ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಮಂಗಳ ಗೌರಿ ಹಬ್ಬದ ಕುರಿತು ಬರೆದ ವಿಶೇಷ ಸುಂದರ ಕವನ, ತಪ್ಪದೆ ಓದಿ…
ಮಂಗಳವಾರವು
ಕಂಗೊಳಿಸಿರುವುದು
ಹೆಂಗಳೆಯರಿಗೇ ಸಂಭ್ರಮವು
ಮಂಗಳ ಗೌರಿಗೆ
ಸಿಂಗರಿಸುತ್ತಲಿ
ರಂಗಲಿ ಹಬ್ಬವ ಮಾಡಿಹರು
ಒಲ್ಲದೆ ಪರಶಿವ
ಗಲ್ಲವ ಹಿಡಿಯುತ
ಮೆಲ್ಲನೆ ಗೌರಿಯ ಕಳುಹಿಸುತ
ಎಲ್ಲೆಗೆ ಶೀಘ್ರವೆ
ನಲ್ಲೆಗೆ ಮರಳಲು
ವಲ್ಲಭನಾಜ್ಞೆಯ ಹೊರಡಿಸಿದ
ಅರಿಶಿಣ ಕುಂಕುಮ
ಕರೆದರೆ ಧರಿಸುತ
ಹರಸುತಲೊಳಿತನು ಮಾಡುತಲೀ
ಧರೆಯನು ಬೆಳಗಿಸಿ
ಪೊರೆಯುತ ಮಾತೆಯು
ಮರುದಿನ ಕಳುಹಿಸಿ ಹಾಡುತಲೀ
ಶಿವೆಯನು ಕರೆಯಲು
ಶಿವಸುತ ಹೋದನು
ಭುವಿಯಲಿ ಮೋದಕ ತಿನ್ನುತಲಿ
ಸವಿಯುತ ಸಿಹಿಯನು
ಸವರುತಲುದರವ
ತವರಿಂದಮ್ಮನ ಕರೆಯುತಲಿ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು.
