ಜೊತೆಗೆ ಬೆಳೆದ ಅವನು ಹಾಲಿಗೆ ಬದಲು ವಿಷವನ್ನೇ ಕುಡಿಯಲಾರಂಭಿಸಿದ. ಈಗಲೂ ಕುಡಿಯುತ್ತಲೇ ಇದ್ದಾನೆ. ಅಂದರೆ ಅವರಿವರ ತಲೆಯ ಮೇಲೆ ಕೈಯಿಟ್ಟು ಕನಿಷ್ಠ ಮೂರು ಕೋಟಿ ಹಣ ಸಂಪಾದಿಸಿದ್ದಾನೆ. ಲೇಖಕಿ ಸ್ವರ್ಣಲತಾ ಅವರು ಯಾರ ಕುರಿತು ಈ ಮಾತನಾಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕಿಯಾರೆ. ಅಮ್ಮ ಹೇಳುತ್ತಿದ್ದ ಗಾದೆ ಆಗಾಗ ನೆನಪಾಗುತ್ತಲೇ ಇರುತ್ತದೆ. ಹಿಂದೆಂದಿಗಿಂತ ಹೆಚ್ಚು ಸಲ. ಆದರೆ ಈ ಗಾದೆ Out dated ಆಗಿ ಹೋಯಿತು. ಈ ಕಾಲಕ್ಕೆ ಅನ್ವಯಿಸುವುದಿಲ್ಲ ಎಂದು ಅನ್ನಿಸಲಾರಂಭಿಸಿದೆ.
ಬೆಳಿಗ್ಗೆ ವಾಕ್ ಹೋದಾಗ ಯುವಕನೊಬ್ಬ ಬೈಕಿನಲ್ಲಿ ಹಾದು ಹೋದಾಗಲೇ ಮೇಲಿನ ಗಾದೆ ನೆನಪಾಗಿದ್ದು. ಇವನ ಅಪ್ಪ ನಾವು ಊರಿಗೆ ಬಂದಾಗ ಅಂದಾಜು ಹದಿನೆಂಟು ವರ್ಷದವನಿರಬೇಕು. (ಊರಿಗೆ ಬಂದು ಇಪ್ಪತ್ತೊಂಭತ್ತು ವರ್ಷವಾಯಿತು.) ಆಗಿನಿಂದಲೇ ಹಾಲಿಗೆ ಬದಲು ವಿಷವನ್ನೇ ಕುಡಿಯಲಾರಂಭಿಸಿದ. ಈಗಲೂ ಕುಡಿಯುತ್ತಲೇ ಇದ್ದಾನೆ. ಅಂದರೆ ಅವರಿವರ ತಲೆಯ ಮೇಲೆ ಕೈಯಿಟ್ಟು ಕನಿಷ್ಠ ಮೂರು ಕೋಟಿ ಹಣ ಸಂಪಾದಿಸಿದ್ದಾನೆ. ಇಷ್ಟನ್ನು ಸಂಪಾದಿಸಲು ನಮ್ಮ ಸಾಫ್ಟ್ ವೇರ್ ಎಂಜನಿಯರ್ ಗಳು ಗಂಡ ಹೆಂಡತಿ ಇಬ್ಬರೂ ಅಮೆರಿಕಾದಲ್ಲಿ ಕನಿಷ್ಠ ಏಳೆಂಟು ವರ್ಷಗಳಾದರೂ ದುಡಿಯಬೇಕು.
ಮತ್ತೊಬ್ಬ ಡೈರಿ ಕಾರ್ಯದರ್ಶಿ ಇವನೂ ಅಷ್ಟೆ, ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ಎಂ ಡಿ ಯೇ ಖುದ್ದಾಗಿ ಬಂದು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಾಬೀತುಪಡಿಸಿದರೂ ತನಗಿರುವ ರಾಜಕೀಯ ಪ್ರಭಾವ ಬಳಸಿ ಬಚಾವಾದ. ಇವನೂ ಇಪ್ಪತೈದು ವರ್ಷಗಳಿಂದ ವಿಷವುಂಡು ಜೀರ್ಣಿಸಿಕೊಳ್ಳುತ್ತಿದ್ದಾನೆ.
ನಮ್ಮ ರಾಜಕಾರಣಿಗಳಂತೂ ದಿನ ಬೆಳಗಾದರೆ ಅದೇ ಕೆಲಸ ಮಾಡುವುದು. ಇವರಲ್ಲಿ ಹಾಲು ಕುಡಿಯುವವರು ಬಹಳ ಕಡಿಮೆ. ಗೊಂದಲಕ್ಕೆ ಕ್ಷಮೆ ಇರಲಿ, ಬಹಳಷ್ಟು ರಾಜಕಾರಣಿಗಳ ವಂಶದ ಕುಡಿಗಳನ್ನು ನೋಡಿದರೆ ಇವರ ಅಪ್ಪಂದಿರು ಕುಡಿದ ವಿಷ ಮಕ್ಕಳಿಗೆ ಜೀರ್ಣವಾದಂತೆ ಕಾಣುತ್ತಿಲ್ಲ.
ಈ ಕುರಿತು ಬರೆಹವನ್ನು ಬರೆದಿದ್ದೇನೆ, ವಿವರಗಳಿಗೆ ಹೋಗುವುದಿಲ್ಲ. ನಮ್ಮ ಹಳ್ಳಿಗಳಲ್ಲಿ ನಮ್ಮ ಹಿಂದಿನ ತಲೆಮಾರಿನವರು ,ಇಂಥವರು ಊರಿಗೆ ನಾಕೈದು ಜನರಾದರೂ ಇದ್ದೇ ಇರುತ್ತಿದ್ದರು. ಇವರೆಲ್ಲಾ ಅವರಿವರ ಮನೆ ಹಾಳು ಮಾಡಿ ಮಕ್ಕಳಿಗೆ ಆಸ್ತಿ ಮಾಡಿಟ್ಟರು. ನಮ್ಮ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಒಬ್ಬನೇ ಒಬ್ಬ ಜಮೀನ್ದಾರನ ಮಕ್ಕಳು ಉದ್ದಾರವಾಗಲಿಲ್ಲ. ಇವರೆಲ್ಲಾ ಅಪ್ಪಂದಿರು ಮಾಡಿಟ್ಟ ಆಸ್ತಿಯನ್ನು ಉಳಿಸಿಕೊಳ್ಳಲು ಆಗದೇ ಹೆಣಗಾಡುತ್ತಿದ್ದಾರೆ.
ನಮ್ಮ ವ್ಯವಸ್ಥೆಯೇ ವಿಷವುಣ್ಣುವವರಿಗೆ ಬೆಂಬಲವಾಗಿ ನಿಲ್ಲುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ.ನಮ್ಮ ಜನರಿಗೂ ಅಷ್ಟೆ ದುಷ್ಟರು, ಘಾತುಕರು, ದುರಾಚಾರಿಗಳನ್ನು ಕಂಡರೆ ಚೆನ್ನಾಗಿ ಆಗಿಬರುತ್ತದೆ. ಅಂಥವರಿಗೆ ವಿಶೇಷ ಮರ್ಯಾದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಅನ್ಯಾಯದಿಂದ ಆಸ್ತಿ ಸಂಪಾದಿಸಿ, ಸಂಪಾದಿಸಿದ್ದನ್ನು ಚೆನ್ನಾಗಿ ಅನುಭವಿಸಿ, ಮಕ್ಕಳಿಗೂ ಅನ್ಯಾಯದ ಆಸ್ತಿಯನ್ನು ವರ್ಗಾಯಿಸಿ ಹೋದರೆ ಆತ ಬೇರೆಯವರಿಗೆ ಮಾದರಿಯಾಗುವುದಿಲ್ಲವೆ ?
ಕಡೆಯಲ್ಲಿ ಒಂದು ಸಣ್ಣ ಉದಾಹರಣೆಯನ್ನು ಹೇಳಿ ಮುಗಿಸುತ್ತೇನೆ. ನಾನು ಇಪ್ಪತ್ತೈದು ವರ್ಷ ಡೈರಿ ಕ್ಷೇತ್ರದಲ್ಲಿದ್ದುದರಿಂದ ಮತ್ತದೇ ಉದಾಹರಣೆ. ನನ್ನ ಸೋದರ ಮಾವನ ಮಗ, ಅನ್ಯಾಯದ ವಿಷಯ ಬಂದಾಗ ಈ ಮಾತು ಹೇಳುತ್ತಿರುತ್ತಾನೆ. ಅವರ ಊರು ಚನ್ನಪಟ್ಟಣದ ಹತ್ತಿರ ದೊಡ್ಡ ಹಳ್ಳಿ. ಆ ಊರಿನ ಡೈರಿಗೆ ದಿನವೊಂದಕ್ಕೆ ಎರಡುವರೆಯಿಂದ ಮೂರು ಸಾವಿರ ಲೀಟರ್ ಹಾಲು ಸರಬರಾಜಾಗುತ್ತದೆ. ಲಕ್ಷಾಂತರ ರೂಗಳ ವ್ಯವಹಾರ, ಡೈರಿಯ ಸೆಕ್ರೆಟರಿ ಚೆನ್ನಾಗಿ ತಿಂದು, ಕಡೆಗೆ ಕ್ಯಾನ್ಸರ್ ಬಂದು ಪಡಬಾರದ ಕಷ್ಟಪಟ್ಟು, ನಲ್ವತ್ತು ನಲ್ವತ್ತೈದು ವರ್ಷಕ್ಕೆಲ್ಲಾ ಸತ್ತುಹೋದ. ಇದನ್ನು ಕಂಡ ಆ ಊರಿನ ಜನ, ಸೆಕ್ರೆಟರಿಯಾಗಲು ಯಾರೂ ಮುಂದೆ ಬರಲೊಲ್ಲರು. ಅವನು ಮಾಡಬಾರದು ಮಾಡಿದ್ದಕ್ಕೆ ಅನುಭವಿಸಿದ. ಅದಕ್ಕೆ ನಮಗೆ ಡೈರಿಯ ಸಹವಾಸವೇ ಬೇಡ ಎಂದುಬಿಟ್ಟರು. ಕಡೆಗೆ ಕೈಕಾಲು ಹಿಡಿದು, ಪರ ಊರಿನವನನ್ನು ಸೆಕ್ರೆಟರಿ ಮಾಡಿಕೊಳ್ಳಬೇಕಾಯಿತು. ಅನ್ಯಾಯ ಮಾಡಿದವರಿಗೆಲ್ಲ ತಮ್ಮ ಜೀವಿತಾವಧಿಯಲ್ಲೇ ಶಿಕ್ಷೆಯಾಗಿದ್ದರೆ ಯಾರೂ ಅನ್ಯಾಯದ ದಾರಿ ಹಿಡಿಯುತ್ತಲೇ ಇರಲಿಲ್ಲವೇನೋ. ವಾಕ್ ಮಾಡುವಾಗ ಬಂದ ಆಲೋಚನೆಗಳನ್ನು ಹಂಚಿಕೊಂಡೆ.
- ಸ್ವರ್ಣಲತಾ
