‘ಡೊಳ್ಳು‌’ ಕುಣಿತದ ಸುತ್ತ – ಮಾಕೋನಹಳ್ಳಿ ವಿನಯ್‌ ಮಾಧವ್

ರಾಷ್ಟ್ರ ಪ್ರಶಸ್ತಿ ಪಡೆದಿರುವ ಕನ್ನಡದ ಅತ್ಯುತ್ತಮ ಚಿತ್ರ ಎಂದು ಹೆಗ್ಗಳಿಕೆ ಪಡೆದಿರುವ “ಡೊಳ್ಳು” ಚಿತ್ರದ ಕುರಿತು ಪತ್ರಕರ್ತ ಮಾಕೋನಹಳ್ಳಿ ವಿನಯ್‌ ಮಾಧವ್ ಅವರು ಬರೆದಿರುವ ಒಂದು ಪುಟ್ಟ ಲೇಖನ, ಮುಂದೆ ಓದಿ…

ಸಿನಿಮಾ : ಡೊಳ್ಳು
ನಿರ್ದೇಶಕರು: ಸಾಗರ ಪುರಾಣಿಕ್
ನಿರ್ಮಾಪಕರು:ಪವನ್ ಒಡೆಯರ್ ಮತ್ತು ಅಪೇಕ್ಷ ಪುರಾಣಿಕ್
ಮುಖ್ಯ ಪಾತ್ರಧಾರಿಗಳು : ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ

ಸಂಚಾರಿ ವಿಜಯ್ ನಟಿಸಿದ ಕೊನೆಯ ಚಿತ್ರ ‘ಪುಕ್ಸಟೆ ಲೈಫು’ ಮಲಯಾಳಂನಲ್ಲಿ‌ ಫಾಹದ್ ನಟಿಸಿದ್ದರೆ ಏನಾಗ್ತಿತ್ತು?. ನಮ್ಮ‌ ಕನ್ನಡದವರೇ ಅದ್ಭುತ ಚಿತ್ರ ಅಂತ ಫೇಸ್ಬುಕ್ ನಲ್ಲಿ ಬರೆಯುತ್ತಿದ್ದರು ಅಂತ ಬಹಳಷ್ಟು ಸಲ ಅನ್ನಿಸಿದೆ.

ಹಾಗೆಯೇ, ‘ಕಾಡ ಬೆಳದಿಂಗಳು’ ಚಿತ್ರವನ್ನು ಯಾವ ಭಾಷೆಯಲ್ಲಿ ತೆಗೆದಿದ್ದರೆ ‘ಕಮರ್ಷಿಯಲ್ ಸಕ್ಸಸ್’ ಆಗ್ತಾ ಇತ್ತು? ಅಂತಾನೂ ಪ್ರಶ್ನಿಸಿಕೊಂಡಿದ್ದೇನೆ. ಅದೇ ಪ್ರಶ್ನೆ ಮತ್ತೆ ಬಂದಿದ್ದು, ‘ಡೊಳ್ಳು’ ಚಿತ್ರವನ್ನು ನೋಡಿದಾಗ. ಮೊನ್ನೆ ಇದರ ನಿರ್ಮಾಪಕ ಪವನ್ ಒಡೆಯರ್ ಚಿತ್ರದ ಪ್ರೀಮಿಯಂ ಶೋಗೆ ಕರೆದಾಗ ಹೋಗಲಾಗಿರಲಿಲ್ಲ. ಭಾನುವಾರ ಫೋರಂ ಮಾಲ್ ನಲ್ಲಿ‌ ಹದಿನೈದರಿಂದ ಇಪ್ಪತ್ತು ವೀಕ್ಷಕರಿದ್ದ ಸಿನೆಮಾ‌ ಮಂದಿರದಲ್ಲಿ ನೋಡಿದಾಗ ಈ ಪ್ರಶ್ನೆ ಏಳದಿರಲಿಲ್ಲ.

ಫೋಟೋ ಕೃಪೆ : youtube

ಈ ಚಿತ್ರಗಳಲ್ಲಿ ‘ನಾನು ಮಾಸು’, ‘ನಾನು ಕ್ಲಾಸು’, ‘ಇಲ್ಲಿ ನನ್ನದೇ ಹವಾ’ ಎನ್ನುವ ಅಬ್ಬರದ ಡೈಲಾಗುಗಳು ಇರೋದಿಲ್ಲ. ಪ್ರಶಾಂತವಾಗಿ, ಕಲ್ಲಿನಿಂದ ಕಲ್ಲಿಗೆ ನೆಗೆಯುತ್ತಾ ಹರಿಯುವ ಮಲೆನಾಡಿನ ಹಳ್ಳಗಳಂತೆ ಸಾಗುತ್ತವೆ. ಜೀವನದ ವಾಸ್ತವತೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ. ವಿಮರ್ಶಕರು ಮೆಚ್ಚಿದಷ್ಟು ಸುಲಭವಾಗಿ, ಈ ಸಿನೆಮಾಗಳನ್ನು ಪ್ರೇಕ್ಷಕರು ಮೆಚ್ಚುವುದು ಕಷ್ಟ. ಏಕೆಂದರೆ, ನಗರದ ಕೃತಕ ಬಣ್ಣಗಳಲ್ಲಿ ಮತ್ತು ಡಿಜಿಟಲ್ ಪ್ರಪಂಚದ ‘ವರ್ಚುವಲ್ ರಿಯಾಲಿಟಿಯಲ್ಲಿ’ ಬದುಕುವವರಿಗೆ ವಾಸ್ತವ ಎಂದರೆ ಅಲರ್ಜಿ.

ಈ ಚಿತ್ರದಲ್ಲೂ ಅಷ್ಟೆ, ಡೊಳ್ಳು ಕುಣಿತ ಬಿಟ್ಟು, ಹೊಸ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರು, ವಾಸ್ತವತೆಯ ಅರಿವಿದ್ದರೂ ಒಪ್ಪಿಕೊಳ್ಳಲು ಒಪ್ಪುವುದಿಲ್ಲ. ಹಳ್ಳಿಗಳಿಂದ ಬೆಂಗಳೂರಿಗೆ ಬಂದು, ಇಲ್ಲಿರಲಾರದೆ, ಹಿಂದುರುಗಿ ಹೋಗಲಾರದೆ, ಒಳಗೇ ಕೊರಗುತ್ತಾ, ಹೊರಗೆ ಸಂತಸದ ಮುಖವಾಡ ಹಾಕಿಕೊಂಡು, ಜೀವನದ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಬಹಳಷ್ಟು ಜನರನ್ನು ನೋಡಿದ್ದೇನೆ.

ಫೋಟೋ ಕೃಪೆ : youtube

ಈ‌ ಚಿತ್ರ ನೋಡುವಾಗ ನನ್ನ ತಲೆಯಲ್ಲಿ ಎಷ್ಟೋ ವಿಷಯಗಳು ಓಡುತ್ತಿದ್ದವು. ಐ ಎಂ ವಿಠ್ಠಲಮೂರ್ತಿ ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ ಆಗಿದ್ದಾಗ ಒಂದು‌ ಮಾತು ಹೇಳಿದ್ದರು. ‘ನಮ್ಮ ಸರ್ಕಾರದ ಸಮಾರಂಭಗಳಲಿ, ಜಾನಪದ ಕಲಾವಿದರ ತಂಡಗಳ ಪ್ರದರ್ಶನ ಕಡ್ಡಾಯ ಮಾಡಿಸುತ್ತಿದ್ದೇನೆ. ಅವರಿಗೆ ಸ್ವಲ್ಪ ದುಡ್ಡು ಹೀಗಾದರೂ ಸಿಗದಿದ್ದರೆ, ಈ ಜಾನಪದ ಕಲೆಗಳೆಲ್ಲ ಇಪ್ಪತ್ತು ವರ್ಷಗಳಲ್ಲಿ ಕಣ್ಮರೆಯಾಗುತ್ತದೆ.’

ಅವರು ಹೇಳಿದ್ದು ಎಷ್ಟು ಸತ್ಯ ಎನ್ನುವುದು ಈಗ ಅರ್ಥವಾಗುತ್ತಿದೆ. ಜಾನಪದದ ಕುಣಿತಗಳು ಉಳಿದುಕೊಂಡಿವೆ. ಆದರೆ, ಹರಿಕಥೆ,‌ ವರ್ಷಕೊಮ್ಮೆ ಹಬ್ಬಗಳಲ್ಲಿ‌ ಊರಿಗೆ ಬರುತಿದ್ದ ದಾಸರು, ಬುಡುಬುಡಿಕೆ ಯವರು ಮತ್ತೆ ಇನ್ನೂ ಅನೇಕರು‌ ಕಾಣುತ್ತಿಲ್ಲ. ಎಷ್ಟೋ ಜನಪದಗಳು ಸಂಪ್ರದಾಯಕ್ಕೆ ಕಟ್ಟುಬಿದ್ದು ಕಣ್ಣು ಮುಚ್ಚುತ್ತಿವೆ. ಇವೆಲ್ಲದರ ಸಮ್ಮಿಳನವೇ ‘ಡೊಳ್ಳು’ ಎಂಬ ಸಿನೆಮಾ.
ಸಿನೆಮಾ‌ ಏನೋ ಇಷ್ಟವಾಯಿತು. ಆದರೆ, ಸಾಮಾಜಿಕ‌ ಜಾಲತಾಣಗಳಲ್ಲಿ ಬೇರೆ ದೇಶದ ಸಂಪ್ರದಾಯ ಮತ್ತು ಜಾನಪದಕ್ಕೆ ವಾವ್ ಎನ್ನುವ ನಾವು, ನಮ್ಮ ಜನಪದವನ್ನು ನಿರ್ಲಕ್ಷಿಸುವ ರೀತಿ ನೋಡಿ ಮನಸ್ಸಿಗೆ ಪಿಚ್ಚೆನಿಸಿತು..


  • ಮಾಕೋನಹಳ್ಳಿ ವಿನಯ್‌ ಮಾಧವ್ (ಪತ್ರಕರ್ತರು,ಲೇಖಕರು, ವಿಮರ್ಶಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW