ಒಂದು ಹಳ್ಳಿಯಲ್ಲಿ ಒಬ್ಬ ಕುರಿ ಕಾಯುವವನಿದ್ದನು. ಅವನಿಗೆ ಎರಡೂ ಕಿವಿ ಕೇಳಿಸುತ್ತಿರಲಿಲ್ಲ. ಸಂಪೂರ್ಣ ಕಿವುಡನಾಗಿದ್ದ. ಆದರೂ ಕಾಯಕ ಜೀವಿ. ಕುರಿ ಕಾಯುತ್ತ ಜೀವನ ಮಾಡಿಕೊಂಡಿದ್ದನು. ಪ್ರತಿ ದಿನವೂ ಗುಡ್ಡದ ಬದಿ ಕುರಿಗಳನ್ನು ಒಯ್ದು ಅಲ್ಲಿ ಮೇಯಲು ಬಿಡುತ್ತಿದ್ದ. ಗಿಡಗಂಟಿಗಳು, ಹುಲ್ಲು ಗರಿಕೆ, ಗಿಡದ ತೊಪ್ಪಲು ಅಲ್ಲಿ ಹುಲುಸಾಗಿ ಸಿಗುತ್ತಿತ್ತು. ತಾನು ಎತ್ತರದ ಬಂಡೆಯ ಮೇಲೆ ಕುಳಿತು ಕುರಿಗಳು ಮೇಯುವುದನ್ನು ನೋಡುತ್ತಿದ್ದ.
ಮಧ್ಯಾನದ ಹೊತ್ತಿಗೆ ಅವನ ಹೆಂಡತಿ ಮನೆಯಿಂದ ಊಟ ತಂದು ಕೊಡುತ್ತಿದ್ದಳು. ಕಿವುಡ ಊಟ ಮಾಡುತ್ತಿದ್ದರೆ ಈಕೆ ಕುರಿಗಳತ್ತ ಗಮನ ಕೊಡುತ್ತಿದ್ದಳು. ನಂತರ ಕಮನೆಯಲ್ಲಿದ್ದ ಕುರಿ ಮರಿಗಳಿಗೆ ಅಲ್ಲಿಯೇ ಒಂದಷ್ಟು ತೊಪ್ಪಲು, ಹುಲ್ಲು ಕಿತ್ತುಕೊಂಡು ಮನೆಯ ಕಡೆ ಹೋಗುತ್ತಿದ್ದಳು. ಇದು ಅವರಿಬ್ಬರ ಎಂದಿನ ಕಾಯಕವಾಗಿತ್ತು.
ಆದರೆ ಅವತ್ತು ಎಷ್ಟು ಹೊತ್ತಾದರೂ ಆಕೆ ಬರಲಿಲ್ಲ. ಕುರಿಗಾರನಿಗೆ ಹೊಟ್ಟೆ ಹಸಿದು ತಳಮಳವಾಗುತ್ತಿತ್ತು. ಹುಬ್ಬಿಗೆ ಕೈಯಿಟ್ಟು ಹೆಂಡತಿ ಬರುತ್ತಿದ್ದಾಳೇನೋ ಎಂದು ದಾರಿ ನೋಡಿದ. ಆಕೆ ಎಲ್ಲೂ ಕಾಣಲಿಲ್ಲ. ಬೆಳಿಗ್ಗೆ ತಿಂದು ಬಂದದ್ದು ನಾಲ್ಕೇ ನಾಲ್ಕು ರೊಟ್ಟಿ. ಅವೆಲ್ಲ ಅರಗಿ ಹೋಗಿದ್ದವು. ಖಾಲೀ ಹೊಟ್ಟೆ ಈಗ ರೊಟ್ಟಿ ರೊಟ್ಟಿ ಅನ್ನುತ್ತಿತ್ತು. ಎಷ್ಟು ಹೊತ್ತಾದರೂ ಹೆಂಡತಿಯ ಸುಳಿವೇ ಇಲ್ಲ. ಆಕೆಯ ದಾರಿ ನೋಡಿ, ನೋಡಿ ಸುಸ್ತಾಗಿ ಹೋದ. ಅತ್ತಿತ್ತ ನೋಡುತ್ತಿದ್ದ ವನಿಗೆ ದೂರದಲ್ಲಿ ಒಬ್ಬ ಕಟ್ಟಿಗೆ ಕಡಿಯುತ್ತಿದ್ದ ಮನುಷ್ಯ ಕಂಡ. ಅವನೂ ಪರಿಚಯದವನೆ.
ಅವನೂ ಹುಟ್ಟು ಕಿವುಡ. ತಕ್ಷಣ ಅವನ ಬಳಿ ಹೋದ.
”ನೋಡಪಾ ಯಣ್ಣಾ…! ನನಗ ಭಾಳ ಹಸಿವಾಗೈತಿ. ಸರ್ರಂತ ಮನೀಗೆ ಓಡಿ ಹೋಗಿ ಉಂಡಾವನ ಬರ್ತೀನಿ. ನನ್ನ ಆರು ಕುರಿಗೂಳು ಮತ್ತ ನಾಲ್ಕು ಮರಿಗೂಳು ಇಲ್ಲೇ ಮೇಯಾಕ ಹತ್ಯಾವು. ನಾ ಉಂಡು ಬರೂತನಕ ಅವನ್ನ ನೋಡ್ಕೊಂತ ಇದ್ದರ ಉಪಕಾರ ಆಗತೈತಿ ನೋಡಪಾ”
ಎಂದು ವಿನಂತಿ ಮಾಡುತ್ತಾನೆ. ಮೊದಲೇ ಅವನೂ ಕಿವುಡ. ಇವನು ಏನು ಹೇಳಿದನೆಂದು ಅವನಿಗೆ ಸರಿಯಾಗಿ ತಿಳಿಯಲಿಲ್ಲ. ಕಟ್ಟಿಗೆ ಕಡಿಯುತ್ತ ನಿಂತ ಶ್ರಮದಲ್ಲಿ ಅದನ್ನು ಸರಿಯಾಗಿಯೂ ಅರ್ಥ ಮಾಡಿಕೊಳ್ಳಲಿಲ್ಲ. ಏನೋ ಕೈ ಮಾಡಿ ಹೇಳಲು ಹೋದ. ಕುರಿಗಾರನಿಗೆ ಹಸಿವಿನ ಸಂಕಟ. ಇವನ ಕೈಸನ್ನೆಯನ್ನು ಅವನೂ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಅವನು ಒಪ್ಪಿದನೆಂದು ಇವ ತಿಳಿದ. ಖುಶಿಯಿಂದ ತಲೆಯಾಡಿಸಿ ‘ಈಗಲೇ ಬರ್ತೀನಿ’ ಅನ್ನುತ್ತ ಅವನ ಉತ್ತರಕ್ಕೂ ಕಾಯದೆ ಮನೆಯ ಹಾದಿ ತುಳಿದು ಭರ್ರನೆ ಹೋಗಿಯೇ ಬಿಟ್ಟ.
ಮನೆಯಲ್ಲಿ ಹೆಂಡತಿ ಹೊಟ್ಟೆ ನೋವು ಬಂದು ಅಡುಗೆಯನ್ನೇ ಮಾಡಿರಲಿಲ್ಲ. ಹಿಂದಿನ ರಾತ್ರಿ ಮಾಡಿಟ್ಟಿದ್ದ ನುಚ್ಚಿನ ಸಂಗಟಿ ಇತ್ತು. ಅದನ್ನೇ ತಾಟಿಗೆ ಹಾಕಿಕೊಂಡು ಒಂದು ಮಗಿ ಮಜ್ಜಿಗೆಯನ್ನು ಅದರ ಮೇಲೆ ಸುರುವಿ ಕೊಂಡು ಸೊರಸೊರ ಕುಡಿದು ಮತ್ತೆ ಅಲ್ಲಿ ನಿಲ್ಲದೆ ಗುಡ್ಡದತ್ತ ಓಡಿದ.
ಫೋಟೋ ಕೃಪೆ : screeble
ಕಟ್ಟಿಗೆ ಕಟಿಯುತ್ತಿದ್ದವ ಇನ್ನೂ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ತನ್ನ ಕುರಿಗಳು ಕ್ಷೇಮವಾಗಿದ್ದವು. ಕಟ್ಟಿಗೆಯವ ತನ್ನ ಕುರಿಗಳನ್ನು ಕಾಳಜಿಯಿಂದ ನೋಡಿಕೊಂಡಿದ್ದಾನೆಂದು ಹಿಗ್ಗಿದ. ಕುರಿಗಾರ ಅವನ ಬಳಿ ಹೋಗಿ-
”ಉಪಕಾರ ಆತಪಾ. ಅವನೌವ್ನ…! ಹೊಟ್ಟಿ ಮನಗಂಡ ಹಸಿದಿತ್ತು ನೋಡ್. ಉಂಡ್ ಬಂದ್ನಿ ನಿನ್ನ ಈ ಉಪಕಾರ ನಾ ಯಾವತ್ತೂ ಮರೆಯೂದಿಲ್ಲಪಾ. ಇದಕ್ಕ ಏನರ ನಿನಗ ಸಹಾಯ ಮಾಡತೀನಿ. ಈ ಸಣ್ಣ ಕುರಿಮರೀನ ನೀನ ಇಟ್ಕೊಂಡು ಬಿಡು” ಅನ್ನುತ್ತ ನಾಲ್ಕು ಮರಿಗಳಲ್ಲಿ ಒಂದು ಕುಂಟು ಮರಿ ಇದ್ದದ್ದನ್ನು ಆಯ್ಕೆ ಮಾಡಿ ಅವನ ಮುಂದೆ ನಿಲ್ಲಿಸಿದ. ಮನುಷ್ಯನ ಸ್ವಭಾವವೇ ಹಾಗೆ. ದಾನ ಕೊಟ್ಟರೂ ತನಗೆ ಬೇಡವಾದದ್ದನ್ನೇ ಕೊಡುತ್ತಾನಲ್ಲ… ಹಾಗೆ. ಕಟ್ಟಿಗೆಯವನು ತನ್ನ ಮುಂದೆ ನಿಲ್ಲಿಸಿದ ಕುಂಟು ಮರಿಯನ್ನು ನೋಡಿದ. ಕೂಡಲೇ ಅವನಿಗೆ ಅನಿಸಿದ್ದೇ ಬೇರೆ.
”ಅರೇ…! ಮಾನೇನೂ ಮಾಡಿಲ್ಲವಾ ನಿನ್ನ ಕುರೀ ಮರೀ ಕಾಲೀಗೆ. ಮರೀ ಕಾಲೀಗೆ ಹೊಡ್ದು ಕುಂಟು ಮಾಡೂದಕ್ಕ ನಾನೇನೂ ಕಟುಕ ಅಲ್ಲ. ಸುಮ್ನ ತಕರಾರು ಮಾಡಬ್ಯಾಡ.ನಿನ್ನ ಕುರಿಗೂಳ್ನ ನಾನು ಮುಟ್ಟಿಲ್ಲ ಸಹಿತ ಹಾಂ…! ನಿನ್ನ ಕುರೀ ಮರಿ ಕುಂಟೂದಕ್ಕೂ… ನನಗೂ ಸಂಬಂಧಾನ ಇಲ್ಲ. ನನಗ್ಯಾಕ ಅಪವಾದ ಕೊಡತೀಯೋ ನಿನ…! ”
ಅಂದ. ಆದರೆ ಈ ಮಾತುಗಳು ಕಿವುಡನಾದ ಕುರಿಗಾರನಿಗೆ ಸರಿಯಾಗಿ ಕೇಳಿಸದೆ, ಕಟ್ಟಿಗೆಯವನು ಬೇರೆ ರೀತಿ ಅರ್ಥ ಮಾಡಿಕೊಂಡ.
”ಅಲ್ಲೋ ನಿನ…! ನೀನು ಮಾಡಿದ ಉಪಕಾರಕ್ಕ ಪ್ರತಿ ಉಪಕಾರ ಮಾಡೂನು ಅಂತ ನಾನೊಂದು ಕುರಿ ಮರಿ ಕೊಡತೇನಂದ್ರ ಒಲ್ಲೆ ಅಂತೀಯಲ್ಲೋ ನಿನಾಪ್ನ. ಉಪಕಾರ ಮಾಡಿದಾಂವಗ. ಪ್ರತಿ ಉಪಕಾರ ಮಾಡೂದು ಮನುಷ್ಯನ ಧರ್ಮ. ಅದಕ್ಕಂತ ಕೊಡಾಕತ್ತೀನಿ ತಗೋ…”
ಆದರೆ ಇದು ಅರ್ಥ ಆಗದ ಕಟ್ಟಿಗೆಯವ ”ನನಗೇನೂ ಗೊತ್ತಿಲ್ಲ. ನಿನ್ನ ಕುರೀ ಮರೀಗೆ ನಾನೇನೂ ಮಾಡಿಲ್ಲಪೋ …” ಅನ್ನುತ್ತಲೇ ಇರುತ್ತಾನೆ.
ಇದೇ ಹೊತ್ತಿಗೆ ಕುದುರೆ ಹತ್ತಿಕೊಂಡು ಆ ಕಡೆಯಿಂದ ಒಬ್ಬ ವೇಗವಾಗಿ ಅಲ್ಲಿ ಬರುತ್ತಾನೆ. ಅವನೂ ಕಿವುಡನೇ. ಇವರಿಬ್ಬರೂ ಕಟ್ಟಿಗೆಯವ ಮತ್ತು ಕುರಿಗಾರ ದನಿ ಮಾಡುವುದನ್ನು ಕಂಡು ಆತ ಹೆದರಿಕೊಳ್ಳುತ್ತಾನೆ. ಯಾಕಂದರೆ. ಅವನು ಹತ್ತಿಕೊಂಡ ಬಂದ ಕುದುರೆಯನ್ನು ಆತ ಕದ್ದು ತಂದಿದ್ದ. ಇವರಿಬ್ಬರೂ ಹೀಗೆ ಜೋರಾಗಿ ಬಾಯಿ ಮಾಡುವುದನ್ನು ಕಂಡು ಇವರಿಬ್ಬರಿಗೂ ತಾನು ಕುದುರೆ ಕದ್ದು ತಂದದ್ದು ಗೊತ್ತಾಗಿದೆ. ನನ್ನ ಕೈಕಾಲು ಕಟ್ಟಿಹಾಕಲು ಇವರಿಬ್ಬರೂ ಹೊಂಚು ಹಾಕುತ್ತಿದ್ದಾರೆ ಎಂದುಕೊಂಡ. ಮತ್ತು ಇವರೇ ಕುದುರೆ ಮಾಲಕರಾಗಿರಬೇಕೆಂದು ಅನಿಸಿತು. ಇನ್ನಷ್ಟು ಹೆದರಿಕೊಳ್ಳುತ್ತಾನೆ. ಕಟ್ಟಿಗೆಯವ ಮತ್ತು ಕುರಿಗಾರರ ದನಿ ಇನ್ನೂ ಎತ್ತರವಾಗಿದ್ದನ್ನು ಕಂಡು ಹೆದರಿ ಆತ ಕೂಡಲೇ ಕುದುರೆಯಿಂದ ಇಳಿದು ಇಬ್ಬರಿಗೂ ಕೈ ಮುಗಿಯುತ್ತಾನೆ.
”ಇದೊಂದು ಸಲ ತಪ್ಪು ಮಾಡೀನಿ. ದೇವ್ರಾಣಿ…ಮುಂದ ಮತ್ತ ಮಾಡೂದಿಲ್ಲ. ಇದೊಂದು ಸಲ ನನ್ನನ್ನ ಬಿಟ್ಟು ಬಿಡ್ರಿ ನಿಮ್ಮ ಕುದುರೀನ ನೀವ಼ಽ ತಗೊಳ್ರೀಪಾ”
ಎಂದು ಹೇಳುತ್ತಾನೆ. ಇವರಿಬ್ಬರಿಗೂ ಕುದುರೆಯವ ಏನು ಹೇಳಿದನೆಂದೂ ಅರ್ಥವಾಗುವುದಿಲ್ಲ. ಮೂರೂ ಜನ ತಮ್ಮ ತಮ್ಮ ವಾದದಲ್ಲಿಯೇ ಮುಳುಗಿರುತ್ತಾರೆ. ಅಷ್ಟರಲ್ಲಿ ಆ ಕಡೆಯಿಂದ ಸಾಧುವೊಬ್ಬ ಬರುತ್ತಾನೆ. ಈ ಮೂರೂ ಜನರ ಮಾತು ಕೇಳಿಸಿಕೊಳ್ಳುತ್ತಾನೆ. ಸಾಧುವನ್ನು ನೋಡಿ ಕುರಿಗಾರ ಹೇಳುತ್ತಾನೆ.
”ಇಂವಗ ಪ್ರತ್ಯುಪಕಾರ ಮಾಡೂನಂತ ಕುರಿಮರಿ ಕೊಡಾಕ ಹ್ವಾದ್ನಿ. ತಗೋವಲ್ಲ ನೋಡ್ರಿ”
ಅನ್ನುತ್ತಾನೆ. ಕಟ್ಟಿಗೆಯವ – ”ನಾನು ಇಂವನ ಕುರಿಮರೀಗೆ ಏನೂ ಮಾಡಿಲ್ರಿ” ಅನ್ನುತ್ತಾನೆ. ಕುದುರೆಯವ – ”ನಾನು ಇದೊಂದು ಸಲ ತಪ್ಪು ಮಾಡೇನ್ರಿ. ಇವರ ಕುದುರೀ ಕದೀಬಾರದಿತ್ತು. ಕದ್ದು ಸೆಗಣೀ ತಿನ್ನೂ ಕೆಲಸಾ ಮಾಡೇನಿ. ಮುಂದ ಹಿಂಗ ಮಾಡೂದಿಲ್ಲ. ಇವರ ಕುದುರೀ ಇವರಿಗೆ ಕೊಡತೀನಿ. ನನ್ನ ಬಿಟ್ಟುಬಿಡಾಕ ಹೇಳ್ರೀಪಾ” ಅನ್ನುತ್ತಾನೆ. ಪರಿಸ್ಥಿತಿಯನ್ನು ಗಮನಿಸಿದ ಸಾಧು ಯೋಚಿಸಿದ. ಈ ಮೂವರೂ ಕಿವುಡರಿದ್ದಾರೆ. ಇವರಿಗೆ ಯಾರು ಏನು ಹೇಳುತ್ತಿದ್ದಾರೆ ಎಂದು ಗೊತ್ತಿಲ್ಲ. ನಾನೂ ಇವರೊಂದಿಗೆ ಮಾತಾಡಲು ಸುರು ಮಾಡಿದರೆ ಮೂರೂ ಜನ ಬೇರೆ ಅರ್ಥ ಮಾಡಿಕೊಳ್ಳುತ್ತಾರೆ. ಮಾತಾಡದೆಯೇ ಇದನ್ನು ಪರಿಹರಿಸಬೇಕೆಂದು ಯೋಚಿಸುತ್ತಾನೆ ಮತ್ತು ಮುಂದೆ ಬಂದು ಕುದುರೆ ಸವಾರನನ್ನು ನೋಡಿ ದುರುದುರು ಕಣ್ಣು ಬಿಡುತ್ತಾನೆ. ಸಾಧುವಿನ ಕಣ್ಣಿನ ಕೋಪ ಎದುರಿಸಲಾರದೆ ಸವಾರ ‘ಇನ್ನು ಇಲ್ಲಿ ಇದ್ದರೆ ಕೆಟ್ಟೆ’ ಅಂದವನೇ ಅಲ್ಲಿ ನಿಲ್ಲದೆ ಕುದುರೆಯನ್ನು ಅಲ್ಲಿಯೇ ಬಿಟ್ಟು ಭರ್ರನೇ ಓಡಿ ಬಿಡುತ್ತಾನೆ.
ಉಳಿದಿಬ್ಬರಿಗೂ ಅದನ್ನು ನೋಡಿ ಗಾಬರಿಯಾಯಿತು. ಇವನು ಕೆಂಡದಂಥ ಕಣ್ಣುಗಳಲ್ಲಿ ಏನೋ ಇದೆ ಎಂದು ಭಯವಾಯಿತು. ನಂತರ ಸಾಧು ಕಟ್ಟಿಗೆಯವನತ್ತ ತಿರುಗಿ ದುರುಗುಟ್ಟಿ ನೋಡಿದ. ಹೆದರಿದ ಆತ ‘ಕುರಿಮರಿಯನ್ನು ತಾನೇ ಕುಂಟು ಮಾಡಿದ್ದು’ ಎಂದು ಹೇಳುತ್ತಾನೆಂದು ಅಲ್ಲಿ ನಿಲ್ಲದೆ ಅವನೂ ಓಡಿಬಿಟ್ಟ.
ಹೀಗ ಓಡಿಹೋದ ಇಬ್ಬರನ್ನೂ ನೋಡಿದ ಕುರಿಗಾರನಿಗೆ ಜಂಘಾ ಬಲವೇ ಉಡುಗಿತು. ಇನ್ನು ತಾನು ಇಲ್ಲಿದ್ದರೆ ಈ ಸಾಧು ತನಗೆ ಶಾಪ ಹಾಕುವುದು ಖಂಡಿತ. ಇಲ್ಲಿ ನಿಲ್ಲಬಾರದೆಂದು ಅವಸರವಸರವಾಗಿ ತನ್ನ ಕುರಿಗಳನ್ನು ಹೊಡೆದುಕೊಂಡು ಊರಿನತ್ತ ದೌಡಾಸಿದ. ಎಲ್ಲವೂ ಶಾಂತವಾಯಿತು. ಸಾಧು ಒಂದೂ ಮಾತನಾಡದೆ ಅಲ್ಲಿನ ಗೊಂದಲವನ್ನು ನಿವಾರಿಸಿದ. ಹಾಗೂ ಅಲ್ಲಿದ್ದ ಕುದುರೆಯನ್ನು ಅದರ ಮಾಲಕನಿಗೆ ಒಪ್ಪಿಸಲು. ಅದರೊಂದಿಗೆ ಸಾಗಿದ.
ತಾತ್ಪರ್ಯ – ಎಲ್ಲ ಸಮಸ್ಯೆಗಳು ಮಾತಾಡುವುದರಿಂದ ಬಗೆ ಹರಿಯುವುದಿಲ್ಲ. ಜ್ಞಾನಿಗಳು ಮಾತನಾಡದೆಯೇ ಸಮಸ್ಯೆಗಳನ್ನು ಬಗೆ ಹರಿಸುವ ಸೂತ್ರವನ್ನು ನಮಗೆ ಕೊಟ್ಟಿದ್ದಾರೆ. ಕುಟುಂಬದಲ್ಲಿ ಎಲ್ಲರಿಗೂ ಎಲ್ಲವೂ ಸರಿಯಾಗಿದ್ದರೂ ಯಾವ ಸಮಯಕ್ಕೆ ಏನು ಮಾತನಾಡಬೇಕು ಎಂದು ಅರ್ಥವಾಗದೆ ಏನೇನೋ ಮಾತಾಡಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ. ಸನ್ನೆಯಲ್ಲಿ ಹೇಳಬೇಕಾದುದನ್ನು ಮಾತಿನಲ್ಲಿ ಹೇಳಲು ಹೋಗಿ ಅವರು ಎಡವಟ್ಟು ಮಾಡಿಕೊಂಡರು. ಮಾತು ಬರುವವರು ಮಾತಿನಿಂದಲೇ ಎಡವಟ್ಟು ಮಾಡಿಕೊಳ್ಳುತ್ತಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕೃಪೆ- [‘ಓಶೋ’ ಅವರ ಪ್ರವಚನ]
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಲೇಖನ : ಅರವಿಂದ ಕುಲಕರ್ಣಿ
ಮಲಪ್ರಭಾ ಗ್ರಾಮೀಣ ಬ್ಯಾಂಕ್ ನಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಓದುವ ಮತ್ತು ಬರವಣಿಗೆಯಲ್ಲಿ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
ಅರವಿಂದ ಕುಲಕರ್ಣಿ ಅವರ ಹಿಂದಿನ ಬರಹಗಳು :
- ಅರವಿಂದ ಕುಲಕರ್ಣಿಯವರ ಆ ದಿನಗಳ ಸವಿ ಸವಿ ನೆನಪುಗಳು