ನಾನು…ಕಸ್ತೂರ್
ಕನ್ನಡದ ಸಂವೇದನೆಯಲ್ಲಿ ಬೇರುಬಿಟ್ಟ ಹೆಣ್ಣು ಮಗಳೊಬ್ಬಳು ಮಹಾತ್ಮನೆನಿಸಿಕೊಂಡ ವ್ಯಕ್ತಿಯ, ಮಡದಿಯಾದವಳೊಬ್ಬಳ ಅಂತರಂಗದ ಹಾಸುಹೊಕ್ಕು ಬಯಲಾಗಿಸಿದ ಕಥನ. ಇದನ್ನು ಮಾಗಿದ ಹೆಣ್ಣೊಬ್ಬಳು ಇನ್ನೊಂದು ಹೆಣ್ಣು ಜೀವಕ್ಕೆ ತನ್ನ ತೆರೆದುಕೊಂಡಂತೆ ನಿರೂಪಣೆ ಮಾಡಲಾಗಿದೆ. ಇದಕ್ಕೆ ಲೇಖಕಿ ಡಾ. ಎಚ್.ಎಸ್. ಅನುಪಮ ಅವರು ಎರಡು ಬಗೆಯ ಸಿದ್ದತೆ ನಡೆಸಿದ್ದಾರೆ. ಕಸ್ತೂರಬಾ ಜೀವನ ಕಥನ ಪುಸ್ತಕದ ಕುರಿತು ಲೇಖಕ ರಘುನಾಥ ಕೃಷ್ಣಮಾಚಾರ್ ಅವರು ಬರೆದ ಲೇಖನ, ಮುಂದೆ ಓದಿ…
ಒಂದು: ಕಸ್ತೂರ ಬಾ ಕುರಿತ ಪುಸ್ತಕಗಳ ಅಧ್ಯಯನ. ಎರಡು: ಅವರು ಹುಟ್ಟಿ ಬೆಳೆದ ಊರಿನ ಕ್ಷೇತ್ರ ಕಾರ್ಯ. ಇದರಿಂದಾಗಿ ಕಸ್ತೂರ ಬಾ ಕುರಿತು ಅಧಿಕೃತವಾಗಿ ಬರೆದ ಮೊದಲ ಹೊತ್ತಗೆಯಾಗಿ ಪರಿಣಮಿಸಿದೆ- ಕನ್ನಡದ ಮಟ್ಟಿಗೆ.

ಇದು ಜತೆಯಾಗಿ ಹೆಣೆದುಕೊಂಡ ಎರಡು ಜೀವಗಳು ಪರಸ್ಪರರ ಸಂಗದಲ್ಲಿ ಮಾಗಿದ ಕಥನವಾಗಿದೆ. ಹಲವು ಬಾರಿ ಗಾಂಧೀಜಿಯವರಿಗಿಂತ ಭಿನ್ನವಾದ ಕಸ್ತೂರ ಬಾ ಅವರ ಅಸ್ಮಿತೆಯ ಅನಾವರಣ ಇದರಲ್ಲಿ ಎದ್ದು ಕಾಣಿಸುತ್ತದೆ. ಇದರಿಂದಾಗಿ ಗಾಂಧೀಜಿ ತಮ್ಮ ಆತ್ಮ ಕತೆಯಲ್ಲಿ ಕಂಡಿರಿಸುವ ‘ಬಾ’ ಗಿಂತ ಇಲ್ಲಿ ಭಿನ್ನವಾದ ಅವರ ವ್ಯಕ್ತಿತ್ವದ ದರ್ಶನ ದೊರೆಯುತ್ತದೆ. ಗಾಂಧೀಜಿಯವರ ಕಠಿಣವಾದ ಹಲವು ನಿಲುವುಗಳನ್ನು ವಿರೋಧಿಸುವಲ್ಲಿ ಇದು ಕಾಣಿಸುತ್ತದೆ. ಎಲ್ಲರಿಗೂ ಬಾಪು ಆದ ಗಾಂಧೀಜಿ ಸ್ವತಃ ತಮ್ಮ ಮಕ್ಕಳಿಗೆ ಬಾಪು ಆಗುವುದರಲ್ಲಿ ವಿಫಲವಾದುದನ್ನು ವಸ್ತುನಿಷ್ಠವಾಗಿ ದಾಖಲಿಸುವಲ್ಲಿ ಇದು ಎದ್ದು ಕಾಣಿಸುತ್ತದೆ. ಅದರಂತೆ ಸಾರ್ವಜನಿಕ ವ್ಯಕ್ತಿಯಾಗಿ ಮಾರ್ಪಟ್ಟ ಗಾಂಧೀಜಿಯವರ ಜತೆಗೆ, ತಮಗೆ ಖಾಸಗಿ ಕ್ಷಣಗಳ ಅಭಾವದಿಂದ ಎದುರಿಸಬೇಕಾದ ತಲ್ಲಣಗಳ ಅಭಿವ್ಯಕ್ತಿಯಲ್ಲಿ. ಏಕಾಏಕಿ ಬ್ರಹ್ಮಚರ್ಯದ ನಿರ್ಧಾರಕ್ಕೆ ಬಂದ ಗಾಂಧೀಜಿಯವರ ಆತುರದ ನಡೆಯ ಕುರಿತು ‘ ಪ್ರೇಮ ಕಾಮಗಳೆರಡು’ ಒಂದೇ ನಾಣ್ಯದ ಎರಡು ಮುಖಗಳು ಎಂದು ಗ್ರಹಿಸಲಾರದ ಅವರ ಶಠತನದ ಕುರಿತು ವ್ಯಕ್ತಪಡಿಸುವ ಅಭಿಪ್ರಾಯ. ಅವರ ‘ನಾನು’ ತನದಿಂದಾಗಿ ಉಳಿದವರ ಸಂಕಟ, ದು:ಖಗಳನ್ನು ಮೈಮೇಲೆ ಎಳೆದುಕೊಂಡು ಉಪವಾಸದ ಮೂಲಕ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಅತಿರೇಕದ ಕುರಿತು. ಅಂಬೇಡ್ಕರ್ ಅವರ ಕಠಿಣ ನಿಲುವನ್ನು ಬದಲಾಯಿಸಲು, ಕೈಗೊಂಡ ಉಪವಾಸದ ಸಂದರ್ಭದಲ್ಲಿ, ಅವರ ಬಳಿಗೆ ತನ್ನ ಗಂಡನ ಪ್ರಾಣಭಿಕ್ಷೆ ಬೇಡಿಕೊಳ್ಳಬೇಕಾಗಿ ಬಂದ ಸ್ಥಿತಿಯ ಕುರಿತು. ಮೇಲಿನ ಉದಾಹರಣೆಗಳು ಅವರ ವಸ್ತುನಿಷ್ಠ ವ್ಯಕ್ತಿತ್ವಕ್ಕೆ ನಿದರ್ಶನಗಳು.

ಅದರಂತೆಯೇ ಅವರಿಂದಾಗಿ ಕಲಿತ ಪಾಠಗಳನ್ನು ಕೂಡ ದಾಖಲಿಸುವಲ್ಲಿ ಇದು ಎದ್ದು ಕಾಣಿಸುತ್ತದೆ. ಸಂಕುಚಿತ ವಾತಾವರಣದಲ್ಲಿ ಬೆಳೆದ ತಾವಿಬ್ಬರೂ, ಗಾಂಧೀಜಿಯವರು ಅನ್ಯಕ್ಕೆ ತೆರೆದುಕೊಂಡು, ಅವರ ವ್ಯಕ್ತಿತ್ವ ವಿಕಾಸವನ್ನು ಸಾಧಿಸಿದಂತೆ, ತಮ್ಮ ವ್ಯಕ್ತಿತ್ವದ ವಿಕಾಸಕ್ಕೆ ಕಾರಣರಾದುದನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ, ನಡೆಸಿಕೊಂಡ, ಆ ಮೂಲಕ ಎಲ್ಲರಲ್ಲಿಯೂ ಒಂದಾದ ಬಗೆಯನ್ನು, ಅವರ ಆಶ್ರಮವಾಸದ ನೆನಪುಗಳು ಬಿಚ್ಚಿಡುತ್ತವೆ.
ಅವರ ಪ್ರಾಮಾಣಿಕತೆಗೆ ಹಲವು ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ. ನಾಲ್ಕು ರೂಪಾಯಿಗಳನ್ನು ಕಸ್ತೂರ ಬಾ ಅವರು ಇರಿಸಿಕೊಂಡ ಸಂದರ್ಭ ಇದಕ್ಕೊಂದು ನಿದರ್ಶನ. ಅದನ್ನು ಅವರು ಸಾರ್ವಜನಿಕಗೊಳಿಸುವ ಮೂಲಕ ತಮ್ಮ ವಸ್ತುನಿಷ್ಠೆಯನ್ನು ತೋರಿಸಿಕೊಡುತ್ತಾರೆ. ಇಂತಹ ಪ್ರಸಂಗಗಳಲ್ಲಿ ಇಬ್ಬರದೂ ಅಗ್ನಿ ಪರೀಕ್ಷೆ ಆಗುತ್ತದೆ. ಕನ್ನಡದ ಹಲವು ಗಾದೆ ಮಾತುಗಳನ್ನು ಬಳಸಿರುವುದು- ಇರಲಾರದೆ ಇರಬಿಟ್ಟುಕೊಳ್ಳುವುದು – ಇತ್ಯಾದಿ ಲೇಖಕಿ ಕಸ್ತೂರ ಬಾ ಅವರನ್ನು, ಕನ್ನಡಿಗರನ್ನಾಗಿಸಿರುವ ಮಾಯಕಕ್ಕೆ ನಿದರ್ಶನಗಳು. ‘ಸ್ತ್ರೀವಾದ,’ ಶಬ್ದದ ಬಳಕೆ ಲೇಖಕಿ ಅಸ್ಮಿತೆಯು ಪ್ರಕಟವಾದ ವಿಧಾನಕ್ಕೆ ಉದಾಹರಣೆ.
ಇಂತಹ ಒಂದು ಮಹತ್ವದ ಕೃತಿಯನ್ನು ಕನ್ನಡದ ಜನತೆಗೆ ಕೊಡುವ ಮೂಲಕ, ಲೇಖಕಿ ಅನನ್ಯವಾದ ಕಾರ್ಯ ಮಾಡಿದ್ದಾರೆ. ಕಸ್ತೂರ ಬಾ ಅವರು, ಕನ್ನಡಿಗರ ಮನೆಮಾತಾದರೆ ಲೇಖಕಿಯ ಶ್ರಮ ಸಾರ್ಥಕ, ಅಭಿನಂದನ. ಇದನ್ನು ಕೊಟ್ಟ ನನ್ನ ಸಂಗಾತಿ ಗಿರಿಜಾ ಅವರ ಅಣ್ಣ ಸೀತಾರಾಮ ಅವರಿಗೆ ಕೃತಜ್ಞತೆ. ಪ್ರಕಟಿಸಿದ ಬಸೂ ಅವರಿಗೆ ಕೂಡ ಅಭಿನಂದನ. ಹೆಚ್ಚಿನ ಕನ್ನಡಿಗರು ಇದನ್ನು ಓದುವಂತಾಗಲಿ ಎಂದು ಹಾರೈಕೆ.
- ರಘುನಾಥ ಕೃಷ್ಣಮಾಚಾರ್ (ಲೇಖಕರು, ಚಿಂತಕರು)
