ನನ್ನ ಅಪ್ಪ ಅಂತರ್ಜಾತಿ ವಿವಾಹವಾಗಿದ್ದರು, ನನ್ನ ಅಮ್ಮನನ್ನು ಅಪ್ಪನ ಮನೆಯಲ್ಲಿ ಒಪ್ಪದ ಕಾರಣ ಅಪ್ಪ, ಅಮ್ಮ ಸ್ವಲ್ಪ ವರ್ಷ ದೂರವೇ ಉಳಿದುಕೊಳ್ಳಬೇಕಾಯಿತು. ಆಗ ಅವರು ನಮ್ಮ ಕಣ್ಣಿಗೆ ಕಂಡಿದ್ದು ಬೇರೆ ತಂದೆಯರಂತೆ ನಮ್ಮನ್ನು ಅನುಕೂಲಸ್ಥರವಾಗಿ ಬೆಳೆಸಲಿಲ್ಲ ಅನ್ನೋದು. ಅವರ ಪ್ರಾಮಾಣಿಕತೆ, ಸತ್ಯನಿಷ್ಠುರತೆ, ತಾಯಿಯ ಮೇಲಿದ್ದ ಅವರ ಅನನ್ಯ ಪ್ರೀತಿ,ಅಮ್ಮ ಸತ್ತಮೇಲೆ ಸನ್ಯಾಸಿಯಂತೆ ಮರಣವನ್ನಪ್ಪಿದ್ದು ನೋಡಿದಮೇಲೆ ನಮ್ಮ ದೃಷ್ಟಿಯಲ್ಲಿ ಅವರೊಬ್ಬ ಅದ್ವಿತೀಯ ಹೀರೋವಾಗಿ ಬಿಟ್ಟರು. -ಶಕುಂತಲಾ ಶ್ರೀಧರ ತಪ್ಪದೆ ಮುಂದೆ ಓದಿ…
ಸುಮಾರು ಗೆಳೆತಿ, ಗೆಳೆಯರು ಫೆಸ್ಬುಕ್ನಲ್ಲಿ ತಮ್ಮ ತಂದೆಯ ಬಗ್ಗೆ ಮನತುಂಬಿ, ಭಾವನಾತ್ಮಕವಾಗಿ ಬರೆದಿದ್ದಾರೆ. ನನ್ನ ಅನುಭವ ಬೇರೆಯದೇ ಆಗಿತ್ತು. ತಂದೆಯ ಬಗ್ಗೆ ಹೆಮ್ಮೆಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ನನ್ನ ಗೆಳೆತಿಯರ, ಸಮವಯಸ್ಕರ ತಂದೆಯಿಂದರು ಮಾಡಿದ ,ಬೆಳೆಸಿದ ರೀತಿ ನಮಗೆ ದಕ್ಕಲಿಲ್ಲವೆಂಬ ಬೇಸರವಿತ್ತು. ಜೊತೆಗೆ ಅಂತರ್ಜಾತಿಯ ಮಕ್ಕಳಾದ ನಮಗೆ ಒಂದು ಬಗೆಯ ಕೀಳರಿಮೆ ಇತ್ತು. ಬರೆದಿರುವವರೆಲ್ಲಾ ಹೆಚ್ಚು ಕಡಿಮೆ ಮೇಲ್ ಮಧ್ಯಮವರ್ಗದ, ಸಂಮಾಜದ ಮೇಲು ಜಾತಿಯವರಾದ ಕಾರಣ ಅವರದೆಲ್ಲಾ ತಂದೆಯ ಬಗ್ಗೆ ಅಭಿಮಾನ, ಕೃತಜ್ಞತೆ ತುಂಬಿದ ಅನುಭವಗಳಾಗಿವೆ. ಜಾತಿಯ ವಿಷಯ ಇಲ್ಲಿ ಪ್ರಸ್ತುತವಾದ ಕಾರಣವನ್ನು ಆಮೇಲೆ ಪ್ರಸ್ತಾಪಿಸಲಿದ್ದೇನೆ.
ನನ್ನದು ಸ್ವಾತಂತ್ರ ಭಾರತದೊಂದಿಗೆ ಬೆಳೆದ ಬಾಲ್ಯ. ಜಾತೀಯತೆ ಇನ್ನೂ ಹಸಿ ಹಸಿಯಾಗಿದ್ದ ಕಾಲ. ಸಮಾಜದ ತೀರಾ ಹಿಂದುಳಿದ ಜಾತಿಗೆ ಸೇರಿದ್ದರೂ ನನ್ನ ತಾತನದು ಸ್ಥಿತಿವಂಥ ಕುಟುಂಬ-ತೊಟ್ಟಿ ಮನೆ, ತೋಟ, ಒಳ್ಳೆಯ ಆದಾಯವಿದ್ದ ಕುಲ ಕಸುಬು. ಆಶ್ಹ ರ್ಯವೆಂದರೆ ಅವರ ತಂದೆ ತಾಯಿಂದರು ಮೂರು ಗಂಡುಮಕ್ಕಳನ್ನು ಕುಲಕಸುಬಿಗೆ ಹಚ್ಚದೆ ಓದಿಸಿದರು. ೧೯೫೦ರ ಆಸುಪಾಸಿನಲ್ಲೇ ನನ್ನ ತಂದೆಯನ್ನು ಕಾಲೇಜು ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದರು. ನನಗಿಂತ ಮೊದಲೇ ನನ್ನ ತಂದೆ ಸೆಂಟ್ರಲ್ ಕಾಲೇಜಿನಲ್ಲಿ ಓದಿದ್ದರು. ಒಬ್ಬ ಚಿಕ್ಕಪ್ಪ ಸೇನೆಗೆ ಸೇರಿದರು. ಇನ್ನೊಬ್ಬ ಚಿಕ್ಕಪ್ಪ ಆದಾಯ ತೆರಿಗೆ ಕಚೇರಿಯಲ್ಲಿ ಅಧಿಕಾರಿಯಾಗಿ ನಿವೃತ್ತರಾದರು.
ಓದು ಮುಗಿದ ನಂತರ ಅಪ್ಪ ಮೊದಲು ಅಮಲ್ದಾರರಾಗಿ ಕೆಲ ವರ್ಷ ಕೆಲಸ ಮಾಡಿ ನಂತರ ಆದಾಯ ತೆರಿಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದರು. ಪದ್ದತಿಯಂತೆ ಸ್ವಜಾತಿಯ ಒಬ್ಬ ಸುಂದರ, ಸುಸಂಸ್ಕೃತ ಹೆಣ್ಣನ್ನು ಮದುವೆಯಾಗಿ ಎರಡು ಮಕ್ಕಳ ಅಪ್ಪನಾದರು. ಅದರಲ್ಲಿ ಒಂದು ಮಗು ಎಳೆಯದರಲ್ಲೇ ತೀರಿಕೊಂಡಿತು ಅಪ್ಪನಿಗೆ ಮೊದಲ ಹೆಂಡತಿಯೆಂದರೆ ಪ್ರಾಣ. ದುರದೃಷ್ಟವಶಾತ್ ನನ್ನ ದೊಡ್ಡಮ್ಮ ಕ್ಷಯ ರೋಗಕ್ಕೆ ಬಲಿಯಾದರು. ಇಲ್ಲಿಂದ ನನ್ನ ತಂದೆಯ ಬಾಳು ಬೇರೆಯೇ ದಿಕ್ಕಿಗೆ ತಿರುಗುತ್ತದೆ.
ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಹೋಬಳಿ ನನ್ನ ತಂದೆಯ ಕಾರ್ಯ ಕ್ಷೇತ್ರವಾಗಿತ್ತು. ಅಲ್ಲಿಯೇ ನನ್ನಮ್ಮ ದಾಯಿಯಾಗಿ ಕೆಲಸ ಮಾಡುತಿದ್ದರು. ಅಪ್ಪ ಆರಡಿ ಎತ್ತರದ, ಒಳ್ಳೆ ಕೆಂಪು ಬಣ್ಣದ ಸುಂದರಾಂಗ. ಅಮ್ಮ ಸಾಧಾರಣ ಎತ್ತರದ, ಕಪ್ಪು ಬಣ್ಣದ ಸಾಮಾನ್ಯ ರೂಪಿನ ಹೆಣ್ಣು ಮಗಳು. ಮನೆಯ ಹಿರಿಯ ಮಗಳಾಗಿದ್ದರಿಂದ ಸಣ್ಣ ವಯಸ್ಸಿನಲ್ಲಿಯೇ ಓದು ಮುಗಿಸಿ ಅದೇ ಕ್ಯಾಸಂಬಳ್ಳಿಯಲ್ಲಿ ಕೆಲಸಕ್ಕೆ ಸೇರಿದ್ದರು. ವಿಧಿಯಾಟ. ಇಬ್ಬರೂ ಪ್ರೀತಿಸಿ ಮದುವೆಯಾದರು. ಅಂತರ್ಜಾತಿಯ ಮದುವೆಯಾದ ಕಾರಣ ನನ್ನಮ್ಮನನ್ನು ಐದು ಮಕ್ಕಳಾಗುವರೆಗೆ ಅವರ ತಾಯಿ ಮತ್ತು ಸಂಬಂಧಿಕರು ಮನೆಗೆ ಸೇರಿಸಿಕೊಳ್ಳಲಿಲ್ಲ. ಅಲ್ಲಿಯವರೆಗೆ ತಂದೆ ಜವಾಬ್ದಾರಿಯುತ ಹಿರಿಮಗನಾಗಿ ಚಿಕ್ಕಪ್ಪಂದಿರು ತಮ್ಮ ಕಾಲಮೇಲೆ ನಿಲ್ಲುವವವರೆಗೆ ಸಂಸಾರದ ಆಧಾರ ಸ್ಥoಭವಾಗಿದ್ದರು. ಅಮ್ಮ ಒಂಟಿಯಾಗಿ ನಮ್ಮನ್ನೆಲ್ಲ ಸಾಕಿದರು. ಅಪ್ಪ ತಿಂಗಳಿಗೊಮ್ಮೆ ಬರುತ್ತಿದ್ದರು. ಪ್ರಾಯಶಹ ಇದೂ ನಾವು ನಮ್ಮ ತಂದೆಗೆ ಸಮೀಪವಾಗದಿರುವುದಕ್ಕೆ ಒಂದು ಕಾರಣವಿರಬಹುದು. ಆದರೆ ಹಿರಿಮಗನಾಗಿ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಿ, ಮದುವೆಯಾದ ಹೆಣ್ಣನ್ನು, ಮಕ್ಕಳನ್ನು ಕೈಬಿಡದೆ ಎರಡು ಕುಟುಂಬ ಗಳನ್ನ ಅಪ್ಪ ನಿಭಾಯಿಸಿದ್ದನ್ನು ಈಗ ನಾನು ಅರ್ಥ ಮಾಡಿಕೊಳ್ಳಬಲ್ಲೆ.
ಕೊನೆಗೂ ನಾನು ಎಂಟು ವರ್ಷದವಳಿದ್ದಾಗ , ನಮ್ಮ ಚಿಕ್ಕಪ್ಪ೦ದಿರು ಸ್ವತಂತ್ರವಾಗಿ ಬೇರೆಯಾದ ಮೇಲೆ ಅಪ್ಪ ಅಮ್ಮನನ್ನ, ಮಕ್ಕಳನ್ನು ಕೋಲಾರಕ್ಕೆ ಕರೆಸಿಕೊಂಡು ಸಂಸಾರ ಹೂಡಿದರು. ಈಗ ಇಪ್ಪತ್ತು ನಾಲ್ಕು ಗಂಟೆ ಒಡನಿದ್ದ ಅಪ್ಪ ತುಂಬಾನೇ strict ಆಗಿದ್ದರು. ಮನೆಯಲ್ಲಿ ಕನ್ನಡ ಮಾತನಾಡಿದರೆ (ನಮ್ಮ ಮಾತೃ ಭಾಷೆ ತೆಲುಗು), ಮಕ್ಕಳು ಜಗಳವಾಡಿದರೆ,ಶಾಲೆಯಿಂದ ಬರುವಾಗ ಹುಣಿಸೇಕಾಯಿ ತಿಂದರೆ ಬೆಲ್ಟ್ ತಗೊಂಡು ಹೊಡೆಯುತ್ತಿದ್ದರು. ನಮ್ಮ ಓದಿನ ಬಗ್ಗೆ ಅವರ ಜವಾಬ್ದಾರಿ ಶಾಲೆಗೆ, ಅದೂ ಸರ್ಕಾರಿ ಶಾಲೆಗೇ ಸೇರಿಸುವಷ್ಟಕ್ಕೆ ಸೀಮಿತವಾಗಿತ್ತು. ಆದರೆ ಊಟ ತಿಂಡಿಯ ವಿಷಯದಲ್ಲಿ ಮಾತ್ರ ಯಾವುದೂ ಕಡಿಮೆಯಿರುತ್ತಿರಲಿಲ್ಲ. ಬಂಗಾರು ಸಣ್ಣ ಅಕ್ಕಿ, ತುಪ್ಪ, ಯತೇಚ್ಚ ತರಕಾರಿ, ಹಬ್ಬ ಹರಿದಿನಗಳಲ್ಲಿ ಸಂದೋರ್ಭಿತ ಅಡುಗೆಗಳು, ನೂರುಗಟ್ಟಲೆ ಮಾವಿನ ಹಣ್ಣು, ಸೇಬು.ಮುಂತಾದವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಆದರೆ ಬಟ್ಟೆಬರೆಯಲ್ಲಿ ಮಾತ್ರ ಭಾರಿ ಮಿತವ್ಯಯ. ಆಗ ಲಾಂಗ್ ಕ್ಲಾತ್ ಎಂಬ ಹತ್ತಿಯ ಒಂದೇ ಬಣ್ಣದ ಯಾವ ಬಗೆಯ ಚಿತ್ತಾರವು ಇಲ್ಲದ ಬಟ್ಟೆ ಬರುತ್ತಿತ್ತು. ತಾನುಗಟ್ಟಲೆ (ಹಲವು ಅಡಿ ಉದ್ದ) ಬಟ್ಟೆ ಹರಿಸಿ ಅದರಲ್ಲಿ ನಾಲ್ಕು ಹೆಣ್ಣು ಮಕ್ಕಳಿಗೂ ನೀಲಿ ಬಣ್ಣದ ಲಂಗ ಉಗಾದಿಗೆ, ತಿಳಿ ಹಸಿರುಬಣ್ಣದ ಲಂಗ ದೀಪಾವಳಿಗೆ ಹೊಲಿಸುತಿದ್ದರು. ನಮ್ಮ ಸ್ನೇಹಿತೆಯರೆಲ್ಲ ಬಣ್ಣ ಬಣ್ಣದ ಹೂವಿನ ಲಂಗ ತೊಟ್ಟರೆ ನಾವು ವರ್ಷ ವರ್ಷ ಕೇವಲ ಎರಡು ಬಣ್ಣದ, ಹೂವು, ಎಲೆ, ಕೊನೆಗೆ ಒಂದು ಚುಕ್ಕೆಯೂ ಇಲ್ಲದ ಲಂಗಗಳಲ್ಲಿ ಬದುಕಬೇಕಿತ್ತು. ಚಪ್ಪಲಿ ನೋಡಿದ್ದು ಹೈಸ್ಕೂಲಿಗೆ ಬಂದಾಗ, ಅದೂ ಅಜ್ಜಿ ಕೊಡಿಸಿದ್ದು. ಅಮ್ಮನ ಬಳಿ ಗೋಳಾಡಿದರೆ, ಅಪ್ಪನಿಗೆ ಬರೋ ಸಂಬಳದಲ್ಲಿ ಇಷ್ಟೇ ಸಾಧ್ಯ. ಆರು ಮಕ್ಕಳು, ಸರಕಾರಿ ನೌಕರಿ, ಲ೦ಚದ ಮುಖವನ್ನೇ ನೋಡದ ಅವರ ಸತ್ಯನಿಷ್ಠುರತೆಯನ್ನು, ಬರುತ್ತಿದ್ದ ಸಂಬಳದಲ್ಲೇ ನಮ್ಮನ್ನು ಸಾಕುವುದನ್ನು ಅಮ್ಮ ಬಿಡಿಸಿ ಹೇಳಿ, ನೀವು ಬೇರೆಯವರ ತರಾ ಮೆರೆಯಬೇಕಾದರೆ ಚೆನ್ನಾಗಿ ಓದಿ, ದೊಡ್ಡ ಕೆಲಸಕ್ಕೆ ಹೋಗಿ, ಒಳ್ಳೆ ಸಂಬಳ ಪಡೆದು ನಿಮಗೆ ಬೇಕಾದ್ದು ಮಾಡಿ ಅನ್ನುತ್ತಿದ್ದರು. ಚಕ್ಕಂದಿನಿಂದಲೇ ನಮ್ಮ ಕಷ್ಟಗಳಿಗೆ, ಬಯಕೆಗಳನ್ನ ತೀರಿಸಿಕೊಳ್ಳುವುದಕ್ಕೆ ಓದುವುದೊಂದೇ ಮಾರ್ಗ ಅನ್ನುವುದನ್ನ ಅಮ್ಮ ತಲೆ ತುಂಬಿಸುತ್ತಿದ್ದರು.
ಆದರೆ ಅದು ನಮಗೆ ಅರ್ಥವಾಗುತ್ತಿರಲಿಲ್ಲ. ನಮ್ಮ ಗೆಳೆತಿಯರು ಅವರ ತಂದೆಯ ಸಂಬಳದ ಸುಳ್ಳು ಸರ್ಟಿಫಿಕೇಟ್ ಕೊಟ್ಟು ಕಾಲೇಜಿನ ಶುಲ್ಕದ ವಿನಾಯಿತು ಪಡೆಯುತ್ತಿದ್ದರು. ಸಂಬಳದೊಂದಿಗೆ ಬೇರೆ ತರದ ಆದಾಯವೂ ಇದ್ದ ಕಾರಣ ಅವರ ಸೀರೆ ಬಟ್ಟೆಗಳು ಆಕರ್ಶಕರವಾಗಿದ್ದವು. ನಮ್ಮ ಕಣ್ಣ ಮುನೆಯೇ ಅಪ್ಪನ ಕೈಕೆಳಗೆ ಕೆಲಸ ಮಾಡುತ್ತಿದ್ದವರೇ ವಿಭಾಗೀಯ ಪಾರಿಖ್ಸ್ಷೆಗಳನ್ನು ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಗಳಾಗುವುದೊಂದೇ ಅಲ್ಲ, ಕಾಮಧೇನುವಿನಂಥ ಆ ಇಲಾಖೆಯ ಸರ್ವ ಉಪಯೋಗಗಳನ್ನೂ ಪಡೆಯುತಿದ್ದರು. ಹೆಂಡತಿ, ಹೆಣ್ಣು ಮಕ್ಕಳಿಗೆ ಚಿನ್ನಾಭರಣ, ಗಂಡು ಮಕ್ಕಳ ಉಚ್ಚ ಶಿಕ್ಷಣ, ಸ್ವಂತ ಮನೆ, ಕೈತುಂಬ ಹಣ ನಾವು ಕಣ್ಣಾರೆ ಕಾಣುತ್ತಿದ್ದೆವು. ಅಪ್ಪ ಮಾತ್ರ ನಾನು ಸುಳ್ಳು ಹೇಳಲಾರೆ, ಲಂಚ ಪಡೆಯಲಾರೆ, ನನ್ನಿಂದ ಇದೆಷ್ಟೇ ಓದಿಸಲಾಗುವುದು, ಹೆಣ್ಣುಮಕ್ಕಳ ಮದುವೆ ಎರಡು ಕಾರಣಕ್ಕೆ ನಂಗೆ ಸಾಧ್ಯವಿಲ್ಲ- ಒಂದು ಜಾತಿಯ ಸಮಸ್ಯೆ (ನಾವು ಅಮ್ಮನ ಜಾತಿಗೂ ಪೂರ್ತಿ ಸೇರ್ಲಿಲ್ಲ, ಅಪ್ಪನ ಕಡೆ ನಮ್ಮನ್ನೇ ಒಪ್ಪಿಕೊಂಡಿರಲಿಲ್ಲ), ಎರಡನೆಯದು ಮದುವೆಗೆ ತನ್ನ ಸಂಬಳದಲ್ಲಿ ಹಣ ಹೊಂದಿಸಲಾಗುವುದಿಲ್ಲ.
ಇ೦ತಹ ಸಂದರ್ಭದಲ್ಲಿ ಓದೇ ಮುಕ್ತಿಗೆ ದಾರಿ ಅಂತ ಹೇಳುತ್ತಿದ್ದ ಅಮ್ಮನ ಮಾತಿನಂತೆ ಎಲ್ಲರೂ ಕಷ್ಟುಪಟ್ಟು ಓದಲಾರಂಭಿಸಿದೆವು.ನಾನಂತೂ ಒಂದೇ ಓಟದಲ್ಲಿ Ph..D. ಮಾಡಿ ಮುಗಿಸಿದೆ. ಆದರೆ ಇದು ಇನ್ನೊಂದು ಸಮಸ್ಯೆ ಹುಟ್ಟುಹಾಕಿತು. ನನಗೆ ತಕ್ಕನಾದ ವರ ಎರಡು ಕಡೆ ಸಿಗಲಿಲ್ಲ. ಕೊನೆಗೆ ನನ್ನ ಮತ್ತು ನನ್ನ ಬೆನ್ನ ಹಿಂದಿನ ತಂಗಿಯದು ಅಂತರ್ಜಾತಿಯ ಪ್ರೇಮವಿವಾಹಗಳಾದವು. ಅಷ್ಟು ಹೊತ್ತಿಗೆ ಅಪ್ಪನೂ ಸ್ವಲ್ಪ ಮೆದುವಾಗಿದ್ದರು, ಓದಿಸುವುದು, ಮದುವೆ ಮಾಡುವುದು ತಮ್ಮ ಕರ್ತವ್ಯ ಅನ್ನೋದು ಅವರಿಗೆ ಅರಿವಾಯಿತು. ಇವಕ್ಕೆ ಬೇಕಾದ ಹಣವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಅವರ ಪ್ರಾವಿಡೆಂಟ್ fundನಿಂದ ತೆಗೆಯಲಾರಂಭಿಸಿದರು. ಇಷ್ಟಾದರೂ ಅವರು ನಿವೃತ್ತಿ ಹೊಂದುವ ಸಮಯದ್ಲಲಿ ಮದುವೆಯಾಗದ ತಂಗಿಯೊಬ್ಬಳು ಮತ್ತು ಓದುತ್ತಿದ್ದ ಕೊನೆಯ ತಮ್ಮ ಮನೆಯಲ್ಲಿದ್ದರು.
ಬರುವ ಪೆನ್ಷನ್ ಸಾಲದ ಕಾರಣ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಹತ್ತಿರ ದುಡಿಯಲಾರಂಭಿಸಿದರು. ಬಡತನ, ನಿಸ್ಸಾಹಕತೆ, ಯಾರಲ್ಲೂ ಹೇಳಿಕೊಳ್ಳಲಾಗದ ದುಃಖ ನನ್ನ ತಾಯಿಯ ಆರೋಗ್ಯ ಹಾಳು ಮಾಡಿದವು. ಡಯಾಬಿಟೀಸ್, ರಕ್ತದೊತ್ತಡ, ಹೃದಯದಲ್ಲಿ ಕಾರ್ಡಿಯಾಕ್ ಇಶ್ಚಿಮಿಯ ಎಲ್ಲವು ಅಮ್ಮನನ್ನು ನಿಷ್ಕ್ರಿಯಗೊಳಿಸಿದವು. ಅಪ್ಪ ಆಕೆಗೆ ಸ್ನಾನ ಮಾಡಿಸುವುದು, ಅಡಿಗೆಯಲ್ಲಿ ಸಹಾಯ ಮಾಡುವುದನ್ನ ಆರಂಭಿಸಿದರು. ಕೊನೆಗೂ ಅವರೂ ಸೋತು ಅವರ ಹೊಟ್ಟೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತು. ಮೊದಲು ಸರ್ಜರಿ, ಎರಡು ವರ್ಷಗಳ ನಂತರ ಕಿಮೋಥೆರಪಿ ಆರಂಭವಾಯಿತು. ಅಪ್ಪ ಅಮ್ಮನನ್ನ ಎಷ್ಟು ಪ್ರೀತಿಸುತ್ತಿದ್ದರೆಂಬುದು ಈಗ ಬೆಳಕಿಗೆ ಬಂತು. ಅಮ್ಮನನ್ನು ಮಗುವಿನಂತೆ ನೋಡಿಕೊಂಡರು. ಆದರೆ ಹಲವು ವರ್ಷ ನೋವುಂಡು ಅಮ್ಮ ಒಂದು ದಿನ ತೀರಿಕೊಂಡರು. ಒಬ್ಬಂಟಿಯಾದ ಅಪ್ಪ ಯಾವ ಮಕ್ಕಳ ಮನೆಯಲ್ಲೂ ಇರಲೊಪ್ಪಲಿಲ್ಲ. ತಾಯಿ ತೀರಿಕೊಂಡ ಕೆಲವು ತಿಂಗಳ ನಂತರ ಮಕ್ಕಳನ್ನೆಲ್ಲ ಕರೆದು ಆಕೆಯ ಸೀರೆ, ಒಡವೆಗಳನ್ನು ಎಲ್ಲರಿಗೂ ಹಂಚಿ ಬಿಟ್ಟರು. ಅಮ್ಮ ಇಲ್ಲದೆ ತಾವು ಬದುಕಲು ಇಷ್ಟವಿಲ್ಲದ ಕಾರಣ ಕೀಮೋಥೆರಪಿ ನಿಲ್ಲಿಸಿಬಿಟ್ಟರು. ಆಕೆ ಸತ್ತ ಎರಡೇ ತಿಂಗಳೋಳಗೆ ಕ್ಯಾನ್ಸರ್ ದೇಹದೊಳಗೆಲ್ಲಾ ಹಬ್ಬಿ ಅಪ್ಪ ಕೋಮದೊಳಗೆ ಹೊಕ್ಕುಬಿಟ್ಟರು. ಆಸ್ಪತ್ರೆಗೆ ಸೇರಿಸಿದ ಕೆಲವೇ ಗಂಟೆಗಳಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಯಿತು.ಭೀಷ್ಮನಂತೆ ಅವರೊಬ್ಬ ಇಚ್ಚಾಮರಣಿಯಾದರು.
ಆ ಕಾಲದಲ್ಲಿ ಅಂತರ್ಜಾತಿಯ ವಿವಾಹ ಮಾಡಿಕೊಂಡ ಅಪ್ಪ, ಅವರ ಅಪ್ಪ- ಅಮ್ಮ- ತಮ್ಮಂದಿರ ಜವಾಬ್ದಾರಿಯಿಂದ ನುಣಿಚಿಕೊಳ್ಳಲಿಲ್ಲ. ಅವರನ್ನೆಲ್ಲ ಒಂದು ದಾರಿಗೆ ತಂದು ಅವರಿಗಾರಿಗೂ ನೋವು ಮಾಡದೆ ಅವರೊಂದಿಗಿದ್ದರು. ಇತ್ತ ಅಮ್ಮನಿಗೆ ಐದು ಮಕ್ಕಳಾಗುವವರೆಗೂ ತಿಂಗಳಿಗೊಮ್ಮೆ ಬಂದು ಯೋಗಕ್ಷೇಮ ವಿಚಾರಿಸಿ, ನಮ್ಮನ್ನೆಲ್ಲ ಸಮಯಕ್ಕೆ ಸರಿಯಾದ ವೇಳೆಗೆ ಶಾಲೆಗೇ ಸೇರಿಸಿ ಓದಿಸಿದರು. ಪ್ರಾಯಶಃ ಅವರ ದ್ವಂದ್ವಗಳನ್ನು ಅಮ್ಮನ ಹತ್ತಿರ ಹೇಳಿರಬಹುದು. ಆದರೆ ಮಕ್ಕಳಾರಿಗೂ ಹೇಳಲಿಲ್ಲ. ನಾವು ಕೇಳಲಿಲ್ಲ. ನಮಗೆ ಕಂಡಿದ್ದು ಬೇರೆ ತಂದೆಯರಂತೆ ನಮ್ಮನ್ನು ಅನುಕೂಲಸ್ಥರವಾಗಿ ಬೆಳೆಸಲಿಲ್ಲ ಅನ್ನೋದು. ಆದರೆ ಅವರ ಪ್ರಾಮಾಣಿಕತೆ, ಸತ್ಯನಿಷ್ಠುರತೆ, ಬಡತನವನ್ನು ಹೆಮ್ಮೆಯಿಂದ ಅನುಭವಿಸಿದ ರೀತಿ, ತಾಯಿಯ ಮೇಲಿದ್ದ ಅವರ ಅನನ್ಯ ಪ್ರೀತಿ, ಆಮೇಲೆ ಸನ್ಯಾಸಿಯಂತೆ ಆಕೆ ಸತ್ತ ನಂತರ ಮರಣವನ್ನಪ್ಪಿದ್ದು, ಇವೆಲ್ಲ ಅವರನ್ನು ನಮ್ಮ ಪಾಲಿಗೆ ಒಬ್ಬ ಅದ್ವಿತೀಯ hero ವನ್ನಾಗಿ ಮಾಡಿಬಿಟ್ಟವು. ಅವರದೇ ರೀತಿಯಲ್ಲಿ ನೈತಿಕತೆಯ ಚೌಕಟ್ಟು ಹಾಕಿಕೊಂಡು ಯಾವ ಕಷ್ಟಕ್ಕೂ ಆ ಚೌಕಟ್ಟಿನಾಚೆಗೆ ಬರದೇ ಬದುಕಿದ ಅಸಮಾನ್ಯ ಜೀವಿ ನನ್ನಪ್ಪ.
- ಶಕುಂತಲಾ ಶ್ರೀಧರ – ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್‌ಗಳನ್ನು ನೀಡಲು ಆಹ್ವಾನಿಸಿದ್ದಾರೆ.