ಖ್ಯಾತ ಕವಿ ಡಿ. ವಿ. ಜಿ. ಯವರ ಸುಪುತ್ರರರು ಆದ ಶ್ರೀ ಬಿ. ಜಿ. ಎಲ್. ಸ್ವಾಮಿ ಅವರು ಅಂತರರಾಷ್ಟ್ರೀಯ ಸಸ್ಯ ಶಾಸ್ತ್ರಜ್ಞರು ಮತ್ತು ಅವರ “ಹಸುರು ಹೊನ್ನು “ಎಂಬ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹೆಸರು: “ಹಸುರು ಹೊನ್ನು”
ಲೇಖಕರು: ಡಾ. ಬಿ. ಜಿ. ಎಲ್. ಸ್ವಾಮಿ.
( ಡಿ. ವಿ. ಜಿ. ಯವರ ಸುಪುತ್ರರು)
ಪ್ರಕಾಶನ : ವಸಂತ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೧೯୭೬ ಮತ್ತು ೨೦೧೮ .
ಬೆಲೆ: ರೂ. ೨೯೫-
ಪುಟ: ೪೨೦.
***

೧೯೫೩ ರಿಂದ ಚನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾದ್ಯಾಪಕರಾದ ಇವರು ಹಲವಾರು ಸಸ್ಯ ಗುಂಪುಗಳನ್ನು ಅನ್ವೇಶಿಸಿದ್ದಾರೆ. ತಿರುಚನಾಪಲ್ಲಿಯ ಭಾರತಿ ದಾಸನ್
ವಿಶ್ವ ವಿದ್ಯಾಲಯದಲ್ಲಿ ಇವರ ಹೆಸರಿನ ಗೌರವಾರ್ಥವಾಗಿ ” ದಿ ಸ್ವಾಮಿ ಬಟಾನಿಕಲ್ ಕ್ಲಬ್ ” ಅನ್ನು ಸ್ಥಾಪಿಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಭಾರತ ಸರ್ಕಾರವು “ಬೀರ್ಬಲ್ ಸಾಹ್ನಿ ಸ್ವರ್ಣಪದಕ” ವನ್ನು ನೀಡಿ ಗೌರವಿಸಿದೆ.
೧೯୭೮ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸದರಿ ಕೃತಿಗೆ ದೊರಕಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ “ತಂದೆ- ಮಗ” ಜೋಡಿ ಎಂಬ ಹೆಮ್ಮೆ
ಡಿ.ವಿ. ಜಿ. ಮತ್ತು ಸ್ವಾಮಿಯವರದ್ದು.!!
“ನೀನು ಕನ್ನಡದಲ್ಲಿ ಬರೆಯುವುದು ಬೇಡ. ಮನೆಗೊಬ್ಬನಿದ್ದೇನಲ್ಲ ನಾನು..ಸಾಕು”..ಎಂದು ಬುದ್ದಿ ಮಾತು ಹೇಳುತ್ತಿದ್ದ ಡಿ.ವಿ. ಜಿ. ಯವರು ಮಗನ “ಹಸುರು ಹೊನ್ನು” ಹಸ್ತಪ್ರತಿಯ ಬರವಣಿಗೆಯನ್ನು ನೋಡಿ ಹುರಿದುಂಬಿಸಿ, ಮೆಚ್ಚಿ… ಕನ್ನಡದಲ್ಲಿ ಇಂತಹ ಪುಸ್ತಕಗಳು ಬರಬೇಕು ಎಂದಿದ್ದರಂತೆ !!
ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದು ರೀತಿಯ ಒಡನಾಡಿಗಳಾಗಿ ಬೆಳೆದು ಬಂದಿರುವ ಕೆಲವು ಗಿಡ ಮರಗಳ ಪರಿಚಯ, ಕಾಡು ಪ್ರದೇಶದ ಸಸ್ಯಗಳ ಸಂಗ್ರಹ, ಇವು ಈ ಬರವಣಿಗೆಯ ಉದ್ದೇಶ ಎನ್ನುವ ಲೇಖಕರು ಇಲ್ಲಿಯ ಪ್ರತಿಯೊಂದು ಲೇಖನಕ್ಕೂ ಅನ್ವಯವಾಗುವಂತೆ, ತಾವೇ ಸ್ವತಹ ಸುಂದರವಾದ ನೂರಾರು ರೇಖಾ ಚಿತ್ರಗಳನ್ನು ಬಿಡಿಸಿರುವುದು ಪುಸ್ತಕಕ್ಕೆ ಇನ್ನಷ್ಟು ಮೆರಗು ತಂದಿದೆ. !!

ಸರ್ಕಾರವು ಸಂಶೋಧನಾ ಸಂಸ್ಥೆಯ ಅದ್ಯಾಪಕರಿಗೆ ನೀಡುವ ಪ್ರಯಾಣ ವೆಚ್ಚ, ತುಟ್ಟಿ ಭತ್ಯೆ ಗಳೊಂದಿಗೆ ತಮ್ಮ ಸಂಗಡಿಗರೊಂದಿಗೆ ಲೇಖಕರು ಸಸ್ಯಶೋಧನೆಗೆಂದು ಅರಣ್ಯಗಳಿಗೆ ಪ್ರವಾಸಕ್ಕೆಂದು ಹೋಗುತ್ತಾರೆ.
ತೀರ್ಥಹಳ್ಳಿ, ಶಿವಮೊಗ್ಗ, ಆಗುಂಬೆಯ ಮಳೆ, ಸೂರ್ಯಾಸ್ತ, ಇವು ಕೂಡ ಅವರ ಪ್ರವಾಸದಲ್ಲಿ ಸುಂದರ ಪ್ರಸಂಗಗಳಾಗಿ ಮೂಡಿದೆ. ಅಲ್ಲಿ ಉಂಟಾದ ಅನುಭವಗಳನ್ನು ಸೊಗಸಾದ ಹಾಸ್ಯದೊಂದಿಗೆ ಚೆಂದದೊಂದು ಪ್ರಬಂಧದಂತೆ ಇಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆದಿದ್ದಾರೆ. ಕಾಡಿನ ಸಸ್ಯ ಪ್ರಭೇದಗಳ ಬಗ್ಗೆ ತಿಳಿಸುತ್ತಾ,ಕನ್ನಡ_ ತಮಿಳು ಕಾವ್ಯಗಳ ಉಲ್ಲೇಖ ನೀಡುವುದನ್ನು ಇಲ್ಲಿ ಓದುವುದೇ ಒಂದು ಸೊಬಗು.
ಸರ್ಪಗಂಧಿ( ತವುಲ್ಫಿಯ ಸರ್ಫೆಂಟೈನ್ ) ಈ ಗಿಡ ಮೂಲಿಕೆ ಯನ್ನು ಸಂಗ್ರಹಿಸುವ ಜರ್ಮನ್ ವಿಜ್ಞಾನಿಯೊಬ್ಬರು ೨೦೦ ವರ್ಷಗಳ ಹಿಂದೆಯೇ ಈ ಮೂಲಿಕೆಯ ಉಪಯೋಗ ದಿಂದ ಮನದ ತಲ್ಲಣ ನಿಂತು ನೆಮ್ಮದಿ ಏರ್ಪಡುವುದನ್ನು ಕಂಡು ಹಿಡಿದಿದ್ದರು. !!
ಆನೆ ಹುಲ್ಲು, ಅಶೋಕಮರ, ನಾಗ ಸಂಪಿಗೆ, ಜರಿ ಗಿಡ, ಬೂರುಗ, ಮಾಧವಿಲತೆ, ಮಜ್ಜಿಗೆ ಹುಲ್ಲು, ಗೋರಂಟಿ, ತೇಗ, ನೆಲ್ಲಿ, ಜಾಯಿಕಾಯಿ, ಜಾಪತ್ರೆ , ಜಪಸರಕ್ಕೆ ಬಳಸುವ ರುದ್ರಾಕ್ಷಿ, ಮುಂತಾದ ಸಸ್ಯಗಳ ಪ್ರಬೇಧ ವಿಂಗಡಣೆ ಅವುಗಳ ಉಪಯೋಗ, ಬೆಳೆಸಲು ಬೇಕಾದ ಪರಿಸರ ಹೀಗೆ ವಿವರಗಳು ಇಲ್ಲಿವೆ.
ಹೆಬ್ಬಲಸು ಇದು ಹೂವಿಲ್ಲದ ಹಣ್ಣು. ಹಲಸಿನ ಹಣ್ಣಿನ ವಿವಿಧತೆ, ರುಚಿ, ಉಪಯೋಗದ ಬಗ್ಗೆಯೂ ತಿಳಿಸಿದ್ದಾರೆ. ಅವರ ಬರವಣಿಗೆಯ ಹರಹು ವೈವಿಧ್ಯಮಯವಾದದ್ದು. ಸ್ವಾಮಿಯವರು ೧೯೮೦ ರ ನವೆಂಬರ್ ೩ ರಂದು ಕಾಲ ವಾದರು. ಆದರೆ ಅವರು ರಚಿಸಿದ ಅನೇಕ ಕೃತಿಗಳು ಇಂದಿಗೂ ಮರು ಮುದ್ರಣ ಕಾಣುತ್ತಾ ತಮ್ಮ ಶ್ರೇಷ್ಠತೆ ಯನ್ನು ಸಾರುತ್ತಿದೆ.
ಸಾಹಿತ್ಯ ಮತ್ತು ವಿಜ್ಞಾನ ಸಮಾನವಾಗಿರುವ ಇಲ್ಲಿನ ಲೇಖನಗಳ ಪ್ರಭಾವಕ್ಕೆ ಓದುಗರು ಒಳಗಾಗುವಂತಿದೆ. ಸಸ್ಯಪ್ರಿಯರಿಗಂತೂ ಈ ಪುಸ್ತಕದಲ್ಲಿ ಸಾಕಷ್ಟು ಹೇರಳ ಮಾಹಿತಿಯಿದೆ.
- ಮಾಲತಿ ರಾಮಕೃಷ್ಣ ಭಟ್
