ಅಂಗೈಯಲ್ಲಿ ಆರೋಗ್ಯವಿದೆ. ಹಿತಮಿತ ಆಹಾರ, ಯೋಗ ವಾಕಿಂಗ್ ಇತ್ಯಾದಿ ನಮ್ಮ ಜೀವನವನ್ನು ಸುಂದರವಾಗಿದ್ದಳು ಸಹಾಯ ಮಾಡುತ್ತದೆ. ಇಂದು ಜಾಗತಿಕ ಆರೋಗ್ಯ ದಿನ, ಎಲ್ಲರೂ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳೋಣ, ಪ್ರೊ. ಸಿದ್ದು ಸಾವಳಸಂಗ ಅವರ ಆರೋಗ್ಯದ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ…
ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ. ಅದು ಮಾನಸಿಕ ಆರೋಗ್ಯವನ್ನು ಒಳಗೊಂಡಿದೆ. ದೇಹ ಮತ್ತು ಮನಸ್ಸುಗಳು ಆರೋಗ್ಯಶಾಲಿಯಾಗಿದ್ದಾಗ ಮನುಷ್ಯ ಚೆನ್ನಾಗಿರಲು ಸಾಧ್ಯ. ಎರಡರಲ್ಲಿ ಯಾವುದಾದರೂ ಒಂದು ಸರಿಯಿಲ್ಲದಿದ್ದಾಗ ಆತ ಆರೋಗ್ಯದಿಂದಿರಲು ಸಾಧ್ಯವಿಲ್ಲ. ಅದಕ್ಕಾಗಿ ಆರೋಗ್ಯವೇ ಭಾಗ್ಯ ಎಂದು ಕರೆಯುತ್ತಾರೆ.
ಇಂದು ಅನೇಕ ಜನರಲ್ಲಿ ಬಿಪಿ, ಶುಗರ್, ಹಾರ್ಟ್, ಅರ್ಥೈಟಿಸ್, ಫ್ಯಾಟ್ ಹಾಗೂ ಕ್ಯಾನ್ಸರ್ ನಂತಹ ಮಾರಕ ರೋಗಗಳು ಕಂಡುಬರುತ್ತಿವೆ. ಇದಕ್ಕೆಲ್ಲ ಕಾರಣ ಮಾನವನ ಅನಾರೋಗ್ಯಕರ ಜೀವನ ಶೈಲಿ. ಮೈ ಬೆವರು ಹರಿಸಿ ಕೆಲಸ ಮಾಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಕುಳಿತಲ್ಲಿಯೇ ಕೆಲಸ ಮಾಡುವುದು ಹೆಚ್ಚಾಗಿದೆ. ಹಿಂದೆ ಎಲ್ಲರೂ ತೋಟಗದ್ದೆಗಳಲ್ಲಿ ಚೆನ್ನಾಗಿ ದುಡಿಯುತ್ತಿದ್ದರು. ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡುತ್ತಿದ್ದರು. ಅವರಿಗೆ ಯಾವ ರೋಗರುಜಿನಗಳು ಕಾಡುತ್ತಿರಲಿಲ್ಲ. ಇಂದು ಜನ ಸರ್ಕಾರಿ ಉದ್ಯೋಗಕ್ಕೆ ಬೆನ್ನು ಹತ್ತಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾಲ ಬದಲಾಗಿದೆ. ಒಪ್ಪಿಕೊಳ್ಳೋಣ. ಕೃಷಿ ಇಂದು ರೈತನ ಕೈ ಹಿಡಿಯುತ್ತಿಲ್ಲ. ಅದನ್ನು ನಂಬಿದ ರೈತರು ಸಾಲಗಾರನಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಒಳ್ಳೆಯ ಸರ್ಕಾರಿ ಉದ್ಯೋಗಕ್ಕೆ ಕಳಿಸುತ್ತಿದ್ದಾರೆ. ಆದರೂ ಬಹಳ ಹೊತ್ತು ಕುಳಿತು ಮಾಡುವ ಕೆಲಸ ಜಂಗು ಹಿಡಿದ ಪಾತ್ರೆಯಂತೆ.

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ. ಯಾವುದೇ ಕೆಲಸವನ್ನು ಮಾಡುವಾಗ ನಾವು ಒತ್ತಡಕ್ಕೆ ಒಳಗಾಗಬಾರದು. ಒತ್ತಡದಿಂದ ಹಲವು ರೋಗಗಳು ಬರುತ್ತವೆ. ಆದ್ದರಿಂದ ತಡವಾದರೂ ನಿಧಾನವಾಗಿ ಒತ್ತಡರಹಿತ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ದಿನದ ಒಂದು ಗಂಟೆಯನ್ನಾದರೂ ನಾವು ವಾಕಿಂಗ್ ಮಾಡಲು ಮೀಸಲಿಡಬೇಕು. ಇದರಿಂದ ದೇಹದಲ್ಲಿ ರಕ್ತದ ಚಲನವಲನ ಚೆನ್ನಾಗಿ ಆಗಿ ದೇಹ ಮತ್ತು ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಒಂದು ವೇಳೆ ನಮಗೆ ವಾಕಿಂಗ್ ಮಾಡಲು ಸಮಯ ಸಿಗದಿದ್ದರೆ ಸಣ್ಣಪುಟ್ಟ ಕೆಲಸಗಳನ್ನು ನಡೆದುಕೊಂಡು ಹೋಗಿ ಮಾಡುವುದನ್ನು ಕಲಿತುಕೊಳ್ಳಬೇಕು. ಒಂದು ತಾಸಿನ ನಂತರ ಸ್ವಲ್ಪ ಎದ್ದು ಹೊರಗಡೆ ತಿರುಗಾಡಿ ಬರಬೇಕು. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ತಿನ್ನುವುದು ಬಹಳ ಸೂಕ್ತ. ಹೋಟೆಲ್ ಹಾಗೂ ಡಾಬಾ ಸಂಸ್ಕೃತಿಗೆ ಜನ ಮರಳಾಗುತ್ತಿದ್ದಾರೆ. ಇಲ್ಲಸಲ್ಲದ ಆಹಾರವನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮನೆಯ ಆಹಾರವೇ ಶ್ರೇಷ್ಠ ಎಂಬುದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು
ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಹಾಗೂ ಪ್ರಾಣಾಯಾಮಗಳು ಬಹಳ ಮಹತ್ವ ಪಡೆದುಕೊಳ್ಳುತ್ತವೆ. ಯೋಗ ಮಾಡುವುದರಿಂದ ರೋಗ ದೂರವಾಗುತ್ತದೆ. ಒಬ್ಬ ಯೋಗ್ಯ ಗುರುವಿನಿಂದ ಇವುಗಳನ್ನು ಕಲಿತುಕೊಂಡು ದಿನನಿತ್ಯ ತಪ್ಪದೆ ಮಾಡುತ್ತಿರಬೇಕು. ಪ್ರಾಣಾಯಾಮವು ಮನುಷ್ಯನ ದೇಹ ಮತ್ತು ಮೆದುಳಿಗೆ ಚೈತನ್ಯವನ್ನು ನೀಡುತ್ತದೆ. ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುವುದರಿಂದ ನಮ್ಮ ದೇಹಕ್ಕೆ ಹೆಚ್ಚು ಆಮ್ಲಜನಕ ದೊರೆಯುತ್ತದೆ. ಇವುಗಳನ್ನು ನಿಯಮತವಾಗಿಯೇ ಮಾಡುತ್ತಿರಬೇಕು.
ರಾತ್ರಿ ಬೇಗನೇ ಮಲಗಿ ಬೇಗನೇ ಏಳುವ ಪದ್ಧತಿಯನ್ನು ಅನುಸರಿಸಬೇಕು. ತಡವಾಗಿ ಮಲಗಿ ತಡವಾಗಿ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆಯನ್ನು ಸಹ ಮಿತಿಗೊಳಿಸಬೇಕು. ಊಟದಲ್ಲಿ ತಾಜಾ ತರಕಾರಿ ಹಣ್ಣು ಸೇವನೆ ಮಾಡಬೇಕು. ಸಿಹಿ, ಉಪ್ಪು, ಖಾರ, ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇವು ನಾಲಿಗೆಗೆ ರುಚಿಯನ್ನು ಕೊಟ್ಟರೂ ಆರೋಗ್ಯಕ್ಕೆ ಒಳ್ಳೆಯದಲ್ಲ.
ಯಾವುದೇ ಆದರೂ ಅತಿಯಾದರೆ ಒಳ್ಳೆಯದಲ್ಲ. ಅತಿಯಾದರೆ ಅಮೃತವು ವಿಷಯ ಎಂದು ಕರೆಯುತ್ತಾರೆ. ಆದ್ದರಿಂದ ಹಿತಮಿತವಾದಂತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ತನ್ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಸುಭದ್ರ ಸಮಾಜ ಹಾಗೂ ದೇಶವನ್ನು ಕಟ್ಟುವಲ್ಲಿ ಎಲ್ಲರೂ ನೆರವಾಗಬೇಕು.
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ
