ಕವಯತ್ರಿ ‘ಬಿಟ್ಟೀರೆ ಚೋಂದಮ್ಮ ಶಂಭು’ರವರ ಪರಿಚಯ

೬೫ ವರ್ಷದ ಕವಯತ್ರಿ ‘ಬಿಟ್ಟೀರೆ ಚೋಂದಮ್ಮ ಶಂಭು’ ಅವರು ಸಾವಿರಾರು ಕವನಗಳನ್ನ ರಚಿಸಿದ್ದಾರೆ, ಸಾಕಷ್ಟು ಯುವ ಕವಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರ ಕಿರು ಪರಿಚಯ ಆಕೃತಿಕನ್ನಡದಲ್ಲಿ ತಪ್ಪದೆ ಓದಿ…

ಕೊಡಗಿನ ಕಾವೇರಿಯ ತಟದ ಸುಂದರ ಪರಿಸರದಲ್ಲಿ, ಬೇಂಗುನಾಡಿನ ಬೇಂಗೂರು ಗ್ರಾಮದಲ್ಲಿ, ಶ್ರೀಯುತ ಕೂಡಕಂಡಿ ಪೂವಯ್ಯನವರ ಹಾಗು ಅಕ್ಕಮ್ಮ ದಂಪತಿಗಳ ದ್ವಿತೀಯ ಪುತ್ರಿಯಾಗಿ 1956ನೇ ಇಸವಿಯಲ್ಲಿ ಜನಿಸಿದರು.

ಇವರ ಪ್ರಾಥಮಿಕ ಶಿಕ್ಷಣ ನೆರೆಯ ಗ್ರಾಮದ ತನ್ನ ತಾಯಿಯ ಊರಿನ ಬಿ. ಬಾಡಗ ಶಾಲೆಯಲ್ಲಿ ಆಯಿತು. ಹೈಸ್ಕೂಲ್ ಹಾಗೂ ಪದವಿ ಪೂರ್ವ ಶಿಕ್ಷಣ ತಮ್ಮ ಗ್ರಾಮದ ಅರುಣ ಜೂನಿಯರ್ ಕಾಲೇಜು ಚೇರಂಬಾಣೆಯಲ್ಲಿ ಆಯಿತು. ಮೈಲುಗಟ್ಟಲೆ ಕಾಡು ದಾರಿಯಲ್ಲಿ ಸಾಗಿ ಶಾಲೆಗೆ ಹೋಗಬೇಕಾಗಿತ್ತು. ಮನೆಯಲ್ಲಿ ವಿದ್ಯೆಕಲಿಕೆಗೆ ಪ್ರೋತ್ಸಾಹವಿತ್ತು. ಮುಂದಿನ ವಿದ್ಯಾಭ್ಯಾಸಕ್ಕೆ ಮಡಿಕೇರಿಗೆ ಹೋಗಬೇಕಿತ್ತು. ಬರುವಾಗ ರಾತ್ರಿಯಾಗುವುದೆಂದು ಹೆದರಿ ತಂದೆ ತಾಯಿ ಕಳಿಸಲು ಹಿಂದೇಟು ಹಾಕಿದಾಗ ಇವರ ಕಲಿಕೆಯ ದಾಹಕ್ಕೆ ಮಣಿದು, ಹೈಸ್ಕೂಲ್ ಗುರುಗಳ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಸಂಜೆ ಕಾಲೇಜು ಆಚಾರ್ಯ ಪಾಠಶಾಲಾದಲ್ಲಾಯಿತು. ಮನೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಾದ ಕಾರಣ ಬಿ. ಎ. ಪದವಿ ಮುಗಿದ ತಕ್ಷಣ ಮದುವೆಯಾಯಿತು. ಅತ್ತಿಗೆ, ನಾದಿನಿ, ಮೈದುನ, ಬಾವನ ಮಗ, ತಂಗಿಯರು ಹೀಗೆ ತುಂಬಿದ ಸಂಸಾರ ನಿಭಾಯಿಸುವುದರಲ್ಲಿ ಹೈರಾಣಾಗಿ ತಮ್ಮ ಓದಿಗೆ ತಿಲಾಂಜಲಿಯಿತ್ತು ಸಂಸಾರದ ನೊಗಕ್ಕೆ ಹೆಗಲು ಕೊಡಲು ನಿರ್ಧರಿಸಿ, ತಮ್ಮ ಖಾಸಗಿ ಉದ್ಯೋಗ ಬಿಟ್ಟು ಸ್ವಂತ ಉದ್ಯೋಗ ಪ್ರಾರಂಬಿಸಿ ಜಯಗಳಿಸಿದರು. ಜೊತೆಗೆ ಅಲ್ಪಸ್ವಲ್ಪ ಕಂಪ್ಯೂಟರ್ ತರಬೇತಿ ಜೊತೆಗೆ ಹಲವು ಟ್ರೈನಿಂಗ್ ಗಳನ್ನು ಹವ್ಯಾಸಕ್ಕಾಗಿ ಮಾಡಿದರು. ಏತನ್ಮದ್ಯೆ ಸಂಸ್ಕೃತದಲ್ಲಿ ಕೋವಿದ ಪದವಿಯನ್ನೂ ಪಡೆದುಕೊಂಡರು. ತಮ್ಮ ಸಮುದಾಯದ ಪಾಕ್ಷಿಕ ಪತ್ರಿಕೆಯಾದ ಕೊಡಗು ಸಂಗಾತಿ ಯಲ್ಲಿ ನಿರಂತರ ಲೇಖನಗಳು, ಕವನಗಳು, ಭಕ್ತಿ ಗೀತೆಗಳು, ಮಕ್ಕಳ ಸಣ್ಣ ಕಥೆಗಳು, ಹಾಗು ಸನಾಥನ ಋಷಿ ಮುನಿಗಳ ಸಾಧನೆಗಳ ಬಗ್ಗೆ ತಿಳಿಸುವ ಅಂಕಣ ಬರಹ ಕೂಡ ಬರೆಯುತಿದ್ದರು. ಕಾರಣಾಂತರಗಳಿಂದ ಪತ್ರಿಕೆ ನಿಂತು ಹೋದಾಗ ಇವರ ಬರವಣಿಗೆಯೂ ನಿಂತಿತು.

ಕಳೆದ ನವೆಂಬರ್ ನಿಂದ ಹಲವು ಸಾಹಿತ್ಯ ಬಳಗಗಳಲ್ಲಿ ನಿರಂತರವಾಗಿ ಕವನಗಳು ಕಥೆಗಳು ಹಾಗು ಛಂದೋಬದ್ಧ ಹಲವು ಪ್ರಕಾರಗಳನ್ನು ಮಾತ್ರಾಗಣ, ಅಂಶಗಣ ಆಧಾರಿತ ಮುಕ್ತಕಗಳು, ಷಟ್ಪದಿಗಳು, ತ್ರಿಪದಿಗಳು,ದ್ವಿಪದಿಗಳು, ಅಕ್ಕರಿಕೆ, ಹಲವಿಧ ಅಕ್ಕರಗಳು, ಸಾಂಗತ್ಯ, ಏಳೆ, ಕಂದ ಪದ್ಯ, ರಗಳೆಗಳು, ಹಾಯ್ಕು, ಟಂಕಾ, ರುಬಾಯಿ, ಗಝಲ್,ವಚನಗಳು ಆದಿ ಅಂತ್ಯ ಪ್ರಾಸಗಳೊಂದಿಗೆ ಹೀಗೆ ಎಲ್ಲಾ ರೀತಿಯ ಸ್ಪರ್ಧೆ ಯಲ್ಲಿ ಭಾಗವಹಿಸಿ ಅತ್ಯುತ್ತಮ, ಉತ್ತಮ, ಮೆಚ್ಚುಗೆ ಯಾವುದಾದರೊಂದು ಪ್ರಶಸ್ತಿ ಇವರ ಪಾಲಿಗೆ ಬರುತ್ತಿದ್ದು, ಈಗ ನೂರಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವರು. ಹಲವು ಆನ್‌ಲೈನ್ ಸ್ಪರ್ಧೆಯಲ್ಲಿ, ಲೇಖನ ವಾಚನ, ಕವನ, ವಚನ ವಾಚನ, ಗಾಯನ ಭಾಗವಹಿಸಿ ಪ್ರಶಸ್ತಿ ಪ್ರಶಂಸೆ ಪಡೆದಿರುವರು. ಉತ್ತಮ ವಿಮರ್ಶಕಿ ಎಂದು ಗುರುತಿಸಿಕೊಂಡಿರುವರು.

65 ರ ವೃದ್ದಾಪ್ಯದಲ್ಲೂ ಕಲಿಯುವ ಕಲಿಸುವ ಬಯಕೆ ಅಪಾರವಾಗಿದೆ. ಯಾರೇ ಕೇಳಿದರೂ ನಿಷ್ಕಲ್ಮಶ ಮನದಿಂದ ಮನದಟ್ಟಾಗುವಂತೆ ವಿವರಿಸಿ ಹೇಳುವುದು ಇವರ ದೊಡ್ಡ ಗುಣ. ಹಾಗಾಗಿ ಬಳಗಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಸಾವಿರಾರು ಕವನಗಳನ್ನು ಬರೆದರೂ ಇದುವರೆಗೂ ಒಂದೇ ಒಂದು ಪುಸ್ತಕವನ್ನು ಹೊರತರದಿರುವುದು ವಿಷಾದನೀಯ.

One thought on “ಕವಯತ್ರಿ ‘ಬಿಟ್ಟೀರೆ ಚೋಂದಮ್ಮ ಶಂಭು’ರವರ ಪರಿಚಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading