ಪ್ರತಿಭಟನೆ, ಹೋರಾಟದಲ್ಲಿ ಭಾಗವಹಿಸುತ್ತಿದ್ದ ರೋಹಿಣಿಗೆ ತನ್ನ ಸಂಸಾರದಲ್ಲಿ ಎದ್ದ ಬಿರುಗಾಳಿಯನ್ನು ತಣ್ಣಗಾಗಿಸಲು ಒದ್ದಾಡುತ್ತಿದ್ದಳು…ಸಂಸಾರದ ನೌಕೆಯಲ್ಲಿ ಎದ್ದ ಅಲೆಯನ್ನು ಹೇಗೆ ರೋಹಿಣಿ ನಿಭಾಯಿಸುತ್ತಾಳೆ, ತಪ್ಪದೆ ಓದಿ… ಕವಿ, ಲೇಖಕಿ ರೇಷ್ಮಾ ಗುಳೇದಗುಡ್ಡಾಕರ್ ಅವರು ಬರೆಯುತ್ತಿರುವ ಧಾರವಾಹಿಯನ್ನು ತಪ್ಪದೆ ಓದಿ…
“ಹೊಟ್ಟ್ಯಾಗಿಂದು ಬಟ್ಟ್ಯಾಗ ಬಿಳಲಿ ತಮ್ಮಾ… ಯಾಕ ಇಲ್ಲದು ಸಲ್ಲದು ತಲಿಗೆ ಹಚ್ಚಿಕೊಂಡು ಬ್ಯಾನಿ ಮಾಡಕೋ ಬ್ಯಾಡ…” ಎಂದು ಭಾಗ್ಯವ್ವ ತಮ್ಮ ಕರಿಯಪ್ಪನಗೆ ಸಮಾಧಾನ ಹೇಳಿದಳು …..
ಕರಿಯಪ್ಪನ ಒಬ್ಬಳೇ ಮಗಳು ಬಾಣಂತನಕ್ಕೆ ತವರಿಗೆ ಬರುವ ಕಾಲ ಹತ್ತಿರವಾಗಿತ್ತು, ತಾಯಿ ಇಲ್ಲದ ಹುಡುಗಿ ಅವಳು. ಆರು ವರ್ಷದ ಕೆಳಗೆ ಇದ್ದ ಹಾಗೆ ಹಾಸಿಗೆ ಹಿಡಿದ ಸರೋಜಮ್ಮ ಮತ್ತೆ ಬದುಕಿಗೆ ಮರಳಿಲ್ಲ. ಹೇಗೋ ಅವಳಿಗೊಂದು ಗಂಡು ಹುಡುಕಿ ಮದುವೆ ಮಾಡಿದ್ದ ಕರಿಯಪ್ಪ. ಹೆಂಡತಿ ಬದುಕಿದ್ದಾಗ ಸಂಸಾರದ ಜವಾಬ್ದಾರಿ ಎಲ್ಲ ಅವಳ ತಲೆಗೆ ಕಟ್ಟಿ , ತಾನೂ ಬಾಟಲಿ ಸಹವಾಸಕ್ಕೆ ಬಿದ್ದು, ಇದ್ದ ಬಸ್ಸ್ ಎಂಜಟ್ ಕೇಸ್ ದಲ್ಲಿ ಹಣವನ್ನು ನುಂಗಿ ಆ ಕೆಸಕ್ಕೂ ಕಲ್ಲು ಹಾಕಿಕೊಂಡು ಗೂಳಿಯಂತೆ ತಿರುಗುತ್ತಾ ತಾನು ಅಮಾಯಕ ಎಂದು ಹೇಳಿಕೊಳ್ಳುತ್ತಾ ತನ್ನ ಜವಾಬ್ದಾರಿಯನ್ನು ಬದಿಗೊತ್ತಿ ಗೂಳಿ ಬಾಳಿದ್ದ ಕರಿಯಪ್ಪನಿಗೆ ಈಗ ಬಹು ಸಂಕಷ್ಟದ ಕಾಲವಾಗಿತ್ತು.

ಫೋಟೋ ಕೃಪೆ : google
ಭಾಗ್ಯವ್ವ ದಣಿವರಿಯದ ಜೀವಿ. ಬದುಕಿನ ಏರಿಳಿತಗಳ ಆಳ ಬಲ್ಲವಳು. ಚಿಕ್ಕ ವಯಸ್ಸಿಗೆ ಮದುವೆಯಾಗಿ ಹರೆಯದಲ್ಲೆ ಗಂಡನನ್ನು ಕಳೆದುಕೊಂಡು, ತನ್ನ ಇಬ್ಬರು ಮಕ್ಕಳನ್ನು ಒಂದು ಹಂತಕ್ಕೆ ತರಲು ಆಕೆ ಪಟ್ಟ ಕಷ್ಟ ಯಾವ ಸೀತೆ, ಸಾವಿತ್ರಿಯರಿಗೂ ಕಮ್ಮಿಯಾಗಿರಲಿಲ್ಲ ಎಂದೇ ಹೇಳಬೇಕು. ತವರಿಗೆ ಮರಳದೆ ಮಠದ ಪ್ರಸಾದದ ಸಿದ್ದ ಪಡಿಸುವ ಕಾರ್ಯಗಳಿಗೆ ಹೋಗುತ್ತಾ ಕ್ರಮೇಣ ಒಂದು ಗ್ರೈಡಂರ್ ಖರೀದಿಸಿ ಮಸಾಲೆ, ಉಪ್ಪನಕಾಯಿ ಹಾಕುವ ಕಾರ್ಯ ಅವಳ ಸಂಸಾರದ ತೇರು ಹಸನಾಗಿ ಸಾಗುವಂತೆ ಮಾಡಿತ್ತು.
ಮಗ ಚೆನ್ನ ಪದವಿ ಮುಗಿಸಿ ಕಾಲೇಜು ಒಂದರಲ್ಲಿ ಗುಮಾಸ್ತನಾಗದ್ದ. ಮಗಳನ್ನು ಪಿ.ಯುಸಿ ಮುಗಿಸುವ ಹಂತದಲ್ಲೆ ಕೊಪ್ಪಳದಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ. ರಮೇಶನೊಂದಿಗೆ ವಿವಾಹ ಮಾಡಿಕೊಟ್ಟು ನಿರಾಳವಾಗಿ ಉಳಿದ ಜೀವನ ಜನರ ಕಷ್ಟಗಳ ಆಲಿಸುತ್ತಾ, ಅವರಿಗೆ ತನ್ನಿಂದಾದ ಸಹಾಯ ಮಾಡುತ್ತಾ ತನ್ನ ನೋವು, ಏಕಾಂತವ ಬಸಿದುಕೊಂಡು ದಿನದಿಂದ ದಿನಕ್ಕೆ ಸ್ಪಟಿಕವಾಗುತ್ತಲೇ ಹೋಗುತ್ತಿದ್ದಳು ಭಾಗ್ಯವ್ವ ….
ಮಗನ ವಾರಿಗೆಯ ಶರತ್ ಭಾಗ್ಯವ್ವಳ ಮಗನಿಗಿಂತಲು ಹೆಚ್ಚು, ದಿನವು ಸಂಜೆ ಮಕ್ಕಳೊಂದಿಗೆ ಶರತ್ ಭೇಟಿಯಾಗುತ್ತಾ ಕ್ಷೇಮ ವಿಚಾರ ನಡುಸುತ್ತಿದ್ದ. ಶರತ್ ಶಾಲಾ ಶಿಕ್ಷಕ. ಅವನ ಹೆಂಡತಿಯು ಶಿಕ್ಷಕಿ. ಇಬ್ಬರು ದುಡಿದರೂ ಮಕ್ಕಳು ಪರದಾಡುವ ಸ್ಥಿತಿ…..! ಆರೈಕೆ ಮಾಡುವವರು ಇಲ್ಲದೆ ತಂದೆ ತಾಯಿ ಬರುವವವರೆಗೂ ಕಂಡ ಕಂಡವರ ಮನೆಯಲ್ಲಿ ಆಸರೆ ಪಡೆಯುತ್ತಿದ್ದವು. 60-40 ಅಳತೆಯ ಕನಸಿನ ಮನೆ ಇದ್ದರೂ ಅಲ್ಲಿ ಸೋತಕ ಛಾಯೇ. ಮನೆಗೆ ನೆಂಟರು, ಸ್ನೇಹಿತರು ಎಲ್ಲಾ ಒಂದು ಭಾನುವಾರ ಬರಬೇಕು!. ಇಷ್ಟವಾದ ಅಡಿಗೆ, ಊಟ ಕನಸಾಗಿದ್ದವು. ಮುಂಜಾನೆ ಎದ್ದು, ಇದ್ದದ್ದನ್ನು ಮಾಡಿ ನಾಲ್ವರಿಗೂ ಬಾಕ್ಸ್ ಕಟ್ಟಿ ಎಂಟು ಗಂಟೆಗೆ ಮನೆ ಬಿಡುತ್ತಿದ್ದಳು ಹೆಂಡತಿ ರೋಹಿಣಿ. ಮಕ್ಕಳನ್ನು ಶಾಲಾ ಸಮಯಕ್ಕೆ ಬಿಟ್ಟು, ತಾನು ತನ್ನ ಶಾಲೆಗೆ ಹೋರಡುತ್ತಿದ್ದ ಶರತ್.
ಹೆಂಡತಿಯನ್ನು ಊರಿಗೆ ಹತ್ತಿರವಾಗುವ ಹಳ್ಳಿಗೆ ವರ್ಗಾಯಿಸುವ ಕೆಲಸ ಬಹು ದಿನಗಳಿಂದಲೂ ಫಲಕಾರಿಯಾಗದೆ ನೆನೆಗುದುಗೆ ಬಿದ್ದು ,ಇಬ್ಬರ ನಡುವೆ ಒತ್ತಡ, ಜಗಳ ತಂದೂಡ್ಡಿತ್ತು .
ಹಣ ಹೆಚ್ಚುತ್ತಾ ಬ್ಯಾಂಕ್ ಬ್ಯಾಲೆನ್ಸ್ ಗಳಿಸುತ್ತಾ ಹೋದರು. ಸಂತಸ, ನೆಮ್ಮದಿ ಮಾತ್ರ ಮರೀಚಿಕೆಯಾಗಿತ್ತು. ಇತ್ತೀಚಿಗೆ ಶರತ್ ಗೆ ಜೀವನ ಬಹು ನೀರಸವಾಗುತ್ತಲೇ ಸಾಗಿತ್ತು. ಕೆಲಸ ಇರುವ ಹೆಣ್ಣು ಮಾತ್ರ ಬೇಕು ಎಂದು ಹಠ ಮಾಡಿ, ಹಲವಾರು ಹೆಣ್ಣುಗಳ ನಿರಾಕಿರಿಸಿ, ರೋಹಿಣಿಯನ್ನು ಮದುವೆ ಮಾಡಿಕೊಂಡು ಗೆದ್ದನಾದರೂ ಬದುಕಿನಲ್ಲಿ ಸಂತೋಷ ಗೆಲ್ಲಲು ಅವನಿಂದ ಆಗಲಿಲ್ಲ.

ಫೋಟೋ ಕೃಪೆ : google
ರೋಹಿಣಿ ಬಿ.ಎಡ್ ಮುಗಿಸಿ ಸಾಮಾಜಿಕ ಕಾರ್ಯಕರ್ತೆಯಾಗಿ ಒಂದು ಎನ್.ಜಿ. ಓದಲ್ಲಿ ಸಕ್ರಿಯವಾಗಿದ್ದಳು. ಹೆಣ್ಣು ಮಕ್ಕಳ ಶಿಕ್ಷಣ, ಪ್ರಗತಿ ಪರ ಚಿಂತನೆ, ಹದಿ ಹರೆಯದವರ ಮನೋವಿಕಾಸ ಮುಂತಾದ ಕಾರ್ಯಗಾರಗಳಲ್ಲಿ ಭಾಗವಹಿಸುತ್ತಾ ಸುತ್ತ ಮುತ್ತ ಹಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದಳು. ಈ ದಿಕ್ಕಿನಲ್ಲೇ ತನ್ನ ವೃತ್ತಿಯನ್ನು ಕಟ್ಟಿಕೊಳ್ಳಬೇಕು ಎಂಬ ಅವಳ ಮನದಾಸೆಯಾಗಿತ್ತು. ಆದರೆ ತಂದೆಯ ಒತ್ತಾಯಕ್ಕೆ ಬರೆದ ಸಿ.ಇ.ಟಿ ಶಿಕ್ಷಕಿ ವೃತ್ತಿಗೆ ದಾರಿ ಮಾಡಿತ್ತು …!
ಕೆಲಸಕ್ಕೆ ಸೇರಿದ ಕೆಲ ತಿಂಗಳುಗಳಲ್ಲೆ ಶರತ್ ಜೊತೆ ವಿವಾಹಾ ಒದಗಿ ಬಂದಿತ್ತು , “ಸರಕಾರಿ ನೌಕರಿ ಹುಡುಗ ” ನೋಡಲು ಬಂದವರೆಲ್ಲಾ ನಿನ್ನ ಮದುವೆಯಾಗಲು ಸಾಧ್ಯವಿಲ್ಲ ಅದಕ್ಕೂ ಋಣಾನುಬಂಧ ಬೇಕು ಎಂದು ರೋಹಿಣಿಗೆ ಒತ್ತಾಯ ಮಾಡಿ ಹುಡಗನನ್ನು ಕರೆಸಿದ್ದರು ನೋಡುವ ಶಾಸ್ತ್ರಕ್ಕೆ ಅಣಿಮಾಡಿದ್ದರು. ಮುಂದೆ ರೋಹಿಣಿಗೆ ಒಂದು ಮಾತು ಕೇಳದೆ ಲಗ್ನಪತ್ರಿಕೆ ಸಿದ್ದವಾಗಿತ್ತು…!!?
ಪ್ರತಿಭಟನೆ, ಹೋರಾಟದಲ್ಲಿ ಭಾಗವಹಿಸುತ್ತಿದ್ದ ರೋಹಿಣಿಗೆ ತನ್ನ ಮನೆಯಲ್ಲೆ ತನ್ನ ಬದುಕುಕಿನಲ್ಲೆ ಪ್ರತಿರೋಧಿಸುವ ಸಮಯ ಬಂದಿತಲ್ಲಾ ಎಂದು ಸಂದರ್ಭಗಳ ದಾಳದಲ್ಲಿ ಸಿಲುಕಿದಾಗ ಅಚ್ಚರಿ, ನೋವು, ನಿರಾಸೆ ಎಲ್ಲವು ತುಂಬಿ ಹರಿದವು.
(ಕತೆ ಮುಂದುವರೆಯುತ್ತದೆ …)
- ರೇಷ್ಮಾ ಗುಳೇದಗುಡ್ಡಾಕರ್ (ಲೇಖಕಿ, ಕವಯತ್ರಿ)