ಶ್ವಾನ ಪಾಲನೆಗೆ ಮುನ್ನ … – ಡಾ.ಎನ್.ಬಿ.ಶ್ರೀಧರ



‘ಚಾರ್ಲೀ ೭೭೭ ಸಿನಿಮಾ ನೋಡಿದ ಮೇಲೆ ಅನೇಕರಿಗೆ ನಾಯಿಗಳ ಮೇಲೆ ಇದ್ದಕ್ಕಿದ್ದ ಹಾಗೇ ಪ್ರೀತಿ ಉಕ್ಕಿ ಹರಿಯುವುದು ಸಹಜ. ಎಲ್ಲಾ ನಾಯಿಗಳಲ್ಲಿಯೂ ಸಹ ಚಾರ್ಲಿಯ ಹಾಗೆ ವಿದೇಯತೆ ನಿರೀಕ್ಷಿಸುವುದು ಸಲ್ಲ. ಅದು ತರಬೇತಿ ನೀಡಿದ ನಾಯಿ. ನಿಮ್ಮ ನಾಯಿಯೂ ಹಾಗೆಯೇ ಆಗಬೇಕು ಅನ್ನುವುದು ಸಲ್ಲ. ಅದಕ್ಕೆ ಚಿಕ್ಕಂದಿನಿಂದ ತರಬೇತಿ ಅವಶ್ಯ’.- ಡಾ.ಎನ್.ಬಿ.ಶ್ರೀಧರ, ಮುಂದೆ ಓದಿ ಶ್ವಾನ ಪಾಲನೆಗೆ ಮುನ್ನ…
ಮನೆಗೊಂದು ನಾಯಿಮರಿ ತರಬೇಕೆಂದು ನಿರ್ಧರಿಸುವ ಮುನ್ನ ನೀವು ಗಮನದಲ್ಲಿರಿಸಬೇಕಾದ ಮುಖ್ಯವಾದ ಸಂಗತಿಯೇನೆಂದರೆ ನಿಮ್ಮ ಈ ನಿರ್ಧಾರ ಅತ್ಯಂತ ಪ್ರಮುಖವಾದದ್ದು, ಇದು ನಿಮ್ಮ ಮುಂದಿನ 10-12 ವರ್ಷಗಳ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ, ಎಂದು. ಏಕೆಂದರೆ ನಾಯಿಮರಿಯನ್ನು ಮನೆಗೆ ಕರೆ ತರುವುದು ಒಂದು ಗೃಹೋಪಯೋಗಿ ವಸ್ತುವನ್ನು ತಂದ೦ತಲ್ಲ. ಆ ನಾಯಿ ಮರಿಯೂ ಒಂದು ಜೀವಿ. ಅದಕ್ಕೂ ತನ್ನದೇ ಆದ ಬೇಕು-ಬೇಡಗಳು ಇರುತ್ತವೆ. ನಿಮ್ಮಿಂದ ಅವೆಲ್ಲವನ್ನೂ ಒದಗಿಸುವ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ಯೋಚಿಸಿ. ಅದರ ಲಾಲನೆ-ಪಾಲನೆಯನ್ನು ನಿಭಾಯಿಸುವವರು ಯಾರು ಎಂದು ಗುರುತಿಸಿಕೊಳ್ಳಿ, ಈ ಬಗ್ಗೆ ಮನೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ, ನಂತರವೇ ನಾಯಿ ಮರಿ ತರಲು ಮುಂದಡಿಯಿಡಿ.

ಫೋಟೋ ಕೃಪೆ : thesprucepets

ಮರಿಯೊಂದನ್ನು ತರಲು ಹೊರಡುವ ಮುನ್ನ ಯಾತಕ್ಕಾಗಿ ನಾಯಿ ಬೇಕಾಗಿದೆ ಎಂದು ಯೋಚಿಸಿ, ನಿಮಗೆ ತಳಿಯ ಆಯ್ಕೆಯಲ್ಲಿ ಉಪಯುಕ್ತವಾಗಬಹುದಾದ ಈ ಸಲಹೆಗಳ ಬಗ್ಗೆ ಗಮನಹರಿಸಿ.
ಮನೆ ಕಾವಲಿಗಾಗಿ ನಾಯಿ ಬೇಕಿದ್ದಲ್ಲಿ ಜರ್ಮನ್ ಶೆಫರ್ಡ್, ಡಾಬರ್‌ಮನ್, ರಾಟ್‌ವೀಲರ್, ಬಾಕ್ಸರ್, ಬುಲ್‌ಡಾಗ್ ನಾಯಿಗಳು ಸೂಕ್ತ.

ಮುದ್ದಿಗಾಗಿ ಸಾಕಲು ಪೊಮರೇನಿಯನ್, ಸ್ಪಿಟ್ಜ್, ಬೀಗಲ್, ಡಾಷ್‌ಹಂಡ್, ಸ್ಪೇನಿಯಲ್, ಪೆಕೆಂಗೀಸ್, ಪಗ್, ಪ್ಯಾಪಿಲನ್, ಲಾಸಾಪ್ಸೋ, ಚಹುವಾಹುವಾ, ಮಾಲ್ಟೀಸ್ ನಂತಹ ತಳಿಯನ್ನು ಆರಿಸಿಕೊಳ್ಳಿ.
ತೋಟದಲ್ಲಿ ಕಾವಲಿಗಾಗಿ ಡಾಬರ್‌ಮನ್, ಬುಲ್ ಟೆರಿಯರ್, ಮುದ್ದೋಳ್ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪಾರೈ ಅಥವಾ ದೇಶಿ ನಾಯಿಗಳು ಉಪಯುಕ್ತ.

ದೈತ್ಯಾಕಾರದ ನಾಯಿಗಳ ಬಗ್ಗೆ ಒಲವುಳ್ಳವರಿಗೆ ಸೇಂಟ್ ಬರ್ನಾರ್ಡ್, ಗ್ರೇಟ್ ಡೇನ್ ಅಥವಾ ಮಾಸ್ಟಿಫ್ ನಾಯಿಗಳೇ ಸರಿ.

ಫೋಟೋ ಕೃಪೆ : npr

ಮನೆ ಮಂದಿಯೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಸಾಧು ಸ್ವಭಾವದ ನಾಯಿಗಳೆಂದರೆ ಗೋಲ್ಡನ್ ರಿಟ್ರೈವರ್, ಲ್ಯಾಬ್ರಡಾರ್, ಸ್ಪೇನಿಯಲ್, ಬೀಗಲ್, ಐರಿಷ್ ಸೆಟ್ಟರ್ ಮುಂತಾದವು. ಅದರಲ್ಲಿಯೂ ಲ್ಯಾಬ್ರಡಾರ್ ನಾಯಿಗೆ ಈಗ ಇದ್ದಕ್ಕಿದ್ದ ಹಾಗೇ ಬೇಡಿಕೆ ಏರಿದೆಯಂತೆ.

ಫೋಟೋ ಕೃಪೆ : .akc

ಲ್ಯಾಬ್ರಡಾರ್ ರಿಟ್ರೈವರ್ ಅತ್ಯಂತ ಸ್ನೇಹಜೀವಿ ಲ್ಯಾಬ್ರಡಾರ್ ನಾಯಿ. ನ್ಯೂ ಫೌಂಡ್‌ಲ್ಯಂಡ್‌ನಲ್ಲಿ ಅಭಿವೃದ್ಧಿ ಪಡಿಸಲ್ಪಟ್ಟು ಮೀನುಗಾರರ ಮೂಲಕ ಇಂಗ್ಲೆಂಡ್ ಸೇರಿದ ಈ ತಳಿ ತನ್ನ ಹೊಂದಾಣಿಕೆ ಮನೋಭಾವಕ್ಕೆ ಹೆಸರುವಾಸಿ. ಬಹಳ ಬುದ್ಧಿಶಾಲಿಯಾದ ಇದಕ್ಕೆ ಸುಲಭವಾಗಿ ತರಬೇತಿ ನೀಡಬಹುದು.ಲವಲವಿಕೆ, ಸಹನೆ ಮತ್ತು ಒಡೆಯನನ್ನು ಖುಷಿ ಪಡಿಸುವಂತಹ ಗುಣಗಳನ್ನು ಹೊಂದಿದ ಲ್ಯಾಬ್ರಡಾರ್ ಮನೆಯಲ್ಲಿ ಸಾಕಲು ಬಲು ಯೋಗ್ಯವಾದದ್ದು. ಮಕ್ಕಳಿಗಂತೂ ಇದು ಮುದ್ದಿನ ಸಂಗಾತಿ. ಅವರು ಎಷ್ಟೇ ಚೇಷ್ಟೆ ಮಾಡಿದರೂ ಸಹಿಸಿಕೊಂಡು ಅವರೊಡನೆ ಆಟವಾಡುತ್ತದೆ. ಇದು ಅತ್ಯುತ್ತಮ ಘ್ರಾಣಶಕ್ತಿ ಹೊಂದಿರುವುದರಿಂದ ಅಪರಾಧಿಗಳನ್ನು ಗುರುತಿಸಲು ಮತ್ತು ಮಾದಕ ವಸ್ತುಗಳ ಶೋಧನೆಯಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದೆ. ನೀರಿನಲ್ಲಿ ಈಸು ಬಿದ್ದು ಮೀನು ಹಿಡಿಯುವುದು ಮತ್ತು ಬೇಟೆಯನ್ನು ಹೆಕ್ಕಿ ತರುವುದು ಇದಕ್ಕೆ ಪ್ರಿಯವಾದ ಕೆಲಸಗಳು. ಈ ಕಾರ್ಯಕ್ಕೆ ಅನುಕೂಲವಾಗುವಂತೆ ಲ್ಯಾಬ್ರಡಾರ್ ನಾಯಿಯು ಒತ್ತಾದ ತುಂಡುಗೂದಲುಗಳನ್ನು ಹೊಂದಿದೆ. ದೇಹರಚನೆ ಸಹ ದೃಢವಾಗಿದೆ. ಚರ್ಮದ ಬಣ್ಣ ಕಪ್ಪು ಅಥವಾ ಹಳದಿ ಮಿಶ್ರಿತ ಕಂದು.ಈ ನಾಯಿಗಳು 22-24 ಅಂಗುಲ ಎತ್ತರವಿದ್ದು 27-34 ಕಿಲೋ ತೂಕವಿರಬಹುದು. ಬಹುಬೇಗ ದಪ್ಪಗಾಗುವ ಗುಣ ಇವುಗಳಿಗಿರುವುದರಿಂದ ಇವುಗಳ ಆಹಾರ ಮತ್ತು ವ್ಯಾಯಾಮದ ವಿಷಯದಲ್ಲಿ ಹೆಚ್ಚು ನಿಗಾವಹಿಸಬೇಕು. ಕುರುಡರ ಕಣ್ಣಾಗಿ ಅವರಿಗೆ ದಾರಿ ತೋರಲು ಹೆಚ್ಚಾಗಿ ಉಪಯೋಗಿಸುತ್ತಿರುವುದು ಲ್ಯಾಬ್ರಡಾರ್ ನಾಯಿಗಳನ್ನೇ.

ಕಾರಣ ನಾಯಿ ಸಾಕಬೇಕೆಂದೆನಿಸಿದರೆ ಸಾಕಷ್ಟು ವಿಚಾರ ಮಾಡಿ ತೀರ್ಮಾನಕ್ಕೆ ಬನ್ನಿ.

ನಾಯಿಗಳ ಸಾಕಣೆಯ ಬಗ್ಗೆ ಕನ್ನಡದಲ್ಲಿಯೇ ಹೆಚ್ಚಿನ ಮಾಹಿತಿಗಾಗಿ ನಾನು ಡಾ: ಅರುಣ್ ಜೊತೆ ಬರೆದ ಕನ್ನಡ ಪುಸ್ತಕ “ಸಾಕು ನಾಯಿ ಸಚಿತ್ರ ಕೈಪಿಡಿ” ಇದು ನವಕರ್ನಾಟಕ ಪಬ್ಲಿಕೇಶನ್ ಇವರಿಂದ ಪ್ರಕಾಶಿಸಲ್ಪಟ್ಟಿದ್ದು https://www.navakarnatakaonline.com/saaku-naayi-dog-care… ಈ ಕೊಂಡಿಯಲ್ಲಿ ದೊರೆಯುತ್ತದೆ. ತರಿಸಿ ಓದಿ.


  • ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW