ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮನೆಯವರ ಪ್ರೋತ್ಸಾಹ ಇರಲಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ನಿಮ್ಮ ಮಗಳು ಅಥವಾ ಮಗನಿಗೆ ಪ್ರೋತ್ಸಾಹ ನೀಡಿ, ಬದಲಾಗಿ ಅವರನ್ನು ಚುಚ್ಚಿ ಮಾತಾಡಬೇಡಿ. ಮನೆಯವರ ಬೆಂಬಲ ಸಿಗದಿದ್ದಾಗ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ, ಮುಂದೆ ಓದಿ…

“ಇನ್ನೂ ಎಷ್ಟು ಅಂತ ನಿಮ್ನ ಸಾಕೋದು ಜೀವನ ಸಾಕಾಗಿ ಬಿಟ್ಟಿದೆ ”

ಎಲ್ಲರ ಮನೇಲಿ ಬೆಳಬೆಳಗ್ಗೆ ಸುಪ್ರಭಾತ ಶುರುವಾದರೆ, ನಮ್ಮ ಮನೆಯಲ್ಲಿ ಆಗುವ ಸುಪ್ರಭಾತವೇ ಬೇರೆ ಅಥವಾ ಎಲ್ಲರ ಮನೇಲೂ ಹೀಗೆ ಇರುತ್ತಾ ಅನ್ನೋದು ನನಗೆ ತಿಳಿದಿಲ್ಲ. ಯಾವುದಾದರೊಂದು ಕಾರಣ ಹಿಡಿದು ಬಯ್ಯದೆ ಇದ್ದರೆ ನಮ್ಮ ತಾಯಿಗೆ ಸಮಾಧಾನ ಇರಲ್ವಾ ಇಲ್ಲ, ನಮ್ಮ ಅಣ್ಣನಿಗೆ ಬೈಸ್ಕೊಳ್ದೆ ಇದ್ರೆ ಊಟ ಮಾಡಿದ್ದು ಅರಗಿಸಿಕೊಳ್ಳೋಕೆ ಆಗಲ್ವಾ ಅನ್ನೋದೆ ನನ್ನನ್ನು ಕಾಡಿದ ಪ್ರಶ್ನೆ. ಈ ಬೈಗುಳಗಳ ಹಿಂದಿರುವ ಒಲವು, ಅಕ್ಕರೆ, ಪ್ರೀತಿ, ನೋವು ಯಾವುದರ ಬಗ್ಗೆಯೂ ನಾನು ಯೋಚನೆಯನ್ನೆ ಮಾಡಿರಲಿಲ್ಲ.

ಫೋಟೋ ಕೃಪೆ : google

ಅಮ್ಮನ ಮಾತು ಕೇಳಿ ಸಿಟ್ಟಾದ ನಮ್ಮಣ್ಣ ಒಂದೆರಡು ಶಬ್ದ ಮಾಡಿ ತನ್ನ ಕೋಣೆಗೆ ಹೋದ. ಸಮಾಧಾನ ಮಾಡುವುದಕ್ಕೋ ಅಥವಾ ತಮಾಷೆ ನೋಡುವುದಕ್ಕೋ ಗೊತ್ತಿಲ್ಲ. ಆದರೆ ಏನು ಮಾಡ್ತಾ ಇರ್ಬೋದು ಅನ್ನೋ ಕುತೂಹಲಕ್ಕೆ ನಾನು ಅವನ ಹಿಂದೆ ಹೋದೆ. ಕಣ್ಣಲ್ಲಿ ಹನಿ ನೀರು ಬರುತ್ತಾ ಇದ್ರು, ತೋರಿಸಿಕೊಂಡರೆ ಎಲ್ಲಿ ಮರಿಯಾದೆ ಹೋಗುವುದೇನೋ ಎಂಬ ಅಂಜಿಕೆಯಲ್ಲಿ ಮುಖ ತಿರುಗಿಸಿಕೊಂಡಿದ್ದ. ತಲೆಯಲ್ಲಿ ಚಿಂತೆಗಳು ಚಿತೆಯಂತೆ ಸುಡುತ್ತಿದ್ದರೆ ಮನಸ್ಸು ಮೌನವನ್ನ ತಬ್ಬಿಕೊಂಡಿತ್ತು. ಅಲ್ಲೆ ಇದ್ದ ಪುಸ್ತಕವನ್ನು ಓದುತ್ತಾ ಇದ್ದ ಅವನನ್ನು ಕಂಡ ನನಗೆ ಮಾತುಗಳೆ ಬರಲಿಲ್ಲ.

ಡಿಗ್ರಿ ಪರೀಕ್ಷೆ ಬರೆದ ಕೂಡಲೆ ದೊಡ್ಡ ಸಾಹಸ ಮಾಡಿದ್ದೀವಿ ಅಂತ ಭೀಗುವ ಯುವಕರಿಗೆ ಅದರ ರಿಸಲ್ಟ್ ಬಗ್ಗೆ ಪರಿವೆ ಇರುವುದಿಲ್ಲ. ಈಗ ತಾನೆ ಏನೊ ದೊಡ್ಡ ಸಾಧನೆ ಮಾಡಿ ಬಂದ ಅವರಲ್ಲಿ ಕೊಂಚ ಯುವಕರು ಮುಂದಿನ ಯೋಜನೆ ಬಗ್ಗೆ ಚಿಂತಿಸಿರುತ್ತಾರೆ. ಅಲ್ಪ ಮಂದಿ ಡಬಲ್ ಡಿಗ್ರಿ ಮಾಡುವ ಯೋಚನೆಯಲ್ಲಿ ಇದ್ದರೆ ಇನ್ನೂ ಕೆಲವರು ಐ.ಎ.ಎಸ್. ಕೆ.ಎ.ಎಸ್. ಪಿ.ಎಸ್.ಐ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕನಸಿನಲ್ಲಿ ಇರುತ್ತಾರೆ. ಕನಸು ಕಾಣೋದು ಸುಲಭ. ಆದರೆ ನನಸು ಮಾಡೋದು ಕಠಿಣ ಎನ್ನುವ ಅವರ ಪಾಲಕರ ಮಾತಿಗೆ ಕಿವಿಗೋಡದ ಅವರುಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಾಗುತ್ತಾರೆ. ಸಮಾಜಕ್ಕೆ ಒಂದು ಉದಾಹರಣೆಯಾಗಬೇಕು, ದೇಶದ ಪರಿಸ್ಥಿತಿಯನ್ನು ಬದಲಾಯಿಸಬೇಕು, ಆಗುತ್ತಿರುವ ಅನಾಚಾರಗಳನ್ನು ಎದುರಿಸಬೇಕು ಎಂಬ ನಾನಾ ಚಿಂತನೆಯಲ್ಲಿ ಕುಡಿದ ಮನಸ್ಥಿತಿಗೆ ಬಿಸಿ ರಕ್ತ ಜೊತೆಯಾದ ಮೇಲೆ ಯಾವುದೊ ಒಂದು ಹುಮ್ಮಸ್ಸು ಬಂದು ಬಿಡುತ್ತದೆ. ಇದೆ ಹುಮ್ಮಸ್ಸಿನಲ್ಲಿ ಕಾಲಿಡುವ ಉತ್ಸಾಹಿಗಳ ಸಾಲಿನಲ್ಲಿ ನನ್ನ ಅಣ್ಣ ಕೂಡ ಒಬ್ಬ.

ಹೀಗೆ ದೃಢ ನಿರ್ಧಾರ ಮಾಡಿದ ಅವರಿಗೆ ಮುಂದೆ ತಾವು ಈಜುತ್ತಿರುವ ಸಮುದ್ರದಲ್ಲಿ ದಡ ಸಿಗುವುದು ತುಂಬಾ ಕಠಿಣ ಎಂಬುದು ಅರಿವಾಗುವುದಿಲ್ಲ. ಒಂದು ಸಲ ಅದರೊಳಗೆ ಮುಳುಗಿದರೆ ಹೊರಗೆ ಬರುವುದು ತುಂಬಾ ಕಷ್ಟ. ಮೊದಲೆರಡು ತಿಂಗಳುಗಳಲ್ಲಿ ಇದ್ದ ಆ ಶ್ರದ್ದೆ, ಹುಮ್ಮಸ್ಸು, ಆಸೆ, ಕನಸುಗಳೆಲ್ಲ ಎಲ್ಲಿ ಮಾಯವಾದವೊ ಏಏನೋ. ಸಣ್ಣ ಪುಸ್ತಕ ಕೂಡ ದೊಡ್ಡ ಭಂಡಾರವೆನಿಸಿ ಬಿಡುತ್ತದೆ. ಅವನ್ನೆಲ್ಲ ಲೆಕ್ಕಿಸದೆ ಓದಲು ಕೂತ ಅವರ ನಂಬಿಕೆಗೆ, ಎಳ್ಳು ನೀರು ಬಿಟ್ಟಿದ್ದು ಪರೀಕ್ಷೆಯಲ್ಲಿ ಫೇಲ್ ಆದೆ ಎಂಬ ಕಟು ಸತ್ಯ.

ಫೋಟೋ ಕೃಪೆ : knot9

ಸ್ಪರ್ಧಾತ್ಮಕ ಪರೀಕ್ಷೆಯೆ ಹಾಗೆ, ಇಲ್ಲಿ ಕಲಿಯಬೇಕಾದದ್ದು ತುಂಬಾ ಇದೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಕಲಿಸಿಕೊಡುವ ಒಂದು ವೇದಿಕೆ ಎಂದರೆ ಅದು ಸ್ಪರ್ಧಾತ್ಮಕ ಪರೀಕ್ಷೆ. ಪರಿಶ್ರಮ, ತಾಳ್ಮೆ ಹಾಗೂ ನಿಷ್ಕಲ್ಮಶ ಸಮರ್ಪಣೆ ಇವುಗಳು ಅಭ್ಯರ್ಥಿಗಳಿಗೆ ಬೇಕಾದ ಮೂಲ ಅಂಶಗಳು. ಇವುಗಳಲ್ಲಿ ಒಂದು ಕಡಿಮೆಯಾದರು ಪರೀಕ್ಷೆ ಎದುರಿಸುವುದು ತುಂಬ ಕಷ್ಟ. ಕೆಲವರಿಗೆ ಒಂದೆ ವರ್ಷದಲ್ಲಿ ಯಶಸ್ಸು ಸಿಕ್ಕರೆ, ಇನ್ನೂ ಕೆಲವರಿಗೆ ಅದನ್ನು ಪಡೆಯಲು ಹಲವು ವರ್ಷಗಳೆ ಬೇಕಾಗಬಹುದು. ಮೊದಲನೆ ವರ್ಷದಲ್ಲೆ ಸೋಲನ್ನು ಅನುಭವಿಸಿದ ಹಲವಾರು ಯುವಕರು, ಇದು ನನ್ನಿಂದ ಆಗುವ ಕೆಲಸವಲ್ಲ ಅಂತ ತಾವು ಕಂಡ ಕನಸಿಗೆ ಸಂಸ್ಕಾರ ಮಾಡಿದರೆ, ಸ್ವಲ್ಪ ಪ್ರತಿಭಾವಂತರು ಧೈರ್ಯಶಾಲಿಗಳು ಇದ್ದರು ಸರಿ ಇರದಿದ್ದರೂ ಸರಿ ನಾನು ಸಾಧಿಸದೆ ಬಿಡಲಾರೆ ಎಂದು ಪಣತೋಡುತ್ತಾರೆ. ಪಣ ತೊಟ್ಟ ಅವರಿಗೆ ನಮ್ಮ ಸಮಾಜ ಮೂರ್ಖರು ಎಂಬ ಬಿರುದು ಕೊಟ್ಟರೆ ಅವರ ಪಾಲಕರೆ ನಿನ್ನಿಂದ ಇದು ಸಾಧ್ಯವಾ? ಎಂಬ ಪ್ರಶ್ನೆ ಮುಂದಿಡುತ್ತಾರೆ. ನಮ್ಮವರಿಗೆ ನಮ್ಮ ಮೇಲೆ ನಂಬಿಕೆ ಇರದಿದ್ದಾಗ ಬೇರೆಯವರಿಗೆ ಉತ್ತರಿಸಿದರೆ ಏನು ಪ್ರಯೋಜನ.

ನಾನು ಹೇಳ ಬಯಸುವುದಿಷ್ಟೆ ನಿಮ್ಮ ಮಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದಾನೆ ಎಂದರೆ ಅದಕ್ಕೆ ಎದೆಗುಂದಿ ಅವನಿಂದ ಏನು ಸಾಧ್ಯ, ಹಾಗೆ ಹೀಗೆ ಅನ್ನುವುದಕ್ಕಿಂತ ನಿಮ್ಮ ಮಗ /ಮಗಳ ಬಗ್ಗೆ ಹೆಮ್ಮೆ ಪಡಿ. ಏಕೆಂದರೆ ಅವರು ಸಾಧಿಸಿದರೆ ನೀವು ಸಾಧಿಸಿದ ಹಾಗಲ್ಲವೆ?. ನನ್ನ ಮಗನಿಂದ ಇದು ಸಾಧ್ಯವಾ, ಇನ್ನೂ ಎಷ್ಟು ದಿನ ಹೀಗೆ ಇರ್ತೀಯ, ನಿಮ್ಮನ್ನು ಸಾಕುತ್ತ ನಮ್ಮ ಜೀವನ ಸಾಕಾಗಿ ಹೋಯ್ತು ಎಂಬ ಚುಚ್ಚಿ ಮಾತಾಡುವ ಬದಲು ಏನೆ ಆಗಲಿ ಹೆದರಬೇಡ ನಾವಿರುತ್ತೇವೆ ಎಂಬ ಹಿತ ನುಡಿ ಹೇಳಿ ಆಗ ಆತನ ಬದುಕೆ ಬದಲಾಗಬಹುದು.

ಇಂತಿ ನಿಮ್ಮ ಪ್ರೀತಿಯ…


  • ವಿಕಾಸ್. ಫ್. ಮಡಿವಾಳರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW