ಲೇಖನ: ಶಾಲಿನಿ ಪ್ರದೀಪ್
ಕತ್ತಲು ಸರಿದ ಮೇಲೆ ಬೆಳಕು ಹರಿಯಲೇಬೇಕಲ್ಲವೇ?. ಹಾಗೆಯೇ ಶಶಿಕುಮಾರ ಬದುಕಿನಲ್ಲಿ ಮಗಆದಿತ್ಯ ಶಶಿಕುಮಾರ್ ಹೊಂಬೆಳಕಾಗಿ ಹೊಮ್ಮಲ್ಲಿದ್ದಾರೆ. ಅಪ್ಪನ ಕಷ್ಟ,ಸುಖಗಳನ್ನು ಹತ್ತಿರದಿಂದಲೇ ಕಂಡ ಆದಿತ್ಯ ಅವರು ‘ಮೊಡವೆ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾ ಹದಿಹರೆಯದ ಪ್ರೇಮ ಕತೆಯಾಗಿದ್ದು, ಆದಿತ್ಯ ನಾಯಕನಾಗಿ ಮತ್ತು ಅಪೂರ್ವ ನಾಯಕಿಯಾಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಅಪ್ಪ ಬಹು ದೊಡ್ಡ ನಟನಾದರೂ ಆದಿತ್ಯ ಅಪ್ಪನ ಶೋಟಿಂಗ್ ನ್ನು ಒಮ್ಮೆಯೂ ಹೋಗಿ ಇಣುಕಿ ನೋಡಿಲ್ಲವಂತೆ. ಸಿನಿಮಾದಲ್ಲಿ ಪ್ರತಿಯೊಂದು ಆದಿತ್ಯನಿಗೆ ಹೊಸದು. ಸಿನಿಮಾದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ? ಎನ್ನುವ ಆತಂಕ ಅಪ್ಪನಾಗಿ ಶಶಿಕುಮಾರ ಅವರಿಗೆ ಇದೆಯಂತೆ.
ಆದಿತ್ಯ ಅವರು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು,ಓದಿನ ಜೊತೆಗೆಸಿನಿಮಾದಲ್ಲೂ ತೊಡಗಿಸಿಕೊಂಡಿದ್ದಾರೆ. ಸಿನಿಮಾಕ್ಕಾಗಿ ಡಾನ್ಸ್,ಫೈಟ್ ಸೇರಿದಂತೆ ಹಲವಾರು ತರಬೇತಿಗಳನ್ನು ಶ್ರಮವಹಿಸಿ ಇಷ್ಟಪಟ್ಟು-ಕಷ್ಟಪಟ್ಟು ಕಲೆಯುತ್ತಿದ್ದಾರೆ. ಕನ್ನಡದಲ್ಲಿ ಧೂದ ಪೇಡಾದಂತೆ ನಟ ದಿಗಂತರಿದ್ದಾರೆ. ಈಗ ಆದಿತ್ಯ ಅವರು ಕನ್ನಡದಲ್ಲಿ ಚಾಕಲೇಟ್ ಹೀರೊ ಆಗಲಿ ಎನ್ನುವುದು ಆಶಯ.
ಅಂಬರೀಷ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಆದರೆ ಅವರ ಪ್ರತಿರೂಪವಾಗಿ ಅವರ ಮಗ ಅಭಿಷೇಕ ಗೌಡ ಸದಾ ಕಾಲ ನಮ್ಮೊಂದಿಗಿರುತ್ತಾರೆ. ಒಂದು ನೋಟದಲ್ಲಿ ಬಾಲಿವುಡ್ ನ ಅರ್ಜುನ ಕಪೂರ್ ಅವರಂತೆ ಕಾಣುವ ಇವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮತ್ತೊಬ್ಬ ಸ್ಟಾರ್ ಪುತ್ರ. ಈಗಾಗಾಗೇ ಅಭಿಷೇಕ ಗೌಡರವರ ‘ಅಮರ’ ಸಿನಿಮಾದ ಚಿತ್ರೀಕರಣವು ಸೆಟ್ಟೇರಿದೆ. ವಿದೇಶಗಳಲ್ಲಿಯೂ ಅತ್ಯುತ್ತಮವಾದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಚಿತ್ರದ ಶೋಟಿಂಗ್ ಭರ್ಜರಿಯಾಗಿ ನಡೆಯುತ್ತಿರುವಾಗಲೇ ಅಪ್ಪನ ಅಗಲಿಕೆಯ ನೋವನ್ನು ಅಭಿಷೇಕ್ ಅವರು ನುಂಗಬೇಕಾಯಿತು.
ಕನ್ನಡ ಚಿತ್ರರಂಗದಲ್ಲಿ ಎತ್ತರವಿರುವ ನಟರೆಂದರೆ ಸುದೀಪ್, ದರ್ಶನ ಅವರು. ಈಗ ಅಭಿಷೇಕ ಈ ನಟರ ಎತ್ತರಕ್ಕಿಂತ ಎತ್ತರದ ನಟನಾಗಿದ್ದು,ಇವರ ಎತ್ತರ ೬ಅಡಿ ೪ಇಂಚು.ಇವರ ದೇಹದ ಮೊದಲಿನ ತೂಕ ೧೩೮ ಕೆಜಿ. ಸಿನಿಮಾದ ಸಿದ್ಧತೆಗಾಗಿ ಮೂರು ವರ್ಷಗಳಿಂದ ಮೈ ಬೆವರು ಇಳಿಸುತ್ತಿರುವ ಅಭಿಷೇಕ್ ಅವರ ಈಗಿನ ತೂಕ ಕೇವಲ ೯೮ ಕೆಜಿ ಎಂದರೆ ಯಾರಾದರೂ ನಂಬುತ್ತೀರಾ?. ಅಜಾನುಬಾಹುವಿನಂತಿರುವ ದೇಹದ ತೂಕ ಇಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಶ್ರದ್ದೆ, ಪರಿಶ್ರಮಗಳು ಇದ್ದರೇ ಮಾತ್ರ ಸಾಧ್ಯ ಎಂದು ಅಭಿಷೇಕ ತೋರಿಸಿ ಕೊಟ್ಟಿದ್ದಾರೆ.
‘ಜೂನಿಯರ್ ರೆಬಲ್ ಸ್ಟಾರ್’ ಎಂದೇ ಕರೆಯುವ ಅಭಿಷೇಕ ಅವರು ಅತ್ಯಂತ ಕೂಲ್… ಕೂಲ್… ವ್ಯಕ್ತಿತ್ವ. ಅಭಿಷೇಕ ಅವರು ಈಗಾಗಲೇ ಮಾಧ್ಯಮ ಮಿತ್ರರ ಮತ್ತು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಇವರ ‘ಅಮರ್’ ಸಿನಿಮಾವನ್ನು ಜನ ಅವರಂತೆ ಕೂಲ್… ಕೂಲ್… ಆಗಿಯೇ ಸ್ವೀಕರಿಸುತ್ತಾರಾ? ಎಂದು ಕಾದು ನೋಡಬೇಕು.
ಆದಿತ್ಯ ಶಶಿಕುಮಾರ್ ಮತ್ತು ಅಭಿಷೇಕ ಗೌಡ ಈ ಇಬ್ಬರು ಯುವ ನಟರು ಏಕ ಕಾಲಕ್ಕೆ ಸಿನಿಮಾ ಕಣಕ್ಕೆ ಇಳಿಯುತ್ತಿರುವುದರಿಂದ ಜೊತೆಗೆ ಸ್ಟಾರ್ ಪುತ್ರರಾದ್ದರಿಂದ ಪ್ರೇಕ್ಷಕರಲ್ಲಿ ಇವರ ಮೇಲೆ ಭಾರಿ ನಿರೀಕ್ಷೆಯಂತೂ ಇದೆ. ಇದು ಇಬ್ಬರಿಗೂ ಬಹು ದೊಡ್ಡ ಛಾಲೆಂಜ್ ಕೂಡಾ ಆಗಿದೆ. ಇವರಿಬ್ಬರು ವೃತ್ತಿ ಬದುಕಿನಲ್ಲಿ ಪ್ರತಿಸ್ಪರ್ಧಿಗಳಾಗುತ್ತಾರಾ? ಅಥವಾ ಕುಚುಕೂ…ಕುಚುಕೂ… ಗೆಳೆಯರಾಗುತ್ತಾರಾ? ಎನ್ನುವುದು ಕಾಲವೇ ನಿರ್ಧರಿಸಬೇಕಿದೆ.
ಈ ಇಬ್ಬರು ಯುವ ನಟರು ಚಂದನವನದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆಯಲಿ. ಅವರ ಅಪ್ಪಂದಿರಂತೆ ದೊಡ್ಡ ಹೆಸರು ಮಾಡಲಿ.
ಅಭಿಷೇಕ ಅವರಿಗೆ ಅಪ್ಪನ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ನಾವೆಲ್ಲರೂ ಆಶಿಸೋಣ…
……………………………………………….