗಿ ವರ್ಣಿಸಲ್ಪಡುತ್ತಿದ್ದವು.ಕ ರಾವಳಿಯಿಂದ ತೆಂಗು ಸರಬರಾಜಾಗಬೇಕಿತ್ತು.
ಇಂದಿಗೂ ಪಶ್ಚಿಮ ಘಟ್ಟಕ್ಕೆ ಆತುಕೊಂಡಿರುವ ಆಗುಂಬೆ ಮಲಂದೂರು, ನಾಗಜ್ಜಿ ಕುಂಬ್ರಿ,ಮುಡುಬ ,ಕಲ್ಕುಳಿಗಳಂತಹ ಊರುಗಳಲ್ಲಿ ತೆಂಗಿನ ಮರಗಳು ಔಷಧಿಗೂ ಇಲ್ಲ. ದಕ್ಷಿಣ ಕನ್ನಡದಿಂದ ತಂದು ನೆಡುತ್ತಿದ್ದ ಸಸಿಗಳು ಮಲೆನಾಡು ಮತ್ತು ಅರೆ ಮಲೆನಾಡಿನಂತಹ ಊರುಗಳಲ್ಲಿ ತೆಂಗಿನ ಮರದ ಜೊಂಕಲೆಯಲ್ಲಿ ಎರಡೋ ಮೂರೋ ಕಾಯಿ ಕಟ್ಟಿದರೆ ಬಯಲು ನಾಡಿನ ತಿಪಟೂರಿನ ತಳಿಗಳು ಬಂದ ಮೇಲೆ ಮಲೆನಾಡು ತೆಂಗಿನ ಕಾಯಿಗಳ ಉತ್ಪಾದನೆಯ ಹಬ್ ಆಗಿ ಮೆರೆಯತೊಡಗಿರುವುದು ಇತ್ತೀಚಿನ ಬೆಳವಣಿಗೆ.

ಯಾವಾಗ ತೆಂಗು ಎಂಬುದು ಕೈಯಡಿ ಕಾಲಡಿ ದೊರೆವ ಸಮೃದ್ದಿಯಾಯಿತೋ ‘ಕಾಯಿ ಜೂಜು’ ಎಂಬುದು ಮರೆಯಾಗುತ್ತಾ ಬಂತು. ಮುವತ್ತು ನಲವತ್ತು ವರ್ಷಗಳ ಹಿಂದೆ ಕಾಯಿ ಜೂಜಿನಲ್ಲಿ ಕಾಯಿ ಗೆಲ್ಲುವ ವ್ಯಕ್ತಿ ಗೆದ್ದ ಕಾಯಿಗಳನ್ನು ಮನೆಗೆ ತಂದು ಹಾಕುವಂತಹ ಆ ಕ್ಷಣದಲ್ಲಿ ಆತನಲ್ಲುದಯಿಸುತ್ತಿದ್ದ ಧೀರತೆ, ಕ್ಷಾತ್ರತೆ, ಆತ ಹೊತ್ತಿದ್ದ ಮೀಸೆಯಲ್ಲಿ ಹೊಮ್ಮುತ್ತಿದ್ದ ಯುದ್ದ ಗೆದ್ದ ಉತ್ಸಾಹ ವರ್ಣನೆಗೆ ನಿಲುಕದ್ದು.

 

ಉರುಳುಗಾಯಿಯ ಜೂಜಲ್ಲಿ ವ್ಯಕ್ತಿಗಳಿಬ್ಬರು ಎದುರು ಬದುರು ನಿಂತು ಇಬ್ಬರೂ ಕಾಯಿಗಳನ್ನು ಉರುರುಳಿಸುತ್ತಾ ಹೋಗುತ್ತಾರೆ.ಎರಡೋ ಮೂರೊ ಸಲ ಉರುಳಿಸಿದ ಮೇಲೆ ಎರಡು ಕಾಯಿಗಳೆರಡು ಢಿಕ್ಕಿ ಹೊಡೆದಾಗ ಒಂದು ಕಾಯಿ ಒಡೆದು ಹೋದರೆ ಆ ತೆಂಗಿನ ಕಾಯಿ ಒಡೆಯದ ಕಾಯಿಯ ಸಾಮಂತನಾಗಬೇಕು.ಒಡೆದು ಹೋದ ಕಾಯಿ ಗೆದ್ದವನ ಪಾಲಾಗುತ್ತದೆ..ಎರಡಕ್ಕಿಂತ ಹೆಚ್ಚು ಕಾಯಿ ಹೊಡೆದರೆ ಅ ಕಾಯಿ ‘ಬಂಟ’ ಬಿರುದಿಗೆ ಪಾತ್ರವಾಗುತ್ತದೆ.ಅಂತಹ ಕಾಯಿಯ ಎದುರು ಉಮೆದುವಾರನಾಗಲು ಇತರ ಕಾಯಿಗಳು ಹೆದರುತ್ತವೆ.. ಇಪ್ಪತ್ತರ ವರೆಗೆ ಕಾಯಿಗಳನ್ನು ಒಡೆದು ಪುಡಿ ಮಾಡಿ ಗೆದ್ದು ‘ಇಪ್ಪತ್ತು ಕಾಯಿ ಬಂಟ’ ಎನಿಸಿ ಕೊಂಡದ್ದು ಸಹಾ ಇದೆ..

ಕಾಯಿಗಳು ತಾವು ಹೊಂದಿರುವ ಗಟ್ಟಿಯಾದ ಗರಟಗಳ ಕಾರಣಕ್ಕಾಗಿ ಕಾಯಿಗಳನ್ನು ಗೆಲ್ಲುತ್ತವೆಯೋ ಅಥವಾ ಕೆಲವರು ಉರುಳಿಸುವ ತಂತ್ರಗಳ ಮೂಲಕ ಎದುರಾಳಿ ಕಾಯಿಗಳು ಒಡೆಯುತ್ತವೆಯೋ ಎಂಬುದು ಚಿದಂಬರ ರಹಸ್ಯವಾಗಿ ನನ್ನನ್ನುಕಾಡುವಂತದ್ದು.

ಅರವತ್ತು ಹೆಜ್ಜೆಗಳ ದೂರದಲ್ಲಿ ತೆಂಗಿನ ಕಾಯಿಯೊಂದನ್ನು ಕಲ್ಲುಗಳಿಂದ ಹೊಡೆಯುತ್ತಾರೆ. ಪ್ರತಿ ಕಲ್ಲಿಗೆ ಇಂತಿಷ್ಟು ಹಣ ಇಡಲಾಗುತ್ತದೆ.ಈ ಹಿಂದೆ ಹತ್ತು ಪೈಸೆಗೊಂದರಂತೆ ಹೊಡೆಯುವ ಕಲ್ಲುಗಳಿಗೆ ದರ ನಿಗದಿ ಮಾಡುತ್ತಿದ್ದರು. ಕೇವಲ ಎರಡೋ ಮೂರೋ ರೂಪಾಯಿಗಳ ಕಾಯಿಯಿಂದ ಹದಿನೈದಿಪ್ಪತ್ತು ರೂಪಾಯಿಗಳ ವರೆಗೂ ಕಾಯಿಗಳನ್ನು ಒಡೆಯಲು ಇಟ್ಟವರಿಗೆ ದುಡ್ಡು ದೊರೆಯುತ್ತಿದೂ ಇದೆ.ಒಂದೇ ಪೆಟ್ಟಿಗೆ ಕಾಯಿಗೆ ಗುರಿ ಇಟ್ಟು ಹೊಡೆದು ಕಾಯಿಯನ್ನು ಪುಡಿ ಮಾಡಿ ಒಳಗೆ ಹಾಕಿಕೊಂಡ ಗುರಿಕಾರರೂ ಇದ್ದರೆನ್ನಿ!.

ಇನ್ನೊಂದು ತರಹದ ಅಷ್ಟೇನೂ ಜನಪ್ರಿಯವಲ್ಲದ ಜೂಜಾಟವಿದೆ.ಸದ್ದುಗದ್ದಲವಿಲ್ಲದೆ ಕುಳಿತುಕೊಂಡ ಇಬ್ಬರು ವ್ಯಕ್ತಿಗಳು ಎರಡು ಕಾಯಿಗಳನ್ನು ಉರುಳಿಸದೆ ಗೀರುತ್ತಾ ಕಾಯಿಗಳಿಗೆ ಕುಟ್ಟುತ್ತಾ ಹೋಗುತ್ತಾರೆ.ಎರಡು ಕಾಯಿಗಳಲ್ಲಿ ಒಂದು ಕಾಯಿ ಒಡೆದು ಹೋದರೆ ಒಡೆಯದೆ ಉಳಿಸಿಕೊಂಡವ ವಿಜಯಿಯಾಗಿ ಒಡೆದ ಕಾಯಿಯ ಒಡೆಯನಾಗುತ್ತಾನೆ.
ಕಾಯಿಗಳನ್ನುಉರುಳಿಸುವಾಗಾಗಲಿ,ಗೀರುವಾಗಾಗಲಿ ಕೆಲವೊಮ್ಮೆ ಎರಡೂ ಕಾಯಿಗಳು ಒಡೆದು ಹೋಗುವ ಸಂಭವವವೂ ಇರುತ್ತದೆ.ಇಂತಹ ಸಂದರ್ಭದಲ್ಲಿ ಒಡೆದು ಹೋದ ಎರಡೂ ಕಾಯಿಗಳನ್ನೂ ಅದಲು ಬದಲು ಮಾಡಿಕೊಳ್ಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಕಾಯಿಗಳ ಮೇಲೆ ಕೋಳಿ ಅಂಕದ ಸಂದರ್ಭದಲ್ಲಿ ಕೋಳಿಗಳ ಮೇಲೆ ಕಟ್ಟುವಂತೆ ದುಡ್ಡು ಕಟ್ಟಿ ಜೂಜಾಡುವ ಪದ್ದತಿಯೊಂದು ಅಲ್ಲಿ ಇಲ್ಲಿ ನಡೆಯುವುದೂ ಉಂಟು.

ಒಟ್ಟಿನಲ್ಲಿ ಗೌರಿ ಗಣೇಶನ ಹಬ್ಬದಲ್ಲಿ ಮಾತ್ರ ಹೊರಬರುವ ಕಾಯಿ ಜೂಜು ಒಂದೆರಡು ದಿನಗಳಲ್ಲಿ ಮುಕ್ತಾಯವಾಗುವಂತದ್ದು.ಇತ್ತೀಚೆಗೆ ಕಾಯಿಯ ಸಮೃದ್ದಿತನ ಹೆಚ್ಚಾದ ಪರಿಣಾಮವೋ ಅಥವಾ ದೃಷ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಉಗಮದಿಂದಲೋ ಏನೊ ಕಾಯಿ ಜೂಜು ಮರೆಯಾಗುವ ಹಂತಕ್ಕೆ ಬಂದಿದೆ.ಅಲ್ಲೊ ಇಲ್ಲೋ ಒಂದಷ್ಟು ಕಡೆ ಉರುಳುಗಾಯಿ ಜೂಜು ಮಾತ್ರ ನಡೆಯುತ್ತಿರುತ್ತದೆ.

ಇವತ್ತು ಹರಳೀಮಠದಲ್ಲಿ ಇಂತಹದ್ದೋಂದು ಕಾಯಿ ಜೂಜಿನ ಕ್ರೀಡೆ ನಡೆಯುತ್ತಿದ್ದಾಗ ನಾನೂ ಭಾಗವಹಿಸಿದೆ.ನನ್ನ ಕಾಯಿ ಐದು ಕಾಯಿಗಳನ್ನು ಗೆದ್ದು ‘ಬಂಟ’ ಎನಿಸಿಕೊಂಡಿತು.ಇದರ ವೀಡಿಯೋ ಒಂದನ್ನು ಇಲ್ಲಿ ಹಾಕುತ್ತಿದ್ದೇನೆ.ಐದು ಕಾಯಿ ಗೆದ್ದಾದ ಮೇಲೆ ನನ್ನ ಕಾಯಿ ತನ್ನ ಬಿರುದಿಗೆ ಕಳಂಕ ತಂದು ಕೊಂಡು ಗೆಳೆಯ ದೇವರಾಜನ ಪಾಲಾಗಬೇಕಾಯಿತು.


  • ನೆಂಪೆ ದೇವರಾಜ್  (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW