ಸ್ವಾತಂತ್ರ್ಯ ಲಭಿಸಿದ ದಿನ ಇಡೀ ದೇಶದ ಜನತೆ ಕುಣಿದು ಕುಪ್ಪಳಿಸುತ್ತಿದ್ದರೇ, ರಾಜಕೀಯ ನಾಯಕರು ಸ್ವತಂತ್ರ ಸರಕಾರದ ರಚನೆಯಲ್ಲಿ ತೊಡಗಿ ಯಾರ್ಯಾರಿಗೆ ಯಾವ ಖಾತೆ, ಸಂಪುಟದಲ್ಲಿ ಯಾರಿರಬೇಕೆನ್ನುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದರೆ ಅತ್ತ ದೂರದ ಬಂಗಾಲದಲ್ಲಿ ಗಾಂಧಿ ವಿಷಣ್ಣರಾಗಿದ್ದರು. ಮೋಹನ್ ಕುಮಾರ್ ಡಿ ಎನ್ ಅವರು ಈ ಪುಸ್ತಕದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…
ಪುಸ್ತಕ : ಗಾಂಧಿ ಮಹಾತ್ಮರಾದುದು – ಸಂಪುಟ 1 ಮತ್ತು 2″
ಇಂಗ್ಲೀಷ್ ಮೂಲ : ರಾಮಚಂದ್ರ ಗುಹಾ
ಕನ್ನಡಕ್ಕೆ : ಜಿ ಎನ್ ರಂಗನಾಥ ರಾವ್
ಪುಟಗಳು : 745, ಬೆಲೆ : 540/-
ಪ್ರಕಾಶನ : ವಸಂತ ಪ್ರಕಾಶನ ಬೆಂಗಳೂರು.
ಹೆಸರೇ ಹೇಳುವ ಹಾಗೆ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಹೋರಾಟಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ. ಇದರ ಕುರಿತು ಸ್ವತಃ ಗಾಂಧಿಯವರೇ ತಮ್ಮ ಅನುಭವಗಳ ಕುರಿತು ಬರೆದಿದ್ದಾರೆ. ಸ್ವಾನುಭವ ಮತ್ತು ಸ್ಮೃತಿಯಾಧಾರಿತವಾಗಿ ಗಾಂಧಿಯವರು ದಾಖಲಿಸಿದ ದಕ್ಷಿಣ ಅಫ್ರಿಕಾದ ತಮ್ಮ ಅನುಭವಗಳನ್ನು, ಇಂದಿನ ಕಾಲಕ್ಕೆ, ತೀವ್ರತಮ ಭಾವೋದ್ವೇಗಕ್ಕೆ ಬೀಳದಂತೆ ಸಾಕ್ಷ್ಯ ಮತ್ತು ಪುರಾವೆಗಳು, ಮುಖ್ಯವಾಗಿ ರಾಷ್ಟ್ರೀಯ ಪತ್ರಗಾರದ ತಿಜೋರಿಯಲ್ಲಿ ಇವತ್ತಿಗೂ ಭದ್ರವಾಗಿ ಮಡತೆ ತಿನ್ನುತ್ತಾ ಬಿದ್ದಿರುವ ಅಸಂಖ್ಯ ಪತ್ರಗಳ ಆಧಾರದ ಮೇಲೆ ವಸ್ತುನಿಷ್ಠವಾಗಿ ಬರೆದ ಕೃತಿಯಿದು. ಹೀಗಾಗಿ ಇಲ್ಲಿ ಉಲ್ಲೇಖಿಸಿರುವ ಪ್ರತಿಯೊಂದು ಘಟನೆಗಳಿಗೂ ಆಧಾರವಿದೆ. ಯಾವುದನ್ನೇ ಆಗಲಿ ಪುನರ್ನಿರ್ಮಿಸಿಲ್ಲ.

ತಾನು ಓದಿದ ಓದಿಗೆ ಸರಿಯಾದ ಕಿಮ್ಮತ್ತು ಸಿಗದಾದಾಗ ಉದ್ಯೋಗಾಕಾಂಕ್ಷಿಯಾಗಿ ದೂರದ ದಕ್ಷಿಣ ಆಫ್ರಿಕಾಕ್ಕೆ ಹೋದ ಒಬ್ಬ ಕಾಥೇವಾಡದ ಸಾಮಾನ್ಯ ಹುಡುಗ ಭವಿಷ್ಯದಲ್ಲಿ ತ್ರಿವಿಕ್ರಮನಂತೆ ಬೆಳೆದು ಬಂದ ಸುಧೀರ್ಘ ಇಪ್ಪತ್ತು ವರ್ಷಗಳ ಪಯಣ ಅನನ್ಯವಾದುದು. ಇಡೀ ಮನುಕುಲಕ್ಕೆ ಪ್ರಭುತ್ವವನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಹೊಸ ಮಾದರಿಯನ್ನು ಪರಿಚಯಿಸಿಕೊಟ್ಟವರು ಗಾಂಧಿ. ಅದೇ ಸತ್ಯಾಗ್ರಹ, ಅಸಹಕಾರ, ಶಾಂತಿ ಮತ್ತು ಸಂಘಟನೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಇಂದಿಗೂ ಅನೇಕ ದೇಶಗಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ದಶಕಗಳ ಕಾಲದಿಂದ ನಿರಂತರ ಹೋರಾಟ ಮಾಡುತ್ತ ತಮ್ಮ ನಾಡನ್ನು ದಾಸ್ಯ ಸಂಕೋಲೆಗಳಿಂದ ಬಂಧ ವಿಮೋಚನೆ ಗಳಿಸಿಕೊಂಡಿವೆ. ಸಾಮಾನ್ಯ ವಕೀಲನೊಬ್ಬ ಪರದೇಶದ ನೆಲದಲ್ಲಿ ಮಹಾತ್ಮನಾಗಿ ಬೆಳೆದು ರೂಪುಗೊಂಡ ಬಗೆಯನ್ನು ಕೇವಲ ಮಾತು ಮತ್ತು ಅಕ್ಷರ ರೂಪದಲ್ಲಿ ಹಿಡಿದಿಡಲು ಅಗುವುದಿಲ್ಲ. ಐತಿಹಾಸಿಕ ಕಥಾನಕವನ್ನು ಓದಿಯೇ ತಿಳಿಯಬೇಕು. ಹೀಗಾಗಿ ಹೇಳಲು ಅಸಂಖ್ಯ ಸಂಗತಿಗಳಿದ್ದರೂ, ಅದನ್ನೆಲ್ಲ ಬದಿಗೆ ಸರಿಸಿ, ಈ ಚಿಕ್ಕ ಚೊಕ್ಕ ಬರಹವನ್ನಿಲ್ಲಿಗೇ ಮುಗಿಸುತ್ತಿದ್ದೇನೆ.
ಮೂಲ ಲೇಖಕ ರಾಮಚಂದ್ರ ಗುಹಾ ಅವರ ಕಸುಬುದಾರಿಕೆ ಮತ್ತು ಅನುವಾದಕ ಜಿ ಎನ್ ರಂಗನಾಥ್ ರಾವ್ ಅವರ ಕನ್ನಡಿಸುವಿಕೆಯ ಬಗ್ಗೆ ವಿಶಿಷ್ಟವಾಗಿ ಹೇಳಬೇಕಾಗಿಲ್ಲ. ಅದ್ಭುತ! ಎಂದಷ್ಟೇ ಹೇಳಬಲ್ಲೆ.
ಎಂದಿನಂತೆ ಕೆಲವು ಟಿಪ್ಪಣಿ ಮಾಡಿಟ್ಟುಕೊಂಡಿದ್ದೇನೆ. ಆಸಕ್ತರು ಓದಬಹುದು:
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಅವರು ಅನುಭವಿಸಿದ ಜನಾಂಗೀಯ ಮತ್ತು ವರ್ಣನೀತಿ ಎಂದರೆ ಮೊಟ್ಟಮೊದಲನೆಯದಾಗಿ, ಪೀಟರ್ ಮಾರಿಟ್ಸ್ ಬರ್ಗ್ ರೈಲು ನಿಲ್ದಾಣದಲ್ಲಿ ಮೊದಲ ದರ್ಜೆಯಿಂದ ಹೊರಕ್ಕೆ ಹಾಕಿದ್ದು. ಈ ಘಟನೆ ಗಾಂಧಿಗೆ ತಾನು ಭವಿತವ್ಯದಲ್ಲಿ ವಹಿಸಬೇಕಿದ್ದ ಪಾತ್ರದ ಬಗ್ಗೆ ದ್ಯೋತಕ ಸೂಚ್ಯವಾಗಿತ್ತಲ್ಲದೇ ಸಾಮಾಜಿಕ ಪ್ರತಿಭಟನೆಯ ಜೀವಾಂಕುರವಾಗಿದ್ದ ಸತ್ಯಾಗ್ರಹ ಚಳುವಳಿಯೂ ಆ ಕ್ಷಣದಲ್ಲಿ ಅವರಲ್ಲಿ ಮೂಡಿ ನಿಲ್ಲಲು ಸಹಾಯಕವಾಗಿತ್ತು. ಮತ್ತು ಡರ್ಬಾನಿನ ಸಾಗರ ಕಿನಾರೆಯಲ್ಲಿ ನಡೆದ ದೈಹಿಕ ಹಲ್ಲೆಯೂ ಅವರೊಳಗೊಬ್ಬ ಸತ್ಯಾಗ್ರಹಿಯನ್ನು ಹುಟ್ಟುಹಾಕಿತ್ತು.
ಧಾರ್ಮಿಕ ಮತ್ತು ಜನಾಂಗೀಯ ಗಡಿಗಳ ಮಿತಿಗಳನ್ನು ದಾಟಿ ಸ್ನೇಹಗಳಿಸುವ ಆತುರದ ಗಾಂಧಿ; ಸಂಘಟನಕಾರ ಗಾಂಧಿ; ಲೇಖಕ ಗಾಂಧಿ; ಚಿಂತಕ ಹಾಗೂ ಪ್ರಚಾರಕ ಗಾಂಧಿ – ಹೀಗೆ ಈ ಎಲ್ಲ ಗಾಂಧಿಗಳೂ ಲಂಡನ್ನಿನ ಸಸ್ಯಾಹಾರಿ ಸಂಘದ ಸದಸ್ಯತ್ವದ ಮುಖೇನ ಪ್ರಕಾಶಗೊಂಡು ಜನಮನ ಸೆಳೆದಿದ್ದರು.
ವೇದಗಳೇ ಧರ್ಮದ ಮೂಲ ಎಂಬ ಹಿಂದೂ ಸಿದ್ಧಾಂತವನ್ನು ಈ ಜೈನ ಪಂಡಿತ ಒಪ್ಪಿಕೊಂಡಿರಲಿಲ್ಲ. ನಿಜ, ವೇದಗಳು ಪ್ರಾಚೀನವಾದವು. ಬೌದ್ಧಧರ್ಮ ಅಥವಾ ಜೈನ ಧರ್ಮಗ್ರಂಥಗಳಿಗಿಂತ ಪುರಾತನಕಾಲದವು, ಆದರೆ “ಪ್ರಾಚೀನವಾದುದೆಲ್ಲ ಪರಿಪೂರ್ಣ ವಾದದ್ದು ಎಂದು ಹೇಳುವುದರಲ್ಲಿ ಯಾವುದೇ ತರ್ಕವಿಲ್ಲ. ನವೀನವಾದುದೆಲ್ಲವೂ ಅಪರಿಪೂರ್ಣ ಹಾಗೂ ಸತ್ಯವಾದದ್ದು ಎನ್ನುವ ಮಾತಿನಲ್ಲೂ ತರ್ಕವಿಲ್ಲ” ಎಂಬುದು ಅವರ ನಿಲುವಾಗಿತ್ತು. ವೇದಗಳಂತೆಯೇ ಬೈಬಲ್. ಬೈಬಲ್ ಪರಿಪೂರ್ಣತೆಯನ್ನು ಅಥವಾ ಅದ್ವಿತೀಯವಾದ ಸತ್ಯವನ್ನೊಳಗೊಂಡಿದೆ ಎಂದೂ ಹೇಳಲಾಗದು. “ಸಾಂಕೇತಿಕವಾಗಿ ಏಸುಕ್ರಿಸ್ತನನ್ನು ದೇವಪುತ್ರನೆಂದು ನಂಬಬಹುದು, ಭಾವಿಸಬಹುದು. ಆದರೆ ವೈಚಾರಿಕವಾಗಿ ಇಂತಹದ್ದೊಂದು ನಂಬಿಕೆ ಅಸಾಧ್ಯ” ಎನ್ನುವುದು ಅವರ ವಾದವಾಗಿತ್ತು.
ಇಂತಹ ಹತ್ತು ಹಲವು ಟಿಪ್ಪಣಿಗಳಿವೆ. ಅದನ್ನೆಲ್ಲ ಹಾಕುತ್ತಾ ಕುಳಿತರೆ..
*****
ಇದನ್ನು ಓದುವ ಸಂದರ್ಭದಲ್ಲಿ ಜನವರಿ ಮೂವತ್ತು ಗಾಂಧಿ ಹುತಾತ್ಮರಾದ ದಿನದಂದು ವಾಟ್ಸಾಪ್ ಗುಂಪು ಒಂದರಲ್ಲಿ ನಾನು ಹಂಚಿಕೊಂಡ ಅಭಿಪ್ರಾಯಗಳಿವು:
ಗಾಂಧಿಯನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಯಿಂದ ನಾವುಗಳು ದೂರ ಸರಿದು ಬಹಳ ದಶಕಗಳೇ ಕಳೆದಿದೆ. ಅವರನ್ನು ಒಬ್ಬ ಮಹಾತ್ಮನನ್ನಾಗಿ ಬಿಡಿ, ಸಾಮಾನ್ಯ ಮನುಷ್ಯನನ್ನಾಗಿಯೂ ಅಂಗೀಕರಿಸದ ವೈರುಧ್ಯಕ್ಕೆ ನಾವಿವತ್ತು ತಲುಪಿದ್ದೇವೆ. Of course, ಮಹಾತ್ಮ ಎನ್ನುವುದು ಟ್ಯಾಗೋರರ ಅಭಿದಾನವೇ ಹೊರತು, ದೇಶದ ಜನತೆ ಅದನ್ನು ಅನುಮೋದಿಸಿದರೇ ಹೊರತು ಸ್ವತಃ ಗಾಂಧಿಯವರಿಗೆ ಹಾಗೆ ಕರೆಸಿಕೊಳ್ಳುವ ಹುಕಿಯಿರಲಿಲ್ಲ. ನಿಜ ಹೇಳಬೇಕೆಂದರೆ, ಅವರಾಗಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬರಲೂ ಇಲ್ಲ.

(ಗಾಂಧಿ ಮಹಾತ್ಮರಾದುದು ಪುಸ್ತಕ ಕನ್ನಡಕ್ಕೆ : ಜಿ ಎನ್ ರಂಗನಾಥ ರಾವ್)
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ನಾಗರೀಕ ಹೋರಾಟವು ತಾತ್ಪೂರ್ತಿಕ ಅಂತ್ಯಕ್ಕೆ ತಲುಪಿ ನಿಚ್ಚಳ ಜಯ ಲಭಿಸುವ ಹಂತದಲ್ಲಿ ಅವರನ್ನು ಹಾಗೆ ಅಲ್ಲಿಯೇ ಬಿಟ್ಟುಬಿಟ್ಟಿದ್ದರೆ ನಷ್ಟವಾಗುತ್ತಿದ್ದುದು ಭಾರತಕ್ಕೇ ಹೊರತು ಗಾಂಧಿಯವರಿಗಲ್ಲ. 1915ರಲ್ಲಿ ಗಾಂಧಿಯವರಿಗೆ ತನ್ನ ಮುಂದಿನ ರಾಜಕೀಯ ಭವಿಷ್ಯದ ಚಿಂತನೆಯಿಲ್ಲದಿದ್ದ ಸಮಯದಲ್ಲಿ ಅವರನ್ನು ಒಲಿಸಿ ಭಾರತಕ್ಕೆ ಎಳೆ ತರಲಾಯಿತು; ಭಾರತದ ಸ್ವರಾಜ್ಯ ಹೋರಾಟಕ್ಕಾಗಿ ಮುಂಚೂಣಿ ವಹಿಸಿ ನಾಯಕತ್ವ ವಹಿಸಿಕೊಳ್ಳಲಿಕ್ಕೆ. ಹಾಗೆ ಅವರನ್ನು ಅಲ್ಲಿಂದ ಮನವೊಲಿಸಿ ಕರೆತಂದವರಲ್ಲಿ ಪ್ರಮುಖರು ಗಾಂಧಿಯವರ ರಾಜಕೀಯ ಗುರುಗಳೆಂದೇ ಕರೆಯಲ್ಪಡುವ, ಹೊಂ ಇಂಡಿಯಾ ಲೀಗ್ ನ ಸ್ಥಾಪಕರಾದ ಗೋಪಾಲಕೃಷ್ಣ ಗೋಖಲೆಯವರು. ಇವರಲ್ಲದೆ ರತನ್ ಟಾಟಾ, ಮೋತಿಲಾಲ ನೆಹರು, ಸ್ವದೇಶಿ ಚಳುವಳಿಯ ಮುಖ್ಯ ನೇತಾರರು ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್. ಇವರೆಲ್ಲರನ್ನೂ ಮೀರಿಸುವಂತೆ ಗಾಂಧಿಯವರನ್ನು ದಕ್ಷಿಣ ಆಫ್ರಿಕಾದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಗೆ ಎಳೆದು ತರುವಲ್ಲಿ ಪಾತ್ರವಿದ್ದದ್ದು ಅವರ ಆತ್ಮೀಯ ಮಿತ್ರನಾದ ಪ್ರಾಣ್ ಜೀವನ್ ಮೆಹ್ತಾ ಅವರಿಗೆ. ಇವರೆಲ್ಲರ ಪ್ರೀತಿಪೂರ್ವಕ ಒತ್ತಾಸೆಗೆ ಮಣಿದು ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲು ಮನಸ್ಸು ಮಾಡಿದರು. ಹಾಗೆ ಭಾರತಕ್ಕೆ ಮರಳುವ ಮುನ್ನ ಚಳುವಳಿಯ ನೇತೃತ್ವವನ್ನು ವಹಿಸಿಕೊಳ್ಳುವ ಯಾವ ನಡೆಯೂ ಗಾಂಧಿಯವರ ಪೂರ್ವನಿರ್ಧರಿತ ನಡೆಯಲ್ಲ. ಅದು ತಾನಾಗಿಯೇ ಒಲಿದು ಬಂದದ್ದು. ಆ ಹೊತ್ತಿಗೆ ದೇಶವನ್ನು ಮುನ್ನಡೆಸುವ ನಾಯಕತ್ವ ವಹಿಸಿದ್ದ ಸೌಮ್ಯ ಮತ್ತು ಪ್ರತಿಗಾಮಿ ಗುಂಪಿನ ನೇತಾರರು ಭಾಗಶಃ ಹಿನ್ನೆಲೆಗೆ ಸರಿಯುತ್ತಿದ್ದರು ಮತ್ತು ಹೆಚ್ಚಿನವರು ವಯಸ್ಸಾಗಿ ಚಳುವಳಿಯ ಭಾರ ಹೊರುವ ಶಕ್ತಿ ಕಳೆದುಕೊಂದಿದ್ದರು. ಹೀಗಾಗಿ ಆಯಾಚಿತವಾಗಿ ದಕ್ಷಿಣ ಆಫ್ರಿಕಾದಿಂದ ಬಂದ ಗಾಂಧಿಯವರಿಗೆ ಚಳುವಳಿಯ ನೇತೃತ್ವ ಒಲಿದು ಬಂದಿತು.
ಅಕಸ್ಮಾತ್ ಅಂದು ಒಲ್ಲೆ ಎಂದಿದ್ದರೆ ಇಂದಿಗೆ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಅವರಿಗಿಂತಲೂ ಹೆಚ್ಚಿನ ಜನಪ್ರಿಯ ನಾಯಕರು, ರಾಜಕೀಯ ಮುತ್ಸದ್ದಿಗಳು ಆಗಿರುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಿತಾಸಕ್ತಿಗಳನ್ನು ಕಾನೂನುಬದ್ಧಗೊಳಿಸಿದ ನಂತರ ತಮ್ಮ ಮುಂದಿನ ನಡೆಯ ಆಯ್ಕೆಯಲ್ಲಿ ಅವರಿಗೆ ಗೊಂದಲ ಮತ್ತು ಸಂಶಯಗಳಿದ್ದವು. ಹಾಗೇನಾದರೂ ಪ್ರೀತಿಪಾತ್ರರ ಮಾತಿಗೆ ಕಟ್ಟುಬಿದ್ದು ಭಾರತಕ್ಕೆ ಮರಳಿ ಬಾರದೆ ಹೋಗಿದಿದ್ದರೆ, ನಿಸ್ಸಂಶಯವಾಗಿ, ಗಾಂಧಿಯವರ ಮುಂದಿನ ಆಯ್ಕೆ ದಕ್ಷಿಣ ಆಫ್ರಿಕಾ ಮೂಲ ನಿವಾಸಿಗಳಾದ ಕಪ್ಪು ವರ್ಣೀಯರ ಹಿತಾಸಕ್ತಿ ಕುರಿತಾಗಿಯೇ ಇರುತ್ತಿತ್ತು. ಆದರೆ ವಿಧಿಯ ನಿಶ್ಚಯ ಬೇರೆಯದಿತ್ತು. ತಾಯ್ನಾಡಿನ ಋಣ ವಿಮೋಚನೆಗೆಂದು ಬರಿಗಾಲ ಫಕೀರನಾಗಿ ತನ್ನಿಡೀ ಜೀವಿತವನ್ನು ಅಸ್ಪೃಶ್ಯತೆಯನ್ನು ತೊಡೆದು ಹಾಕಲು, ಹಿಂದೂ ಮುಸ್ಲಿಂ ಐಕ್ಯತೆ ಸಾಧಿಸಲು, ಅಹಿಂಸೆಯನ್ನು ಅಸ್ತ್ರವಾಗಿಸಿ ಸ್ವರಾಜ್ಯ ಪ್ರತಿಪಾದಿಸುತ್ತ, ಸತ್ಯದ ಹಾದಿಯಲ್ಲಿ ನಡೆಯುತ್ತ ಬಂದ ಕಾಥೇವಾಡದ ಮನುಷ್ಯನೊಬ್ಬ, ಬದಲಾದ ಇಂದಿನ ಕಾಲಮಾನದಲ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಯಥೇಚ್ಛವಾಗಿ ಮೇಳೈವಿಸಿರುವ ಅಬ್ಬರದಲ್ಲಿ, ತುಚ್ಛನಾಗಿ ಕಾಣಲ್ಪಡುವ, ನಿಕೃಷ್ಟನಾಗಿ ಹೀಯಾಳಿಸಲ್ಪಡುವ ದಯಾಹೀನ ಸ್ಥಿತಿಗೆ ಬರಬೇಕಾದ ಅವಶ್ಯಕತೆಯಾದರೂ ಏನಿತ್ತು? ಅವಶ್ಯಕತೆ ನಮ್ಮದಿತ್ತು. ಹೀಗಾಗಿ ಕರೆಸಿಕೊಂಡೆವು. ಸ್ವರಾಜ್ಯ ಗಳಿಸಿದೆವು. ಮರೆತೆವು. ಇದು ಭಾರತೀಯರ ಜನ್ಮ ಜಾಡ್ಯಕ್ಕಂಟಿದ ಖಾಯಿಲೆ. ಭಗತ್ ಸಿಂಗರನ್ನು ಮನಸ್ಸು ಮಾಡಿದ್ದರೆ ಗಾಂಧಿ ಉಳಿಸಿಕೊಳ್ಳಬಹುದಿತ್ತು ಎನ್ನುವುದು ಅವರ ಮೇಲಿನ ಮಹದಾರೋಪ. ನಿಜ. ಭಗತರನ್ನು ಗಲ್ಲಿಗೇರಿಸುವ ಸಮಯದಲ್ಲಿ ಗಾಂಧಿ ಆಂಗ್ಲರ ನೆಲದಲ್ಲಿಯೇ ಇದ್ದರು. ಅವರು ಮನಸ್ಸು ಮಾಡಿ ಹೇಳಿಕೆ ನೀಡಿದ್ದರೆ ಶಿಕ್ಷೆ ತಪ್ಪಿಸಲಾಗುತ್ತಿರಲಿಲ್ಲವಾದರೂ ಗಲ್ಲನ್ನು ತಪ್ಪಿಸಬಹುದಾಗಿತ್ತು. ಅದೂ ನಿಜ. ಆದರೆ ಅಹಿಂಸೆಯನ್ನೇ ತನ್ನ ಜೀವನದ ಉಸಿರಾಗಿಸಿಕೊಂಡಿರುವಾಗ ಹಿಂಸೆಯ ವಿರುದ್ಧ ಸ್ವರಾಜ್ಯ ಸಂಪಾದನೆ ಮಾಡಲು ಹೊರಟ ಉನ್ಮತ್ತನೊಬ್ಬನ ಪರವಾಗಿ ಹೇಳಿಕೆ ನೀಡುವುದು ಇತರ ಉಗ್ರ ಗುಂಪಿನವರಿಗೆ ಮತ್ತಷ್ಟು ಹಿಂಸೆಗೆ ಪ್ರಚೋದಿಸಬಹುದಾಗಿತ್ತು ಮತ್ತು ಹಿಂಸೆಯ ಹಾದಿಯ ಹೋರಾಟವು ಆಂಗ್ಲರನ್ನು ಇನ್ನಷ್ಟು ಕಠಿಣವಾಗಿಸಿ ಸ್ವರಾಜ್ಯ ಪಡೆಯುವಲ್ಲಿ ವಿಳಂಬವಾಗಬಹುದಾದ ಸೂಕ್ಷ್ಮ ರಾಜತಾಂತ್ರಿಕ ಕಾರಣವನ್ನು ಗಾಂಧಿ ಅರಿತಿದ್ದರು. ಹೀಗಾಗಿ ತಟಸ್ಥರಾದರು. ಇದನ್ನು ನಮ್ಮಲ್ಲಿ ಎಷ್ಟು ಮಂದಿ ಅರ್ಥ ಮಾಡಿಕೊಳ್ಳಬಲ್ಲರು? ಭಗತರ ಸಾವಿಗೆ ಗಾಂಧಿ ತೀವ್ರವಾಗಿ ಮರುಗಿದರೆನ್ನುವ ಸತ್ಯ ಬಹಳಷ್ಟು ಮಂದಿಗೆ ತಿಳಿದಿರಲಾರದು.

ಇಂಗ್ಲೀಷ್ ಮೂಲ : ರಾಮಚಂದ್ರ ಗುಹಾ (ಫೋಟೋ ಕೃಪೆ : Hindustani Times)
ಒಂದು ಹಂತದಲ್ಲಿ ಭಾರತೀಯರಿಗೆ ಚುನಾಯಿತ ಶಾಸನ ಪ್ರತಿನಿಧಿಗಳ ಸ್ಥಾನಮಾನವನ್ನು ಸೀಮಿತ ಅಧಿಕಾರದೊಂದಿಗೆ ಕೊಡಲು ಆಂಗ್ಲರು ಒಪ್ಪಿದ್ದರು. ಮುಂದುವರೆದು ಯೂರೋಪಿನ ವಸಾಹತುಗಳ ಕೆಲವು ದೇಶಗಳಿಗೆ ನೀಡಿದಂತೆ ಸ್ವಯಮಾಡಳಿತವನ್ನು ನೀಡಲೂ ಮನಸ್ಸು ಮಾಡಿದ್ದರು. ಆದರೆ ಗಾಂಧಿಯವರು ಬಯಸಿದ್ದು ಸಂಪೂರ್ಣ ಸ್ವಾತಂತ್ರ್ಯವನ್ನು. ಗಾಂಧಿ ಸ್ತ್ರೀಲೋಲ, ನಪುಂಸಕ ಎನ್ನುವುದು ಆಗಿನ ಕಾಲದಲ್ಲಿದ್ದ ಜನಪ್ರಿಯ ಕಟ್ಟು ಕತೆಗಳು. ಪ್ರತಿ ನಾಯಕನ ಹಿಂದೆ ಮುಂದೆ ಇಂತಹ ಕಪೋಲಕಲ್ಪಿತಗಳು ದೇಶಕಾಲಗಳ ಗಡಿ ಮೀರಿ ಹರಿಯುತ್ತಲೇ ಇರುತ್ತವೆ ಮತ್ತು ಇಂತಹ ಮಿಥ್ಯಾರೋಪಗಳಿಂದ ನಾಯಕ ಹೊರತಾಗಿ ಇರುವುದಿಲ್ಲ. ಆದರೆ ಗಾಂಧಿ ಇದ್ದರು. ಅವರ ಬದುಕು ತೆರೆದ ಪುಸ್ತಕವಾಗಿತ್ತು. ಅದನ್ನು ಯಾರು ಎಲ್ಲಿಂದ ಬೇಕಾದರೂ ಅಭ್ಯಸಿಸಬಹುದಿತ್ತು, ಪರಿಶೀಲಿಸಬಹುದಿತ್ತು. ಪ್ರಶ್ನಾತೀತ ಬದುಕು ಅವರದಾಗಿರಲಿಲ್ಲ. ಅವರು ನಮ್ಮ ನಿಮ್ಮ ಹಾಗೆಯೇ ಸಾಮಾನ್ಯರಿದ್ದರು. ಎಲ್ಲರಿಗೂ ಇರುವಂತೆ ಅವರಿಗೂ ಬಲಹೀನತೆಗಳಿದ್ದವು. ಲೈಂಗಿಕತೆಯನ್ನು ಮೀರಲು, ಬ್ರಹ್ಮಚರ್ಯವನ್ನು ಸಾಧಿಸಲು ಅವರು ಹಲವು ಪ್ರಯೋಗಗಳನ್ನು ನಡೆಸುತ್ತಿದ್ದರು. ಅಂದಿನ ಮಡಿ ಮೈಲಿಗೆಯ ಸಮಾಜಕ್ಕೆ ಗಾಂಧಿ ನಡೆಸುತ್ತಿದ್ದ ಪ್ರಯೋಗಗಳು ತೀರ ಅಡ್ವಾನ್ಸ್ಡ್ ಆಗಿ ಕಾಣಿಸುತ್ತಿದ್ದರಲ್ಲಿ ಅಥವಾ ಅರಗಿಸಿಕೊಳ್ಳಲಾಗದ್ದಕ್ಕೆ ಗಾಂಧಿಯನ್ನು ಹೊಣೆಗಾರರನ್ನಾಗಿಸಿದರೆ ಅರ್ಥವಿಲ್ಲ. ಗಾಂಧಿಯವರ ಪ್ರತಿ ನಡೆ ನುಡಿ ನಿರ್ಧಾರಗಳು ಮುಂದಾಲೋಚನೆಯಿಂದ ಕೂಡಿರುತ್ತಿದ್ದವು. ಅವರ ಹಲವು ಪ್ರಯೋಗಗಳನ್ನು ನಾವು ಅಂದಿನ ದಿನಗಳ ಸಾಮಾಜಿಕ ಚಿಂತನೆಗಳಿಂದ, ಪಾರಿಸರಿಕ ಅಭಾಸಗಳಿಂದ, ಭಿನ್ನ ಸಾಂಸ್ಕೃತಿಕತೆಯಿಂದ ಗಮನಿಸಿದಾಗ ಮಾತ್ರ ಸತ್ಯದ ಅರಿವಾಗುವುದು. ವ್ಯಕ್ತಿಯೊಬ್ಬನನ್ನು ಅವನು ಜೀವಿಸಿದ್ದ ಕಾಲಘಟ್ಟದ ಸ್ಥಾನಮಾನಗಳಿಂದ ಅರಿಯಬೇಕು. ಅದರಲ್ಲೂ ಮುಖ್ಯವಾಗಿ ಗಾಂಧಿಯಂತಹ ಮಹಾನ್ ಸಂತ, ನೇತಾರನ ಬದುಕನ್ನು ಯಾವುದೋ ಒಂದು ಸಿದ್ಧಾಂತಕ್ಕೆ ಬಿದ್ದು, ವೈಯಕ್ತಿಕವಾಗಿ ಸರಿಯೋ ತಪ್ಪೋ ಎನ್ನುವ ಘಂಟಾಘೋಷಗಳನ್ನು ಹರಿಬಿಡಬಾರದು. ಗಾಂಧಿ ದೇಶವನ್ನು ಇಬ್ಬಾಗವನ್ನಾಗಿಸಿದರು ಎನ್ನುತ್ತಾರೆ. ಹಾಗೆ ಆರೋಪಿಸುವವರು ತಿಳಿದುಕೊಳ್ಳಬೇಕಾದ ಸಂಗತಿಯೊಂದಿದೆ.
ಸ್ವಾತಂತ್ರ್ಯ ಲಭಿಸಿದ ದಿನ ಇಡೀ ದೇಶದ ಜನತೆ ಕುಣಿದು ಕುಪ್ಪಳಿಸಿ ಸಂತೋಷ ಸಂಭ್ರಮಾಚರಣೆ ನಡೆಸುತ್ತಿದ್ದರೆ, ರಾಜಕೀಯ ನಾಯಕರು ಸ್ವತಂತ್ರ ಸರಕಾರದ ರಚನೆಯಲ್ಲಿ ತೊಡಗಿ ಯಾರ್ಯಾರಿಗೆ ಯಾವ ಖಾತೆ, ಸಂಪುಟದಲ್ಲಿ ಯಾರಿರಬೇಕೆನ್ನುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದರೆ ಅತ್ತ ದೂರದ ಬಂಗಾಲದಲ್ಲಿ ಗಾಂಧಿ ವಿಷಣ್ಣರಾಗಿದ್ದರು. ದಶಕಗಳ ಕಾಲ ಬದುಕನ್ನು ಮೂಡುಪಾಗಿಸಿ ಹೋರಾಟ ನಡೆಸಿದ ಪ್ರತಿಫಲದಿಂದಾಗಿ ದೇಶಕ್ಕೆ ಸಿಕ್ಕ ಸಂಪೂರ್ಣ ಸ್ವರಾಜ್ಯವನ್ನು ಸಂಭ್ರಮಿಸುವ ಹಂತದಲ್ಲಿ ಅವರಿರಲಿಲ್ಲ. ಆಗಸ್ಟ್ 15 1947ರ ಸ್ವಾತಂತ್ರ್ಯ ದಿನದಂದು ಗಾಂಧಿ ಉಪವಾಸ ಸತ್ಯಾಗ್ರಹವನ್ನಾಚರಿಸಿದರು. ಬಂಗಾಳದ ನೌಖಾಲಿಯಲಿ ಮತ್ತು ಬಿಹಾರದಲ್ಲಿ ನಡೆದಿದ್ದ ವರ್ಷಕ್ಕೂ ಮಿಕ್ಕ ಹಿಂದೂ ಮುಸ್ಲಿಂ ಕೋಮು ಗಲಭೆ ಅದಕ್ಕಿಂತ ಮೇಲಾಗಿ ದೇಶ ವಿಭಜನೆಯಾದುದು ಅವರ ಮನಸ್ಸನ್ನು ಇನ್ನಿಲ್ಲದಂತೆ ಕಲಕಿದ್ದವು. ಹಿಂದೂ ಮುಸ್ಲಿಂ ಐಕ್ಯತೆಯ ಯಾವ ಸಿದ್ಧಾಂತವನ್ನು ತನ್ನ ಜೀವಮಾನವಿಡೀ ಪ್ರತಿಪಾದಿಸಿಕೊಂಡು ಬಂದಿದ್ದರೋ ಅದು ಧರ್ಮಾದ ಆಧಾರದ ಮೇಲೆ ದೇಶ ಛೇದನೆಗೆ ಈಡಾದಾಗ ಅಪಾರ ನೋವನ್ನನುಭವಿಸುದ್ದರು ಮಹಾತ್ಮ. ಸಂಪೂರ್ಣ ಸ್ವರಾಜ್ಯ ಎನ್ನುವುದು ಅಖಂಡ ಭಾರತವೂ ಆಗಿತ್ತೆನ್ನುವ ಅವರ ಮಹತ್ವಾಕಾಂಕ್ಷೆಯ ಅರಿವು ದೇಶ ಇಬ್ಬಾಗವಾಗಲು ಗಾಂಧಿಯೇ ಕಾರಣರು ಎಂದು ಆರೋಪಿಸುವರಿಗೆ ತಿಳಿಯುವುದಾದರೂ ಹೇಗೆ? ಆಗಿನ ಕಾಲದ ಸೌಮ್ಯ ಮತ್ತು ಪ್ರತಿಗಾಮಿಗಳ ಎರಡೂ ಬಣದ ನಾಯಕರಾಗಿದ್ದವರಿಗೆ ಗಾಂಧಿಯ ಹಲವು ಧೋರಣೆಗಳ ಬಗ್ಗೆ ಅಭಿಪ್ರಾಯ ಬೇಧಗಳಿದ್ದವೇ ಹೊರತು ವ್ಯಕ್ತಿತ್ವದ ಬಗ್ಗೆ ಒಮ್ಮತವಿತ್ತು. ಆದರೆ ಇವತ್ತಿಗೆ ಗಾಂಧಿಯನ್ನು ಸಮಗ್ರವಾಗಿ ಒಡೆಯುವ ಕೆಲಸ ಅವ್ಯಾಹತವಾಗಿ ನಡೆದಿದೆ. ತಪ್ಪು. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಲಕ್ಷಲಕ್ಷ ಜನರ ಮಹಾನ್ ಬಲಿದಾನದಿಂದಾಗಿ ಲಭಿಸಿದೆ. ಅದರ ನಾಯಕತ್ವವನ್ನು ಹಲವರು ಹಲವು ಕಾಲಘಟ್ಟದಲ್ಲಿ ವಹಿಸಿಕೊಂಡಿದ್ದಾರೆ. ತಮ್ಮದೇ ಆದ ಹಾದಿ ಮತ್ತು ಸಿದ್ಧಾಂತದ ಪ್ರಕಾರ ಹೋರಾಟ ನಡೆಸಿದ್ದಾರೆ. ಅವರಲ್ಲಿ ಗಾಂಧಿ ಕೂಡ ಒಬ್ಬರು. ಅವರು ಅವರನ್ನು ಎಂದಿಗೂ ಜನತೆಯನ್ನು ಮುನ್ನಡೆಸುವ ನಾಯಕನೆಂದು ಪರಿಗಣಿಸಿರಲಿಲ್ಲ; ಸೇವಕನೆಂದುಕೊಂಡಿದ್ದರು.
ತಮ್ಮ ಪಾಲಿಗೆ ಬದುಕು ಒದಗಿಸಿದ ಅವಕಾಶ ಮತ್ತು ಆಯ್ಕೆಯನ್ನು ಬೇರ್ಯಾವ ನಾಯಕನಿಗಿಂತಲೂ ಸಮರ್ಥವಾಗಿ ಮುನ್ನಡೆಸಿದರು ಎನ್ನುವುದಷ್ಟೇ ಸತ್ಯ, ಸತ್ಯ ಮತ್ತು ಕಟ್ಟಕಡೆಯ ಸತ್ಯ. ಗಾಂಧಿಯವರ ಬದುಕು ಮತ್ತು ಚಿಂತನೆಗಳ ಮಂಥನ ಮತ್ತು ಮನನ ಹಿಂದೆಂದಿಗಿಂತಲೂ ನಮಗೆ ಈಗ ಆಗಬೇಕಾಗಿದೆ.
***********************
- ಮೋಹನ್ ಕುಮಾರ್ ಡಿ ಎನ್
