ಜಿದ್ದಾಜಿದ್ದಿನ ಕಣವಾಗಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸೋಮವಾರ ನಾಮಪತ್ರಗಳ ಜಾತ್ರೆಯಾಗಿದ್ದು, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಪ್ರಭುಚವ್ಹಾಣ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ೮೪೨ ನಾಮಪತ್ರಗಳು ಸಲ್ಲಿಕೆಯಾಗಿವೆ. ಮೂರು ದಿನಗಳಲ್ಲಿ ಒಟ್ಟು ೧೨೬೩ ನಾಮಪತ್ರಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ.
ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವರುಣ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜೆ.ಸಿ.ಮಧುಸ್ವಾಮಿ, ಔರಾದ್ ಕ್ಷೇತ್ರದಿಂದ ಪ್ರಭು ಚವ್ಹಾಣ್, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಕ್ಷೇತ್ರದಿಂದ ನಿಖಿಲ್‌ಕುಮಾರಸ್ವಾಮಿ, ಸೊರಬ ಕ್ಷೇತ್ರದಿಂದ ಕುಮಾರಬಂಗಾರಪ್ಪ, ಮಧು ಬಂಗಾರಪ್ಪ, ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್, ಗದಗ ಕ್ಷೇತ್ರದಿಂದ ಎಚ್.ಕೆ.ಪಾಟೀಲ್, ಹಳಿಯಾಳ ಕ್ಷೇತ್ರದಿಂದ ಆರ್.ವಿ.ದೇಶಪಾಂಡೆ, ಶಿಕಾರಿಪುರ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸೇರಿದಂತೆ ಇತರೆ ಪ್ರಮುಖರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಇನ್ನುಳಿದಂತೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಶಂಕರಪಾಟೀಲ್ ಮುನೇನಕೊಪ್ಪ, ಇತರೆ ನಾಯಕರಾದ ಈಶ್ವರಖಂಡ್ರೆ, ರಾಜಶೇಖರ್ ಪಾಟೀಲ್, ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಎಚ್.ಆಂಜನೇಯ, ಚಲುವರಾಯಸ್ವಾಮಿ, ಎಚ್.ಡಿ.ರೇವಣ್ಣ, ಪ್ರೀತಂಗೌಡ, ಸಂತೋಷ ಲಾಡ್, ವಿಜಯಕುಲಕರ್ಣಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಪ್ರಸಾದ್ ಅಬ್ಬಯ್ಯ, ಪರಣ್ಣ ಮುನವಳ್ಳಿ, ಅರುಣ್‌ಕುಮಾರ್ ಪೂಜಾರ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಭಯ್ಯಾಪುರ, ಆರ್.ಪ್ರಕಾಶ್, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ರಾಜುಗೌಡ, ರಾಜಾವೆಂಕಟ್ಟಪ್ಪ ನಾಯಕ ಸೇರಿದಂತೆ ಇತರರು ನಾಮಪತ್ರ ಸಲ್ಲಿಕೆ ಮಾಡಿದರು. ಕಾಂಗ್ರೆಸ್ ನಾಯಕ ಬಾಬುರಾವ್ ಚಿಂಚನಸೂರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಅಮರೇಶ್ವರಿ ಸೂಚಕರಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಸಲ್ಲಿಕೆಯಾಗಿರುವ ೮೪೨ ನಾಮಪತ್ರಗಳ ಪೈಕಿ ೭೮೨ ನಾಮಪತ್ರಗಳನ್ನು ಪುರುಷರು, ೬೦ ನಾಮಪತ್ರಗಳನ್ನು ಮಹಿಳೆಯರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ರಾಷ್ಟ್ರ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯಿಂದ ೧೯೮, ಕಾಂಗ್ರೆಸ್‌ನಿಂದ ೧೯೫, ಜೆಡಿಎಸ್‌ನಿಂದ ೮೬, ಎಎಪಿಯಿಂದ ೫೦, ಬಿಎಸ್‌ಪಿ ೧೭, ಬಿಎಸ್‌ಪಿ ೧೭ ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಾಯಿತ ಪಕ್ಷಗಳಿಂದ ಗುರುತಿಸಿರುವ ೧೩೪ ನಾಮಪತ್ರಗಳನ್ನು ಸಲ್ಲಿಕೆ ಮಾಡಲಾಗಿದೆ. ಇನ್ನು, ೧೬೧ ನಾಮಪತ್ರಗಳು ಪಕ್ಷೇತರರಿಂದ ಸಲ್ಲಿಕೆಯಾಗಿವೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ತಮ್ಮ ಕಾರ್ಯಕರ್ತರು, ಬೆಂಬಲಿಗರಿಂದ ಮೆರವಣಿಗೆಯಲ್ಲಿ ಸಾಗಿ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಹಲವು ಅಭ್ಯರ್ಥಿಗಳು ಎರಡೆರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.