‘ಜನರಿಕ್ ಔಷಧಿಗಳನ್ನೇ ಬರೆಯಬೇಕೆಂಬ ಕಾನೂನು ಇದ್ದರೂ ವೈದ್ಯರು ಏಕೆ ಬರೆಯುತ್ತಿಲ್ಲ?…’ ಈ ಪ್ರಶ್ನೆಯ ಕುರಿತು ಡಾ. ಎನ್.ಬಿ.ಶ್ರೀಧರ ಅವರು ಒಂದು ಚಿಂತನ ಲೇಖನವನ್ನು ಓದುಗರೊಂದಿಗೆ ಹಂಚಿಕೊಡಿದ್ದಾರೆ, ತಪ್ಪದೆ ಓದಿ…
ನಿನ್ನೆ ಜನರಿಕ್ ಔಷಧಿಗಳ ಬಗ್ಗೆ ವಿವರವಾದ ಲೇಖನ ಬರೆದಿದ್ದೆ. ಅದನ್ನೇ ಇಲ್ಲಿ ಒಂದಿಷ್ಟು ಸಂಕ್ಷಿಪ್ತಗೊಳಿಸುತ್ತೇನೆ. ಭಾರತ ಸರ್ಕಾರದ 2002 ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ಮೂಲಕ 6-4-2002 ಕಾನೂನು, ಇದಕ್ಕೆ 2016 ರ ತಿದ್ದುಪಡಿ ಮತ್ತು ಭಾರತೀಯ ವೈದ್ಯಕೀಯ ಪರಿಷತ್ತಿನ 2017 ರ ಸುತ್ತೋಲೆಯ ಪ್ರಕಾರ “ ಪ್ರತಿಯೊಬ್ಬ ವೈದ್ಯರೂ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಸ್ಪಷ್ಟವಾಗಿ ಔಷಧಿಗಳನ್ನು ಜನರಿಕ್ ಹೆಸರಿನಲ್ಲಿಯೇ ಮತ್ತು ದೊಡ್ಡಕ್ಷರದಲ್ಲಿ ಬರೆದುಕೊಡಬೇಕು ಮತ್ತು ಬರೆದು ಅದು ತರ್ಕಬದ್ಧವಾಗಿದ್ದು ಉಪಯೋಗವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಮತ್ತು ಎಲ್ಲಾ ವೈದ್ಯರೂ ಸಹ ಜನರಿಕ್ ಔಷಧಿಗಳನ್ನೇ ಬರೆದುಕೊಡಬೇಕು” ಎಂಬ ನಿಯಮವೇ ಜಾರಿಯಲ್ಲಿದೆ. ಸರಳವಾಗಿ ಹೇಳಬೇಕೆಂದರೆ “ಆಧುನಿಕ ಪದ್ಧತಿಯ ಎಲ್ಲಾ ನೋಂದಾಯಿತ ವೈದ್ಯರೂ ಸಹ ಕಡ್ಡಾಯವಾಗಿ ಜನರಿಕ್ ಔಷಧಿಗಳನ್ನೇ ಬರೆಯಬೇಕು” ಎಂಬ ಕಾನೂನಿನ ಕಟ್ಟಳೆಯಿದ್ದರೂ ಸಹ ವೈದ್ಯರೇಕೆ ಜನರಿಕ್ ಔಷಧಿಗಳನ್ನು ಬರೆಯುತ್ತಿಲ್ಲ? ಈ ಕುರಿತು ಯಾವಾಗಲಾದರೂ ನಿಮ್ಮ ವೈದ್ಯರನ್ನು ಕೇಳಿದ್ದೀರಾ? ಕೇಳಿರದಿದ್ದರೆ ಈಗಲಾದರೂ ಕೇಳಿ.

ಬ್ರಾಂಡೆಡ್ ಔಷಧಗಳಿಗೆ ಪರ್ಯಾಯವಾಗಿ ಬಳಸುವ ಉದ್ದೇಶದಿಂದ ಸ್ವಾಮ್ಯತೆ ಅಥವಾ ಪೇಟಂಟ್ ಅವಧಿಯ ನಂತರ ಮಾರುಕಟ್ಟೆಯಲ್ಲಿ ಔಷಧದ ಮೂಲ ಹೆಸರಿನಲ್ಲಿ ಲಭ್ಯವಿರುವ ಔಷಧಗಳಿಗೆ “ಜನರಿಕ್ ಔಷಧ” ಗಳು ಎನ್ನುತ್ತಾರೆ. ಜನರಿಕ್ ಔಷಧಿಗಳ ಹೆಸರುಗಳು ಅಂತರಾಶ್ ಜನರಿಕ್ ಔಷಧಿ ಸಂಸ್ಥೆ (ಐ ಎನ್ ಪಿ ಎನ್) ಯಿಂದ ನಿರ್ಧಾರಿತವಾಗುತ್ತಿದ್ದು ಇದನ್ನು ಪ್ರಪಂಚದಾದ್ಯ0ತ ಏಕರೂಪದಲ್ಲಿ ಬಳಸುವ ಪದ್ಧತಿ ಜಾರಿಯಲ್ಲಿದೆ. “ಪ್ಯಾರಸೆಟಮಾಲ್” ಇದು ಜನರಿಕ್ ಹೆಸರಾದರೆ ಡೊಲೊ-650, ಕ್ಯಾಲ್ಪೋಲ್-650 ಇವೆಲ್ಲಾ ಟ್ರೇಡ್ ಹೆಸರುಗಳಾಗಿವೆ. ಇವೆಲ್ಲಾ ಸಾಮಾನ್ಯ ಜನರಿಗೆ ಅರ್ಥವಾಗುವುದು ಕಡಿಮೆ.
ಜನರಿಕ್ ಔಷಧಗಳೇಕೆ ಬ್ರಾಂಡೆಡ್ ಔಷಧಗಳಿಗಿಂತ ಬಹಳ ಅಂದರೆ ಶೇ 75-85 % ರಷ್ಟು ಅಗ್ಗ. ಆದರೂ ವೈದ್ಯರೇಕೆ ಜನರಿಕ್ ಔಷಧಿಗಳನ್ನು ಬರೆಯುತ್ತಿಲ್ಲ. ಪೇಶೆಂಟ್ ಅವಧಿ ಮುಗಿದ ನಂತರ ಮಾರುಕಟ್ಟೆಗೆ ಬರುವ ಜನರಿಕ್ ಔಷಧಿಗಳು ಸಂಶೋಧನೆಗೆ ಅಥವಾ ಜಾಹಿರಾತಿಗಾಗಿ ಹಣ ತೊಡಗಿಸುವ ಅವಶ್ಯಕತೆ ಇಲ್ಲದಿರುವುದರಿಂದ ಅವುಗಳ ದರ ಬಹಳ ಅಗ್ಗ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನ ಫೇಸ್‌ಬುಕ್ಕಿನ 2-2-2020 ರ “ಏನಿದು ಜನರಿಕ್ ಔಷಧ? ಜನೌಷಧ?” ಲೇಖನ ಓದಿ.
ಸಮೀಕ್ಷೆಯೊಂದರ ಪ್ರಕಾರ ಅಮೇರಿಕಾ, ಬ್ರಿಟನ್, ಚೈನಾ ಮತ್ತು ಆಸ್ಟ್ರೇಲಿಯಾ ದಂತ ಪ್ರಗತಿಪರ ದೇಶಗಳಲ್ಲಿ ಶೇ 80-85 ರಷ್ಟು ವೈದ್ಯರು ಬರೆಯುವುದು ಜನರಿಕ್ ಔಷಧಿಗಳನ್ನೇ. ಭಾರತವು ಜನರಿಕ್ ಔಷಧಿಗಳನ್ನು ರಪ್ತು ಮಾರಾಟ ಮಾಡುವ ಬ್ರಹತ್ ದೇಶವಾಗಿದ್ದು ಇಲ್ಲಿ ಶೇ 5 ಕ್ಕಿಂತ ಕಡಿಮೆ ಜನರಿಕ್ ಔಷಧಿಗಳು ಬಳಸಲ್ಪಡುತ್ತವೆ. ಭಾರತದಲ್ಲಿ ಜನರಿಕ್ ಔಷಧಿಗಳಿಗೆ ಮಾನ್ಯತೆ ಬಂದಿದ್ದು 2008 ನೇ ಸಾಲಿನಲ್ಲಿ. ಆದರೆ ಈ ವರೆಗೂ ನಮ್ಮ ದೇಶದಲ್ಲಿ ಶೆ 1.76% ಕ್ಕಿಂತ ಕಡಿಮೆ ವೈದ್ಯರು ಜನರಿಕ್ ಔಷಧಿಗಳನ್ನು ಬರೆಯುತ್ತಾರಂತೆ!. ಹಾಗಿದ್ದರೆ ಭಾರತದಲ್ಲಿ ಏಕೆ ಜನರಿಕ್ ಔಷಧಿಗಳನ್ನು ಬರೆಯುವುದಿಲ್ಲ ಎಂಬುದಕ್ಕೆ ಒಂದಷ್ಟು ಪಟ್ಟಿ ಮಾಡಲಾಗುತ್ತಿದೆ.
ಫೋಟೋ ಕೃಪೆ : thebalancesmb
1) ಜನರಿಕ್ ಔಷಧಿಗಳ ಗುಣಮಟ್ಟದ ಬಗ್ಗೆ ವೈದ್ಯ ಸಮುದಾಯಕ್ಕೆ ಇನ್ನೂ ನಂಬುಗೆ ಇರದಿರುವ ವಾತಾವರಣ ಇರುವುದು.
2) ಬ್ರಾಂಡೆಡ್ ಔಷಧಿಗಳ ಕಂಪನಿಗಳ ತುರುಸಿನ ಪ್ರಚಾರಗಳು, ವೈದ್ಯರಿಗೆ ಕಾಣಿಕೆಗಳು, ರಿಯಾಯಿತಿ, ವಿದೇಶಿ ಯಾನ ಇತ್ಯಾದಿ ಆಮಿಷಗಳು.
3) ಜನರಿಕ್ ಔಷಧಿಗಳನ್ನು ಬರೆದರೆ ಬ್ರಾಂಡೆಡ್ ಕಂಪನಿಗಳು ನೀಡುವ ಉಚಿತ ವಿದೇಶ ಪ್ರವಾಸ, ವಿವಿಧ ಸಂದರ್ಭಗಳಲ್ಲಿ ನೀಡುವ, ದುಬಾರಿ ಉಡುಗೊರೆಗಳು, ಹೊಸೌತ್ಪನ್ನ ಬಂದಾಗ ನೀಡುವ ಉಚಿತ ಔಷಧಿಗಳ ಮಾದರಿಗಳು, ಐಷಾರಾಮಿ ಹೊಟೇಲುಗಳಲ್ಲಿ ವಾಸ, ಆತಿಥ್ಯ ಇತ್ಯಾದಿ ಸೌಲಭ್ಯಗಳು ವೈದ್ಯರ ಕೈತಪ್ಪಿ ಹೋಗುತ್ತವೆ ಎಂಬ ಅಭದ್ರತೆ ಹಾಗೂ ಇವೆಲ್ಲಾ ಔಷಧಿ ಮಾರಾಟಗಾರರ ಪಾಲಾಗುತ್ತವೆ ಎಂಬ ಭಯ.
ಜನ ಸಾಮಾನ್ಯರದು ಈ ಪ್ರಶ್ನೆ. ಇವು ಎಷ್ಟರ ಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಚರ್ಚೆ ಅವಶ್ಯ. ಅಲ್ಲದೇ ಎಲ್ಲಾ ವೈದ್ಯರನ್ನೂ ಸಾರಾಸಗಟಾಗಿ ಈ ವರ್ಗಕ್ಕೆ ಸೇರಿಸುವುದೂ ಸಹ ಸರಿಯಲ್ಲ.
ಭಾರತದಂತ ಅಗಾಧ ಜನಸಂಖ್ಯೆಯ ದೇಶದಲ್ಲಿ ಜನರು ಅವರ ಒಟ್ಟು ಆದಾಯದ ಶೇ: 69 ರಷ್ಟನ್ನು ಅವರ ವೈದ್ಯಕೀಯ ವೆಚ್ಚಕ್ಕಾಗಿಯೇ ಉಳಿಸುತ್ತಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಈ ವೆಚ್ಚದಲ್ಲಿ ಜನರಿಕ್ ಔಷಧಿಗಳನ್ನು ಖರೀದಿಸಿದಾಗ ಉಳಿತಾಯವಾಗುವ ಶೇ 85 ರಷ್ಟು ಹಣ ತುಂಬಾ ದೊಡ್ಡ ಮೊತ್ತದ್ದು ಮತ್ತು ಜನ ಜೀವನಕ್ಕೆ ಸಹಕಾರಿ. ಒಮ್ಮೊಮ್ಮೆ ಕೆಲವೊಂದು ಕಾಯಿಲೆಗಳಿಗೆ ಜೀವಮಾನದ ಎಲ್ಲಾ ಉಳಿತಾಯವನ್ನು ವೈದ್ಯಕೀಯ ವೆಚ್ಚಕ್ಕೇ ವ್ಯಯಿಸುವ ವ್ಯವಸ್ಥೆ ಭಾರತದಲ್ಲಿದೆ. ಹೀಗಿದ್ದಾಗ ಕಡಿಮೆ ದರದ ಜನರಿಕ್ ಔಷಧಿಗಳನ್ನೇ ಕಡ್ಡಾಯವಾಗಿ ಬರೆಯಬೇಕೆಂಬ ಕಾನೂನು ಇದ್ದರೂ ಸಮಾಜದಲ್ಲಿ ಅತ್ಯಂತ ಉನ್ನತಸ್ಥರದಲ್ಲಿರುವ ಅತ್ಯಂತ ಗೌರವಿತರಾಗಿರುವ ವೈದ್ಯರೇಕೆ ಅವುಗಳನ್ನು ಜನ ಸಾಮಾನ್ಯರ ಅನುಕೂಲಕ್ಕಾಗಿ ಬರೆಯುವುದಿಲ್ಲ ಎಂಬುದು ಯಕ್ಷಪ್ರಶ್ನೆ.
ಫೋಟೋ ಕೃಪೆ : hub.jhu.edu
ಜನರಿಕ್ ಔಷಧಿಗಳ ಬಗ್ಗೆ ವ್ಯವಸ್ಥೆಯಲ್ಲಿ ಇರುವ ದೋಷಗಳನ್ನು ಪಟ್ಟಿ ಮಾಡುತ್ತಾ ಕೂರುವುದರ ಬದಲು ಬದಲಾವಣೆ ತಮ್ಮಿಂದಲೇ ಆಗಲಿ ಎಂದು ವೈದ್ಯರು ಜನರಿಕ್ ಔಷಧಿಗಳನ್ನೇ ಯಾಕೆ ಬರೆಯಬಾರದು ಎಂಬುದು ಜನ ಸಾಮಾನ್ಯರ ಪ್ರಶ್ನೆ. ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಭಾರತ ಸರ್ಕಾರ, ಭಾರತೀಯ ವೈದ್ಯಕೀಯ ಪರಿಷತ್ತು, ರಾಷ್ಟಿçÃಯ ವೈದ್ಯಕೀಯ ಆಯೋಗ ಇವೆಲ್ಲಾ ಮಾಡಿದ ಕಾನೂನುಗಳು ಆದರಣೀಯ. ದೇಶದ ಕಾನೂನು, ನಿಯಮ ಮತ್ತು ನೀತಿ ಸಂಹಿತೆಯನ್ನು ಪಾಲಿಸಬೇಕಾಗಿರುವುದು ಮತ್ತು ಪಾಲಿಸುವಂತೆ ಮಾಡುವುದು ವೈದ್ಯರೂ ಸೇರಿದಂತೆ ಎಲ್ಲರ ಕರ್ತವ್ಯ. ಜನರ ಹಣ ಮತ್ತು ಆರೋಗ್ಯದ ದೃಷ್ಟಿಯಿಂದ ಮಾಡಲಾದ ಈ ಕಾನೂನುಗಳನ್ನು ಪಾಲಿಸಲೇಬೇಕಾದ ವೈದ್ಯರು ಜನರಿಕ್ ಔಷಧಿಗಳನ್ನೇಕೆ ಬರೆಯುವುದಿಲ್ಲ? ಎಂಬುದು ಜನ ಸಾಮಾನ್ಯರ ಪ್ರಶ್ನೆ.
ಆಯ್ದ ಆಕರಗಳು :
1. Medical Council of India: Circular on Generic Medicine; 2017. Available from: https://old.mciindia.org/circulars/Public-Notice- Generic-Drugs-21.04.2017.pdf accessed on June 5, 2017.
2. World Health Organization. Generic Drugs. Available from: http://www.who.int/trade/glossary/story034/en, accessed on June 5, 2017.
3. Rana P, Roy V. Generic medicines: Issues and relevance for global health. Fundam Clin Pharmacol 2015; 29 : 529-42.
4. Department of Pharmaceuticals, Ministry of Chemicals & Fertilizers. Pradhan Mantri Bhartiya Janaushadhi Pariyojna. New Delhi: Government of India; 2017. Available from: http://janaushadhi.gov.in/pmjy.aspx, accessed on July 15, 2017.
5. Roy, V. and Rana, P., 2018. Prescribing generics: All in a name. The Indian Journal of Medical Research, 147(5), p.442.
6. Veterinary Council of India. Minimum Dtandards of Veterinary Education and Practice Rules 2016. vci.dadf.gov.in
7. Ministry of Health & Family Welfare. Drug and Cosmetic (Ninth Amendment) Rules. The Gazette of India; 2017. Available from: http://www.cdsco.nic.in/writereaddata/ GSR%20327(E)%20Dated%2003_04_2017.pdf, accessed on November 16, 2017.
8. van de Vooren K, Curto A, Garattini L. Biosimilar versus generic drugs: Same but different? Appl Health Econ Health Policy 2015; 13 : 125-7.
- ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.