‘ನಾಳಿನ ಚಿಂತೆ ಬಿಟ್ಟು ಬಯಲ ಬಳಸಿ ಸುಮ್ಮನೆ ಹರಿ ಅಗಸವೇ ನಿನ್ನೊಳಗೆ ತೆಲುವುದು ಅರಿ’… ಕವಿ ಜಬೀವುಲ್ಲಾ ಎಂ. ಅಸದ್ ಅವರು ಬರೆದಿರುವ ಒಂದು ಸುಂದರ ಕವನಗಳು, ತಪ್ಪದೆ ಮುಂದೆ ಓದಿ…
ನಿಜ,
ಇದ್ದಂತೆ ಇದ್ದರೆ
ಯಾವುದೂ ಬದಲಾಗುವುದಿಲ್ಲ
ಬದಲಾಗಬೇಕು ನಾವೇ ಖುದ್ದು
ದೂಷಣೆ ಮನದ ಕುತಂತ್ರವದು
ಹಗ್ಗ ಹಾವಾಗುವುದಿಲ್ಲ
ನಿಂತ ನೀರು ಬತ್ತುವುದನ್ನು ಕಂಡಿರುವೆ ನೀನು
ಹಾಗಾಗಿ ನಿನಗೆ ನಾನು
ಹೆಚ್ಚಾಗಿ ಏನನ್ನೂ ಹೇಳೆನು
ನಾಳಿನ ಚಿಂತೆ ಬಿಟ್ಟು
ಬಯಲ ಬಳಸಿ ಸುಮ್ಮನೆ ಹರಿ
ಅಗಸವೇ ನಿನ್ನೊಳಗೆ ತೆಲುವುದು ಅರಿ
ಸಂತಸದ ಮೀನೊಂದು ಬಂದು
ನಿನ್ನ ಒಡಲಾಳ ಸೇರುವುದು
ಎಲ್ಲಿಂದಲೋ ಹಾರಿ ಬಂದ
ಹಕ್ಕಿಯ ನಗೆಯ ರೆಕ್ಕೆ ನಿನ್ನ ತಾಕುವುದು
ಹೀಗೆ ಇರದು ಇಲ್ಲಿ ಎಲ್ಲಾ
ಅನುಕ್ಷಣವೂ ಎಲ್ಲಾ ಬದಲಾಗುವುದು
ಕೆಡುಕು ಒಳಿತಾಗುವುದು
ಸೊಗಸು ಹೊಲಸಾಗುವುದು
ನೋವು ನಗುವುದ ಕಲಿವುದು
ದುಃಖ ಹೆಗಲೇರಿ ಕೂರುವುದು
ಯಾವುದೂ ಶಾಶ್ವತವಲ್ಲ
ಹುಟ್ಟು ಸಾವಾದಂತೆ, ಸಾವು ವರವಾದಂತೆ
ಬದುಕಿನ ಮಜಲು
ಸುತ್ತುವ ಭೂಮಿಯಲಿ ಹಗಲು ಇರುಳಾಗಿ
ಇರುಳು ಮರಳಿ ಬೆಳಗಿ
ಕಾಲ ಚಕ್ರ ಹೀಗೆಯೇ ಉರುಳಲೇ ಬೇಕಲ್ಲ
ಇದ್ದಂತೆ ಇರದು ಏನೂ
ನಾನು, ನೀನು, ಎಲ್ಲರೂ, ಎಲ್ಲವೂ ಸಹ
ಬದಲಾವಣೆ ಜಗದ ಅಲಿಖಿತ ನಿಯಮ
ಎಲ್ಲವೂ ಬದಲಾಗಲೇ ಬೇಕಲ್ಲ
ಸಂಜೆಗೆ ಬಾಡುವ ಸತ್ಯ ಹೂವಿಗೆ ತಿಳಿದಿದ್ದರೂ
ಮುಂಜಾವಿಗೆ ಅರಳಿ ನಗುವುದು
ಬಂಧನದ ಧ್ಯಾನದಿ ತೆವಳುವ ಕಂಬಳಿ ಹುಳು
ಚಿಟ್ಟೆಯಾಗಿ ಹೊಸ ರೂಪ ಧರಿಸಿ ರೆಕ್ಕೆಗಳ ಆಧಾರಿಸಿ
ಆಗಸಕ್ಕೆ ಜೀಕುವುದು
ಸೃಷ್ಟಿಯ ಚಲನೆಯಲ್ಲಿ ಎಲ್ಲವೂ ಹೀಗೆಯೇ ಮುಂದುವರಿಯುವುದು
ಕಾಲದ ಕರ ಪಿಡಿದು
ಬಯಕೆಗಳ ಬೀಜ ಬಿತ್ತುತ್ತ
ಕನಸುಗಳ ನೂಲು ಹೆಣೆಯುತ್ತ
ನೆನಪುಗಳ ಕೌದಿ ಹೊಲೆಯುತ್ತ
ಮುಂದುವರಿಯಬೇಕು ನಾವು
ಸಾಗಿದಂತೆಲ್ಲಾ ದೂರ ದೂರವೇ ಅಲ್ಲ
ಮುಳ್ಳುಗಳ ನಡುವೆಯೇ
ಗುಲಾಬಿ ಅರಳಿ ನಗುವುದಲ್ಲ
ಕಹಿಯಾದ ಬಾಯಿಗೆ
ಬೆಲ್ಲ ಕೊಡುವುದನ್ನು ಮರೆಯುವುದು ಬೇಡ
ಕಾಲ ಕೊಲ್ಲುವುದು ಎಲ್ಲವನ್ನು, ಎಲ್ಲರನ್ನು
ಒಂದು ದಿನ
ಕುಂತಲ್ಲೇ ಕೂತು
ಚಿಂತೆಯಲ್ಲಿ ಮುಳುಗಿ
ಬದುಕ ಸಂತಸದ ಚಣಗಳನ್ನು
ವೃಥಾ ಕಳೆಯುವುದು ಬೇಡ
ಬಾ ಜೊತೆಸೇರಿ ಹರಿಯೋಣ
ಬಂಜರು ಬಯಲನು ಹಸಿರಾಗಿಸೋಣ
ಇದ್ದಲ್ಲೇ ಬತ್ತುವುದು ಬೇಡ
- ಜಬೀವುಲ್ಲಾ ಎಂ. ಅಸದ್
