ಇದೊಂದು ಮಲೆನಾಡಿನ ಭಾಗಗಳಲ್ಲಿ ಮಾಡುವ ವಿಶಿಷ್ಠ ಅಡುಗೆಗಳಲ್ಲಿ ಒಂದು. ಮಳೆಗಾಲದಲ್ಲಿ ಮಲೆನಾಡಿನ ಜನರು ಪೇಟೆ ತರಕಾರಿಗಳನ್ನು ಕಡಿಮೆ ಮಾಡಿ ಅಲ್ಲಲ್ಲೇ ಬೆಳೆಯುವ ಸೊಪ್ಪು ಸದೆ, ನಾನಾ ತರಹದ ಕುಡಿಗಳು, ಹಲಸು, ಮಾವು, ಕೆಸುವಿನ ಸೊಪ್ಪು ಇಂಥವುಗಳನೆಲ್ಲ ಉಪಯೋಗಿಸಿ ನಾನಾ ಖಾದ್ಯಗಳನ್ನು ಭಕ್ಷಗಳನ್ನು ಮಾಡಿ ಸೇವಿಸಿ ಆನಂದಿಸುವರು. ಅದರಲ್ಲಿ ಈ ಕೆಸುವಿನ ಗಡ್ಡೆಯ ಸಾಸಿಮೆಯೂ ಒಂದು.
ತಯಾರಿಸಲು ಬೇಕಾಗುವ ಸಾಮಗ್ರಿ
- ಕೆಸುವಿನ ಗಡ್ಡೆ- ೮ ರಿಂದ ೧೦
- ತೆಂಗಿನ ತುರಿ – ೧ ಲೋಟ
- ಹಸಿಮೆಣಸು – ೨ ಅಥವಾ ೩
- ಸಾಸಿವೆ – ೧ ಟೀ ಚಮಚ
- ಅರಿಶಿಣ – ೧ ಟೀ ಚಮಚ
- ಮೊಸರು- ೧ ಸೌಟು
- ಉಪ್ಪು- ರುಚಿಗೆ ತಕ್ಕಷ್ಟು
ಒಗ್ಗರಣೆಗೆ
- ಕೊಬ್ಬರಿ ಎಣ್ಣೆ- ೨ ಚಮಚ
- ಸಾಸಿವೆ – ೨ ಚಮಚ
- ಕೆಂಪು ಮೆಣಸು – ಒಂದು
ಮಾಡುವ ವಿಧಾನ :
ಮೊದಲಿಗೆ ಗಡ್ಡೆಯ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ ಆಮೇಲೆ ನೀರು ಹಾಕಿ ಸ್ವಚ್ಛವಾಗಿ ತೊಳೆಯಬೇಕು.(ಮೊದಲಿಗೇ ನೀರು ತಾಕಿಸಿದರೆ ಸಿಪ್ಪೆ ತೆಗೆಯಲು ಮತ್ತು ಹೆಚ್ಚಲು ಕಷ್ಟವಾಗುವುದು)
ಬಾಣಲೆಯಲ್ಲಿ ಬೇಯುವಷ್ಟು ನೀರು ಮತ್ತು ಚಿಟಿಕೆ ಉಪ್ಪು ಸೇರಿಸಿ ಮೆತ್ತಗೆ ಬೇಯಿಸಬೇಕು. ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಮಿಕ್ಸಿಗೆ ತೆಂಗಿನತುರಿ, ಅರಿಶಿಣ, ಸಾಸಿವೆ, ಹಶಿಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಆರಿದ ಬಾಣಲೆಗೆ ಈ ಮಿಶ್ರಣವನ್ನು ಸೇರಿಸಬೇಕು.
ಇದಕ್ಕೆ ಸಾಸಿವೆ ಕೆಂಪಮೆಣಸಿನ ಕಾಯಿ ಒಗ್ಗರಣೆ ಹಾಕಿ ಒಂದು ಸೌಟು ಮೊಸರನ್ನು ಹಾಕಿ ರುಚಿಗೆ ಉಪ್ಪು ಸೇರಿಸಿ ಕಲಸಬೇಕು. ಬಿಸಿಯ ಅನ್ನಕ್ಕೆ ಹಾಕಿ ಸವಿಯಬೇಕು.
ಇದು ಒಳ್ಳೆಯ ರುಚಿ ಕೊಡುವ ಈರುಳ್ಳಿ ಬೆಳ್ಳುಳ್ಳಿ ಗರಂಮಸಾಲೆ ಏನೂ ಬೆರೆಸದ ಬಹಳ ಸರಳ ಅಡುಗೆಗಳಲ್ಲಿ ಒಂದು.
ಮಧ್ಯಾಹ್ನದ ಒಂದು ಹೊತ್ತಿಗೆ ಮಾತ್ರ ಬಳಸಿದರೆ ಒಳ್ಳೆಯದು. ಆಮೇಲೆ ಅದರ ರುಚಿಯಲ್ಲಿ ಬದಲಾವಣೆ ಆಗುವುದು. ಫ್ರಿಜ್ ಲ್ಲೂ ಕೂಡ ಇಡದೇ ಇರುವುದು ಸೂಕ್ತ.
- ವಾಣಿ ಜೋಶಿ