ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿ ಇವು ಹೆಣ್ಣನ್ನು ಬಿಡದ ಕೊಂಡಿಗಳು. ಅವುಗಳಲ್ಲಿ ಒಂದು ಕೊಂಡಿ ಕಳುಚಿಕೊಂಡರೂ ಸಮಾಜದ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಎಲ್ಲವು ಸಮಯಕ್ಕೆ ಸರಿಯಾಗಿ ನಡೆಯುತ್ತಿರಬೇಕು. ಕಿರಣ್ ಡೆಂಬಲಾ ಜೀವನವು ಕಾಲಕ್ಕೆ ತಕ್ಕಂತೆ ೧೯೯೭ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಯುವಕನೊಂದಿಗೆ ಮದುವೆ, ಮದುವೆಯಾದ ಮೇಲೆ ಹೈದರಾಬಾದ್ ನಲ್ಲಿ ನೆಲೆ, ನಾಲ್ಕು ವರ್ಷದೊಳಗೆ ಮುದ್ದಾದ ಎರಡು ಮಕ್ಕಳಾದವು. ಕಿರಣ್ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ. ಎಲ್ಲವೂ ಕಾಲಕ್ಕೆ ತಕ್ಕಂತೆ ಸಮವಾಗಿ ನಡೆಯುತ್ತಿತ್ತು.
ಆಕೆಯ ಪ್ರಪಂಚದಲ್ಲಿ ಗಂಡ- ಮಕ್ಕಳು ಮತ್ತು ನಾಲ್ಕು ಗೋಡೆಯ ಮಧ್ಯೆ ಅಪ್ಪಟ ಗೃಹಿಣಿಯಾಗಿದ್ದಳು . ಆ ಸುಂದರ ಕ್ಷಣಗಳು ಕಿರಣ ಅವರ ಬಾಳಿನಲ್ಲಿ ಶಾಶ್ವತವಾಗಿರಲಿಲ್ಲ. ಆಕೆಯ ಸಂಸಾರದಲ್ಲಿ ಹುಳಿ ಹಿಂಡಿದ್ದು ಆಕೆಯ ಅನಾರೋಗ್ಯ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತು. ಗಂಡ – ಹೆಂಡತಿಗೆ ಅದು ಬರ ಸಿಡಿಲು ಬಂಡಿದಂತಾಯಿತು. ಡಾಕ್ಟರ್ ನೀಡುತಿದ್ದ ಚಿಕಿತ್ಸೆ, ಔಷಧಿಗಳಿಂದ ಆಕೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾದವು.
ಕನ್ನಡಿಯ ಮುಂದೆ ನಿಂತು ಕಿರಣ, ತನ್ನನ್ನು ತಾನೊಮ್ಮೆ ನೋಡಿಕೊಂಡಾಗ ಕಣ್ಣು ತುಂಬಿಹೋದವು. ಅತಿಯಾದ ಬೊಜ್ಜು ದೇಹವನ್ನೆಲ್ಲ ಅವರಿಸಿಬಿಟ್ಟಿತ್ತು. ಸುಮಾರು ೭೦ ಕೆಜಿ ಯಷ್ಟು ತೂಕವೇರಿತು. ದೇಹದ ತೂಕದಿಂದ ಖಿನ್ನತೆ ಹೆಚ್ಚಾಯಿತು. ಆಗ ನೆನಪಿಗೆ ಬಂದದ್ದು ೨೮ ವರ್ಷ ಕಲಿತ ಸಂಗೀತ. ಸಂಗೀತದಲ್ಲಿ ತಲ್ಲೀನಳಾಗಲು ಪ್ರಯತ್ನಿಸಿದಳು. ಅದು ಸಾಧ್ಯವಾಗಲಿಲ್ಲ.
ಆಗ ಆಕೆಗೆ ಕೇವಲ ೩೨ ವರ್ಷ ವಯಸ್ಸು. ೨೦೦೭ರಲ್ಲಿ ನಿಧಾನವಾಗಿ ಮನೆಯಿಂದ ಹೊರಕ್ಕೆ ಕಾಲಿಡಲು ಶುರು ಮಾಡಿದಳು. ಒಬ್ಬ ಅಪ್ಪಟ ಗೃಹಿಣಿಗೆ ಒಬ್ಬಂಟಿಯಾಗಿ ಮನೆಯಿಂದ ಹೊರಕ್ಕೆ ಹೋಗುವುದು ತುಂಬಾನೇ ಕಷ್ಟ. ಕಿರಣ್ ಗೂ ಮೊದ ಮೊದಲು ಕಷ್ಟವಾಯಿತು. ನಿಧಾನವಾಗಿ ಅದಕ್ಕೆ ಒಗ್ಗಿಕೊಂಡಳು. ಅವಳಲ್ಲಿ ಧೈರ್ಯ,ಆತ್ಮವಿಶ್ವಾಸ ತುಂಬುತ್ತಾ ಹೋಯಿತು. ಯೋಗ, ಸ್ವಿಮ್ಮಿಂಗ್ ಕಲಿಕೆಯಲ್ಲಿ ತೊಡಗಿಸಿಕೊಂಡರು. ಸುಮಾರು ಆರ ರಿಂದ ಏಳು ತಿಂಗಳ ಕಾಲ ಸತತ ದೇಹವನ್ನು ಕಿರಣ ದಂಡಿಸಿದರು. ಅದರ ಫಲವಾಗಿ ಸುಮಾರು ೨೫ ಕೆಜಿಯಷ್ಟು ತೂಕವನ್ನು ಇಳಿಸಿದರು.
ಮನುಷ್ಯ ಆಸಕ್ತಿ ಮೂಡುವವರೆಗಷ್ಟೇ ಹಿಂದೇಟು ಹಾಕುವುದು. ಒಂದು ಸಾರಿ ಆಸಕ್ತಿ ಹುಟ್ಟಿಕೊಂಡರೆ ಯಾರಿಂದಲೂ ಹಿಡಿದ್ದದ್ದನ್ನು ಬಿಡಿಸಲು ಸಾಧ್ಯವಿಲ್ಲ. ಹಾಗೆಯೆ ಕಿರಣ ಅವರಿಗೂ ಒಂದೊಂದೇ ಆಸಕ್ತಿಗಳು ಹುಟ್ಟುತ್ತಾ ಹೋದವು. ಜಿಮ್ ಸೇರಿಕೊಂಡರು. ತದನಂತರ ಜಿಮ್ ತರಬೇತಿಯ ಕೋರ್ಸ್ ನ್ನು ಮುಗಿಸಿಕೊಂಡರು. ಮುಂದೆ ಹೈದರಾಬಾದ್ ನಲ್ಲಿ ಬೆಗುಂಪೆಟ್ ಯಲ್ಲಿ ೨೦೦೮ ರಂದು ತಮ್ಮದೇ ‘ಯಮ್ಮಿ ಮಮ್ಮಿ’ ಹೆಸರಿನಲ್ಲಿ ಜಿಮ್ ಕೇಂದ್ರವನ್ನು ತೆರೆದರು. ಟಾಲಿವುಡ್ ನ ಖ್ಯಾತ ನಟ-ನಟಿಯರಾದ ತಮ್ಮನ್ನಾ ಭಾಟಿಯಾ, ಪ್ರಭಾಸ್, ರಾಮ್ ಚರಣ್, ಅನುಷ್ಕಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರೆಟಿಗಳಿಗೆ ಜಿಮ್ ತರಬೇತಿದಾರರಾದರು. ಪ್ರಭಾಸ್ ಅವರು ಕಿರಣ ಅವರನ್ನು ಪ್ರೀತಿಯಿಂದ ಸೂಪರ್ ಸ್ಟಾರ್ ಎಂದೇ ಕರೆಯುತ್ತಾರೆ.
ತಮ್ಮಗೆ ಕಾಡುತ್ತಿದ್ದ ಖಾಯಿಲೆಯಿಂದ ಹೊರ ಬಂದ ಮೇಲೆ ೨೦೧೨ ರಲ್ಲಿ ಸಿಕ್ಸ್ ಪ್ಯಾಕ್ ಮಾಡಲು ನಿರ್ಧಾರ ಮಾಡಿದರು. ಸಂಪ್ರದಾಯಸ್ಥ ಕುಟುಂಬವೆಂದ ಮೇಲೆ ಅಲ್ಲಿ ಆಡಿದ ಮಾತುಗಳಿಲ್ಲ. ಕೇಳಿದ ಲೇವಡಿಗಳಿರಲಿಲ್ಲ. ಆದರೆ ಅವರಲ್ಲಿ ಗುರಿ ಅಚಲವಾಗಿತ್ತು. ಸತತ ಎಂಟು ತಿಂಗಳ ಕಠಿಣ ಪರಿಶ್ರಮದಿಂದ ದೇಹವನ್ನು ನುರಿಮಾಡಿಕೊಂಡು ಸಿಕ್ಸ್ ಪ್ಯಾಕ್ ಮಾಡಿಯೇ ಬಿಟ್ಟರು.
೨೦೧೩ ರಲ್ಲಿ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ಷಿಪ್ ನಲ್ಲಿ ನೇರವಾಗಿ ಕಿರಣ ಆಯ್ಕೆಯಾದರು. ಬಿಕನಿ ಧರಿಸಬೇಕು ಎಂದಾಗ ಸಾಂಪ್ರದಾಯಿಕ ಕುಟುಂಬದ ಅವಹೇಳನಕಾರಿ ಮಾತುಗಳು ಬಂತು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಇನ್ನೇನು ಸ್ಪರ್ಧೆಗೆ ಹದಿನೈದು ದಿನವಿರುವಾಗ ಮನೆಯಲ್ಲಿ ಸಾವಿನ ಸೂತಕ ಎದುರಾಯಿತು. ಸೂತಕದಲ್ಲಿ ನೀರು ಕುಡಿಯುವ ಹಾಗಿಲ್ಲ. ಮಾಂಸ ತಿನ್ನುವ ಹಾಗಿಲ್ಲ. ನೋವಿನ ಮಧ್ಯೆ ಸ್ಪರ್ಧೆಗೆ ಸಜ್ಜಾಗಬೇಕು ಎನ್ನುವ ಕಠಿಣ ಪರಿಸ್ಥಿತಿಯಲ್ಲಿ ಕಿರಣ ಪರವಾಗಿ ನಿಂತದ್ದು ಅವರ ಗಂಡ. ಗಂಡನ ಬೆಂಬಲದಿಂದ ಎದುರಾದ ಕಷ್ಟವನ್ನೆಲ್ಲ ತುಳಿದು ಮುನ್ನುಗ್ಗಿದರು. ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ಷಿಪ್ ನಲ್ಲಿ ಆರನೇಯ ಸ್ಥಾನವನ್ನು ಗಿಟ್ಟಿಸಿಕೊಂಡಿದಷ್ಟೇ ಅಲ್ಲ, most beautiful body ಎನ್ನುವ ಟೈಟಲ್ ಕೂಡ ಗೆದ್ದರು.
ನಮ್ಮ ದೇಶದಲ್ಲಿ ಬಾಡಿ ಬಿಲ್ಡಿಂಗ್ ನ್ನು ಅದರಲ್ಲಿಯೂ ಹೆಣ್ಣುಮಕ್ಕಳು ಬಾಡಿ ಬಿಲ್ಡ್ ರ್ ಅಂದರೆ ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಆದರೆ ಹೊರ ದೇಶದಲ್ಲಿ ಬಾಡಿ ಬಿಲ್ಡಿಂಗ್ ನ್ನು ಒಂದು ಸ್ಪೋರ್ಟ್ಸ್ ರೀತಿಯಲ್ಲಿ ನೋಡುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ ಎಂದು ಕಿರಣ ಡೇಮ್ಬಲ ಬೇಸರದಲ್ಲಿ ಹೇಳುತ್ತಾರೆ.
ಈಗ ಕಿರಣ್ ಡೇಮ್ಬಲ ಅವರಿಗೆ ೪೫ ವರ್ಷ ವಯಸ್ಸು. ಅವರು ಕೇವಲ ಬಾಡಿ ಬಿಲ್ಡ್ ರ್ ಅಷ್ಟೇ ಅಲ್ಲ. ಫಿಟ್ನೆಸ್ ತರಬೇತಿದಾರರು, ಡಿಜೆ ಮತ್ತು ಪರ್ವತಾರೋಹಿ ಕೂಡ ಹೌದು.
( ಇನ್ನಷ್ಟು ಸ್ಫೂರ್ತಿ ನೀಡುವ ವ್ಯಕ್ತಿಗಳ ಪರಿಚಯವನ್ನು ನನ್ನ ಮುಂದಿನ ಲೇಖನಗಳಲ್ಲಿ ತರುವ ಪ್ರಯತ್ನವನ್ನು ಮಾಡುವೆ. ಓದಿ ಇಷ್ಟವಾದರೆ ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ. )
ಲೇಖನ : ಶಾಲಿನಿ ಹೂಲಿ ಪ್ರದೀಪ್
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಇತರೆ ಲೇಖನಗಳು :