ಹೊಸತನ್ನು ನೀಡುವ ಕೆ.ಎಂ.ಚೈತನ್ಯ

ಒಬ್ಬ ನಿರ್ದೇಶಕ ಒಂದು ಒಳ್ಳೆಯ ಸಿನಿಮಾ ತಗೆಯಬೇಕೆಂದರೆ ನಿರ್ದೇಶಕ ಮೊದಲು ಪ್ರೇಕ್ಷಕನಾಗಬೇಕು.  ಪ್ರೇಕ್ಷಕನ ಬೇಕು- ಬೇಡಗಳ ಮನಸ್ಸಿನ ಮಾತುಗಳನ್ನು ನಿರ್ದೇಶಕ ಅರ್ಥಮಾಡಿಕೊಳ್ಳಬೇಕು. ಆಗಲೇ ಒಂದು ಒಳ್ಳೆಯ ಕತೆ ಹುಟ್ಟಲು ಸಾಧ್ಯ. 

ಹಾಗೆಯೆ ಒಳ್ಳೆ ಸಿನಿಮಾಗಳು ಬಂದಾಗ ಪ್ರೇಕ್ಷಕ ಎಂದೂ ನಿರ್ದೇಶಕನ ಕೈ ಬಿಡುವುದಿಲ್ಲ ಎನ್ನುವ ಸತ್ಯ ನಿರ್ದೇಶಕರಿಗೂ ತಿಳಿದಿದೆ. ಪ್ರೇಕ್ಷಕರ ಹಿತಾಸಕ್ತಿಯನ್ನು ಮನದಲ್ಲಿಟ್ಟುಕೊಂಡು ಇಂದಿನ ನಿರ್ದೇಶಕರು ಹೊಸ ಹೊಸ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಅದು ಪತ್ತೇದಾರಿ, ಹಾರರ್, ಥ್ರಿಲ್ಲರ್, ಮಾಫಿಯಾಕ್ಕೆ ಸಂಬಂಧ ಪಟ್ಟಂತಹ ಹಲವಾರು ವಿಭಿನ್ನ ಕಥಾಹಂದರಗಳನ್ನೂ ಇಟ್ಟುಕೊಂಡು ಉತ್ತಮ ಚಿತ್ರ ನೀಡುವಲ್ಲಿ ನಿರ್ದೇಶಕರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಶ್ರಮವಹಿಸಿ ಕೆಲಸ ಮಾಡುವ ನಿರ್ದೇಶಕರು ಇಂದು ಯಶಸ್ಸನ್ನು ಕಂಡಿದ್ದಾರೆ. ಅವರಲ್ಲಿ  ಕೆ.ಎಂ.ಚೈತನ್ಯ ಅವರು ಕೂಡ ಒಬ್ಬರು. ಅವರು ಇಲ್ಲಿಯವರೆಗೂ ಎಂಟು ಸಿನಿಮಾಗಳನ್ನು, ಈಟಿವಿಯಲ್ಲಿ ‘ಕಿಚ್ಚು’ ಧಾರಾವಾಹಿಯನ್ನು, ಮತ್ತು ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಿಬಿಸಿ ಚಾನೆಲ್ ಗಾಗಿ ಸಾಕ್ಷ್ಯಚಿತ್ರವೊಂದನ್ನು ಮಾಡಿದ ಕನ್ನಡಿಗರು ಇವರು. ಯಕ್ಷಗಾನದ ಕುರಿತಾದ ಸಾಕ್ಷ್ಯಚಿತ್ರವನ್ನು ರೂಪಿಸಿ,ನಮ್ಮ ಕಲೆಗೆ ಇನ್ನಷ್ಟು ಮೆರುಗನ್ನು ತಂದು ಕೊಟ್ಟವರು. ಚೈತನ್ಯ ಅವರ ಹೆಸರೇ ಹೇಳುವಂತೆ ಅವರ ಕೆಲಸದಲ್ಲಿ ಒಂದು ಹುರೂಪಿದೆ, ಚೈತನ್ಯವಿದೆ, ವಿಭಿನ್ನತೆಯಿದೆ. ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಅವರು ಸದಾ ಮುಂದಾಗಿರುತ್ತಾರೆ.

3a

ಫೋಟೋ ಕೃಪೆ : Deccan Hearld

ಹೈದರಾಬಾದನ ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮೊದಲು ಅವರು ಅಂದುಕೊಂಡು ಹೊರಟ್ಟದ್ದು ಪತ್ರಕರ್ತನಾಗಬೇಕೆಂದು. ಆದರೆ ಅವರ ಮನೆಯೇ ಸಾಹಿತ್ಯಲೋಕವೇ ಯಾದ್ದರಿಂದ ಅವರನ್ನು ನಾಟಕದ ಕಡೆ ಎಳೆದು ಕೂರಿಸಿತು. ಎಷ್ಟೋ ಜನರಿಗೆ ತಿಳಿದಿರುವ ಹಾಗೆ ಚೈತನ್ಯ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗ ಹಾಗು ಖ್ಯಾತ ನಾಟಕ ವಿಮರ್ಶನಾಕಾರ ಡಾ. ಕೆ.ಮರುಳ ಸಿದ್ದಪ್ಪನವರ ಮಗ.

3

ಜ್ಞಾನಪೀಠ ಪುರಸ್ಕೃತರಾದ ಗಿರೀಶ ಕಾರ್ನಾಡ್ ಅವರು ಹಾಗು ಚೈತನ್ಯ ಅವರ ತಂದೆಯೊಂದಿಗೆ ಒಳ್ಳೆಯ ಒಡನಾಟವಿದ್ದಿದ್ದರಿಂದ ಚೈತನ್ಯ ಅವರಿಗೆ ದೃಶ್ಯ ಮಾಧ್ಯಮವನ್ನು ಪ್ರವೇಶಿಸಲು ಕಷ್ಟವಾಗಲಿಲ್ಲ. ಕಾರ್ನಾಡ ಅವರು ‘ಅಂತರಾಳ’ ಎನ್ನುವ ಹಿಂದಿ ಧಾರವಾಹಿ ನಿರ್ದೇಶನ ಮಾಡುವಾಗ ಚೈತನ್ಯ ಅವರನ್ನು ಸಹನಿರ್ದೇಶಕರನ್ನಾಗಿ ತಮ್ಮ ಜೊತೆಯಲ್ಲೇ ಇರಿಸಿಕೊಂಡರು. ಹೀಗೆ ಶುರುವಾದ ಕಾರ್ನಾಡ ಅವರೊಂದಿಗಿನ ಪಯಣದಲ್ಲಿ ಚೈತನ್ಯ ಅವರು ಸಾಕಷ್ಟು ವಿಷಯಗಳನ್ನು ಅವರಿಂದ ಕಲಿತರು.

ಅದರಲ್ಲಿಯೂ ಕಾರ್ನಾಡ ಅವರ ನಿರ್ದೇಶನದ ಕುವೆಂಪು ರಚನೆಯ ‘ಕಾನೂರು ಹೆಗ್ಗಡತಿ’ ಧಾರಾವಾಹಿಯ ಕೆಲವು ಸಂಚಿಕೆಗಳನ್ನು ಸ್ವತಂತ್ರವಾಗಿ ನಿರ್ದೇಶಿಸಲು ಚೈತನ್ಯವರಿಗೆ ಕಾರ್ನಾಡ ಅವರು ಅವಕಾಶವನ್ನು ನೀಡಿದ್ದು, ಅವರ ಬದುಕಿನಲ್ಲಿ ಒಂದು ಹೊಸ ತಿರುವನೇ ತಂದಿತು. ಆಗ ಚೈತ್ಯನವರ ವಯಸ್ಸು ಕೇವಲ ೨೨ ವರ್ಷ. ಕಿರಿ ವಯಸ್ಸಿನಲ್ಲಿಯೇ ದೊಡ್ಡ ಅನುಭವದೊಂದಿಗೆ ಶುರುವಾದ ಅವರ ಚಿತ್ರಲೋಕದ ಪಯಣ ಮುಂದೆ ಬಿಡುವಿಲ್ಲದಷ್ಟು ಒಂದಾದ ಮೇಲೊಂದರಂತೆ ನಾಟಕ, ಸಾಕ್ಷ್ಯಚಿತ್ರ, ಕಿರುತೆರೆ, ಸಿನಿಮಾಗಳ ನಿರ್ದೇಶನಗಳಲ್ಲಿ ತೊಡಗಿಸಿಕೊಂಡರು. ಸಿಕ್ಕ ಅವಕಾಶವನ್ನು ಸದುಪಯೋಗಿಸಿಕೊಂಡು ಇಂದು ಯಶಸ್ವೀ ನಿರ್ದೇಶಕರಾಗಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.

3a

ಅವರ ನಿರ್ದೇಶನದ ‘ ಆ ದಿನಗಳು ‘ ಭೂಗತ ಲೋಕದ ಕಥಾ ಕಂದರವನ್ನಿಟ್ಟುಕೊಂಡು ಮಾಡಿದ ಚಿತ್ರವಾದರೆ, ‘ಆಕೆ’ ಭಯ ಹುಟ್ಟಿಸುವ ಕಥೆಯುಳ್ಳ ಚಿತ್ರ, ‘ಆದ್ಯ’ ಕುತೂಹಲ ಹಾಗು ಪತ್ತೆಧಾರಿ ಆಧಾರಿತ ಸಿನಿಮಾ ಹೀಗೆ ಅವರ ನಿರ್ದೇಶನವು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಚೈತನ್ಯ ಅವರ ನಿರ್ದೇಶನದ ಚಿತ್ರ ಎಂದಾಗ ನೋಡುಗರಲ್ಲಿ ಸಹಜವಾಗಿಯೇ ಒಂದು ರೀತಿಯ ಕುತೂಹಲವನ್ನು ಕೆರಳಿಸುತ್ತದೆ. ಮತ್ತು ಅವರ ಸಿನಿಮಾಗಳಲ್ಲಿ ಅನಂತನಾಗ್, ಶರತ್ ಲೋಹಿತಾಶ್ವ, ಚಿರಂಜೀವಿ ಸರ್ಜಾ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಕಾಣಬಹುದು. ಚಿರಂಜೀವಿ ಸರ್ಜಾ ಅವರ ನಾಲ್ಕು ಸಿನಿಮಾಗಳಿಗೆ ನಿರ್ದೇಶನವನ್ನು ಮಾಡಿದ್ದರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವು ಬೆಳೆದಿತ್ತು ಎನ್ನುವುದು ಎಲ್ಲರಿಗು ತಿಳಿದ ವಿಚಾರ. ಮತ್ತು ಮೊದಲ ಬಾರಿಗೆ ಉಮಾಶ್ರೀ ಅವರನ್ನು ಕಿರುತೆರೆಯಲ್ಲಿ ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸಿಕೊಟ್ಟ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

3a

ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರಲ್ಲಿನ ಸರಳತನದ ಬಗ್ಗೆ ಒಂದೆರಡು ಮಾತು ಹೇಳಲೇಬೇಕು.  ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಕೆಲಸ ಮಾಡುವ ಹಾಗು ಮಾಡಿಸಿಕೊಳ್ಳುವ ರೀತಿ ಮೆಚ್ಚಲೇಬೇಕು. ನಿರ್ದೇಶಕ ಎನ್ನುವ ದೊಡ್ಡ ಜವಾಬ್ದಾರಿ ಅವರ ತಲೆ ಮೇಲಿದ್ದರೂ ನಾನು ನಿರ್ದೇಶಕ ಅನ್ನುವ ಅಹಂ- ಬಿಮ್ಮುಗಳು ಅವರಲಿಲ್ಲ. ಸೆಟ್ ನಲ್ಲಿ ಕೂಗಾಡುವುದು, ಸಿಟ್ಟಾಗುವ ಆಸಾಮಿಯು ಅವರಲ್ಲ.ನಗು ನಗುತ್ತಲೇ ಎಲ್ಲರೊಂದಿಗೆ ಬೆರೆತು ಸುತ್ತಲಿನ ವಾತಾವರಣವನ್ನುಸಂತೋಷವಾಗಿಡುತ್ತಾರೆ. ಅವರಲ್ಲಿನ ಸರಳ ನಡೆ -ನುಡಿ ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ ಎನ್ನಬಹುದು. ಅವರ ಸಂದರ್ಶನಗಳಲ್ಲೂ ಅಷ್ಟೇ ತಮ್ಮ ಸುತ್ತ ಕೆಲಸ ಮಾಡಿದ ಕಲಾವಿದರ, ತಂತ್ರಜ್ಞರ ಕೆಲಸವನ್ನು ಸ್ಮರಿಸಿಕೊಳ್ಳುವುದು ಮರೆಯುವುದಿಲ್ಲ. ತಾವು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣ ಅವರಲ್ಲಿದೆ.

ಈಗ ‘ಆಕೃತಿ’ ಎನ್ನುವ ಧಾರವಾಹಿ ಉದಯವಾಹಿನಿಯಲ್ಲಿ ಪ್ರಸಾರವಾಗಲು ಸಿದ್ದವಾಗಿದ್ದು,ಅದರ ನಿರ್ದೇಶನವನ್ನು ಎಂ ಕುಮಾರ್ ವಹಿಸಿಕೊಂಡಿದ್ದಾರೆ. ಚೈತನ್ಯ ಹಾಗು ಹರಿದೋಸ್ ಕೆಜಿಎಫ್ ಅವರು ಧಾರಾವಾಹಿಯ ನಿರ್ಮಾಪಕರಾಗಿದ್ದಾರೆ. ಪ್ರೊಮೊ ನಿರ್ದೇಶನದ ಉಸ್ತುವಾರಿಯನ್ನು ಚೈತನ್ಯವರು ವಹಿಸಿಕೊಂಡಿದ್ದಾರೆ. ಒಟ್ಟಾರೆ ಆಕೃತಿ ಕಿರುತೆರೆಯಲ್ಲಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಆಕೃತಿ ಧಾರವಾಹಿ ನಿರೀಕ್ಷೆಗಿಂತ ಹೆಚ್ಚು ಯಶಸ್ಸು ಸಾಧಿಸಲಿ ಎಂದೂ ಚೈತನ್ಯ ಅವರಿಗೂ ಹಾಗು ಅವರ ತಂಡಕ್ಕೂಆಕೃತಿ ಕನ್ನಡ ಶುಭ ಕೋರುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

bf2fb3_c5eaf523bb1e481493169ef2aac381a9~mv2.jpg

 

0 0 votes
Article Rating

Leave a Reply

2 Comments
Inline Feedbacks
View all comments
ಪ್ರಭಾಕರ ತಾಮ್ರಗೌರಿ

” ಆಕೃತಿ ” ಹೆಸರು ಕೇಳಲೇ ಚೆಂದ .ಈಗ ಅದೇ ಹೆಸರಿನಲ್ಲಿ ಚೈತನ್ಯರವರು ಧಾರಾವಾಹಿ ಮಾಡುತ್ತಿರುವುದು ಸಂತಸದ ವಿಷಯ . ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಹಾಗೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಸಿಗಲಿ ಎಂದು ಹೃತ್ಪೂರ್ವಕ ವಾಗಿ ಶುಭ ಕೋರುತ್ತೇನೆ .

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

2
0
Would love your thoughts, please comment.x
()
x
Aakruti Kannada

FREE
VIEW