ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಲಕ್ಷ್ಮೀಶ ತೋಳ್ಪಾಡಿ ಅವರ ‘ಭಾರತಯಾತ್ರೆ’ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದನ್ನು ಅವರು ಯಾತ್ರೆ ಎಂದು ಅವರು ಕರೆದಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅದನ್ನು ಭಾರತ ತೀರ್ಥ ಎಂದು ಕರೆದರೆ. ತೀರ್ಥಯಾತ್ರೆಗೆ ಇರುವ ಒಂದೇ ಉದ್ದೇಶವೆಂದರೆ ದೇವರ ದರ್ಶನದಿಂದ ಪುಣ್ಯ ಸಂಪಾದನೆ. ಪುಣ್ಯಸ್ಯ ಫಲಮಿಚ್ಚಂತಿ ಪುಣ್ಯಂ ನ ಇಚ್ಛಂತಿ ಎಂಬ ಮಾತು ಒಂದು ಇದೆ.ಅದರ ಅರ್ಥ ನಾನು ತಿಳಿದಂತೆ, ಮನುಷ್ಯರು ಪುಣ್ಯದ ಫಲವನ್ನು ಬಯಸುತ್ತಾರೆ . ಆದರೆ ಪುಣ್ಯವನ್ನು ಅಲ್ಲ. ಇದೊಂದು ರೀತಿಯಲ್ಲಿ ಕೃಷ್ಣ ಹೇಳಿದ ” ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ” ಫಲದ ಅಪೇಕ್ಷೆ ಇಲ್ಲದೆ ಕರ್ಮ ಮಾಡಿ – ಎಂಬುದಕ್ಕೆ ವಿರುದ್ಧ. ಅರ್ಥಾತ್ ನಾವೆಲ್ಲ ಕರ್ಮ ಮಾಡುವುದೇ ಫಲಾಪೇಕ್ಷೆಯಿಂದ. “ನೀನು ನಿಮಿತ್ತ ಮಾತ್ರ. ನಾನೇ ಕಾಲೋಸ್ಮಿ” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇದೇ ಈ ‘ಭಾರತ ಯಾತ್ರೆಯ ದರ್ಶನ’. ಇದನ್ನು ಸಾಧಿಸಲು ಮಹಾಭಾರತವನ್ನು ಬರೆದ ವ್ಯಾಸ, ಧರ್ಮಜ ಮತ್ತು ದ್ರೌಪದಿಯರನ್ನು ನಿಮಿತ್ತರನ್ನಾಗಿ ಬಳಸಿಕೊಂಡರು . ಇವರ ಮೂಲಕ ಕ್ಷತ್ರಿಯ ಕುಲದ ವಿನಾಶ. ಪರಶುರಾಮ ಕ್ಷತ್ರಿಯ ವಿನಾಶ ಮಾಡಿ ನೆತ್ತರಿನ ಕೊಳವನ್ನು ನಿರ್ಮಿಸಿದ. ಅದು ಇರುವುದು ಕುರುಕ್ಷೇತ್ರದ ಪಕ್ಕದಲ್ಲಿ ಅಲ್ಲಿ ಇನ್ನೊಂದು ರಕ್ತದ ಕೊಳ. ಕುರುಕ್ಷೇತ್ರವನ್ನು ಸ್ಮಶಾನ ಕುರುಕ್ಷೇತ್ರಂ ಎಂದು ಕುವೆಂಪು ಕರೆದದ್ದು ಇದಕ್ಕೆ ಇರಬೇಕು. ಇದಕ್ಕಿಂತ ದೊಡ್ಡ ರೂಪಕ ಮಹಾಭಾರತಕ್ಕೆ ಇನ್ನೊಂದು ಇಲ್ಲ. ಇದನ್ನು ನಿರ್ಮಿಸಲು ಭಾರತದ ಪ್ರತಿ ಪಾತ್ರವೂ ವಹಿಸಿದ ಪಾತ್ರದ ವಿಶ್ಲೇಷಣೆಯೆ ಭಾರತಯಾತ್ರೆ. ಮಹಾಭಾರತವನ್ನು ಕುರಿತು ಕನ್ನಡದ ಪಂಪ ಭಾರತ ಮತ್ತು ಕುಮಾರವ್ಯಾಸ ಭಾರತದ ಜೊತೆಗೆ ಇಟ್ಟು , ಅದು ಪಡೆದುಕೊಂಡ ರೂಪಾಂತರಗಳನ್ನು ಅನುಸಂಧಾನ ಮಾಡುವ ಸಾಹಸಕ್ಕೆ, ಇಲ್ಲಿ ಕೈ ಹಾಕಿದ್ದಾರೆ. ಅದರ ಜೊತೆಗೆ ಮಹಾಭಾರತದಲ್ಲಿ ಅಂತರ್ ನಿಹಿತವಾಗಿರುವ ಕೆಲವು ರೂಪಕಗಳ ಮೂಲಕ , ಒಂದರ ಜೊತೆ ಇನ್ನೊಂದು ಹೆಣೆದು ಕೊಂಡಿರುವ ಬಗೆಯನ್ನು, ಇಲ್ಲಿ ಸೂಕ್ಷ್ಮವಾಗಿ ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿದೆ. ಅಂತಹ ಕೆಲವು ರೂಪಕಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು. ಅವು: ಜಯ, ಕಾಡ್ಗಿಚ್ಚು, ಅಗ್ನಿ, ಯಜ್ಞ. ಮುಗ್ಧತೆ, ಯಕ್ಷಪ್ರಶ್ನೆ.

ಜಯ: ಇಲ್ಲಿ ಸಾಮಾನ್ಯವಾಗಿ ನಾವು ಗ್ರಹಿಸುವ ಕೌರವರ ವಿರುದ್ಧ ಪಾಂಡವರ ಜಯ ಎನ್ನುವ ಪರಿಕಲ್ಪನೆಯನ್ನು ನಿರಾಕರಿಸಿ, ನಮ್ಮ ಮೇಲೆ ನಾವು ಜಯ ಸಾಧಿಸಿದರೆ ,ಅದು ನಿಜವಾದ ಜಯ ಎಂದು ಹೊಸದಾಗಿ ವ್ಯಾಖ್ಯಾನ ಮಾಡಿದ್ದಾರೆ.
ಮುಗ್ಧತೆ: ಇಂತಹ ಜಯವನ್ನು ಸಾಧಿಸಲು, ನಾವು ಕಳೆದುಕೊಂಡ ಬಾಲ್ಯವನ್ನು ಅಥವಾ ಮುಗ್ಧತೆಯನ್ನು ಪುನರ್ ಪ್ರವೇಶ ಮಾಡಬೇಕು. ಇದಕ್ಕೆ ನಿದರ್ಶನವಾಗಿ, ಆಸ್ತೀಕನನ್ನು ಇಲ್ಲಿ ತಂದಿದ್ದಾರೆ. ತನ್ನ ತಂದೆಯ ಮರಣಕ್ಕೆ ಕಾರಣನಾದ ತಕ್ಷಕನ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ, ಜನಮೇಜಯ ಸರ್ಪಯಾಗವನ್ನು ಪ್ರಾರಂಭ ಮಾಡಿದ. ಅದರ ಹಿಂದೆ ಇದ್ದ ದ್ವೇಷದ ಮನೋಭಾವ ಯವನ್ನು ಗುರುತಿಸಿ, ಅದನ್ನು ನಿಲ್ಲಿಸಲು, ಜನಮೇಜಯನಿಗೆ ಆಸ್ತಿಕ ವಿನಂತಿ ಮಾಡಿಕೊಂಡ. ಅವನ ಮುಗ್ಧ ವಿನಂತಿಗೆ ಮಾರುಹೋದ ರಾಜ, ಅದನ್ನು ಅಲ್ಲಿಗೆ ನಿಲ್ಲಿಸಿ ಒಂದು ಸಮುದಾಯದ ನಾಶಕ್ಕೆ ಕೊನೆ ಹಾಕುತ್ತಾನೆ. ಆ ಮೂಲಕ ತನ್ನ ದ್ವೇಷದ ವಿರುದ್ಧ ತಾನೇ ಜಯಗಳಿಸಿದ. ಇದೇ ನಿಜವಾದ ಜಯ.
ಯಕ್ಷಪ್ರಶ್ನೆ: ಯಕ್ಷಪ್ರಶ್ನೆಗೆ ನೀರು ತರಲು ಹೋದ ಉಳಿದ ಪಾಂಡವರು, ಎಚ್ಚರಿಕೆ ನೀಡಿದರು ಕೇಳದೆ, ಬಾಯಾರಿಕೆಯಿಂದ ಉತ್ತರ ಕೊಡದೆ, ನೀರು ಕುಡಿದು ಕೆಳಗೆ ಉರುಳಿ ಗತಪ್ರಾಣರಾಗುತ್ತಾರೆ. ಆಗ ಧರ್ಮಜ ಬಂದು ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಅವನನ್ನು ಮೆಚ್ಚಿಸಿ, ಯಾರನ್ನು ಬದುಕಿಸಲಿ ಎಂದಾಗ ಮಾದ್ರಿಯ ಮಗನಾದ ನಕುಲನನ್ನು ಬದುಕಿಸಿ ಎಂದಾಗ ,ಅವನ ನ್ಯಾಯ ಪ್ರಜ್ಞೆಗೆ ಮರುಳಾಗಿ, ಉಳಿದವರನ್ನು ಸಜೀವ ಗೊಳಿಸುತ್ತಾನೆ.ಯಕ್ಷ ರೂಪದಲ್ಲಿದ್ದ ಯಮಧರ್ಮ. ಈಗಾಗಲೇ ಶಂಬಾ ಜೋಶಿಯವರು ಇದನ್ನು ಕುರಿತು ಬರೆದು ಕೊಳ ಎಂದರೆ ನೀರು ಎಂದು ಕೊಳದ ಒಡೆಯ ಎಂದರೆ ಜೀವಾತ್ಮ ಎಂದು ಅದರ ಸಾಂಕೇತಿಕ ಮಹತ್ವವನ್ನು ವಿವರಿಸಿದ್ದಾರೆ. ಇದನ್ನು ಈ ಲೇಖಕರು ಗಮನಿಸಬಹುದಿತ್ತು. ಹೀಗೆ ಗತಪ್ರಾಣರಾಗಿದ್ದ ತನ್ನ ತಮ್ಮಂದಿರನ್ನು ,ಜಾಣ್ಮೆಯ ಉತ್ತರಗಳಿಂದ ಸಜೀವಗೊಳಿಸಿ, ಮುಂದೆ ಎಂದೂ ಅವರನ್ನು ಅಗಲದ ಧರ್ಮಜ, ಸ್ವರ್ಗಾರೋಹಣ ಪರ್ವದಲ್ಲಿ, ಮಾತ್ರ ಗತಪ್ರಾಣರಾದ ಅವರನ್ನು ಬದುಕಿಸಿ, ತನ್ನ ಜೊತೆಗೆ ಕರೆದು ಕೊಂಡು ಹೋಗದೆ ಏಕಾಂಗಿಯಾಗಿ ಸ್ವರ್ಗ ಪ್ರವೇಶ ಮಾಡುತ್ತಾನೆ. ಈ ವೈಪರೀತ್ಯವನ್ನು ಲೇಖಕರು ಗಮನಿಸಬಹುದಿತ್ತು.
ಕಾಡ್ಗಿಚ್ಚು: ಖಾಂಡವನ ದಹನದಿಂದ ಪ್ರಾರಂಭವಾದ ಈ ಕಾಡ್ಗಿಚ್ಚು ಕೊನೆಯಾಗವುದು ವಾನಪ್ರಸ್ಥದ ಕಾಡ್ಗಿಚ್ಚಿನಲ್ಲಿ. ಧೃತರಾಷ್ಟ್ರನ ಕುರಿತ ನನ್ನ ಲೇಖನದಲ್ಲಿ ಇದನ್ನು ಪ್ರಸ್ತಾಪಿಸಿರುವೆ. ಇದರಲ್ಲಿ ಇವರು ಗಮನಕ್ಕೆ ತಂದು ಕೊಳ್ಳದ ಸಂಗತಿಯೆಂದರೆ ಅದನ್ನು ರಕ್ಷಿಸುವ ಹೊಣೆ ಹೊತ್ತವನು, ಸ್ವತಃ ಅರ್ಜುನನ ತಂದೆ ಇಂದ್ರ ಎಂಬುದನ್ನು. ಅದರ ಪರಿಣಾಮವಾಗಿ ಸ್ವತಃ ಅರ್ಜುನ ತನ್ನ ಮಗನ ಜೊತೆ ಕಾದಾಡಿ ಸೋಲು ಕಾಣಬೇಕಾಗುತ್ತದೆ.( ಮುಂದೆ ಇದೆ ಅರ್ಜುನ ತನ್ನ ಮಗನಾದ ಬಬ್ರುವಾಹನನ ಜೊತೆ ಕಾದಾಟ ಮಾಡಿ ಸೋತ) ಇದನ್ನು ಅವರು ಗಮನಕ್ಕೆ ತಂದುಕೊಳ್ಳಬಹುದಿತ್ತು. ಇನ್ನೂ ವಿಚಿತ್ರವೆಂದರೆ ಅಗ್ನಿ ಮತ್ತು ಇಂದ್ರ ದೇವತೆಗಳು.( ಪರಸ್ಪರ ವಿರುದ್ಧವಾಗಿ ಇರುವುದು).

ಯಜ್ಞ: ಪ್ರಕೃತಿಯಿಂದ ಪಡೆದದ್ದನ್ನು ಪ್ರಕೃತಿಗೆ ಅರ್ಪಿಸುವ ಉದ್ದೇಶದಿಂದ ಪ್ರಾರಂಭವಾದ ಇದು, ದ್ವೇಷ ಹೊತ್ತಿ ಉರಿಯಲು ಸಾಧನವಾಗಿ ಪರಿಣಮಿಸಿದ ದುರಂತವೇ ಮಹಾಭಾರತ. ಇದನ್ನು ದ್ರೋಣ ಮತ್ತು ದ್ರುಪದ ಅವರ ಮುಖಾಮುಖಿಯ ಮೂಲಕ ಕಂಡಿರಿಸಿದ್ದಾರೆ. ತನಗೆ ಅವಮಾನ ಮಾಡಿದ ಎಂದು. ದ್ರೋಣ ಅವನಿಗೆ ಬುದ್ಧಿ ಕಲಿಸಲು ಹೊರಟು ಮತ್ತೆ ಆಶ್ರಯಿಸಿದ್ದು ಅದೇ ಕ್ಷತ್ರಿಯರನ್ನು ( ಪಾಂಡವ ಕೌರವರ) ಎನ್ನವ ವೈಪರೀತ್ಯವನ್ನು ಎಂಬುದನ್ನು ಇಲ್ಲಿ ಗಮನಕ್ಕೆ ತಂದುಕೊಂಡಿಲ್ಲ.
ಅರಸುತನ ಮತ್ತು ವರ್ಣಾಶ್ರಮ: ಸಾಮಾನ್ಯವಾಗಿ ಅರಸುತನ ಎನ್ನುವುದು ಕ್ಷತ್ರಿಯರಿಗೆ ಮೀಸಲು, ಎಂಬುದನ್ನು ಇದು ಮುರಿದು ಕಟ್ಟುತ್ತದೆ. ಬ್ರಾಹ್ಮಣನಾದ ದ್ರೋಣ ಕ್ಷತ್ರಿಯನಾದ ದ್ರುಪದನನ್ನು ತನ್ನ ಶಿಷ್ಯನಾದ ಅರ್ಜುನನಿಂದ ಸೋಲಿಸಿ, ಅವನಿಂದ ಅರ್ಧ ರಾಜ್ಯವನ್ನು ಕಿತ್ತುಕೊಂಡು, ಅದಕ್ಕೆ ರಾಜನಾಗಿ ಮೆರೆಯುತ್ತಾನೆ.ಆ ಮೂಲಕ ರಾಜತ್ವ ಕ್ಷತ್ರಿಯರ ಸೊತ್ತು ಎಂಬುದನ್ನು ಸುಳ್ಳು ಮಾಡುತ್ತಾನೆ. ಅದರಂತೆ ಅಂಬೇಡ್ಕರ್ ಅವರು ಜೈನ ಧರ್ಮದ ಭರತ ಮೂಲತಃ ಶೂದ್ರ ಎಂದು ತಮ್ಮ ಸಂಶೋಧನೆಯಿಂದ ದೃಢಪಡಿಸಿದ್ದಾರೆ.ಅವನ ಮೂಲಕ ಭಾರತ ಎಂದು ಹೆಸರು ಬಂದಿದೆ ಎಂದಿದ್ದಾರೆ. ಈ ಮೂಲಕ ಅರಸುತನ ಎಂಬುದು ಕ್ಷತ್ರಿಯರ ಏಕಸ್ವಾಮ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧೃತರಾಷ್ಟ್ರ ಗಾಂಧಾರಿ: ಅಂಬೆಯ ಬಳಿಗೆ ತಾಯಿಯ ಆದೇಶವನ್ನು ಈಡೇರಿಸಲು ವ್ಯಾಸ ಬಂದಾಗ, ಅವನ ಮತ್ಸ್ಯ ಗಂಧವನ್ನು ಸಹಿಸಲಾರದೆ ಅವಳು ಕಣ್ಣು ಮುಚ್ಚಿಕೊಂಡಳು.ಅದರ ಪರಿಣಾಮವಾಗಿ ಧೃತರಾಷ್ಟ್ರ ಹುಟ್ಟು ಕುರುಡನಾಗತ್ತಾನೆ. ಅದರ ಫಲ ಅವನು ರಾಜನಾಗಲು ಸಾಧ್ಯವಾಗುವುದಿಲ್ಲ. ಅವನಿಗೆ ಪ್ರಜ್ಞೆಯನ್ನು ವ್ಯಾಸ ಕೊಟ್ಟರು, ಅದನ್ನು ಅವನು ಬಳಸದೆ ಮುಂದಿನ ದುರಂತಗಳಿಗೆ ಕಾರಣನಾಗುತ್ತಾನೆ. ಅವನನ್ನು ಮದುವೆಯಾದ ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿ ಹಾಕಿಕೊಂಡು ಕಣ್ಣಿದ್ದೂ ಕುರುಡಾಗುತ್ತಾಳೆ. ಅವರಿಬ್ಬರ ಕುರುಡುತನ ಕೌರವವಂಶದ ಮುಳುಗುವ ಸಾಧನವಾಗಿದೆ.ಜತೆಗೆ ಅವಳಿಗೆ ಕುಂತಿಯ ಕುರಿತು ಇದ್ದ ಅಸೂಯೆ ಕೂಡ. ಪೂರ್ಣ ಗರ್ಭದ ಮೊದಲೇ ಹೊಟ್ಟೆ ಹೊಸೆದು ಕೊಂಡು ,ಕೌರವ ಸಂತಾನಕ್ಕೆ ಕಾರಣವಾಗುತ್ತಾಳೆ. ಅವಳಿಗೆ ಕುಂತಿಯ ಕುರಿತು ಇದ್ದ ಅಸೂಯೆ, ಅವನ ಮಕ್ಕಳಲ್ಲಿ ಮುಂದುವರೆದು ಕುರುಕ್ಷೇತ್ರಕ್ಕೆ ನಾಂದಿ ಹಾಡಿತು.
ಕಾಲದ ಪರಿಕಲ್ಪನೆ: ಯಯಾತಿ ಮತ್ತು ಭೀಷ್ಮರ ಕಾಲದ ವಿಪರ್ಯಾಸವನ್ನು ಪರಿಶೀಲನೆ ನಡೆಸಿದ್ದಾರೆ. ಯಯಾತಿ ತನ್ನ ದುಡುಕಿನ ಪರಿಣಾಮವಾಗಿ ಅಕಾಲದಲ್ಲಿ ಮುಪ್ಪನ್ನು ಶುಕ್ರಾಚಾರ್ಯರಿಂದ ತಂದುಕೊಂಡ.ಮತ್ತು ತೀರದ ತನ್ನ ಕಾಮದಾಹವನ್ನು ತೀರಿಸಲು, ಮರಳಿ ಯೌವನವನ್ನು ಪಡೆಯಲು, ತನ್ನ ಮಗನಾದ ಪುರುವನ್ನು ಸಾಧನವನ್ನಾಗಿ ಬಳಸಿಕೊಂಡ. ಕಡೆಗೆ ಕಾಮವನ್ನು ತಣಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕಂಡುಕೊಳ್ಳಲು ಇದರಿಂದ ಅವನಿಗೆ ಸಾಧ್ಯವಾಯಿತು.
ಭೀಷ್ಮನಾದರೋ ತನ್ನ ತಂದೆ ಆಸೆಯನ್ನು ಪೂರೈಸುವುದಕ್ಕೆ ಬ್ರಹ್ಮಚರ್ಯವನ್ನು ಸ್ವೀಕರಿಸುವನು.ಮತ್ತು ಇಡೀ ಜೀವನವನ್ನು ಕೌರವ ವಂಶವನ್ನು ಕಾಪಾಡಲು ಮೀಸಲಾಗಿಡುತ್ತಾನೆ. ಅಂಬೆಯ ಜೀವನವನ್ನು ಹಾಳುಗೆಡವಿ ಅವಳಿಂದಲೇ ಮರಣವನ್ನು ತಂದುಕೊಳ್ಳುವುದು ವಿಪರ್ಯಾಸವಾಗಿದೆ. ನೆಲದ ಮತ್ತು ಹೆಣ್ಣಿನ ಸ್ಪರ್ಶದ ಅರಿವು ಇಲ್ಲದ ಅವನಿಗೆ, ಅವಳ ದ್ರೌಪದಿಯ ಗೋಳಾಟ ಮತ್ತು ಆರ್ತನಾದಗಳು ತಟ್ಟುವುದೇ ಇಲ್ಲ. ಇಂತಹವನನ್ನು ಲೇಖಕರು ವೈಭವೀಕರಿಸುವುದು ಇನ್ನೊಂದು ವಿಪರ್ಯಾಸ. ಅವನು ಶರಶಯ್ಯೆಯಲ್ಲಿ ಒರಗಿ ಉತ್ತರಾಯಣದ ಕಾಲಕ್ಕೆ ಕಾಯುತ್ತಾ ಇರುವ ಚಿತ್ರವನ್ನು, ಪಂಪ ವೀರ ಸಿದ್ದಾಂತ ಶಾಸನಕ್ಕೆ ಹೋಲಿಸಿದರೆ, ಅವನ ಮೈಯ ಹುಣ್ಣುಗಳನ್ನು ಅಕ್ಷರಗಳಿಗೆ ಹೋಲಿಸಿ” ನೋಡಿ ಕಲ್ಲಿಂ” ನೋಡಿ ಕಲಿಯಿರಿ ” ಎಂಬುದನ್ನು ಅವನ ಔನ್ನತ್ಯಕ್ಕೆ ಸಾಕ್ಷಿಯಾಗಿ ಲೇಖಕರು ಉಲ್ಲೇಖ ಮಾಡಿದ್ದಾರೆ. ಆದರೆ ಅವನಿಂದ ಕಲಿಯಬೇಕಾದ ಮೌಲ್ಯಗಳು ಯಾವುವು ಎಂಬುದನ್ನು ವಿಶದ ಪಡಿಸಿಲ್ಲ.
ಕಾಮಪೀಡಿತ: ಪಾಂಡು ಮಾದ್ರಿಯರ ಮೂಲಕ ಕಾಮ ಮತ್ತು ಸಾವು ಜೊತೆ ಜೊತೆಗೆ ಇರುವ ವೈರುಧ್ಯಗಳ ಅನಾವರಣ ಮಾಡಿದ್ದಾರೆ.ಮತ್ತು ಅವನು ಅವನ ಮಿಥುನ ಮೃಗಗಳನ್ನು ಕೊಲ್ಲುವುದರಿಂದ ಸಾವನ್ನು ಕೈ ಮಾಡಿ ಕರೆದುಕೊಂಡನು. ಕಲೆಯೇ ಇಲ್ಲಿ ಕೊಲೆಗೆ ಕಾರಣ ವಾಗವ ವೈಪರೀತ್ಯ.ಮತ್ತು ಇದನ್ನು ಮೊದಲ ಸಹಗಮನ ಎಂದು ಗುರುತಿಸಲಾಗಿದೆ.
ಕರ್ಣ ಮತ್ತು ದುರ್ಯೋಧನರ ಸ್ನೇಹವನ್ನು ಕುರಿತು ವೈಭವೀಕರಿಸುವ ಉತ್ಸಾಹದಲ್ಲಿ, ಕರ್ಣನ ಹುಟ್ಟಿದ ಹಿನ್ನೆಲೆಯನ್ನು ಅರಿತು ದುರ್ಯೋಧನ ಕರ್ಣನನ್ನು ” ಮುಳ್ಳೊಳೆ ಮುಳ್ಳಂ ಪಾಟಿಸುವ”( ಪಂಪ) ಅವನ ಹುನ್ನಾರವನ್ನು ಗಮನಿಸಿಲ್ಲ.
ಯುಗಾಂತ್ಯದ ಮತ್ತು ಯುಗಸಂಧಿಗಳ ಕಾವ್ಯ ಎಂದು ಮಹಾಭಾರತವನ್ನು ವ್ಯಾಖ್ಯಾನ ಮಾಡಿದ್ದಾರೆ ಅರ್ಜುನನ ವಿಷಾದ ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ ಎಂದ ಲೇಖಕರು , ಅವನು ಅದನ್ನು ಮರೆತು ಅನುಗೀತೆಗೆ ಕಾರಣನಾಗುತ್ತಾನೆ.ಎಂಬುದು ಅರ್ಜುನನ ಜ್ಞಾಪಕ ಶಕ್ತಿಗೆ ಒಂದು ಸವಾಲಾಗಿದೆ.
ಮಣ್ಣಿನ ಮೂರ್ತಿಯನ್ನು ಗುರು ಮಾಡಿ ಕಲಿತ ಏಕಲವ್ಯ ಕೂಡ ಇಲ್ಲಿ ಬಲಿಯಾದ ದುರಂತವನ್ನು ಗುರುತಿಸಿದ್ದಾರೆ. ಆದರೆ ಅವನು ಮಾಡಿದ ಮಣ್ಣಿನ ಮೂರ್ತಿಯ ಮೂಲಕ ಏಕಾಂಗಿಯಾಗಿ ಸಾಧನೆ ಮಾಡಿದ ಅವನು ಅರ್ಜುನನ ಅಹಂಕಾರದ ವಿರುದ್ಧ ಗೆಲುವು ಸಾಧಿಸುತ್ತಾನೆ. ಬಿಮಲ ಎಂಬ ಜೈನ ಪರಂಪರೆಯ ಕತೆಯ ಮೂಲಕ ಇದನ್ನು ತೌಲನಿಕವಾಗಿ ಗಮನಿಸಿರುವುದು ಇಲ್ಲಿನ ವಿಶೇಷ.

ದ್ರೌಪದಿ: ಕ್ಷತ್ರಿಯರು ಅವಳಿಗೆ ತಪ್ಪುವ ಮೂಲಕ, ತಮ್ಮ ವಿನಾಶವನ್ನು ತಂದುಕೊಳ್ಳಲು ಅನುವು ಮಾಡಿಕೊಳ್ಳುತ್ತಾರೆ. ಅವಳನ್ನು ಸಭೆಗೆ ಎಳೆದು ಕೊಂಡು ಹೋಗಲು ದುಶ್ಯಾಸನ ಬಂದಾಗ, ಅವಳು ಕೇಳುವ ಪ್ರಶ್ನೆಗೆ ಯಾರೂ ಉತ್ತರ ಕೊಡುವುದಿಲ್ಲ. ಸಭೆಯಲ್ಲಿ ಅವಳ ಮರ್ಯಾದೆ ಹರಾಜು ಆಗುತ್ತಿದ್ದಾಗ, ಅವಳ ನೆರವಿಗೆ ಬಂದವ ವಿಕರ್ಣ ಮತ್ತು ಕೃಷ್ಣ ಮಾತ್ರ. ಸೀರೆಯನ್ನು ಒದಗಿಸುವ ಮೂಲಕ.
ಅದೇ ಮುಂದಿನ ದುರ್ಘಟನೆಗಳಿಗೆ ನಾಂದಿ ಹಾಡಿತು., ಇಷ್ಟಾದರೂ ಜೂಜಿನ ದೌರ್ಬಲ್ಯದ ಧರ್ಮಜ ಮತ್ತೆ ದುರ್ಯೋಧನನ ಕರೆಗೆ ಓಗೊಟ್ಟು, ಮತ್ತೆ ಹೋಗಿ ಜೂಜಾಡಿ ಸೋತು, ವನವಾಸಕ್ಕೆ ಕಾರಣಕರ್ತನಾಗುತ್ತಾನೆ. ಆದರೂ, ಲೇಖಕರು ಅವನನ್ನು ನಿಮಿತ್ತ ಮಾತ್ರ ಎಂದು ಪರಿಗಣಿಸುವ ವ್ಯಾಸನ ನಿಲುವಿನ ಕುರಿತು ಚಕಾರ ಎತ್ತುವುದಿಲ್ಲ.
ಸ್ತ್ರೀ ಪರ್ವದಲ್ಲಿ ಹೆಣಗಳ ನಡುವೆ ತಮ್ಮವರ ಹೆಣಗಳನ್ನು ಕಂಡು ಗೋಳಾಡುತ್ತ, ಅವನಿಗೆ ಅವರು ಬಗೆ ಬಗೆಯಾಗಿ ಶಾಪ ಹಾಕುವಾಗ, ಅವನಿಗೆ ಪಶ್ಚಾತ್ತಾಪ ಹಾಗೂ ಪಾಪ ಪ್ರಜ್ಞೆ ಕಾಡುತ್ತದೆ.ಗಾಂಧಾರಿಯನ್ನು ಅದಕ್ಕೆ ತನಗೆ ಶಾಪ ಕೊಡು ಎಂದು ಕೇಳಿಕೊಳ್ಳುತ್ತಾನೆ. ಜಲಾರ್ಪಣ ಮಾಡುವಾಗ ಕುಂತಿ ತನ್ನ ಕಾನೀನ ಪುತ್ರ ” ನಿಮ್ಮ ಹಿರಿಯಣ್ಣನಾದ ಕರ್ಣನಿಗೆ ಕೂಡ ಕೊಡು ” ಎಂದಾಗ,ಅವನಿಗೆ ದಿಗ್ಭ್ರಮೆ ಉಂಟಾಗುತ್ತದೆ. ತಾಯಂದಿರಲ್ಲಿ ಗುಟ್ಟು ನಿಲ್ಲದಿರಲಿ ಎಂದು ಶಾಪ ಕೊಡುತ್ತಾನೆ. ಶಾಂತಿ ಪರ್ವದಲ್ಲಿ ಎಲ್ಲರೂ ಸ್ವರ್ಗದ ದಾರಿಯನ್ನು ಹಿಡಿಯುವರು. ಸ್ವರ್ಗದ ಬಾಗಿಲು ತೆಗೆಯುವುದು ಅವನೊಬ್ಬನಿಗೆ ಮಾತ್ರ.
ತನ್ನ ವಂಶದ ಕುಡಿ ಧರ್ಮಜ ಸ್ವರ್ಗಕ್ಕೆ ಹೋದರೂ,ವ್ಯಾಸನ. ವಿಷಾದ ಏನೂ ತಪ್ಪುವುದಿಲ್ಲ. ಒಂದು ರೀತಿಯ ಹತಾಶೆ ಮತ್ತು ಖಿನ್ನತೆಗಳು ಆವರಿಸಿತು.ಆದ್ದರಿಂದಲೇ ಅವನು ” ನಾನು ಕೈ ಎತ್ತಿ ಕೂಗಿ ಹೇಳಿದರೂ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ” ಎನ್ನುವುದೇ ಅವನ ಚರಮವಾಕ್ಯ. ಸ್ವತಃ ಕವಿಯೂ ಪಾತ್ರವೂ ಆದ ,ಅವನಿಗೆ ಇತಿಹಾಸವನ್ನು ಬರೆವ ಹಕ್ಕು ಅದರಲ್ಲಿ ಪಾತ್ರ ವಹಿಸುವ ಹಕ್ಕು ಇದೆಯೇ ಹೊರತು, ಅದನ್ನು ನಿರ್ದೇಶಿಸುವ ಹಕ್ಕು ಇಲ್ಲ. ಆದ್ದರಿಂದ ಅವನು ಕೂಡ ಇತರರಂತೆ ಅಸಹಾಯಕ.ಇದನ್ನು ಲೇಖಕರು ಗಮನಿಸಬಹುದಿತ್ತು.
ಸಾಧನೆಗಳು:
೧. ಸೂಕ್ಷ್ಮ ಅವಲೋಕನ ಮತ್ತು ಅಖಂಡ ದೃಷ್ಟಿಯ ಗ್ರಹಿಕೆಯ ಅನಾವರಣ.
೨. ಸಂಸ್ಕೃತ ಮಹಾಭಾರತ ಮತ್ತು ಕನ್ನಡ ಭಾರತಗಳ ತೌಲನಿಕ ಅಧ್ಯಯನ.ವಚನಗಳನ್ನು, ಆಧುನಿಕ ಕಾವ್ಯವನ್ನು ಸಮಯೋಚಿತ ಉಲ್ಲೇಖ ಮಾಡಿರುವುದು.
೩. ಕಾವ್ಯಮಯ ಭಾಷೆ.
೪. ಮಹಾಭಾರತದ ಸಾಂಸ್ಕೃತಿಕ ಅಧ್ಯಯನ ಕೃತಿ ಮರಾಠಿಯ ಯುಗಾಂತ ಕೃತಿಯ ಉಲ್ಲೇಖ.
ಮಿತಿಗಳು:
೧. ಈಗಾಗಲೇ ಕನ್ನಡದಲ್ಲಿ ಬಂದಿರುವ ಮಹಾಭಾರತದ ಅಧ್ಯಯನ ಕೃತಿಗಳನ್ನು ಗಮನಿಸದೆ ಇರುವುದು.
ಉದಾ: ಶಂಬಾ ಜೋಶಿಯವರ ಕರ್ಣನ ಮೂರು ಚಿತ್ರಗಳು. ಎ.ಆರ್. ಕೃಷ್ಣ ಶಾಸ್ತ್ರಿಗಳ ವಚನ ಭಾರತ, ಮಾಸ್ತಿ ಅವರ ಭಾರತ ತೀರ್ಥ( ಅವರ ಒಂದು ಭಾಷಣದಲ್ಲಿ ” ಧೃತರಾಷ್ಟ್ರ ತಪ್ಪು ಮಾಡಿದ ಎಂದು ” ಖಂಡಿಸಿದ್ದು ನನ್ನ ಕಿವಿಯಲ್ಲಿ ಇನ್ನೂ ಮೊರೆಯುತ್ತಿದೆ) ವಿ.ಸೀ.ಯವರ ಮಹಾಭಾರತಗಳ ಶ್ರೀ ಕೃಷ್ಣ. ದೇ.ಜೆ.ಗೌ.ಅವರ ಗದುಗಿನ ಭಾರತ ಒಂದು, ಸಾಂಸ್ಕೃತಿಕ ಅಧ್ಯಯನ ಇತ್ಯಾದಿ.
೨. ಪುನರುಕ್ತಿಗಳು
೩. ಲಿಪಿ ಸ್ಖಾಲಿತ್ಯಗಳು
ಈ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾದ ಲೇಖಕರಿಗೆ, ಭಾಜನವಾದ ಕೃತಿಯನ್ನು ಪ್ರಕಟಿಸಿದ ಅಭಿನವಕ್ಕೆ, ಮತ್ತು ಅದನ್ನು ಕಳಿಸಿ, ಓದಲು ಅವಕಾಶ ಮಾಡಿಕೊಟ್ಟ ರವಿಕುಮಾರ್ ಗೆ ವಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
