ಪರಿಸರ ಕಾಳಜಿಯ ಯಶೋಗಾಥೆ – ಬಿ. ಎಸ್. ಶಿವಕುಮಾರ

ಶಿವಮೊಗ್ಗದಿಂದ ಅಬ್ಬಲಗೆರೆಗೆ ಹೋಗುವ ಮಾರ್ಗದಲ್ಲಿ ಆಬ್ಬಲಗೆರೆ ಕೆರೆ ದಾಟಿದಾಕ್ಷಣ ಅಲ್ಲಿಯೇ ಬಲ ಭಾಗದಲ್ಲಿ ಒಂದೆರಡು ನಿಮಿಷ ನಡೆದರೆ ಸಿಗುವ ಮನೋಹರ ಸ್ಥಳವೇ ಈಶ್ವರ ವನ. ಈ ಈಶ್ವರ ವನದ ಕುರಿತು ಒಂದಷ್ಟು ಕುತೂಹಲ ಮಾಹಿತಿಗಳನ್ನೂ ಲೇಖಕ ಬಿ. ಎಸ್. ಶಿವಕುಮಾರ ಅವರು ಬರೆದ ಲೇಖನವಿದು, ಮುಂದೆ ಓದಿ…

ಶಿವಮೊಗ್ಗ ನಗರದ ಸೆರಗಿನಲ್ಲಿ, ಸುಂದರ ಪರಿಸರದಲ್ಲಿ ಮನಕ್ಕೆ ಮುದ ನೀಡುವ ತಾಣವೊಂದು ತಲೆ ಎತ್ತುತ್ತಿದೆ. ಅದು ಸದಾ ಸಾರ್ವಜನಿಕರಿಗಾಗಿ ತೆರೆದಿರುವ ದಿವ್ಯ ತಾಣವೂ ಆಗಿದೆ. ಒಂದು ಎಕರೆ ಪ್ರದೇಶದಲ್ಲಿ ಕಾಡೊಂದು ಬೆಳೆಯುತ್ತಿದೆ. ಅಲ್ಲಿ ಕೇವಲ ಕಾಡು ಮರಗಳನ್ನು ಮಾತ್ರ ಬೆಳೆಸಲಾಗುತ್ತಿದ್ದು ಪಕ್ಷಿಗಳಿಗೆ ಪ್ರಿಯವಾದ ಸ್ಥಳವಾಗಲಿದೆ. ಇಲ್ಲಿ ನೆಟ್ಟಿರುವ ಗಿಡಗಳು ಸೊಂಪಾಗಿ ಬೆಳೆದು ಶಾಂತಿ ಅರಸಿ ಬರುವ ನಗರವಾಸಿಗಳಿಗೆ ಮನಶ್ಶಾಂತಿ , ಆನಂದ ನೀಡಲು ಸಜ್ಜಾಗುತ್ತಿದೆ. ಅದೇ “ಈಶ್ವರ ವನ”. ಶಿವಮೊಗ್ಗದಿಂದ ಅಬ್ಬಲಗೆರೆಗೆ ಹೋಗುವ ಮಾರ್ಗದಲ್ಲಿ ಆಬ್ಬಲಗೆರೆ ಕೆರೆ ದಾಟಿದಾಕ್ಷಣ ಅಲ್ಲಿಯೇ ಬಲ ಭಾಗದಲ್ಲಿ ಒಂದೆರಡು ನಿಮಿಷ ನಡೆದರೆ ಸಿಗುವ ಮನೋಹರ ಸ್ಥಳವೇ ಈಶ್ವರ ವನ. ಅಲ್ಲೊಂದು ಪುಟ್ಟ ಈಶ್ವರನ ದೇವಾಲಯವಿದೆ. ಆದರೆ ದೇವರು ಮತ್ತು ಭಕ್ತರಿಗೆ ಸೇತುವಾದ ಪೂಜಾರಿ ಮಾತ್ರ ಇಲ್ಲ. ಎಲ್ಲವೂ ಖುಲ್ಲಂ ಖುಲ್ಲಾ. ಅಲ್ಲಿಗೆ ಬಂದ ಎಲ್ಲರಿಗೂ ಶಿವನನ್ನು ಮುಟ್ಟಿ ಪೂಜಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಕ್ಷೀರಾಭಿಷೇಕ ಮಾಡುವಂತಿಲ್ಲ. ಹಣ್ಣು – ಕಾಯಿ ನೈವೇದ್ಯ ಮಾಡಿಸುವಂತಿಲ್ಲ. ಹಣ ಹಾಕಲು ಕಾಣಿಕೆ ಡಬ್ಬಿಯಂತೂ ಇಲ್ಲವೇ ಇಲ್ಲ. ಕೇವಲ ಜಲಾಭಿಷೇಕ. ಈ ಶಿವ, ವಚನಕಾರರು ಹೇಳುವಂತೆ ನಾದ ಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ. ಕೇವಲ ಭಕ್ತಿ ಪ್ರಿಯ. ಹೀಗಾಗಿ ನಿಮ್ಮ ನಿರ್ಮಲ ಮನಸ್ಸಿನ ಭಕ್ತಿ ಭಾವವೇ ಶಿವನಿಗಿಲ್ಲಿ ಅರ್ಪಿತ. ಹೀಗಾಗಿ ಗಂಟೆಯ ನಾದವೂ ಇಲ್ಲ. ಏಕೆಂದರೆ, ಗಂಟೆಯ ಶಬ್ಧ ಇಲ್ಲಿಗೆ ಆಗಮಿಸುವ ಪಕ್ಷಿಗಳಿಗೆ ಕಿರಿಕಿರಿಯನ್ನು ಉಂಟುಮಾಡಬಾರದೆಂಬ ಪರಿಸರ ಕಾಳಜಿ.

(ನವ್ಯಶ್ರೀ ಎಂ. ವಿ. ನಾಗೇಶ್) ಫೋಟೋ ಕೃಪೆ : google

ಇಂತಹ ಒಂದು ಪರಿಕಲ್ಪನೆ ಬಂದುದು ನವ್ಯಶ್ರೀ ಎಂ. ವಿ. ನಾಗೇಶ್ ಅವರಿಗೆ ಆಕಸ್ಮಿಕವೇನಲ್ಲ. ಅವರು ಶೃಂಗೇರಿಯ ಬೆಣ್ಣೆಗುಡ್ಡೆಯವರು. ವಿಶ್ವನಾಥ್ ಮತ್ತು ಶಾಂತಮ್ಮನವರ ಪುತ್ರರಾಗಿ ಜನಿಸಿ, ಶಿವಮೊಗ್ಗೆಯ ರಾಷ್ಟ್ರೀಯ ಕಾಮರ್ಸ್ ಸಂಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿಗಾಗಿ ವ್ಯಾಸಂಗ ಮಾಡಿದರು. ೧೯೮೬ ರಿಂದ ಶಿವಮೊಗ್ಗದಲ್ಲಿ ನೆಲೆಸಿ, ಹಗಲು ಅಡಿಗೆ ಕೆಲಸ, ರಾತ್ರಿ ಕಾಲೇಜು ವಿದ್ಯಾಭ್ಯಾಸ ಮಾಡಿದರು. ಮೊದಲಿನಿಂದಲೂ ಸರಕಾರಿ ನೌಕರಿಗಿಂತ ‌ಸ್ವಂತ ಉದ್ಯೋಗದಲ್ಲಿ ಆಸಕ್ತಿ ಇದ್ದುದರಿಂದ ೧೯೯೨ ರಲ್ಲಿ ನವ್ಯಶ್ರೀ ಹೆಸರಿನಲ್ಲಿ ದಿನಸಿ ಅಂಗಡಿ ಮತ್ತು ಕೆಟರಿಂಗ್ ಪ್ರಾರಂಭಿಸಿದರು. ಗುಣಮಟ್ಟದ ಸೇವೆ ನೀಡಿದ್ದರಿಂದ ದಿನೇ ದಿನೇ ಅವರ ವ್ಯಾಪಾರ ವ್ಯವಹಾರ ಬೆಳೆದು, ಇಂದು ನವ್ಯಶ್ರೀ ಅನ್ನಪೂರ್ಣ ಸಭಾ ಭವನ ನಿರ್ಮಿಸಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರ ಡಾ. ಶರತ್ ಎಸ್. ಎಸ್. ಎಲ್. ಸಿ. ಯಲ್ಲಿ ಶೇ. ೯೯ ಅಂಕ ಗಳಿಸಿ ಇಡೀ ರಾಜ್ಯಕ್ಕೆ ಮೊದಲಿಗರಾಗಿದ್ದು ಹೆಗ್ಗಳಿಕೆ. ಮಗಳು ಇಂಜಿನಿಯರಿಂಗ್ ಓದುತ್ತಿರುವ ಪ್ರತಿಭಾವಂತೆ. ಪತ್ನಿ ಶಶಿಕಲಾ ತಮ್ಮೆಲ್ಲ ಪ್ರಗತಿಗೆ ಕಾರಣ ಎಂದು ನಾಗೇಶ್ ಹೇಳುತ್ತಿರುತ್ತಾರೆ.

ಸಮಾಜ ಇವರಿಗೆ ಸಾಕಷ್ಟು ನೀಡಿದೆ. ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ತುಡಿತ ಅವರ ಮನಸ್ಸಿವಲ್ಲಿ ಕಾಡಿದ್ದು ಸಹಜ. ಅದಕ್ಕಾಗಿಯೇ ಒಂದು ಎಕರೆ ಪ್ರದೇಶವನ್ನು ಖರೀದಿಸಿ, ಸುತ್ತಲೂ ವಿದ್ಯುತ್ ತಂತಿ ಬೇಲಿ ನಿರ್ಮಿಸಿ, ನೀರಿಗಾಗಿ ಕೊಳವೆ ಬಾವಿ ತೋಡಿಸಿದರು. ಪರಿಸರಾಸಕ್ತರನ್ನು ಸಂಪರ್ಕಿಸಿ, ತಮ್ಮ ಉದ್ದೇಶವನ್ನು ಅರುಹಿದಾಗ ಅವರೆಲ್ಲ ತುಂಬು ಮನಸ್ಸಿನಿಂದ ಬಂದು ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಮುಂದಾದರು. ಅದರ ಫಲಶೃತಿಯೇ ಇಲ್ಲೀಗ ಹಲಸು, ನೇರಳೆ, ನೆಲ್ಲಿ, ಬೇವು, ಹೆಬ್ಬೇವು, ಕಣಗಲೆ, ಬಿಲ್ವ, ಮಾವು, ಸಾಗುವಾನಿ ಮುಂತಾದ ಬಗೆಬಗೆಯ ಕಾಡು ಗಿಡಗಳನ್ನು ಬೆಳೆಸಲಾಗಿದೆ. ಈ ಗಿಡಗಳು ಸೊರಗದಂತೆ ಹನಿ ನೀರಾವರಿ ಪದ್ಧತಿಯನ್ನು ಅನುಸಲಾಗುತ್ತಿದೆ. ಇದರಿಂದ ಗಿಡಗಳು ಹಸುರಿನಿಂದ ನಳನಳಿಸಿ, ಪಕ್ಷಿಗಳ ಗಮನಕ್ಕೆ ಬಂದಿದೆ. ಕೋಟಿ ರೂಪಾಯಿ ಬೆಲೆಬಾಳುವ ಈ ಚಿನ್ನದಂತಹ ಭೂಮಿಯೀಗ ಪರಿಸರಾಸಕ್ತರ ಕೇಂದ್ರ ಬಿಂದುವಾಗಿದ್ದು, ಪ್ರಕೃತಿಯ ಬಗ್ಗೆ ಅರಿವೀ ಮೂಡಿಸಲು ಸಜ್ಜಾಗುತ್ಣಿದೆ. ಸದಾ ಬೀಸುವ ತಂಗಾಳಿ, ಮಾಲಿನ್ಯವಿಲ್ಲದ ಪರಿಸರ, ಕಣ್ಣು ಹಾಯಿಸಿದಷ್ಟೂ ಹಸಿರು, ಇಷ್ಟು ಸಾಕಲ್ಲವೇ ಮನಸ್ಸಿಗೆ ಆನಂದ ನೀಡಲು? ಈ ಕಾರ್ಯಕ್ಕೆ ನಾಗೇಶ್ ಕುಟುಂಬದವರು ಯಾರಿಂದಲೂ ದೇಣಿಗೆಯಾಗಿ ಚಿಕ್ಕಾಸನ್ನೂ ಸ್ವೀಕರಿಸಿಲ್ಲ ಮತ್ತು ಮುಂದೆಯೂ ಸಹ ಯಾರೊಬ್ಬರಲ್ಲಿಯೂ ಕೈಯೊಡ್ಡಬಾರದೆಂಬ ದೃಢ ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರ ಕುಟುಂಬದ ಎಲ್ಲರ ಸಹಮತವಿದೆ.

ಫೋಟೋ ಕೃಪೆ : google

ಮುಂದಿನ ದಿನಗಳಲ್ಲಿ ಇಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆ, ತುಳಸಿ ರಸಯುಕ್ತ ಪಾನೀಯವನ್ನು ತಯಾರಿಸಿ ಬಂದವರ ಬಾಯಾರಿಕೆ ತಣಿಸುವ ಉದ್ದೇಶವೂ ಸಹ ಇದೆ. ಅಲ್ಲದೆ ಶಾಲಾ ಮಕ್ಕಳನ್ನು ಇಲ್ಲಿಗೆ ಕರೆಯಿಸಿ ಪರಿಸರ ಸಂರಕ್ಷಣೆ ಕುರಿತು ಪ್ರಾಣ್ಯಕ್ಷಿಕೆ ನೀಡುವುದು, ಪಶು ಪಕ್ಷಿಗಳ ಬಗ್ಗೆ ಕಾಳಜಿ ವಹಿಸುವಂತೆ ಮಾರ್ಗದರ್ಶನ ಮಾಡುವುದು, ಪರಿಸರ ಪ್ರಿಯರಿಗೆ ಸೇವೆಗೆ ಅವಕಾಶ ಕಲ್ಪಿಸಿಕೊಡುವುದು, ಇವೇ ಮುಂತಾದ ಕಾರ್ಯಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಈ ಕಾರ್ಯಕ್ರಮವನ್ನು ಗುರುತಿಸಿ ಪಬ್ಲಿಕ್ ಟಿವಿಯವರು ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಪರಿಚಯಿಸಿದ್ದಾರೆ. ಅನೇಕ ಪರಿಸರ ಸಂಘಟನೆಗಳು ಇವರ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿವೆ. ನವ್ಯಶ್ರೀ ನಾಗೇಶ್ ಅವರು ತಮ್ಮ ಮನೆಯ ಅಂಗಳದಲ್ಲೊಂದು ಗೋ ಸಂರಕ್ಷಣಾ ಕೇಂದ್ರವೊಂದನ್ನು ಸಹ ನಡೆಸುತ್ತಿದ್ದಾರೆ. ಅಲಕ್ಷಿತ ಮತ್ತು ಗಾಯಗೊಂಡ ಗೋವುಗಳನ್ನು ಇಲ್ಲಿ ಸಾಕುತ್ತಿದ್ದಾರೆ. ಅದರ ಜೊತೆಗೆ ಮೊಲಗಳು, ನಾಯಿಗಳೂ ಸಹ ಸಂಗಾತಿಯಾಗಿವೆ.

ಫೋಟೋ ಕೃಪೆ : google

೨೦೧೭ ಜೂನ್ ೨೬ ರಂದು ಈ ಕಾರ್ಯಕ್ರಮ ಪ್ರಾರಂಭವಾಗಿದ್ದು ನಾಗೇಶ್ ಮತ್ತು ಅವರ ಕುಟುಂಬ ವರ್ಗದವರಿಗೆ ನೆಮ್ಮದಿ ತಂದಿದೆ. ಆ ವರ್ಷ ಶಿವರಾತ್ರಿಯಂದು ಪ್ರಥಮಬಾರಿಗೆ ಇಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿ, ಶಿವನನ್ನು ಪೂಜಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿಗೆ ಬಂದ ಭಕ್ತಾದಿಗಳಿಗೆಲ್ಲ ಪ್ರಸಾದ ವಿನಿಯೋಗ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲದೆ ಇಲ್ಲಿ ಸುಸೂತ್ರವಾಗಿ ಶಿವದರ್ಶನ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆ ದಿನ ಅಖಂಡ ಭಜನೆ ಕಾರ್ಯಕ್ರಮವನ್ನೂ ಹಮ್ಮಿಕೊಂಡು ಬಂದವರಿಗೆಲ್ಲಾ ಭಜನೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಹಾಗಾದರೆ ಬನ್ನಿ ಈ ಈಶ್ವರ ವನಕ್ಕೆ ಭೇಟಿ ನೀಡಿ. ಇದು ನಿಮ್ಮ ವನ. ನೀವಿಲ್ಲಿ ಮಾಡುವ ಏಕೈಕ ಕಾರ್ಯವೆಂದರೆ, ಸ್ವಚ್ಛತೆಯನ್ನು ಕಾಪಾಡುವುದು.


  • ಬಿ. ಎಸ್. ಶಿವಕುಮಾರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW