ಸ್ವಚ್ಛ ಪ್ರೇಮಕಥೆಯ ಸುಂದರ ದೃಶ್ಯಕಾವ್ಯ

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲರ್ಧ ಫ಼್ರೇಮ್ ಟು ಫ಼್ರೇಮ್ ದೃಶ್ಯಗಳ ಲವಲವಿಕೆಯಲ್ಲೇ ಉಸಿರಾಡುವ ನಿರ್ದೇಶಕರು ಅದೇಕೋ ದ್ಚಿತೀಯಾರ್ಧದಲ್ಲಿ ಅನಗತ್ಯವಾಗಿ ಕತೆಯನ್ನು ಸ್ವಲ್ಪ ಎಳೆದಿದ್ದಾರೆ. ಒಂದೆರಡು ಅಸಹಜ ದೃಶ್ಯಗಳಿಗೆ ಕತ್ತರಿ ಹಾಕಿದ್ದಲ್ಲಿ ಇಬ್ಬನಿಯ ಹೊಳಹು ಮತ್ತಷ್ಟು ಹೆಚ್ಚುತ್ತಿತ್ತು.ಚಿತ್ರದ ಕುರಿತು ಲೇಖಕರಾದ ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಪ್ರೀತಿ ಎಂದರೇನು…..? ಕಳೆದು ಹೋದ ಹಳೆಯ ನೆನಪುಗಳಾ..? ನಾಳೆ ಜೊತೆಯಾಗಿರಬೇಕಾದ ಕನಸುಗಳಾ..? ದೂರವಾದ ನಂತರದ ಚಡಪಡಿಕೆಯಾ..? ಇವೆಲ್ಲದರ ಸಂಗಮವೇ ” ಇಬ್ಬನಿ ತಬ್ಬಿದ ಇಳೆಯಲಿ..” ಇದು ಸ್ವಚ್ಛ ಪ್ರೀತಿಯ ಅಮೃತವನ್ನು ಕಾವ್ಯಮಯವಾಗಿ ಧಾರೆ ಎರೆದಂತಹ ಒಂದು ಸುಂದರ ದೃಶ್ಯಕಾವ್ಯ.

ಬೆಳ್ಳಿತೆರೆಯ ಮೇಲೆ ಪರಿಶುದ್ಧ ಪ್ರೀತಿ ಪ್ರೇಮಗಳ ಪರಿಪಕ್ವ ಪರಿಭಾಷೆಯನ್ನು ನಿರ್ದೇಶಕನೊಬ್ಬ ತನ್ನ ಕಲ್ಪನೆಯ ಕನ್ನಡಿಯನ್ನು ಹಿಡಿದು ತನ್ನದೇ ಆದ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿ, ಪ್ರೀತಿಯ ಆ ಭಾಷೆಗೆ ಒಂದು ಚಂದದ ಸಿನಿಮೀಯ ಚೌಕಟ್ಟನ್ನು ಹಾಕಿ ಮೆರೆಸಿರುವ ನೂರಾರು ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ಬಂದಿವೆ…..ಬರುತ್ತಲೇ ಇವೆ.

ಪ್ರೀತಿ ,ಪ್ರೇಮ, ವಿರಹ, ತ್ಯಾಗ… ಈ ವಿಷಯ- ವಸ್ತುಗಳು ಸಿನಿಮಾ ಮಾಡುವವರಿಗೆ ಒಂಥರಾ ಅಕ್ಷಯ ಪಾತ್ರೆಯಿದ್ದಂತೆ. ಅಲ್ಲಿ ಬಗೆದಷ್ಟೂ ಮೊಗೆದಷ್ಟೂ ಅದರಲ್ಲಿ ಹೊಸ ಹೊಸ ರೀತಿಯ ಕತೆಗಳ ವಿನ್ಯಾಸಗಳು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತವೆ. ಪ್ರೇಕ್ಷಕನ ನಾಡಿ ಮಿಡಿತವೂ ಹಾಗೆಯೇ ! ಪ್ರೀತಿ ಎಂಬ ಕಥಾವಸ್ತುವನ್ನು ಅವನೆದೆಗೆ ಸೂಕ್ಷ್ಮವಾಗಿ ಸಂವೇದಿಸುವ ರೀತಿಯಲ್ಲಿ ಭಾವನಾತ್ಮಕವಾಗಿ ನಿರೂಪಿಸುತ್ತಾ ಹೋದಂತೆಲ್ಲಾ ಅನಾಮತ್ತು ಕರಗುತ್ತಲೇ ಹೋಗುವ ಪ್ರೇಕ್ಷಕ, ಅಂತಹ ಸಿನಿಮಾದ ಕೈ ಹಿಡಿಯುತ್ತಲೇ ಬಂದಿದ್ದಾನೆ. ಶುದ್ಧ ಪ್ರೀತಿಗೆ ಸಾವಿಲ್ಲ , ಪ್ರಾಮಾಣಿಕ ಪ್ರೇಮಕ್ಕೆ ಸೋಲಿಲ್ಲ ಎಂಬಂತೆ !!

ಇಡೀ ಚಿತ್ರದುದ್ದಕ್ಕೂ ಪವಿತ್ರ ಪ್ರೀತಿಯ ನವಿರಾದ ಇಬ್ಬನಿ, ಸೂರ್ಯನ ರಶ್ಮಿಯ ಕಾಂತಿಗೆ ಹೊಳೆಯುವ ಮುತ್ತಿನ ಹನಿಗಳಂತೆ ಸೊಗಸಾಗಿ ಬಿಂಬಿತವಾಗುತ್ತಲೇ ಹೋಗುತ್ತದೆ. ಎಲ್ಲೋ, ಹೇಗೋ, ಏಕೋ ಒಬ್ಬರ ಹೆಸರು ಹಿನ್ನೆಲೆ ಏನೊಂದೂ ಅರಿಯದೇ ಮೊದಲ ನೋಟಕ್ಕೇ ಹುಟ್ಟಿಕೊಳ್ಳುವ ಮೃದುವಾದ ಭಾವನೆಯೊಂದು ಅಪ್ಪಟ ಪ್ರೀತಿಯ ರೂಪ ತಾಳಿ ಹೃದಯದಲ್ಲಿ ಆಳವಾಗಿ ಬೇರೂರುವ ಪರಿಯೇ ವಿಸ್ಮಯ.

ಈ ನವಿರಾದ ಭಾವನೆ ಎಷ್ಟರಮಟ್ಟಿಗೆ ಗಟ್ಟಿಯಾಗಿ ಮನದಲ್ಲಿ ಮನೆ ಮಾಡಿರುತ್ತದೆಯೆಂದರೆ , ಮೊದಲ ಪ್ರೀತಿ ಟಿಸಿಲೊಡೆದ ಭಾವನೆಗೆ ಬದಲು ಬೇರೊಬ್ಬ ಹುಡುಗಿಯ ಜೊತೆ ಮದುವೆ ನಿಶ್ಚಿತಾರ್ಥ ನಡೆದು ಕೊನೆಗೆ ಇನ್ನೇನು ಅವಳ ಕುತ್ತಿಗೆಗೆ ತಾಳಿ ಕಟ್ಟುವಾಗ ಮದುವೆ ಬೇಡವೆಂದು ಮೊದಲಿನ ಅದೇ ಪ್ರೀತಿಯ ಭಾವನೆಯ ದಾರಿಯನ್ನರಸಿ ಹೊರಡುವ ರೇಂಜಿಗೆ ಸಶಕ್ತವಾಗಿರಬಲ್ಲದು.

ನಾಯಕ ಸಿದ್ಧಾರ್ಥ ಅಶೋಕ್ (ವಿಹಾನ್ ) ಪ್ರಸಿದ್ದ ಶ್ರೀಮಂತ ಉದ್ಯಮಿಯ ಮಗನಾಗಿದ್ದರೂ ಸ್ವಂತ ಶ್ರಮದಿಂದ ಮೇಲೆ ಬರಬೇಕೆನ್ನುವ ಹಂಬಲವುಳ್ಳವನು, ಜೊತೆಗೆ ಅಗ್ರೆಸ್ಸೀವ್ ಮೆಂಟಾಲಿಟಿಯ ಕ್ರಿಕೆಟ್ ಪಟು.

ರಾಧಾ ( ಮಯೂರಿನಟರಾಜ್ ) ಎಂಬುವಳ ಜೊತೆ ನಿಶ್ಚಿತಾರ್ಥ ನಡೆದು ಇನ್ನೇನು ಹಸೆಮಣೆ ಮೇಲೆ ತಾಳಿ ಕಟ್ಟುವಾಗ ” ಪ್ರೀತಿಯ ಭಾವನೆಗಳಿಲ್ಲದ ಮೇಲೆ ಮದುವೆಯಾಗುವುದರಲ್ಲಿ ಅರ್ಥವಿಲ್ಲವೆಂಬ ” ಕಾರಣ ಕೊಟ್ಟು ಅದನ್ನು ರಾಧಾಳಿಗೆ ತಿಳಿಸಿ ನಂತರ ಅಲ್ಲಿಂದ ತನ್ನ ಮನದ ದುಗುಡವನ್ನು ಪ್ರೀತಿಯ ಮೂಲಕ ಪರಿಹರಿಸಿಕೊಳ್ಳಲು ತನ್ನೊಳಗೆ ಈ ಮೊದಲೇ ಸೃಜಿಸಿದ್ದ ಪ್ರೀತಿಯನ್ನು ಅರಸಿ ಅನಾಹಿತ ( ಅಂಕಿತ ಅಮರ್)‌ ಳನ್ನು ಹುಡುಕುತ್ತಲೇ ಗೊತ್ತು ಗುರಿಯಿಲ್ಲದಂತೆ ಅಲೆಯುತ್ತಾನೆ. ಅನಾಹಿತಳಲ್ಲಿ ಅವನಿಗೇಕೆ ಅಂತಹ ಅನುರಾಗ, ಪರಿಶುದ್ಧ ಭಾವ, ಪ್ರೀತಿಯ ಸೆಳೆತ …ಅದಾವುದಕ್ಕೂ ಅವನಲ್ಲಿ ಸ್ಪಷ್ಟ ಉತ್ತರವಿಲ್ಲ. ಅದೆಲ್ಲವೂ ಕಾವ್ಯಗಳಲ್ಲೇ ಅಭಿವ್ಯಕ್ತ !

ಕೊನೆಗೆ ಸಿದ್ಧಾರ್ಥ ಅನಾಹಿತಳನ್ನು ಹೇಗೆ, ಯಾವ ರೀತಿ ಭೇಟಿಯಾದ ? ಪ್ರೀತಿಯ ಬಗೆಗೆ ಅವರಿಬ್ಬರ‌ ಮನದಾಳದ ವೈರುಧ್ಯಗಳು ಯಾವುವು , ಅನಾಹಿತಳ ಮೇಲಿನ‌ ಪ್ರೀತಿಯನ್ನು ಅವಳಿಗೆ ಹೇಗೆ ನಿವೇದಿಸಿಕೊಂಡ, ಅನಾಹಿತಳನ್ನು ಹುಡುಕಿಕೊಂಡು ಗೋವಾಕ್ಕೇ ಹೋದಾಗ ಅಲ್ಲಿ ಕಂಡದ್ದೇನು ….ಇತ್ಯಾದಿ ಪ್ರಶ್ನೆಗಳಿಗೆ ಸಿನಿಮಾದ ಪ್ರತೀ ಫ಼್ರೇಮ್ ನಲ್ಲೂ ಕಾವ್ಯಮಯವಾಗಿ ಕೆಲ ರೂಪಕಗಳ ಮುಖೇನ ನಿರ್ದೇಶಕ ಚಂದ್ರಜಿತ್ ಬೆಳ್ಯಪ್ಪ ಉತ್ತರಿಸುತ್ತಲೇ ಹೋಗಿದ್ದಾರೆ.

ಆರು ಅಧ್ಯಾಯಗಳಲ್ಲಿ ನಾಯಕನ ಮೂಲಕ ಫ಼್ಲ್ಯಾಷ್ ಬ್ಯಾಕ್ ನಿರೂಪಣೆಯಿಂದ ಕತೆ ಕಟ್ಟಿಕೊಟ್ಟಿರುವ ನಿರ್ದೇಶಕರ ಜಾಣ್ಮೆಗೆ ಫ಼ುಲ್ ಮಾರ್ಕ್ಸ್‌ ! ನಿರ್ದೇಶಕರ ಕವಿ ಕಲ್ಪನೆಗೆ ಸಾಥ್ ಕೊಟ್ಟಿರುವುದು ಶ್ರೀವತ್ಸ ಸೆಲ್ವರಾಜನ್ ರ ಅದ್ಭುತ ಛಾಯಾಗ್ರಹಣ ಹಾಗೂ ಗಗನ್‌ ಬಡೇರಿಯಾರ ಸಮರ್ಥ ಸಂಗೀತ !

ನಟನೆಯ ವಿಚಾರಕ್ಕೆ ಬಂದರೆ ನಾಯಕನಾಗಿ‌ ವಿಹಾನ್ ಗೌಡರದ್ದು ಮಾಗಿದ ಅಭಿನಯ. ಒಬ್ಬ ಪ್ರೇಮಿಯಾಗಿ, ವಿರಹಿಯಾಗಿ, ಅಗ್ರೆಸ್ಸೀವ್ ಯಂಗ್ ಮ್ಯಾನ್ ಆಗಿ, ತ್ಯಾಗಿಯಾಗಿ ಪ್ರಬುದ್ಧವಾಗಿ ನಟಿಸಿದ್ದಾರೆ. ಅನಾಹಿತಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಪಡುವ ಪಡಿಪಾಟಲುಗಳು, ರಾಧಾಳಿಗೆ ಮದುವೆ ಬೇಡವೆಂದು ಹೇಳಬೇಕಾದ ಸನ್ನಿವೇಶಗಳಲ್ಲಿನ ತೊಳಲಾಟಗಳು ಹಾಗೂ ಅನಾಹಿತಳ ಮೊಗದಲ್ಲಿ ನಗುವನ್ನು ಮೂಡಿಸಲು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ವಿಹಾನ್ ತುಂಬಾ ಮೆಚ್ಯೂರ್ಡ್ ಆಗಿ ಅಭಿನಯಿಸಿದ್ದಾರೆ. ಇನ್ನು ಅನಾಹಿತಳಾಗಿ ಅಂಕಿತ್ ಅಮರ್ ರದ್ದು ನಿಜಕ್ಕೂ ಪ್ರೌಢ ಅಭಿನಯ. ಆಕೆ ಅನಾಹಿತಳ ಪಾತ್ರವನ್ನೇ ಪರಿಪೂರ್ಣವಾಗಿ ಆವಾಹಿಸಿಕೊಂಡು ಭಾವಾಭಿನಯದ ಅಭಿವ್ಯಕ್ತಿಯಲ್ಲಿ ಶ್ರೇಷ್ಠತೆಯನ್ನು ಮೆರೆದಿದ್ದಾರೆ.

ಒಬ್ಬ ಉದಯೋನ್ಮುಖ ಕಲಾವಿದೆಗೆ ಈ ತರಹದ ಪಾತ್ರಗಳು ಸವಾಲಿದ್ದಂತೆ. ಅದರಲ್ಲಿ ಅಂಕಿತ ಅದ್ಭುತವಾಗಿ ಗೆದ್ದಿದ್ದಾರೆ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಫ಼ುಟ್ ಬಾಲ್ ಸ್ಟೇಡಿಯಂ ನಲ್ಲಿ ನಿಧಾನಕ್ಕೆ ಕರಗಿ ಹೋಗುವ ರೂಪಕವಾಗಿ ಕೇವಲ ಕಂಗಳಲ್ಲೇ ಎಲ್ಲ ಭಾವವನ್ನೂ ತೆರೆದಿಡುವ ಆಕೆಯ ಅಭಿನಯವನ್ನು ನೋಡಿಯೇ ಫ಼ೀಲ್ ಮಾಡಬೇಕು. ರಾಧಾಳದ್ದು ಚಿಕ್ಕ ಪಾತ್ರವಾದರೂ ಅದಕ್ಕೆ ಚೊಕ್ಕವಾಗಿ ನಟಿಸಿ ಮನದಲ್ಲುಳಿಯುವವರು ಮಯೂರಿ ನಟರಾಜ್. ಚಿನಕುರಳಿಯಂತಹ‌ ಪಂಚಿಂಗ್ ಡೈಲಾಗುಗಳು, ಸಹಜ ಟೈಮಿಂಗ್ಸ್ ಹಾಗೂ ಕ್ಯೂಟ್ ಲುಕ್ಕಲ್ಲಿ ಮಯೂರಿ ಮನದಲ್ಲುಳಿದು ಬಿಡುತ್ತಾರೆ.

ಚಿತ್ರದ ಮೊದಲರ್ಧ ಫ಼್ರೇಮ್ ಟು ಫ಼್ರೇಮ್ ದೃಶ್ಯಗಳ ಲವಲವಿಕೆಯಲ್ಲೇ ಉಸಿರಾಡುವ ನಿರ್ದೇಶಕರು ಅದೇಕೋ ದ್ಚಿತೀಯಾರ್ಧದಲ್ಲಿ ಅನಗತ್ಯವಾಗಿ ಕತೆಯನ್ನು ಸ್ವಲ್ಪ ಎಳೆದಿದ್ದಾರೆ. ಮೊದಲರ್ಧದ ಅದೇ ಕ್ರಿಯಾಶೀಲತೆ ಹಾಗೂ ಸ್ಮಾರ್ಟ್ ವರ್ಕನ್ನು ವಿರಾಮದ ನಂತರವೂ ಉಳಿಸಿಕೊಂಡಿದ್ದಲ್ಲಿ, ಒಂದೆರಡು ಅಸಹಜ ದೃಶ್ಯಗಳಿಗೆ ಕತ್ತರಿ ಹಾಕಿದ್ದಲ್ಲಿ ಇಬ್ಬನಿಯ ಹೊಳಹು ಮತ್ತಷ್ಟು ಹೆಚ್ಚುತ್ತಿತ್ತು. ಮುಖ್ಯವಾಗಿ ಕಾಲೇಜು ದೃಶ್ಯಗಳು ಇನ್ನಷ್ಟು ಸಹಜವಾಗಿ ಮೂಡಿಬರಬಹುದಿತ್ತು ಹಾಗೂ ಹಾಸ್ಯಕ್ಕೆ ಅಲ್ಲಿ ಒತ್ತು ಕೊಟ್ಟಿದ್ದರೆ ಚಿತ್ರ ಎಲ್ಲೋ ಇರುತ್ತಿತ್ತು.

ಇಡೀ‌ ಚಿತ್ರದ ಹೈಲೈಟ್ ಎಂದರೆ ಚಿತ್ರಕತೆಯ ಓಘವನ್ನು ಹಾಡುಗಳ ಮೂಲಕ, ಕಾವ್ಯಗಳ ಮೂಲಕ ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವುದು . ಅರ್ಥಪೂರ್ಣವಾದ ಕಾವ್ಯಾತ್ಮಕ ಸಾಲುಗಳಿಗೆ ಸಿಂಗಾರ ಮಾಡಿದಂತೆ ಕಾವ್ಯಗಳ ಮೆರವಣಿಗೆ‌ ಚಿತ್ರದುದ್ದಕ್ಕೂ ಇದೆ. ಕಾವ್ಯದ ರಸಾಸ್ವಾದಕರಿಗೆ ಇದೊಂದು ಫ಼ೀಲ್ ಗುಡ್ ಅನುಭವವೆನ್ನಬಹುದು. ರಕ್ಷಿತ್ ಶೆಟ್ಟಿ ನಿರ್ಮಾಣವಾಗಿರುವುದರಿಂದ ಗುಣಮಟ್ಟದಲ್ಲಿ ಎಲ್ಲೂ ರಾಜಿಯಾಗದಿರುವುದು ಚಿತ್ರದ ಪ್ಲಸ್ ಪಾಯಿಂಟ್‌.

ಪ್ರೀತಿಭಾವದ ರಸಾಸ್ವಾದ ಅಥವಾ ವಿರಹದ ತೊಳಲಾಟದ ತಳಮಳಗಳ ಅನುಭೂತಿಗಾಗಿ, ಪ್ರೀತಿ ತುಂಬಿರುವ ಹೃದಯಗಳೆಲ್ಲವೂ ಒಮ್ಮೆ ನೋಡಬಹುದಾದ ಸಿನಿಮಾ ” ಇಬ್ಬನಿ ತಬ್ಬಿದ ಇಳೆಯಲಿ ”

* ಮರೆಯುವ ಮುನ್ನ *

ಕನ್ನಡದಲ್ಲಿ ಇಂತಹ ಸೊಗಸಾದ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟ ನಿರ್ದೇಶಕ ಚಂದ್ರಜಿತ್ ಬೆಳ್ಯಪ್ಪ ಇಡೀ ಚಿತ್ರದ ಹೀರೋ, ಹೈಲೈಟು, ಎಲ್ಲವೂ ! ಅವರ ಸಿನಿಮಾ ಕಸುಬುದಾರಿಕೆ ನೋಡಿದಲ್ಲಿ ಇದು ಅವರ ಚೊಚ್ಚಲ ಸಿನಿಮಾದಂತೆ ಎಲ್ಲಿಯೂ ಅನಿಸಲಾರದು. ರಕ್ಷಿತ್ ಶೆಟ್ಟಿ ಮಣಿರತ್ನಂ ರ ನಿರ್ದೇಶನಗಳ ಶೈಲಿಯ ಪ್ರಭಾವ ಅವರಲ್ಲಿ ಅಲ್ಲಲ್ಲಿ ಇಣುಕಿದೆ.

ಹಿಂಸೆ, ಕ್ರೌರ್ಯ, ಮಚ್ಚು, ಲಾಂಗು, ರಾಜಕೀಯ ಅಶ್ಲೀಲತೆ…ಇತ್ಯಾದಿಗಳ ಅಬ್ಬರದ ಹೊರತಾದ ಒಂದು ಪರಿಶುದ್ಧ ಪ್ರೀತಿಯ ದೃಶ್ಯಕಾವ್ಯದ ಅನುಭವಕ್ಕೆ ನಿಮ್ಮನ್ನು ನೀವೇ ಎರಡೂವರೆ ಘಂಟೆ ಅರ್ಪಿಸಿಕೊಳ್ಳುವ ಇರಾದೆ ಇದ್ದಲ್ಲಿ…..ಕನ್ನಡದ ಇಬ್ಬನಿ ತಬ್ಬಿದ ಇಳೆಯನ್ನು‌ ನೀವೊಮ್ಮೆ ಮನಸಾರೆ ಅಪ್ಪಿ ಬನ್ನಿ…..ಬೆಚ್ಚನೆಯ ಅನುಭವಕ್ಕೆ ಅಥವಾ ನಿಮ್ಮದೇ ಯಾವುದೋ ಒಂದು ಫ಼್ಕ್ಯಾಷ್ ಬ್ಯಾಕಿಗೆ ಕೆಲಕಾಲವಾದರೂ ಅದು ನಿಮ್ಮನ್ನು ಕಿಂಚಿತ್ ಪ್ರೀತಿಯ ನಿಡುಸುಯ್ಯುವಿಕೆಯಿಂದ ಕೊಂಡೊಯ್ಯಬಲ್ಲದು.


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading