ಕವಿ ಹಂದಿಕುಂಟೆ ನಾಗರಾಜ ಅವರ ಲೇಖನಿಯಲ್ಲಿ ಅರಳಿದ ಸಂಸಾರದ ಜವಾಬ್ದಾರಿಯನ್ನು ಹೊತ್ತವನ್ನ ಜನ್ಮ ಹೇಗೆಲ್ಲ ಇರುತ್ತೆ ಅನ್ನೋದನ್ನು ಒಂದು ಕವನದ ಮೂಲಕ ಓದುಗರಮುಂದೆ ಇಟ್ಟಿದ್ದಾರೆ, ತಪ್ಪದೆ ಓದಿ…
ತೂತು ಬಿದ್ದ ಬನೀನು
ಹೊಲಿಗೆ ಬಿದ್ದ ಚಪ್ಪಲಿ
ನಾಲ್ಕು ಶರಟು
ಎರಡು ಪ್ಯಾಂಟು
ಅವಹೇಳನ ಮನೆಯ ಒಳಗೂ… ಹೊರಗೂ
ಎಣ್ಣೆ ಕಾಣದ ತಲೆ
ಬಣ್ಣಗಾಣದ ಕೂದಲು
ಎತ್ತೆತ್ತಲೋ ಬೆಳೆದ ಗಡ್ಡ
ಅಸ್ತವ್ಯಸ್ತ ಇನ್ ಶರ್ಟ್
ಕಣ್ಣಂಚಿನಲ್ಲಿ ಸದಾ ಮಡುಗಟ್ಟಿರುವ ದೈನ್ಯ
ಯಾಚನೆ
ಭಿಕ್ಷೆ
ಸಾಲ
ಬಡ್ಡಿ
ಬೀಪೀ
ಶುಗರ್ರು
ಸರ್ವೀಸೇ ಕಾಣದ ಟೂ ವೀಲರ್ರು
ಮುಖದ ಮೇಲೊಂದು ಪೇಲವ ನಗು…
ಥೂ… ಹಾಳು ಗಂಡಸಿನ ಜನುಮ…
ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಲಾರದೆ
ಹೆಂಡತಿಗೆ ಒಳ್ಳೆಯ ಗಂಡ ಎನಿಸಿಕೊಳ್ಳದೇ
ಮಕ್ಕಳ ಕನಸಿನ ಅಪ್ಪನಾಗಲಾರದೆ
ಕೊನೆಗೆ ಒಳ್ಳೆಯ ಕೊಲೀಗೂ… ಎಂಪ್ಲಾಯಿಯೂ ಆಗಲಾರದೆ…
ನವೆಯುತ್ತ… ನವೆಯುತ್ತ… ಒಳಗೊಳಗೇ ಸವೆದುಹೋಗುತ್ತ…
ಭೋರ್ಗರೆದು ಧಪಧಪನೆ ಮೇಲೆರಗುವ
ಅವಮಾನ ತಡೆಯಲಾರದೆ…
ಕುಡಿಯುತ್ತ… ಕುಡಿಯುತ್ತ… ಕುಸಿಯುತ್ತ…
ಒಂದಿನ…
ಅಯ್ಯೋ… ಚೆನ್ನಾಗೇ ಇದ್ದ ಕಣ್ರೀ… ಬೆಳಿಗ್ಗೆ ಬೈಕ್ ಹತ್ತಿ ಆಫೀಸ್ ಗೆ ಹೋದೋನು ಹೋಗೇ ಬಿಟ್ಟ ನೋಡಿ…
ಸಂಸಾರವೆಂದರೇ…
- ಹಂದಿಕುಂಟೆ ನಾಗರಾಜ