ಡೈಮೆಂಡ್ ಡೈರೆಕ್ಟರ್ ಎಚ್. ಆರ್. ಭಾರ್ಗವ

ನನ್ನ ಹಿಂದಿನ ಲೇಖನದಲ್ಲಿ ಸುನೀಲ್ ಕುಮಾರ್ ದೇಸಾಯಿರವರ ಬಗ್ಗೆ ಬರೆಯುವಾಗ ನಾನು, ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿಯೆ ದಾಖಲೆ ಬರೆದಂತಹ ನಿರ್ದೇಶಕರು ನಾಯಕ ನಟರು ಬಹಳಷ್ಟು ಮಂದಿ ಇದ್ದಾರೆಂದು ಹೇಳಿದ್ದೆ.

ಇವತ್ತು ಅಂತಹವರಲ್ಲೊಬ್ಬರಾದಂತಹ ಕನ್ನಡ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕರಾದ ನಮ್ಮ ಎಚ್. ಆರ್. ಭಾರ್ಗವ (ಹುಣಸೂರು ರಾಮಚಂದ್ರ ಭಾಗ್ಯಚಂದ್ರ ಅವರ ಮೂಲ ಹೆಸರು) ರವರ ಬಗ್ಗೆ ಬರೆಯುತ್ತಿದ್ದೇನೆ. ಭಾರ್ಗವ ಈ ಹೆಸರನ್ನು ನಮ್ಮ ಚಿತ್ರರಂಗದಲ್ಲಿ ಬಹಳಷ್ಟು ಜನ ಕೇಳಿರ್ತಾರೆ. ಆದರೆ ಅವರು ಯಾರೆಂಬುದು ಕೆಲವರಷ್ಟೆ ಗೊತ್ತು. ಸಾಮಾಜಿಕ ಮೌಲ್ಯಗಳನ್ನು, ಬಡವರ ಜನ-ಜೀವನವನ್ನು ಪರದೆ ಮೇಲೆ ಅಚ್ಚು-ಕಟ್ಟಾಗಿ ತೋರಿಸಿದಂತಹ ಭಾರ್ಗವರವರು ನಿಜಾವಾಗಲೂ ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತ್ಯುನ್ನತ ನಿರ್ದೇಶಕರು “ಡೈಮೆಂಡ್ ಡೈರೆಕ್ಟರ್”. ಅವರು ಸ್ವತಂತ್ರವಾಗಿ ನಿರ್ದೇಶಿಸಿದ್ದು ನಮ್ಮ ಕನ್ನಡದಲ್ಲಿ ೫೦ ಚಿತ್ರಗಳು. ಆ ಐವತ್ತು ಚಿತ್ರಗಳು ಸಹ ಇವತ್ತಿಗೂ ಕನ್ನಡಿಗರ ಮನದಲ್ಲಿ ‘ಸೂಪರ್ ಹಿಟ್’ ಚಿತ್ರಗಳೆ, ಜನ-ಮನದಲ್ಲಿ ಮರೆಯಲಾಗದಂತಹ ಚಿತ್ರಗಳೆ. ಅಂತಹ ಅಪರೂಪದ ನಿರ್ದೇಶಕರು ನಮ್ಮ ಎಚ್. ಆರ್. ಭಾರ್ಗವರವರು.

hunsur-krishnamurthi

ಭಾವಚಿತ್ರ  ಹುಣಸೂರು ಕೃಷ್ಣಮೂರ್ತಿ.  ಫೋಟೋ ಕೃಪೆ : celebrity borm  

ಮೂಲತಃ ಭಾರ್ಗವರವರು ಮೈಸೂರಿನ ಹುಣಸೂರಿನವರು. ಖ್ಯಾತ ಸಾಹಿತಿಗಳು ನಿರ್ದೇಶಕರಾದಂತಹ “ಹುಣಸೂರು ಕೃಷ್ಣಮೂರ್ತಿ” ಯವರ ಅಣ್ಣನ ಮಗ ಹಾಗೂ ನಟ, ನಿರ್ದೇಶಕ, ನಿರ್ಮಾಪಕರಾದಂತಹ ದ್ವಾರಕೀಶ್ ರವರ ಸೋದರ ಮಾವನ ಮಗ, ದ್ವಾರಕೀಶ್ ರವರ ತಂಗಿಯ ಗಂಡ ಕೂಡ ಹೌದು. ಕನ್ನಡದ ಶ್ರೇಷ್ಠ ನಿರ್ದೇಶಕ ದಿಗ್ಗಜರಾದಂತಹ ಸಿದ್ದಲಿಂಗಯ್ಯ, ಹುಣಸೂರು ಕೃಷ್ಣಮೂರ್ತಿ, ಗೀತಪ್ರಿಯ ಮುಂತಾದವರೊಡನೆ ಸಹಾಯಕರಾಗಿ ಕೆಲಸವನ್ನು ಮಾಡಿ ಮುಂದೆ ಡಾ.ರಾಜ್ ಕುಮಾರ್ ರವರ “ಭಾಗ್ಯವಂತರು” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಾರೆ. ಮೊದಲ ಚಿತ್ರವೇ ರಜತ ಮಹೋತ್ಸವನ್ನು ಆಚರಿಸಿರುವುದು ಇವತ್ತಿಗೂ ಆ ಚಿತ್ರದ ಹೆಸರನ್ನು ಕೇಳಿದಾಗ ನಮಗೆ ಗೊತ್ತಾಗುತ್ತದೆ.

ಭಾಗ್ಯವಂತರು ಚಿತ್ರದಿಂದ ಗಂಡುಗಲಿ ಕುಮಾರರಾಮ ಅವರ ಸ್ವತಂತ್ರ ನಿರ್ದೇಶನದ 50ನೇ ಚಿತ್ರವಾಗಿದೆ. ‘ಸಾಹಸ ಸಿಂಹ ವಿಷ್ಣವರ್ಧನ್’ ರವರಿಗೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಕೂಡ ಇಂದಿಗೂ ಜನ-ಮನದಲ್ಲಿ ನಮ್ಮ “ ವಿಷ್ಣುದಾದ ” ರನ್ನು ನೆನಪಿಸುವಂತಹ ಚಿತ್ರಗಳೆ. ಉದಾ: ಜೀವನ ಚಕ್ರ, ಜನ ನಾಯಕ, ಕರುಣಾಮಯಿ, ಕರ್ಣ, ನಮ್ಮೂರ ರಾಜ, ಬಂಗಾರದ ಕಳಶ, ಹೃದಯ ಗೀತೆ ಹೀಗೆ ಸಾಲು-ಸಾಲು ಚಿತ್ರಗಳನ್ನು ನಾವು ನೋಡಬಹುದು.

amma

ಫೋಟೋ ಕೃಪೆ : deccan herald

ಅವರ ನಿರ್ದೇಶನದಲ್ಲಿ ಬಂದಿರುವಂತಹ ‘ ಕಾದಂಬರಿ ಆಧಾರಿತ ಚಿತ್ರಗಳಾಗಲಿ, ರಿಮೇಕ್ ಚಿತ್ರಗಳಾಗಲಿ ಇಲ್ಲವೆ, ಅವರ ಸ್ವಂತ ನಿರ್ಮಾಣದ ಚಿತ್ರಗಳಾಗಲಿ ಬರೀ ಮನರಂಜನೆಗಷ್ಟೇ ಸೀಮಿತವಾಗಿರಲಿಲ್ಲ. ಅದರ ಜೊತೆಗೆ ಸಮಾಜದಲ್ಲಿನ ನೈಜತೆಯನ್ನು ಬಿಂಬಿಸುವಂತಹ ಚಿತ್ರಗಳಾಗಿದ್ದವು. ಎಲ್ಲವೂ ಯಶಸ್ವಿ ಚಿತ್ರಗಳೇ. ಬೇಕಾದರೆ ಎಚ್. ಆರ್. ಭಾರ್ಗವ ಕನ್ನಡ ಮೂವೀಸ್ ಚಿತ್ರಲೋಕ ಗೂಗಲ್ ನಲ್ಲಿ ‘ ಸರ್ಚ್ ’ ಮಾಡಿದಾಗ ಚಿತ್ರಗಳ ಹೆಸರನ್ನು ನೋಡಿದ ಕೂಡಲೇ ನಮಗೆ ಗೊತ್ತಾಗುತ್ತದೆ. ಇವತ್ತಿಗೂ ಜನಗಳು ಅವರ ಚಿತ್ರಗಳನ್ನು ಎಷ್ಟು ಇಷ್ಟಪಡುತ್ತಿದ್ದಾರೆಂದು. ಹಾಗೆಯೇ ಇಪ್ಪತ್ತು ವರ್ಷಗಳ ನಂತರ ಅವರ ಕೆಲವು ಚಿತ್ರಗಳು ಮರು ಬಿಡುಗಡೆಯಾಗಿರುವುದನ್ನು ನೋಡಬಹುದು. ಅವರಿಗೆ ೨೦೧೨ ರಲ್ಲಿ ಕನ್ನಡ ಚಿತ್ರರಂಗದ ಅತ್ಯುತ್ತಮ ಪ್ರಶಸ್ತಿಗಳಲ್ಲೊಂದಾದ “ ಪುಟ್ಟಣ್ಣ ಕಣಗಾಲ್ ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಮುಖ್ಯವಾಗಿ ಅವರ ಚಿತ್ರಗಳು ಅತೀ ಹೆಚ್ಚು ಯಶಸ್ವಿಯಾಗಿರುವುದನ್ನು ನಾವು ಗಮನಿಸಿದಾಗ, ಅವರು ಕಥೆಯ ಆಯ್ಕೆಯಲ್ಲಿ ಮತ್ತು ಪ್ರೇಕ್ಷಕನಿಗೆ ಚಿತ್ರವನ್ನು ತೋರಿಸುವ ರೀತಿಯಲ್ಲಿ ಎಷ್ಟು ಚುರುಕುತನದ, ಜವಬ್ದಾರಿಯುತ ನಿರ್ದೇಶಕರಾಗಿದ್ದರು ಎನ್ನುವುದು ತಿಳಿಯುತ್ತದೆ.

ಬಹುಶಃ ಅದಕ್ಕೆ ಇರಬಹುದು ಭಾರ್ಗವರವರ ಚಿತ್ರವೆಂದರೆ ‘ವಿಷ್ಣುವರ್ಧನ್’ ರವರು ಕಥೆ ಕೇಳುವ ಮೊದಲೇ ಡೇಟ್ ಕೊಟ್ಟು ಬಿಡುತ್ತಿದ್ದರಂತೆ. ಅವರಿಬ್ಬರ ಸ್ನೇಹ ಕೂಡ ಅಷ್ಟು ನಂಬಿಕೆಗೆ ಅರ್ಹವಾಗಿತ್ತು ಎನ್ನುವುದನ್ನು ಭಾರ್ಗವರವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಇವತ್ತು“ವಿಷ್ಣುಸರ್ ” ನಮ್ಮೊಂದಿಗೆ ಇದ್ದಿದ್ದರೆ ಅವರಿಬ್ಬರ ಜೋಡಿ ಮತ್ತಷ್ಟು ಒಳ್ಳೇಯ, ಬಡವರ, ಮಧ್ಯಮ ವರ್ಗದ ಜನ-ಜೀವನದ ಕಥೆ-ವ್ಯಥೆಗಳನ್ನು ಪರದೆ ಮೇಲೆ ಸಮಾಜಕ್ಕೆ ತೋರಿಸುತ್ತಿದ್ದರು.

amma

ಫೋಟೋ ಕೃಪೆ : you tube

ಆದರೆ ಈಗ ಭಾರ್ಗವರವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಟಿ.ವಿಯಲ್ಲಿ ಆವಾಗಾವಾಗ ಯಾವುದಾದರೂ ಕಾರ್ಯಕ್ರಮಗಳಲ್ಲಿ, ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ನನಗೆ ಅವರ ಸಂದರ್ಶನ ನೋಡಲು ತುಂಬಾ ಖುಷಿ ಕೊಡುತ್ತದೆ. ಬಹಳ ಸರಳ ಸಜ್ಜನ ಹಾಗೂ ಶಿಸ್ತಿನ ವ್ಯಕ್ತಿತ್ವ. ಅವರ ತೂಕದ ಮಾತುಗಳು, ಸ್ಪಷ್ಟ ಕನ್ನಡ ಶಬ್ಧಗಳ ಉಚ್ಚಾರಣೆ ತುಂಬಾ ಇಷ್ಟವಾಗುತ್ತದೆ. ಅವರು ಬೆಳ್ಳಿತೆರೆಯಿಂದ ದೂರವಿರಬಹುದು. ಆದರೆ ಅವರ ಚಿತ್ರಗಳ ಮೂಲಕ ಜನ-ಮನದಲ್ಲಿ ಹತ್ತಿರವಿದ್ದಾರೆ. ಇವತ್ತಿನ ಎಷ್ಟೋ ನಿರ್ದೇಶಕರುಗಳಿಗೆ ಸ್ಫೂರ್ತಿ ಅವರ ಚಿತ್ರಗಳು. ನಿಜಾವಾಗಲೂ ಭಾರ್ಗವರವರ ಚಿತ್ರಗಳು ಈವತ್ತಿಗೂ ಹೊಂದಿಕೊಳ್ಳುವ ಚಿತ್ರಗಳೇ ನೋಡಿದಾಗ ತಿಳಿಯುತ್ತದೆ.

ನಮ್ಮ ಶಂಕ್ರಣ್ಣರವರೊಂದಿಗೆ ಮಾಡಿದಂತಹ ವಜ್ರಮುಷ್ಟಿ, ಹೊಸಜೀವನ ಹಾಗೂ ಬಹುತಾರಗಣದ ‘ಒಂದೇ ಗುರಿ’ ಯಂತಯ ಆ್ಯಕ್ಷನ್ ಚಿತ್ರಗಳಲ್ಲಿ ಆವತ್ತೇ ಕತ್ತಿ, ಮಚ್ಚು, ಲಾಂಗ್ ಗಳನ್ನು ತೋರಿಸಿದಂತಹವರು ಹಾಗೂ ಸುಧಾರಾಣಿ, ಎಸ್.ನಾರಾಯಣ್, ಫಣಿ ರಾಮಚಂದ್ರ, ಉದಯ್, ಕೆ.ಬಿ ಹಿರೇಮಠ್ ರಂತಹ ಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದಂತಹ ಮಹಾನಿರ್ದೇಶಕರು ನಮ್ಮ ಭಾರ್ಗವ ಅವರು.

ಅವರಿಗೆ ದೇವರು ಮತ್ತಷ್ಟು ‘ಕಲಾಸೇವೆ’ ಮಾಡಲು ಅವಕಾಶವನ್ನು ಕೊಡಲಿ. ಒಳ್ಳೇಯ ಕಥೆಯೊಂದಿಗೆ ಮತ್ತೆ ಅವರು ನಿರ್ದೇಶನಕ್ಕೆ ಬರಬೇಕೆನ್ನುವುದೇ ಅಭಿಮಾನಿಗಳ ಆಶಯವಾಗಿದೆ.

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com  ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು.)

ಲೇಖನ : ನಾಗರಾಜ್ ಲೇಖನ್
ಹರಡಸೆ, ಹೊನ್ನಾವರ.

amma

ನಾಗರಾಜ್ ಲೇಖನ್ ಅವರ ಹಿಂದಿನ ಬರಹ : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW