ಕೋಟಿಲಿಂಗೇಶ್ವರಕ್ಕೆ ಬೆಂಗಳೂರಿನಿಂದ ಹೊಸಕೋಟೆ -ಕೋಲಾರ ಮಾರ್ಗವಾಗಿ ತಲುಪಬಹುದು. ಸುಮಾರು ಎರಡೂವರೆ ಗಂಟೆಗಳ ಪ್ರಯಾಣವಿದ್ದು, ಈ ಸ್ಥಳದ ಮಹಿಮೆಯ ಕುರಿತು ದೇವರಾಜ ಚಾರ್ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಇತ್ತೀಚೆಗಷ್ಟೇ ಕೋಟಿ ಲಿಂಗೇಶ್ವರಕ್ಕೆ ಹೋಗಿದ್ದೆವು. ಬೆಂಗಳೂರಿನಿಂದ ಸುಮಾರು 90 ಕಿಲೋಮೀಟರ್ ದೂರವಿದೆ. ಕೋಲಾರ ಜಿಲ್ಲೆಗೆ ಸೇರಿದ್ದು, ಕಮ್ಮಸಂದ್ರ ಎನ್ನುವ ಹಳ್ಳಿಯ ಹತ್ತಿರವಿದೆ. ಬೆಂಗಳೂರಿನಿಂದ ಹೊಸಕೋಟೆ -ಕೋಲಾರ ಮಾರ್ಗವಾಗಿ ಕೋಟಿಲಿಂಗೇಶ್ವರ ತಲುಪಬಹುದು. ಸುಮಾರು ಎರಡುವರೆ ಗಂಟೆಗಳ ಪ್ರಯಾಣ.
ಕೋಟಿಲಿಂಗೇಶ್ವರದಲ್ಲಿ ಒಂದೇ ಸೂರಿನಡಿ ಸಾವಿರಾರು ಲಿಂಗ ಸ್ಥಾಪಿಸಿರುವುದೇ ವಿಶೇಷ. ಒಂದು ಸುದ್ದಿಯ ಪ್ರಕಾರ ಸುಮಾರು 90 ಲಕ್ಷ ಲಿಂಗಗಳಿವೆಯಂತೆ. ವಿವಿಧ ಆಕಾರದ ಲಿಂಗಗಳನ್ನು ಸ್ಥಾಪಿಸಿದ್ದಾರೆ. ಶ್ರೀ ಸ್ವಾಮಿ ಶಾಂಭ ಶಿವ ಮೂರ್ತಿ ಎನ್ನುವವರು ಶಿವಲಿಂಗಗಳನ್ನು ಸ್ಥಾಪಿಸಲು,ಈ ಜಾಗವನ್ನು ದಾನದ ರೂಪದಲ್ಲಿ ಕೊಟ್ಟಿದ್ದಾ ರಂತೆ.ಸುಮಾರು 15 ಎಕರೆ ವಿಸ್ತೀರ್ಣವಿದೆ ಯಂತೆ.

ಇಲ್ಲಿ ಎರಡು ದೊಡ್ಡ ಗಾತ್ರದ ಲಿಂಗಗಳನ್ನು ಸ್ಥಾಪಿಸಿದ್ದಾರೆ.ಅವುಗಳ ಎತ್ತರ ಸುಮಾರು 108 ಅಡಿ. ಒಂದು ದೊಡ್ಡ ನಂದಿ ವಿಗ್ರಹವನ್ನು ಸಹ ಸ್ಥಾಪಿಸಿದ್ದಾರೆ.ಇದರ ಎತ್ತರ ಸುಮಾರು 35 ಅಡಿ. ಈ ವಿಗ್ರಹಗಳ ಸುತ್ತಲೂ ಸಣ್ಣ ಸಣ್ಣ ಲಿಂಗಗಳನ್ನು ಸ್ಥಾಪಿಸಿರುತ್ತಾರೆ.

ದೊಡ್ಡ ಶಿವಲಿಂಗಗಳು ಏಷ್ಯಾದಲ್ಲೇ ಪ್ರಥಮವಂತೆ. ಈ ಕ್ಷೇತ್ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9:00 ರ ವರೆಗೂ ತೆರೆದಿರುತ್ತದೆ.ಪ್ರವೇಶ ಶುಲ್ಕ 20 ರೂಗಳು.ಕ್ಯಾಮರಾ ಶುಲ್ಕ 100 ರೂ. ಮೊಬೈಲನ್ನು ಉಚಿತವಾಗಿ ಕೊಂಡುಯ್ಯಬಹುದು.
ಭಕ್ತಾದಿಗಳು ಇಷ್ಟ ಪಟ್ಟಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಬಹುದು.ವಿವಿಧ ಆಕಾರಕ್ಕೆ ಒಂದೊಂದು ರೀತಿಯ ವೆಚ್ಚವಿರುತ್ತೆ. ವ್ಯವಸ್ಥಾಪಕರಿಗೆ ಲಿಂಗದ ವೆಚ್ಚ ಭರಿಸಿ, ಅವರು ನೀಡಿದ ಸ್ಥಳದಲ್ಲಿ ಲಿಂಗವನ್ನು ಸ್ಥಾಪಿಸಬಹುದು.

ಕ್ಷೇತ್ರಕ್ಕೆ ಪ್ರವೇಶ ಮಾಡಿದರೆ ಎಲ್ಲಾ ದೇವಸ್ಥಾನಗಳನ್ನು, ಎಲ್ಲಾ ಲಿಂಗಗಳನ್ನು ನೋಡಿಯೇ ಬರಬೇಕು.ಕಾರಣ ಮಧ್ಯದಲ್ಲಿ ವಾಪಸ್ಸು ಬರಲು ವ್ಯವಸ್ಥೆ ಇರುವುದಿಲ್ಲ. ಹೋಗುವ ದಾರಿಯಲ್ಲಿ ಒಂದೆಡೆ ಲಿಂಗಕ್ಕೆ ಹಾಲಿನ ಅಭಿಷೇಕಮಾಡುವ ವ್ಯವಸ್ಥೆ ಇರುತ್ತೆ. ಹಾಲಿನ ಅಭಿಷೇಕ ಮಾಡಲು ನೂರು ರೂ ಕೊಡಬೇಕು. ಇಷ್ಟವಿರಲಿ ಇಲ್ಲದಿರಲಿ ಪ್ರತಿಯೊಬ್ಬರೂ 100 ರೂ ಕೊಟ್ಟು ಹಾಲಿನ ಅಭಿಷೇಕ ಮಾಡಿ ಮುಂದೆ ಹೋಗಬೇಕು.
ಹಾಲಿನ ಅಭಿಷೇಕ ಮಾಡದದ್ದಲ್ಲಿ ಮನಸ್ಸಿನಲ್ಲಿ ಅಳುಕು ಉಳಿಯುತ್ತದೆ. ಹೀಗಾಗಿ ಅವರು ತೋರಿಸಿದ ದಾರಿಯಲ್ಲಿ ಸಾಗಿ ವಾಪಸ್ಸು ಬರಲು ಸುಮಾರು ಎರಡರಿಂದ ಮೂರು ಗಂಟೆ ಬೇಕಾಗುತ್ತದೆ. ಭಕ್ತರಿಂದ ಹಣ ವಸೂಲಿಗಾಗಿ ಈ ವ್ಯವಸ್ಥೆಇದೆ ಅನಿಸುತ್ತೆ.

ಅದರ ಬದಲು ಪ್ರವೇಶ ಶುಲ್ಕವನ್ನು ಸ್ವಲ್ಪ ಜಾಸ್ತಿ ಮಾಡಿ,ಎಲ್ಲೂ ಅಡೆತಡೆ ಇಲ್ಲದೆ ಭಕ್ತರು ಹೋಗಲು ಅನುವು ಮಾಡಿಕೊಡುವುದು ಒಳ್ಳೆಯದು.
- ದೇವರಾಜ ಚಾರ್ – (ನಿವೃತ್ತ ಕೆಪಿಸಿಎಲ್ ಇಂಜೀನಿಯರ್) ಮೈಸೂರು.
