ಹೊಸ ವರುಷಕ್ಕೊಂದು ಹೊಸ ಕವನದಂತೆ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಬರೆದಿರುವ ‘ದಿವಿಯ ಲೋಕ’ ಕವನವನ್ನು ತಪ್ಪದೆ ಓದಿ…
ಹೊಸತು ವರುಷ ಬುವಿಗೆ ಬರಲು
ಶಿಶಿರದಲ್ಲಿ ನಡುಗೊ ಚಳಿಗೆ
ಬಿಸಿಲ ಬೆಳಗು ಹಿತವ ನೀಡುತಿತ್ತುತನುವಿಗೆ
ಹಸಿರು ವನದ ಗುಡ್ಡಗಾಡು
ಹೊಸೆದ ಬಂಧ ಮಂಜು ಮೋಡ
ಬೆಸೆದು ಭೂಮಿ ಗಗನವನ್ನು ತೋಳ ತೆಕ್ಕೆಗೆ
ಧವಳ ಗಿರಿಯ ತೆರದೊಳವನಿ
ಭುವನದೊಳಗೆ ಮೆರೆಯುತಿರಲು
ಭವನವೊಂದು ಹರನ ಗುಡಿಯ ಕಲಶದಂತೆಯೆ
ಸವಿತೃ ದೇವನಿಳೆಯಲಿಳಿಯೆ
ಕವಿಯ ಕರವು ಕವನ ಬರೆಯೆ
ದಿವಿಜ ಲೋಕವಿಳಿಯುತಿಳೆಯ ಬೆಳಗಿದಂತೆಯೆ
ತರಣಿ ತೆರಳೆ ಪಿತರ ಲೋಕ
ಸರಣಿಯಂತೆ ಸೆಳೆಯುತೆಳೆದು
ಸರಳವಾಗಿ ಮೃತರ ಜೀವ ರಜದ ಕಣದೊಳು
ಮರಳಿ ಹುಟ್ಟು ಪಡೆಯಲೆಂದು
ಭರದಿ ಕಾರ್ಯ ಸಾಗುತಿಹುದು
ಗಿರಣಿಯಂತೆ ತಿರುಗಿ ಜನನ ಮರಣ ಜಗದೊಳು
- ಬಿಟ್ಟೀರ ಚೋಂದಮ್ಮ, ಬೆಂಗಳೂರು.
