ಹೆಣ್ಣು ಅಂತ್ಯಸಂಸ್ಕಾರ ಮಾಡಬಾರದೆ?

ಶಾಸ್ತ್ರ ಸಂಪ್ರದಾಯ ವೇದ ಪುರಾಣಗಳನ್ನು ಮೀರಿ ಹೆಣ್ಣು ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ಇದನ್ನು ಸವಲತ್ತು ಎಂದುಕೊಂಡರೆ ಮಾತ್ರ ವಿವಾದ ಸೃಷ್ಟಿಯಾಗುತ್ತದೆ.- ದೀಪಿಕಾ ಬಾಬು, ತಪ್ಪದೆ ಮುಂದೆ ಓದಿ…

ಇಲ್ಲಿ ಹುಟ್ಟಿದ ಪ್ರತಿ ಜೀವಿಯೂ ಮರಣ ಹೊಂದಲೇಬೇಕು, ಆದರೆ ಅಂತ್ಯಸಂಸ್ಕಾರವೆಂದು ಪೂಜೆ ಪುನಸ್ಕಾರ ಎಂಬ ವಿಧಿ ವಿಧಾನಗಳಲ್ಲಿ ನಡೆಯುವುದು ಮಾತ್ರ ಮನುಷ್ಯನಿಗೆ. ಅಂತ್ಯ ಸಂಸ್ಕಾರವನ್ನು ಗಂಡು ಮಕ್ಕಳೇ ನೆರವೇರಿಸಬೇಕೆಂಬ ಧರ್ಮ ನಿಯಮಗಳನ್ನು ರೂಪಿಸಿ, ಹೆಣ್ಣನ್ನು ಮಾತ್ರ ಹೆತ್ತವರು ಗಂಡೆತ್ತವರ ಅಡಿ ಹಾಳಾಗಿರುವಂತೆ ಅವರನ್ನು ನಿಂದಿಸುವುದು ಅನೇಕ ಹಳ್ಳಿಗಳಲ್ಲಿನ ಕುಟುಂಬಗಳಲ್ಲಿ ಈಗಲೂ ನಡೆಯುತ್ತಿರುವ ದೃಶ್ಯವಾಗಿದೆ.

ಮಾನವ ಜೀವನದ 16 ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು ಇದಕ್ಕೆ ಕಾರಣಗಳೂ ಇರಬಹುದು. ಸ್ತ್ರೀಯರ ವಿರುದ್ಧದ ಅನೇಕ ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಂತೂ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಕಟ್ಟ ಸಂಪ್ರದಾಯವಾದಿಗಳು ಇರುವಂತೆಯೇ ಕಾಲಕಾಲಕ್ಕೆ ಹೊಂದಿಕೊಂಡು ನಡೆಯುವ ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ ಇರಬೇಕು. ಮುಕ್ತ ವೈಚಾರಿಕತೆಗೆ, ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ.

ಫೋಟೋ ಕೃಪೆ :google ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಓದಿದ ಸುದ್ದಿಯೊಂದು ಕರ್ನಾಟಕದ ಚೀಫ್ ಅಕೌಂಟೆಂಟ್ ಬಿ.ಜಿ.ಇಂದಿರಮ್ಮ ಒಬ್ಬ ಕೆ.ಎ.ಎಸ್. ಅಧಿಕಾರಿ ಕೆಲವು ವರ್ಷಗಳ ಹಿಂದೆ ಅವರ ತಂದೆ ಬೆಳಗೊಳ ಗ್ರಾಮದ ಗೋವಿಂದೇಗೌಡ ಮೃತರಾದಾಗ ಅವರ ನಾಲ್ಕನೆಯ ಮಗಳಾದ ಈಕೆ ಬಲಮುರಿಯಲ್ಲಿ ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ೧೧ನೆಯ ದಿನ ಸಂಪ್ರದಾಯದಂತೆ ಕೇಶಮುಂಡನವನ್ನೂ ಮಾಡಿಸಿಕೊಂಡರು. ತಾಯಿ ಸತ್ತಾಗ ಚಿತಾಭಸ್ಮವನ್ನು ವಾರಣಾಸಿಗೆ ಕೊಂಡೊಯ್ದು ಗಂಗೆಯಲ್ಲಿ ವಿಸರ್ಜಿಸಿದ್ದ ಇವರು, ತಂದೆಯ ಚಿತಾಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸಿದರು. “ನಮ್ಮ ತಂದೆ-ತಾಯಿಗೆ ನಾವು ಐವರು ಹೆಣ್ಣು ಮಕ್ಕಳು. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅದರಲ್ಲಿ ತಪ್ಪೇನಿದೆ?” ಎಂಬುದು ಇಂದಿರಮ್ಮನವರ ಪ್ರಶ್ನೆ. ಇಂದಿರಮ್ಮನವರು ಸ್ವತಃ ವಿವಾಹಿತರಾಗಿದ್ದೂ ಕೇಶಮುಂಡನ ಮಾಡಿಸಿಕೊಂಡಿದ್ದು ಸರಿಯಲ್ಲವೆಂದು ಕೆಲವರು ಬಂಧುಗಳು ಆಕ್ಷೇಪಿಸಿದ್ದರೆ, ಕೆಲವರು ಬಂಧುಗಳು ಬೆಂಬಲಿಸಿದ್ದರು.

ಎಲ್ಲೋ ಕೇಳಿದ್ದ ಈ ಸಂಗತಿ ಮನಕಲಕುತ್ತದೆ. ಒಂದು ಕುಟುಂಬದಲ್ಲಿ ತಾಯಿ ಮತ್ತು ಮಗಳು ಇಬ್ಬರೇ ಇದ್ದರು. ತಾಯಿ ಸತ್ತ ಸಂದರ್ಭದಲ್ಲಿ ಮಗಳು ತನ್ನ ತಾಯಿಯ ಅಂತ್ಯಕ್ರಿಯೆಗಳನ್ನು ದೂರದ ಸಂಬಂಧಿ ಮಾಡುತ್ತಿದ್ದಾಗ ವೇದನೆಯಿಂದ ಉದ್ಗರಿಸಿದ್ದು: ‘ಓ ದೇವರೇ, ನಾನು ಮಗನಾಗಿದ್ದಿದ್ದರೆ ಹೀಗೆ ಪರಕೀಯತೆಯ ಭಾವನೆ ಬರುತ್ತಿರಲಿಲ್ಲ!’. ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಬಿಜೆಪಿಯ ಕೇಂದ್ರ ಸಚಿವ ಶ್ರೀ ಗೋಪಿನಾಥ ಮುಂಡೆಯವರ ಅಂತ್ಯ ಸಂಸ್ಕಾರವನ್ನು ಅವರ ಮಗಳು ಮಹಾರಾಷ್ಟ್ರದ ವಿಧಾನಸಭೆ ಸದಸ್ಯೆಯಾಗಿರುವ ಪಂಕಜಾರವರೇ ನೆರವೇರಿಸಿದ್ದನ್ನು ವಾಹಿನಿಗಳಲ್ಲಿ ನೋಡಿದ್ದೇವೆ.

ಬಿಜೆಪಿಯ ಕೇಂದ್ರ ಸಚಿವ ಶ್ರೀ ಗೋಪಿನಾಥ ಮುಂಡೆಯವರ ಅಂತ್ಯ ಸಂಸ್ಕಾರದಲ್ಲಿ ಅವರ ಮಗಳು (ಮಹಾರಾಷ್ಟ್ರದ ವಿಧಾನಸಭೆ ಸದಸ್ಯೆ)
ಫೋಟೋ ಕೃಪೆ : google

ಅನೇಕ ಹಳ್ಳಿಗಳಲ್ಲಿ ಹೆಣ್ಣನ್ನು ಹೆತ್ತವರ ಗೋಳಿನ ಕಥೆಗೆ ಅಂತ್ಯವಿಲ್ಲ ಎಂಬಂತೆಯೇ ಆಗಿದೆ, ಗಂಡೆತ್ತವರ ದರ್ಪಕ್ಕೂ ಅಂತ್ಯವಿಲ್ಲ, ಬದುಕಿರುವಾಗಲೇ ನೀವು ಸತ್ತ ನಂತರ ನಿಮ್ಮ ಅಂತ್ಯಸಂಸ್ಕಾರಕ್ಕೆ ನಾವೇ ದಿಕ್ಕು ಎಂಬ ಮಾತುಗಳು ಬದುಕಿರುವವರ ಮನಶಾಂತಿಯನ್ನು ಹಾಳು ಮಾಡಿರುತ್ತದೆ. ಮತ್ತೂ ಅವರು ಸತ್ತಾಗ ಅವರ ಆತ್ಮಕ್ಕೆ ಶಾಂತಿಯಾದರೂ ಲಭಿಸುವುದು ಹೇಗೋ? ಮಕ್ಕಳು ಗಂಡಾದರೇನು, ಹೆಣ್ಣಾದರೇನು ತಂದೆ ತಾಯಿಗಳಿಗೆ ಮಕ್ಕಳೇ ಅವರಿಗೂ ತನ್ನ ಹೆತ್ತವರ ಬಗ್ಗೆ ಪ್ರೀತಿಯೂ ಗೌರವವಿದ್ದೂ ಅಂತ್ಯಸಂಸ್ಕಾರದ ಕರ್ತವ್ಯವನ್ನು ನೆರವೇರಿಸಲು ಬದ್ಧರಿರುತ್ತಾರೆ. ಹೊರ ರಾಜ್ಯ, ದೇಶ ವಿದೇಶಗಳಲ್ಲಿ ಹೆಣ್ಣು ಮಕ್ಕಳೇ ಹೆತ್ತವರ ಅಂತ್ಯಸಂಸ್ಕಾರವನ್ನು ಮಾಡಿರುತ್ತಾರೆ, ಜಾರ್ಖಂಡ್ ರಾಜ್ಯದಲ್ಲಿನ ಬಡಬ್ರಾಹ್ಮಣ ಸ್ತ್ರೀಯ ಪತಿಯೂ ಸತ್ತಾಗ ಮಕ್ಕಳಿಲ್ಲದ ಅವರಿಗೆ ಅವನ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪತ್ನಿಯೇ ನೆರವೇರಿಸುತ್ತಾಳೆ. ಉದಯಪುರ್ ನಲ್ಲಿ ಐದು ಜನ ಹೆಣ್ಣು ಮಕ್ಕಳು ತನ್ನ ತಂದೆಯ ಕಾರ್ಯವನ್ನು ಮಾಡುತ್ತಾರೆ.

ಕೆಲವು ಕಡೆಗಳಲ್ಲಿ ಸ್ತ್ರೀಯರು ಅಂತ್ಯ ಸಂಸ್ಕಾರ ಮಾಡಬಾರದು ಎಂಬ ವಾದವಿದೆ ಈ ಕುರಿತು ಸಂಪ್ರದಾಯದಲ್ಲಿನ ಕೆಲವು ನಿರ್ಬಂಧಗಳಲ್ಲಿ ಅರ್ಥವಿರಲೂಬಹುದು ಮತ್ತು ಕೆಲವುದರಲ್ಲಿ ಮುಖ್ಯ ಕಾರ್ಯಗಳಲ್ಲಿ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶವೂ ಇರಬಹುದು. ಗಂಡು ಮಕ್ಕಳೇ ಅಂತ್ಯ ಸಂಸ್ಕಾರ ಮಾಡಬೇಕೆಂಬ ಸಂಪ್ರದಾಯ ಶತಮಾನಗಳಿಂದ ವಿವಾದಗ್ರಸ್ತ ವಿಷಯವಾಗಿ ಮುಂದುವರೆದಿದೆ. ದಂಪತಿಗಳಿಗೆ ಹೆಣ್ಣು ಮಗು ಮಾತ್ರ ಇದ್ದ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಗಂಡು ಸಂಬಂಧಿ ಅಂತ್ಯ ಸಂಸ್ಕಾರ ಮಾಡಬೇಕೆನ್ನುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹಿಂದೆ ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಕಾರಣವಾಗುತ್ತಿತ್ತು. ಅಂತ್ಯ ಸಂಸ್ಕಾರ ನಡೆಸಿದ ಕಾರಣದಿಂದ ಆಸ್ತಿ ಹಕ್ಕು ಸ್ಥಾಪಿಸುವುದು ಹಿಂದಿನಿಂದಲೂ ಇರುವುದೇ ಆಗಿದೆ. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಒಂದು ಕ್ರಾಂತಿಕಾರಿ ಬೆಳವಣಿಗೆಯೆನ್ನಬೇಕು. ಹೆಣ್ಣು ಮಕ್ಕಳು ಮೃದು ಹೃದಯಿಗಳಾಗಿದ್ದು ಭಾವನಾತ್ಮಕವಾಗಿ ಧಿಡೀರ್ ಸ್ಪಂದನಶೀಲರಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಮಿತಿಮೀರಿದ ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವೆಂಬ ಭಾವನಾತ್ಮಕ ಕಾರಣವನ್ನೂ ಮುಂದೊಡ್ಡಲಾಗುತ್ತದೆ. ಅಲ್ಲದೆ ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರಕ್ಕೊಳಪಡುವುದು ಸಹ ಅಂತ್ಯ ಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳೆನ್ನುತ್ತಾರೆ. ಇಂತಹುದನ್ನೆಲ್ಲಾ ಗಮನಿಸಿ ಸ್ತ್ರೀಯರನ್ನು ಅಂತ್ಯ ಸಂಸ್ಕಾರ ಮಾಡುವ ಕೆಲಸದಿಂದ ವಿನಾಯಿತಿಗೊಳಿಸಲಾಗಿದೆಯೆನ್ನುತ್ತಾರೆ. ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯವೆಂದು ಹೇಳಲಾಗದು. ಈಗೀಗ ಮಹಿಳೆಯರೂ ತಮ್ಮ ಹಕ್ಕನ್ನು ಸ್ಥಾಪಿಸುವತ್ತ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಅದಕ್ಕೆ ಉದಾಹರಣೆಗಳೇ ಮೇಲೆ ಉಲ್ಲೇಖಿಸಿರುವ ಘಟನೆಗಳು. ಇನ್ನೊಂದು ಕಾರಣವೆಂದರೆ ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ ಹಾಗಾಗಿ ವಿವಾಹವಾದ ಸ್ತ್ರೀ ತನ್ನ ತಂದೆ-ತಾಯಿಯರ ಅಂತ್ಯ ಸಂಸ್ಕಾರ ಮಾಡಬರುವುದಿಲ್ಲ. ಆದರೆ ಮದುವೆಯಾಗದ ಹೆಣ್ಣು ಮಗಳು ಈ ಕ್ರಿಯೆಗಳನ್ನು ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )

ಗರುಡ ಪುರಾಣದ ೧೬ ಅಧ್ಯಾಯಗಳಲ್ಲಿ ನರಕದ ದರ್ಶನ, ಪಾಪಿಗಳಿಗೆ ಸಲ್ಲುವ ಶಿಕ್ಷೆ ಇತ್ಯಾದಿಗಳ ವರ್ಣನೆ ಅಲ್ಲದೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನೂ ವಿವರಿಸಲಾಗಿದೆ. ೧೧ನೆಯ ಅಧ್ಯಾಯದ ೧೨-೧೭ರ ಶ್ಲೋಕದಲ್ಲಿ ಮೃತನ ಅಂತ್ಯ ಸಂಸ್ಕಾರವನ್ನು ಮಗ ಮಾಡಬೇಕು, ಮಗ ಇಲ್ಲದಿದ್ದಲ್ಲಿ ಹೆಂಡತಿ, ಹೆಂಡತಿ ಇಲ್ಲದಿದ್ದಲ್ಲಿ ಸೋದರ ಅಥವ ಒಬ್ಬ ಬ್ರಾಹ್ಮಣ ಅಥವ ಅರ್ಹ ಸಂಬಂಧಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಮಗಳ ಕುರಿತು ಇಲ್ಲಿ ಉಲ್ಲೇಖಿಸಿಲ್ಲ. ೧೮ನೆಯ ಶ್ಲೋಕದಲ್ಲಿ ಒಬ್ಬ ಪುರುಷ ಅಥವ ಸ್ತ್ರೀ ಅಂತ್ಯ ಸಂಸ್ಕಾರ ನಡೆಸಿದರೆ ಸಿಗುವ ಫಲದ ಬಗ್ಗೆ ಹೇಳಿದೆ. ಇದರ ಅರ್ಥ ಸ್ಪಷ್ಟ – ಸ್ತ್ರೀ ಸಹ ಅಂತ್ಯ ಸಂಸ್ಕಾರ ಮಾಡಲು ಅರ್ಹಳು ಎಂದೇ! ಹೀಗಿರುವಾಗ ಅಂತ್ಯ ಸಂಸ್ಕಾರ ಮಾಡಲಿಚ್ಛಿಸುವ ಸ್ತ್ರೀಯರಿಗೆ ಸಂಪ್ರದಾಯದ ಹೆಸರಿನಲ್ಲಿ ಅಡ್ಡಿಪಡಿಸುವುದು ಸೂಕ್ತವಾಗಲಾರದು.

ಅಂತ್ಯ ಸಂಸ್ಕಾರದ ಕ್ರಿಯೆಗಳ ವಿಧಿ-ವಿಧಾನಗಳ ನೈಜ ಅರ್ಥ ಮತ್ತು ಅನುಷ್ಠಾನಗಳನ್ನು ತಿಳಿಯದೆ ಕ್ರಿಯೆ ಮಾಡಿಸುವವರು ಅಥವ ತಿಳಿದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವವರು ಹಾಗೂ ಸಂಪ್ರದಾಯಗಳ ನೈಜ ಹಿನ್ನೆಲೆಗಳನ್ನು ತಿಳಿಯಲು ಪ್ರಯತ್ನಿಸದೆ ಧಿಡೀರ್ ತೀರ್ಮಾನ ಕೊಡುವ ವಿಚಾರವಾದಿಗಳೆನಿಸಿಕೊಂಡವರು ಇಂತಹ ವಿಷಯಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆಂದರೆ ತಪ್ಪಾಗಲಾರದು.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ )

ಹಿಂದೂಗಳಿಗೆ ವೇದಗಳೇ ಪರಮ ಪ್ರಮಾಣ. ವಿಶೇಷವೆಂದರೆ ವೇದಗಳಲ್ಲಿ ಸಂಪ್ರದಾಯಗಳ ಬಗ್ಗೆ ಏನೂ ಹೇಳಿಲ್ಲ. ಸಂಪ್ರದಾಯಗಳನ್ನು ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು, ಅವುಗಳಲ್ಲಿ ತುರ್ತು ಸನ್ನಿವೇಶಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳಿಗೂ ಅವಕಾಶವಿತ್ತು. ಆದರೆ ಸಂದಿಗ್ಧ ಸಂದರ್ಭಗಳಲ್ಲಿ ನಿರ್ಧಾರಗಳನ್ನು ವೇದಗಳನ್ನು ಆಧರಿಸಿಯೇ ಮಾಡಬೇಕು. ವೇದಗಳ ಉದಾತ್ತತೆ ಎಷ್ಟೆಂದರೆ ಅವು ಎಲ್ಲಿಯೂ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ. ಅವು ಸರಿಯಾದ ಮಾರ್ಗ ಯಾವುದೆಂದು ಮಾತ್ರ ತೋರಿಸುತ್ತದೆ ಮತ್ತು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ನಮಗೇ ಬಿಡುತ್ತದೆ. ವೇದವು “ಭಸ್ಮಾಂತಂ ಶರೀರಮ್” ಎಂದು ಹೇಳುತ್ತದೆ. ಇದರ ಅರ್ಥ ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ ಎಂದು. ಮೃತರಾದ ನಂತರ ಶರೀರವನ್ನು ಅಗ್ನಿಗೆ ಅರ್ಪಿಸಬೇಕು ಎಂದು ಇದರ ಅರ್ಥ. ಆದರೆ ಮೃತ ಶರೀರವನ್ನು ಅಗ್ನಿಗೆ ಅರ್ಪಿಸಿದ ನಂತರ ಮಾಡಬೇಕಾದ ಕ್ರಿಯೆಗಳ ಬಗ್ಗೆ ವೇದಮಂತ್ರಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ. “ಶ್ರಾದ್ಧ – ಏಕೆ ಮತ್ತು ಹೇಗೆ?” ಎಂಬ ನನ್ನ ಇನ್ನೊಂದು ಲೇಖನದಲ್ಲಿ ಈ ವಿಚಾರದಲ್ಲಿ ವಿಸ್ತೃತವಾಗಿ ಚರ್ಚಿಸಿರುವೆ. ಆದ್ದರಿಂದ ಈ ಕುರಿತು ಇಲ್ಲಿ ಮತ್ತೆ ವಿವರಿಸಲು ಹೋಗುವುದಿಲ್ಲ. ರೂಢಿಗತವಾದ ಸಂಪ್ರದಾಯಗಳು ಸಮಾಜದ ಹಿತದ ಸಲುವಾಗಿ ಹೊರತು ಮತ್ತೇನಲ್ಲ. ಹೀಗಾಗಿ ಅವುಗಳನ್ನು ಸದಾಕಾಲಕ್ಕೆ ಕುರುಡಾಗಿ ಅನುಸರಿಸುವುದಕ್ಕಿಂತ ಒಟ್ಟು ಹಿತ ಮತ್ತು ಅಗತ್ಯ ಅನುಸರಿಸಿ, ಈಗಾಗಲೇ ಹಲವಾರು ಸಂಪ್ರದಾಯಗಳಲ್ಲಿ ಮಾಡಿಕೊಂಡಿರುವಂತೆ ಕಾಲಕ್ಕೆ ಅನುಗುಣವಾದ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಸಾಂದರ್ಭಿಕವಾಗಿ ಅಗತ್ಯವೆಂದು ಕಂಡುಬಂದಿದ್ದ ಮತ್ತು ಅನುಸರಿಸಲಾಗುತ್ತಿದ್ದ ಬಾಲ್ಯವಿವಾಹ, ಸತಿಪದ್ಧತಿ, ರಜಪೂತ ಸ್ತ್ರೀಯರು ಸಾಮೂಹಿಕವಾಗಿ ತಮ್ಮ ಶೀಲ ಉಳಿಸಿಕೊಳ್ಳಲು ಜೀವ ತ್ಯಜಿಸುತ್ತಿದ್ದ ‘ಜೌಹರ್’ ಪದ್ಧತಿ, ವಿಧವೆಯರ ಕೇಶಮುಂಡನ, ಮುಸ್ಲಿಮ್ ಆಳ್ವಿಕೆಯಲ್ಲಿ ಮುಸ್ಲಿಮೇತರ ಹಿಂದೂ ಸ್ತ್ರೀಯರೂ ಹಾಕಿಕೊಳ್ಳಬೇಕಾಗಿದ್ದ ಮುಖಮುಸುಕು, ದೇವದಾಸಿ ಪದ್ಧತಿ ಮುಂತಾದುವುಗಳು ಇಂದು ಮರೆಯಾಗಿವೆ. ಚಿಂತಕರ, ಸುಧಾರಕರ ಪ್ರಯತ್ನಗಳೂ ಇದರ ಹಿಂದಿದೆ. ವೇದಕಾಲದಲ್ಲಿ ಸ್ತ್ರೀಯರೂ ಉಪವೀತಧಾರಣೆ ಮಾಡಿಕೊಂಡು ವೇದಾಧ್ಯಯನ ಮಾಡುತ್ತಿದ್ದರು. ಕ್ರಮೇಣ ಯಾವುದೋ ಕಾರಣಕ್ಕೆ ಸುದೂರ ಹಿಂದಿನ ಕಾಲಘಟ್ಟದಲ್ಲಿ ಸ್ತ್ರೀಯರನ್ನು ಇದರಿಂದ ದೂರವಿಡಲಾಯಿತು. ಇದು ಸತ್ಸಂಪ್ರದಾಯವೊಂದರ ಕಣ್ಮರೆಗೆ ಕಾರಣವಾಯಿತು. ವೇದಾಧ್ಯಯನದಿಂದ ಸ್ತ್ರೀಯರು ವಂಚಿತರಾಗಬಾರದು. ವೇದಪಂಡಿತರಾದ ಮೈತ್ರಿ, ಗಾರ್ಗೇಯಿ ಮುಂತಾದ ಅನೇಕ ಋಷಿಕೆಯರ ಉದಾಹರಣೆಗಳಿವೆ. ಇದನ್ನೆಲ್ಲಾ ಏಕೆ ಉದಾಹರಿಸಿದ್ದೆಂದರೆ ಅಂತ್ಯಸಂಸ್ಕಾರದ ವಿಷಯದಲ್ಲೂ ಅಷ್ಟೆ, ಇಂದಿಗೆ ಅಗತ್ಯವಾದ ಕ್ರಮವನ್ನು ಅನುಸರಿಸಿದರೆ ತಪ್ಪೇನಿಲ್ಲ.

ಶಾಸ್ತ್ರ ಸಂಪ್ರದಾಯ ವೇದ ಪುರಾಣಗಳನ್ನು ಮೀರಿ ಹೆಣ್ಣು ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ಇದನ್ನು ಸವಲತ್ತು ಎಂದುಕೊಂಡರೆ ಮಾತ್ರ ವಿವಾದ ಸೃಷ್ಟಿಯಾಗುತ್ತದೆ. ವೇದವು ಯಾವುದೇ ರೀತಿಯ ಅಸಮಾನತೆಗೆ ವಿರೋಧವಾಗಿದೆ. ಯಾವುದೇ ಕ್ರಿಯೆಗಳ ಅರ್ಥ ತಿಳಿದು ಮಾಡುವುದರಿಂದ ಮಾನಸಿಕ ತೃಪ್ತಿ, ಸಾರ್ಥಕತೆ ಇರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಕೆಲವು ಕ್ರಿಯೆಗಳಿಂದ ದೂರವಿಡುವ ವಿಚಾರದಲ್ಲಿ ಮಹಿಳೆಯರ ಪಾಲೂ ಇದೆ. ಏಕೆಂದರೆ ಸಂಪ್ರದಾಯಗಳ ಪಾಲನೆ, ಬೆಳವಣಿಗೆಗಳಲ್ಲಿ ಅವರ ಪಾತ್ರವೇ ಮಹತ್ವದ್ದಾಗಿದೆ.


  • ದೀಪಿಕಾ ಬಾಬು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW