‘ಡೆಸ್ಟನಿಯ ಚಪ್ಪಲಿ’ ಸಣ್ಣಕತೆ

ದುಬಾರಿ ಬಟ್ಟೆಗಳನ್ನು ಧರಿಸಿದ ನಟ-ನಟಿ, ನಿರ್ದೇಶಕರುಗಳ ಸಾಲಿನಲ್ಲಿ ಕುಳಿತುಕೊಳ್ಳುವಾಗ ಡೆಸ್ಟನಿಗೆ ಒಳಗೊಳಗೇ ಇರಿಸು ಮುರಿಸಾಗುತ್ತಲಿತ್ತು. ಡೆಸ್ಟನಿಯನ್ನು ವೇದಿಕೆಗೆ ಆಹ್ವಾನಿಸಲಾಯಿತು. ಅವಳು ಪಾದರಕ್ಷೆಗಳನ್ನು ಕಳಚುವಾಗ ಎಡಚಪ್ಪಲಿಯ ಒಂದು ಪಟ್ಟಿ ಕಿತ್ತು ಬಂತು.ಮುಂದೇನಾಯಿತು ಶಾಂತಲಾ ಭಂಡಿ ಅವರ ಶ್ರೇಷ್ಠ ನಟಿ ಡೆಸ್ಟನಿ ಕತೆಯನ್ನು ತಪ್ಪದೆ ಮುಂದೆ ಓದಿ…

ಮೇಜಿನ ಮೇಲಿದ್ದ ಲಕೋಟೆಯನ್ನು ತೆರೆದು ನೋಡಿದಳು. ರಂಗಭೂಮಿ ಕಲೆಗೆ ಅವಳು ನೀಡಿದ ಕೊಡುಗೆಗಳಿಗಾಗಿ ಸ್ಥಳೀಯ ಎನ್‌ಜಿಓ ಸಂಘಟಕರು ಅವಳನ್ನು ಕಾರ್ಯಕ್ರಮವೊಂದರಲ್ಲಿ ಗೌರವಿಸಲು ಮನೆಗೆ ಬಂದು ಆಹ್ವಾನಿಸಿ ಹೋಗಿದ್ದರು. ಆಮಂತ್ರಣ ಮೊದಲೇ ಸಿಕ್ಕಿತ್ತು, ಕಾರ್ಯಕ್ರಮ ಅಂದು ಸಂಜೆ ಇತ್ತು.

ಪ್ರಖರ ದೀಪಗಳಿರುವ ಗೌರವಾನ್ವಿತ ವೇದಿಕೆಗಳಲ್ಲಿಯೇ ಇರುತ್ತಿದ್ದವಳು, ಇಂದು ಮಂದಬೆಳಕಿನ ಹಳೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದಾಳೆ. ಮೆಚ್ಚುಗೆಯ ಮಾತು, ಚಪ್ಪಾಳೆಯ ನೆನಪುಗಳು ಆಗಾಗ ದೂರದಲ್ಲಿ ಅನುರಣಿಸುತ್ತಿರುತ್ತವೆ. ಅವಳ ಹೆಸರು ಡೆಸ್ಟನಿ ಆಲ್ಸ್ಬ್ರೂಕ್, ಒಂದು ಕಾಲದ ಆಂಗ್ಲ ಭಾಷೆಯ ಶ್ರೇಷ್ಠ ನಟಿ, ಅಂಗ ಸೌಸ್ಟವ ಮತ್ತು ಪ್ರತಿಭೆಗೆ ಇನ್ನೊಂದು ಹೆಸರು. ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಡೆಸ್ಟನಿಗೆ ಕ್ರಮೇಣ ಚಲನಚಿತ್ರಗಳಲ್ಲಿಯೂ ಬೇಡಿಕೆ ಶುರುವಾಗಿ, ತನ್ನ ಮೂವತ್ತನೆಯ ಹರೆಯದೊಳಗೆ ಮೂವತ್ತಕ್ಕೂ ಹೆಚ್ಚು ಆಂಗ್ಲಭಾಷೆಯ ಸಿನೆಮಾಗಳಲ್ಲಿ ಮಿಂಚಿದಳು. ಐದು ವರ್ಷಗಳ ಹಿಂದೆ ಡೆಸ್ಟನಿ ಬಹಳ ಬೇಡಿಕೆಯ ಅಗ್ರಸ್ಥಾನದಲ್ಲಿದ್ದ ನಟಿ.

ಡೆಸ್ಟನಿಯ ವೈವಾಹಿಕ ಜೀವನ ಸುಖದ್ದಾಗಿರಲಿಲ್ಲ. ಎರಡು ಬಾರಿ ಮದುವೆಯಾಗಿ ಎರಡೂ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಂಡವು. ಬಯಸಿದ ಪ್ರೀತಿ ಅವಳಿಗೆ ಸಿಗಲಿಲ್ಲ. ಮಕ್ಕಳಂತೂ ಕನಸಿನ ಮಾತು ಎನ್ನಿಸಿತ್ತು. ವೈಯಕ್ತಿಕ ಜೀವನ ಅವಳನ್ನು ಕಾರ್ಯಕ್ಷೇತ್ರದಲ್ಲಿ ತಗ್ಗಿಸುತ್ತ ಹೋಯಿತು.

ಅಂದು ಸಂಜೆಯ ಕಾರ್ಯಕ್ರಮಕ್ಕಾಗಿ ಕ್ಲಾಸೆಟ್’ನಲ್ಲಿ ಜೋಡಿಸಿಟ್ಟ ಎಲ್ಲ ಬಟ್ಟೆಗಳನ್ನು ಡೆಸ್ಟನಿ ತಡಕಾಡುತ್ತಿದ್ದಳು. ಬೆಲೆಬಾಳುವ ಉಡುಪುಗಳು, ಚಪ್ಪಲಿಗಳು, ಬ್ರ್ಯಾಂಡೆಡ್ ಬ್ಯಾಗುಗಳು, ಕೈಗಡಿಯಾರ, ಆಭರಣಗಳನ್ನೆಲ್ಲ ಸಿಕ್ಕಷ್ಟು ಬೆಲೆಗೆ ಕಷ್ಟಕಾಲದಲ್ಲಿ ಮಾರಿಬಿಟ್ಟಿದ್ದಳು. ಯಾರೂ ಕೊಳ್ಳದೇ ಬಿಟ್ಟ ಕೆಲವೇ ಉಡುಗೆಗಳೆಲ್ಲ ತೊಟ್ಟು ಹಳತಾಗಿವೆ, ಹೊಳಪು ಮಾಸಿವೆ. ಅವುಗಳಲ್ಲಿಯೇ ಒಂದನ್ನು ಎತ್ತಿಕೊಂಡಳು.

ಮ್ಯಾಚಿಂಗ್ ಚಪ್ಪಲಿಯ ಬಗ್ಗೆ ಯೋಚಿಸುವಂತಿರಲಿಲ್ಲ. ಇರುವ ಒಂದು ಜೊತೆ ಚಪ್ಪಲಿಯನ್ನೇ ಎಲ್ಲ ಕಡೆ ತೊಡಬೇಕು, ಆ ಚಪ್ಪಲಿ ಹಳತಾಗಿ ಹರಿಯುವ ಸ್ಥಿತಿಯಲ್ಲಿತ್ತು. ಹಳತಾದರೂ ಈ ಚಪ್ಪಲಿಗಳಿಗೆ ಅವಳ ಹೃದಯದಲ್ಲಿ ವಿಶೇಷ ಸ್ಥಾನವಿದೆ. ರಂಗಭೂಮಿಗೆ ಕಾಲಿಟ್ಟ ಹೊಸತರಲ್ಲಿ ಪ್ರಸಿದ್ಧ ನಿರ್ದೇಶಕರ ನೇತೃತ್ವದಲ್ಲಿ ಭಾರತದಲ್ಲಿ ರಂಗ ಶಿಬಿರವೊಂದನ್ನು ಏರ್ಪಡಿಸಲಾಗಿತ್ತು, ಅಲ್ಲಿ ತನ್ನ ದೇಶದ ರಂಗಭೂಮಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾಗ ಇದೇ ಚಪ್ಪಲಿಗಳನ್ನು ಧರಿಸಿದ್ದಳು, ಆ ಶಿಬಿರದ ಮೊದಲ ನಿಯಮವೆಂದರೆ ನಾಟಕ ನಡೆಯುವ ಸ್ಥಳದಲ್ಲಿ, ವೇದಿಕೆಯಲ್ಲಿ ಚಪ್ಪಲಿಯನ್ನು ತೊಡದಿರುವುದು. ಆ ನಿಯಮವನ್ನು ಅದೆಷ್ಟು ಶಿಸ್ತಿನಿಂದ ಪಾಲಿಸಿದಳೆಂದರೆ ಅಂದಿನಿಂದ, ಪಾತ್ರದ ಅವಶ್ಯಕತೆಗಲ್ಲದೆ ಡೆಸ್ಟನಿ ಎಂದಿಗೂ ವೇದಿಕೆಯಲ್ಲಿ ಚಪ್ಪಲಿಗಳನ್ನು ಧರಿಸಲಿಲ್ಲ, ಚಪ್ಪಲಿಯನ್ನು ಕಳಚಿಟ್ಟೇ ವೇದಿಕೆ ಏರುತ್ತಿದ್ದುದು.

ಡೆಸ್ಟನಿ ತನ್ನ ಈ ಹಳೆಯ ಚಪ್ಪಲಿಯನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದಳು. ಈ ಚಪ್ಪಲಿಯ ಮೇಲೆ ಡೆಸ್ಟನಿಗೆ ಏಕಕಾಲಕ್ಕೆ ಗೌರವವೂ, ವಿಷಾದವೂ ಇದೆ. ಈ ಚಪ್ಪಲಿಯನ್ನು ತುಳಿಯುವಾಗ ಡೆಸ್ಟನಿಗೆ ತನ್ನ ಸ್ವಂತ ತಂಗಿ ಕೆಲ್ಲೀ ನೆನಪಾಗುತ್ತಾಳೆ. ಕೆಲ್ಲೀ, ಸಹ-ಸಾಹಿತಿಗಳೊಂದಿಗೆ ಪ್ರತಿಸ್ಪರ್ಧಿಸಲಾಗದೆ ಹತಾಶೆಗೊಂಡ ಕವಯತ್ರಿ. ಡೆಸ್ಟನಿಯ ನಟನಾ ಕೌಶಲ್ಯ, ಯಶಸ್ಸಿನ ಕುರಿತಾಗಿ ಮಾಧ್ಯಮಗಳು ಪ್ರಶಂಸಿಸಿದಾಗ, ಡೆಸ್ಟನಿಗೆ ಹೊಸ ಸಿನೆಮಾಗಳಲ್ಲಿ ಬೇಡಿಕೆ ಬಂದಂತೆಲ್ಲ ಕೆಲ್ಲೀ ಮಾತ್ಸರ್ಯದಿಂದ ಕುದಿಯುತ್ತಿದ್ದಳು. ಡೆಸ್ಟನಿಯ ಭರವಸೆಯನ್ನು ತುಳಿಯುವ ಸಲುವಾಗಿ ಅಸೂಯೆಯಿಂದ ಕೆಟ್ಟ ಕವಿತೆಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ತನ್ನ ಹತಾಶೆಯನ್ನು ಪ್ರದರ್ಶಿಸಿ ಪ್ರಚಾರ ತೆಗೆದುಕೊಳ್ಳುವವಳು, ಅನುಕಂಪ ಗಿಟ್ಟಿಸಿಕೊಳ್ಳುವವಳು. ನಕಲಿ ಪ್ರೊಫೈಲುಗಳನ್ನು ತೆರೆದು ಅವುಗಳಿಂದ ಸಹ ಸಾಹಿತಿಗಳ ಭಾವಚಿತ್ರಗಳಿಗೆ, ಪೋಸ್ಟ್’ಗಳಿಗೆ ಕೆಟ್ಟ ಕಾಮೆಂಟುಗಳನ್ನು ಬರೆಯುತ್ತಿದ್ದಳು. ಕ್ರಮೇಣ ತಂಗಿಯ ಮೇಲಿನ ಪ್ರೀತಿ ದ್ವೇಷವಾಗುತ್ತ ಹೋಯಿತು. ಡೆಸ್ಟನಿಯ ಸಹನೆಯ ಕಟ್ಟೆ ಒಡೆಯತೊಡಗಿತ್ತು. ಅಕ್ಕಳಾಗಿ ಹೇಳಬೇಕಾದಷ್ಟು ತಿಳಿ ಹೇಳಿ ಸೋತಳು. ತನ್ನ ಕುರಿತಾಗಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಕಾರಣ ರಾತ್ರೋರಾತ್ರಿ ಡೆಸ್ಟನಿ ತಂಗಿಗೆ ಇದೇ ಚಪ್ಪಲಿಯಲ್ಲಿ ಒಂದೇಟು ಕೊಟ್ಟಿದ್ದಳು. ಅದೇ ರಾತ್ರಿ ಡೆಸ್ಟನಿ ಸ್ವಂತ ತಂಗಿ ಕೆಲ್ಲೀಯಿಂದ ಕಳಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತಂಗಿಯನ್ನು ಬ್ಲಾಕ್ ಮಾಡಿ ನಿರಾಳಳಾದದ್ದು.

ಮತ್ತೆ ಕೆಲ್ಲೀ ಮರಳಿದ್ದು ತನ್ನ ಬ್ಲಡ್ ಕ್ಯಾನ್ಸರ್ ರಿಪೋರ್ಟಿನೊಂದಿಗೆ. ಡೆಸ್ಟನಿ ತನ್ನ ಮನೆಯನ್ನು, ಹಣವನ್ನೆಲ್ಲ ತಂಗಿಯ ಚಿಕಿತ್ಸೆಗಾಗಿ ಸುರಿದು ಬರಿದಾಗಿ ಈ ಹಳೆಯ ಬಡಾವಣೆ ಸೇರಿದ್ದು. ಅಷ್ಟಾದರೂ ಕೆಲ್ಲೀಯನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ಚಪ್ಪಲಿ ಮಾತ್ರ ಪಶ್ಚಾತ್ತಾಪದ ಜೊತೆ ಕೆಲ್ಲೀಯನ್ನು ನೆನಪಿಸುತ್ತದೆ. ಹಿರಿಯಳಾಗಿ ಹುಟ್ಟಿದ್ದ ತಪ್ಪಿಗಾಗಿ ತಂಗಿಯ ತಪ್ಪಿಗೂ ಡೆಸ್ಟನಿಯೇ ಪಶ್ಚಾತ್ತಾಪ ಪಡುತ್ತಿರುತ್ತಾಳೆ.

***
ಅಂದು ಸಂಜೆಯ ಕಾರ್ಯಕ್ರಮಕ್ಕೆ ಡೆಸ್ಟನಿಯನ್ನು ಕರೆದೊಯ್ಯಲು ಎನ್‌ಜಿಓ ವಾಹನದ ವ್ಯವಸ್ಥೆ ಮಾಡಿತ್ತು. ಅವಳು ಸಭಾಂಗಣ ತಲುಪಿದಾಗ ಪ್ರೀತಿಯಿಂದ ಚಪ್ಪಾಳೆ, ಕೇಕೆ, ಸಿಳ್ಳೆಗಳಿಂದ ಅವಳನ್ನು ಸ್ವಾಗತಿಸಲಾಯಿತು. ಬೃಹತ್ ಸಭಾಂಗಣದಲ್ಲಿ ಸಾವಿರಾರು ಜನ ನೆರೆದಿದ್ದರು. ಸಭಾಂಗಣದ ಮುಂದಿನ ಸಾಲುಗಳಲ್ಲಿ ಪ್ರಸಿದ್ಧ ವ್ಯಕ್ತಿಗಳಿಗಾಗಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ದುಬಾರಿ ಬಟ್ಟೆಗಳನ್ನು ಧರಿಸಿದ ನಟ-ನಟಿಯರು, ನಿರ್ದೇಶಕರುಗಳ ಸಾಲಿನಲ್ಲಿ ಕುಳಿತುಕೊಳ್ಳುವಾಗ ಡೆಸ್ಟನಿಗೆ ಒಳಗೊಳಗೇ ಇರಿಸುಮುರಿಸಾಗುತ್ತಲಿತ್ತು.

ಡೆಸ್ಟನಿಯನ್ನು ವೇದಿಕೆಗೆ ಆಹ್ವಾನಿಸಲಾಯಿತು. ಅವಳು ಪಾದರಕ್ಷೆಗಳನ್ನು ಕಳಚುವಾಗ ಎಡಚಪ್ಪಲಿಯ ಒಂದು ಪಟ್ಟಿ ಕಿತ್ತು ಬಂತು. ಚಪ್ಪಲಿಗಳನ್ನು ಕುಳಿತಿದ್ದ ಆಸನದಡಿ ಯಾರ ಲಕ್ಷ್ಯಕ್ಕೂ ಬಾರದಂತೆ ಕಾಲಿನಲ್ಲಿಯೆ ನಿಧಾನಕ್ಕೆ ತಳ್ಳಿ ವೇದಿಕೆಗೆ ನಡೆದಳು.

ಮತ್ತೆ ಚಪ್ಪಾಳೆ. ಡೆಸ್ಟನಿಯ ಮೆತ್ತಗಿನ ಮಧುರ ಧ್ವನಿ ಇವತ್ತಿಗೂ ಆಕರ್ಷಿಸುವಂಥದ್ದು, ರಂಗಭೂಮಿಯಲ್ಲಿ ಪಳಗಿದ ಧ್ವನಿ, ಧ್ವನಿವರ್ಧಕವಿಲ್ಲದೆಯೂ ಮೆತ್ತಗಿನ ಭಾವದಲ್ಲಿ ಮಾತನಾಡಬಲ್ಲವಳು. ವೇದಿಕೆ ಏರಿದರೆ ಪಾತ್ರವೇ ತಾನಾಗುವವಳು. ಸಿಂಡ್ರೆಲಾ ನಾಟಕದ ನೂರಾರು ಪ್ರದರ್ಶನಗಳಲ್ಲಿ ಸಿಂಡ್ರೆಲಾಳಾಗಿ ಡೆಸ್ಟನಿ ನಟಿಸಿದ್ದಳು. “Whatever you wish for, you keep. Have faith in your dreams, and someday, your rainbow will come smiling through” ನಾಟಕದ ಈ ಒಂದು ಸಾಲಿನೊಂದಿಗೆ ಅವಳ ಮಾತು ಕೊನೆಗೊಂಡಾಗ ಸಭಾಂಗಣದ ತುಂಬ ಕರತಾಡನ, ಸಭಿಕರೆಲ್ಲ ನಿಂತು ಗೌರವ ಸೂಚಿಸಿದರು.

ಮೆಚ್ಚುಗೆಯ ಪ್ರತೀಕವಾಗಿ ವೇದಿಕೆಯಲ್ಲಿ ದುಬಾರಿ ಬೆಲೆಯ ಹೂವಿನ ಬೊಕೆ ಮತ್ತು ಸ್ಪಾರ್ಕ್ಲಿಂಗ್ ಸೈಡರ್ ಬಾಟಲಿಯನ್ನು ಕೊಟ್ಟು ಸನ್ಮಾನಿಸಲಾಯಿತು. ಡೆಸ್ಟನಿಗೆ ’ಇವೆಲ್ಲಕ್ಕಿಂತ ಒಂದು ಜೊತೆ ಚಪ್ಪಲಿ ಹೆಚ್ಚು ಉಪಯೋಗವಾಗುತ್ತಿತ್ತು’ ಎನ್ನಿಸುತ್ತಲಿತ್ತು.

ಸಮಾರಂಭದ ನಂತರ, ಸಂಘಟಕರು ಅವಳನ್ನು ಮನೆಗೆ ಬಿಡಲು ಕಾರಿನ ವ್ಯವಸ್ಥೆ ಮಾಡಿದರು. ತೊಡಲಾಗದಷ್ಟು ಕಿತ್ತುಹೋಗಿದ್ದ ಚಪ್ಪಲಿಯನ್ನು ಸಭಾಂಗಣದಲ್ಲಿಯೇ ಬಿಟ್ಟು ಬರಿಗಾಲಿನಲ್ಲಿ ನಡೆಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಕಾರಿನಲ್ಲಿ ಪ್ರಯಾಣದುದ್ದಕ್ಕೂ ಮೌನವಾಗಿ ಗಾಜಿನಿಂದ ಹೊರಗೆ ಖಾಲಿನೋಟವೊಂದನ್ನು ಬೀರುತ್ತ ಕುಳಿತಿದ್ದಳು. ಇಂದಿನ ಸಂಜೆಯನ್ನು ಮರೆಯುವುದಕ್ಕೆ ಮೊದಲ ಹೆಜ್ಜೆಯೆಂದರೆ ಪುಷ್ಪಗುಚ್ಛ ಮತ್ತು ಸೈಡರ್ ಬಾಟಲಿಯನ್ನು ಕಾರಿನಲ್ಲಿಯೇ ಬಿಡುವುದು, ಹಾಗೆಯೇ ಮಾಡಿದಳು. ಚಪ್ಪಲಿ ಮಾತ್ರ ಮನದಲ್ಲಿಯೇ ಇತ್ತು.
ಮನೆ ಸಮೀಪಿಸಿದಾಗ ಕಾರಿನಿಂದ ಇಳಿದಳು. ಬರಿದಾದ ಅಂಗಾಲಿಗೆ ತಣ್ಣನೆಯ ನೆಲ ತಾಕಿ ಚಪ್ಪಲಿಯನ್ನು ನೆನಪಿಸುತ್ತಲಿತ್ತು. ಮನೆಯ ಒಳ ಹೊಕ್ಕವಳೇ ನೇರ ಬಾಥ್’ರೂಮಿಗೆ ತೆರಳಿ ಬೆಚ್ಚಗಿನ ಸ್ನಾನ ಮಾಡಿ ಹಾಸಿಗೆ ಸೇರಿದಳು, ಸೋತ ಮನಸಿಗೆ ನಿದ್ರೆ ಯಾವಾಗ ಹತ್ತಿತೋ ತಿಳಿಯಲಿಲ್ಲ.

ಬೆಳಗ್ಗೆದ್ದಾಗ ತಡವಾಗಿತ್ತು. ಉಪಹಾರ ಮುಗಿಸಿ ಫೋನಿನಲ್ಲಿ ಸಂದೇಶಗಳನ್ನು ಓದುತ್ತಿದ್ದಳು. ಸಿನೆಮಾ ನಿರ್ದೇಶಕರೊಬ್ಬರು ಸಂದೇಶ ಕಳಿಸಿದ್ದರು. ’ನಟಾಲಿಯಾಳ ಚಪ್ಪಲಿ’ ಎನ್ನುವ ಚಲನಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದರು. ಒಪ್ಪಿಗೆಯಾದರೆ ವಿವರಗಳನ್ನು ಚರ್ಚಿಸಲು ಮುಂದಿನ ವಾರಾಂತ್ಯದಲ್ಲಿ ಭೇಟಿಯಾಗೋಣ ಅಂತಲೂ ಇತ್ತು. ಡೆಸ್ಟನಿಯ ಮುಖದಲ್ಲೊಂದು ವ್ಯಂಗ್ಯ ನಗು ಹಾದುಹೋಯಿತು. ಯೋಚಿಸುತ್ತಿರುವಂತೆಯೇ ಕರೆಗಂಟೆ ಬಾರಿಸಿ ಹೋಗಿ ಬಾಗಿಲು ತೆರೆದಳು. ನಿನ್ನೆ ರಾತ್ರಿ ಅವಳನ್ನು ಮನೆಗೆ ಬಿಟ್ಟ ವಾಹನದ ಚಾಲಕ ನಿಂತಿದ್ದ. ’ಮೇಡಂ, ನೀವು ನಿನ್ನೆ ಇವುಗಳನ್ನು ಕಾರಿನಲ್ಲಿ ಬಿಟ್ಟಿದ್ದಿರಿ,” ಎನ್ನುತ್ತ ಪೇಪರ್ ಬ್ಯಾಗ್ಅನ್ನು ಕೊಟ್ಟು ನಿಲ್ಲದೆಯೆ ನಡೆದ. ಡೆಸ್ಟನಿಯೂ ಅನ್ಯಮನಸ್ಕಳಾಗಿ ಅದನ್ನು ತೆಗೆದುಕೊಂಡಳು. ಬಾಗಿಲು ಮುಚ್ಚಿ ಒಳ ನಡೆದವಳು ಬ್ಯಾಗ್ ತೆರೆದು ನೋಡಿದಳು.

ಒಳಗೆ ಅವಳ ಹಳೆಯ ಚಪ್ಪಲಿಗಳನ್ನು ಅಂದವಾಗಿ ಸುತ್ತಿಡಲಾಗಿತ್ತು, ಜೊತೆಯಲ್ಲಿ ಅದೇ ಗಾತ್ರದ ಒಂದು ಹೊಚ್ಚಹೊಸ ಜೋಡಿ ಶೂಗಳನ್ನು ಇಡಲಾಗಿತ್ತು. ಅವಳ ಕಣ್ಣುಗಳು ನೀರಿನಿಂದ ತುಂಬಿದವು. ಬಾಗಿಲು ತೆರೆದು ರಸ್ತೆಯಲ್ಲೊಮ್ಮೆ ನೋಡಿದಳು. ದೂರದ ತಿರುವಿನಲ್ಲಿ ಹಿಂದಿನ ರಾತ್ರಿ ತನ್ನನ್ನು ಮನೆ ತಲುಪಿಸಿದ ಟ್ಯಾಕ್ಸಿ ಕಣ್ಮರೆಯಾಗುತ್ತಲಿತ್ತು.

  • ಶಾಂತಲಾ ಭಂಡಿ

0 0 votes
Article Rating

Leave a Reply

1 Comment
Inline Feedbacks
View all comments
ರಘುರಾಂ

ಮನ ಮಿಡಿಯುವ ಕಥೆ

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW