‘ಶಾಂತಿಧಾಮಕ್ಕೆ ಕಾಲಿಟ್ಟ ಕೂಡಲೇ ಬಡಕಲು ದೇಹದ ವಯೋವೃದ್ಧರೊಬ್ಬರು ಕಣ್ಣಿಗೆ ಬಿದ್ದರು. ಅವರಿಗೆ ಎಪ್ಪತ್ತೊಂಬತ್ತು ವರುಷಗಳಂತೆ. ಒಂದು ಸವೆದು ಹೋದ ಮೋಟು ಪೊರಕೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಬಾಗಿ ಗುಡಿಸುತ್ತಿದ್ದರು. ಅಲ್ಲೇ ಕಲ್ಲ ಬೆಂಚಿನ ಮೇಲೆ ಕುಳಿತೆ’. – ಲೇಖಕಿ ಗಿರಿಜಾ ಶಾಸ್ತ್ರೀ ಅವರು ಬರೆದ ಒಂದು ವ್ಯಕ್ತಿ ಪರಿಚಯ ತಪ್ಪದೆ ಮುಂದೆ ಓದಿ ….
‘ಆ ಕಡೆ ಸರಿ’ ಎನ್ನುವಂತೆ ಕೈ ಮಾಡಿದರು.
“ಯಾಕೆ ?” ಎಂದೆ.
“ಧೂಳು ಏಳ್ತದ್ರೀ”
ಇಷ್ಟು ವಯಸ್ಸಾದವರನ್ನು ಈ ಕೆಲಸಕ್ಕೆ ನೇಮಿಸಿದ್ದಾರಲ್ಲ? ನನಗೆ ಅಸಮಾಧಾನ. ಆಮೇಲೆ ಗೊತ್ತಾಯಿತು. ಅದು ಅವರೇ ಆರಿಸಿಕೊಂಡ ಕೆಲಸ ಎಂದು.
” ಯಜಮಾನರೇ, ಇಷ್ಟು ಸಣ್ಣ ಪೊರಕೆಯಿಂದ ಗುಡಿಸುತ್ತಿದ್ದೀರಲ್ಲ? ಸ್ವಲ್ಪ ದೊಡ್ಡ ಪೊರಕೆಯಾದರೆ ಅನುಕೂಲವಲ್ಲವೇ?” ಕೇಳಿದೆ.
ತುಂಡು ಪೊರಕೆ ಕೂಡ ಅವರ ಆಯ್ಕೆಯೇ ಆಗಿತ್ತೇನೋ. ಈ ತುಂಡು ಪೊರಕೆ ಬಾಗೋದನ್ನ ಕಲಿಸುತ್ತದೆ…ಬಾಗ ಬೇಕು..ಬಾಗಲಾರದೇ ಬಿಡುಗಡೆಯೇ ಇಲ್ಲ” ಎನ್ನುವಂತಿತ್ತು ಅವರ ಭಾವ.
ಅಂಗಳ, ಮಣ್ಣು ರಸ್ತೆ, ಗುರುಕುಲದ ಆಸುಪಾಸು ಎಲ್ಲಾ ಗಂಟೆಗಟ್ಟಲೆ ಗುಡಿಸುತ್ತಿದ್ದರು. ಅವರು ಅಷ್ಟು ಗುಡಿಸುವ ಅಗತ್ಯವಿರಲಿಲ್ಲ. ಧ್ಯಾನಸ್ಥರಾಗಿ ಉಡುಗುತ್ತಿದ್ದರು. ಅಕ್ಕಪಕ್ಕದ ಧ್ಯಾಸವೇ ಇರದ ಹಾಗೆ! ನಾನು ಅಮೇರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಕಂಡ ಸ್ವಚ್ಛತೆ ಅಲ್ಲಿತ್ತು….ಆದರೂ ಗುಡಿಸುತ್ತಿದ್ದರು. ಮೊದಲೇ ಬಾಗಿದ ಬೆನ್ನನ್ನು ಮತ್ತಷ್ಟು ಬಾಗಿಸಿ ಗುಡಿಸುತ್ತಿದ್ದರು.
ಮಾರನೆಯ ದಿನ ಬೆಳಗಿನ ಉಪಾಹಾರಕ್ಕೆಂದು ಬಂದಾಗ “ಬರ್ರಿ ಬರ್ರೀ” ಎಂದು ಗುಡಿಸುತ್ತಲೇ ನಮ್ಮನ್ನು ಸ್ವಾಗತಿಸಿದರು. ಅವರ ಹೆಸರು ಕುಲಕರ್ಣಿ. ಗುರುಕುಲದವರಿಗೆಲ್ಲಾ ಅವರು ಪ್ರೀತಿಯ ‘ತಾತ’. ಎಲ್ಲರೂ ಹಾಗೆಂದೇ ಕರೆಯುತ್ತಾರೆ. ಇಲ್ಲಿ ಅವರ ಪೂರ್ಣ ಹೆಸರು ಬರೆಯಲಾರೆ. ಅವರೊಂದು ಕಾಡಮಲ್ಲಿಗೆ! ನಾಡಿನ ಮಾರುಕಟ್ಟೆಯಲ್ಲಿ ಪರಿಮಳಬೀರುವುದು ಅವರಿಗೆ ಸಲ್ಲ. ಸದ್ಯ ಫೇಸ್ ಬುಕ್ ನೋಡಲಾರರು. ನಾನು ಅವರ ಬಗ್ಗೆ ಬರೆಯುತ್ತಿರುವುದನ್ನು ಓದಿದ್ದರೆ ನೊಂದುಕೊಳ್ಳುತ್ತಿದ್ದರೇನೋ. ಕೋಪಗೊಳ್ಳುತ್ತಿದ್ದರೇನೋ!
ಏನು ಮಾಡಲಿ? ಕಾಡ ಹೂವನ್ನು ನಾಡ ಬೀದಿ ಬೀದಿಗಳಲ್ಲಿ ‘ಮಲ್ಲಿಗೆ ಹೂವಾ…’ಎಂದು ದನಿಯೆತ್ತಿ ಪರಿಚಯಿಸುವ ಹುಚ್ಚು ನನಗಿದೆ. ಹೀಗಾಗಿ ನಾನೊಬ್ಬ ‘ಹೂವಾಡಗಿತ್ತಿ’ ಯಾಗುವುದು ಅನಿವಾರ್ಯ ಕರ್ಮವಾಗಿದೆ!- ಮಲ್ಲಿಗೆ ಬಳ್ಳಿ ನೆಡುವ ಅದಕ್ಕೆ ನೀರೆರೆಯುವ ಶಕ್ತಿ ಇಲ್ಲವಾದರೂ.
“ನಿಮ್ಮ ಕಾಯಕ ಸುರು ಮಾಡಿದ್ರೀ?” ಎಂದ ತಕ್ಷಣ, ಗುಡಿಸುವುದನ್ನು ನಿಲ್ಲಿಸಿ ನನ್ನನ್ನು ಅವಾಕ್ಕಾಗಿ ನೋಡಿದರು. ನಾನು ವೀಡಿಯೋ ತೆಗೆದುಕೊಳ್ಳಲು ಪ್ರಯತ್ನಿಸುವುದು ಗೊತ್ತಾದಕೂಡಲೇ ಮುಖದ ಮೇಲೆ ಕೈ ಅಡ್ಡ ಹಿಡಿದು “ಬ್ಯಾಡ್ರೀ ಬ್ಯಾಡ್ರೀ” ಎಂದರು ಖಡಕ್ಕಾಗಿ. ನಾನು ಅರ್ಧದಲ್ಲಿಯೇ ನನ್ನ ಅಹಂಕಾರದ ಕಿಟಕಿಯನ್ನು ಮುಚ್ಚಿಬಿಟ್ಟೆ. ಗುಡಿಸುವಾಗ ಮಾತ್ರ ಅವರು ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಉಳಿದಂತೆ ತಮ್ಮ ಕುಟೀರ ಸೇರಿಬಿಡುತ್ತಿದ್ದರು.
ಅವರು ಆರೋಗ್ಯ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಿಂದ ನಿವೃತ್ತರಾದವರು. ಬಾಗಲಕೋಟೆ ಅವರ ಮೂಲಸ್ಥಳವಂತೆ. ಅವರಿಗೆ ಬರುವ ದೊಡ್ಡ ಮೊತ್ತದ ಪಿಂಚಣಿಯನ್ನೆಲ್ಲಾ ಗುರುಕುಲಕ್ಕೇ ಅರ್ಪಿಸುತ್ತಾರೆ.
ಗುರುಕುಲದ ವಿದ್ಯಾರ್ಥಿಗಳು ದಯಾನಂದ ಸರಸ್ವತಿಯವರ ಇನ್ನೂರನೇ ಹುಟ್ಟುಹಬ್ಬ ಆಚರಿಸಿದರು. ಆಗ ಮಕ್ಕಳ ಜೊತೆ ಜಮಖಾನದಮೇಲೆ ಬಂದು ಕುಳಿತರು. ಮಂಡಿ ನೋವು, ಸೊಂಟ ನೋವು ನಮಗೆ! ಕುರ್ಚಿಯಮೇಲೆ ಕುಳಿತಿದ್ದೆವು.
“ಮೆಟಾಫಿಸಿಕಲ್ ಕವಿತೆಗಳಂದರ ನನಗ ಭಾಳ ಸೇರ್ತದ್ರೀ…. ಎಲ್ಲಿ ನಿಮ್ಮ ಕವಿತಾ…. ಹಂಗಾ ಸ್ವಲೂಪ ಅನ್ರೀ ನೋಡೋಣು…?…. ‘ನೊಂದ ಕನಸು’ ಅಂತ ಇಟ್ಟೀರಲ್ಲ ನಿಮ್ಮ ಕವಿತಾಗ ಹೆಸರು? ಅದು “ಬೆಂದ ಕನಸು”‘ ಅಂದರಾ ಛಲೋ ಆಗ್ತದಾ ಅಂತ ಅನಿಸ್ತದಾ. ವಿಚಾರಮಾಡ್ರೀ…ಬೆಂದರೇನೆ ಬೇಂದ್ರೆ ಅಲ್ಲೇನು” ಆಳ ಕಣ್ಣುಗಳು, ನಿಗೂಢ ಕೊಳದಂತೆ!
“ನೀವು ಒಬ್ಬ ಅವಧೂತರು…” ಎಂಬ ನನ್ನ ತಾರೀಫನ್ನು ಕೇಳಲು ಇಷ್ಟವಿಲ್ಲದವರ ಹಾಗೆ ನಡುವೆಯೇ ಕತ್ತರಿಸಿ “ಅದಲ್ಲಾ ಇರ್ಲೀ ನಿಮ್ಮ ಬಗ್ಗೆ ಹೇಳ್ರೀ” ಎಂದರು. ನಾನು ಹೋಗಿದ್ದುದು ಅವರನ್ನು ಮಾತನಾಡಿಸಲು!
ಮುಂಜಾನೆ ಮತ್ತು ಸಂಜೆ ಗಡಿಯಾರದ ಮುಳ್ಳು ತಪ್ಪ ಬಹುದು ಆದರೆ ಅವರ ಗುಡಿಸುವ ಕಾಯಕ ತಪ್ಪುತ್ತಿರಲಿಲ್ಲ.
“ನೀವು ಕಾಯಕ ಅಂದ್ರಲ್ಲ ? ಅದು ಎಷ್ಟು ಚಲೋ ಶಬ್ದ ನೋಡ್ರಿ. ನಮ್ಮ ಶರಣರ ಶಬ್ದ. ಕಾಯಕ ಅಂದ್ರ ನಿಮಗೇನು ಅನಸ್ತದಾ ಹೇಳ್ರೀ?”
ನಾನೇನೋ ವ್ಯಾಖ್ಯಾನ ಕೊಟ್ಟೆ.
“ನನಗೇನೋ ಅದು ನಿಷ್ಕಾಮ ಕರ್ಮಾನೇ ಆಗ್ಯದಾ”
“ನೀವು ಒಂದು ಮಾಸ್ಕ್ ಆದ್ರೂ ಹಾಕೋಬಾರದಾ? ನಮಗೆ ಧೂಳಂತ .. ಸರೀರೀ ಅಂತ ಹೇಳತೀರಿ” ಕೇಳಿದೆ.
“ಮಾಸ್ಕಿನ ಕಾಲ ಹೋತಲ್ಲ” ಬೊಚ್ಚುಬಾಯಿಯಲ್ಲಿ ನಕ್ಕರು. ಅವರು ನಕ್ಕ ರೀತಿಗೆ ಸಾಕ್ಷಾತ್ ಗಾಂಧೀ ಎದುರಿಗೆ ಬಂದು ಬಿಟ್ಟರು. ಅವರಿಗೆ ಅರಿವಾಗದ ಹಾಗೆ ದೂರದಿಂದ ಕೆಲವು ಫೋಟೋ ತೆಗೆದೆ. ನನ್ನ ಅಹಂಕಾರದ ಬಲೂನನ್ನು ಊದಿಕೊಳ್ಳಬೇಕಲ್ಲ?
“ಇಷ್ಟು ತಡಮಾಡಿ ಹೊಂಟ್ಯಲ್ಲೋ ಸಂಧ್ಯಾಕ್ಕ? ಗಂಟೀ ಹೊಡದು ಎಷ್ಟು ಹೊತ್ತಾತು! …ನೋಡಿ ಇವನು ಮಾಸ್ತರ್ ಇದ್ದಾನಾ. ಇವನೇ ಹೀಂಗ ನಿಯಮ ಮುರದ್ರ..ಮಕ್ಕಳಿಗೆ ಏನು ಕಲಸ್ತಾನ?..” ಅಷ್ಟರಲ್ಲಿ ಇನ್ನೊಬ್ಬ ಪುಟ್ಟ ವಟು ಓಡೋಡಿ ಬಂದ.
“ಇವನೊಬ್ಬ ಅವನ ಶಿಷ್ಯ.. ನಡೀ ನಡೀ ಬೇಗ ಓಡ್” ಎಂದು ಗದರಿದರು. ಪೊರಕೆ ಅತ್ತಿಂದಿತ್ತ ಇತ್ತಿಂದತ್ತ ಶಿಸ್ತಿನ ಸಿಪಾಯಿಯಂತೆ ಎಡಬಿಡದೇ ಸರಿಯುತ್ತಿತ್ತು….ಗುರುಕುಲದ ತುಂಬೆಲ್ಲ ಹೂಗಳು ಅರಳಿ ಘಮ್ಮೆನ್ನುತ್ತಿದ್ದವು.
“ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು”
- ಗಿರಿಜಾ ಶಾಸ್ತ್ರೀ