ಇಳಿಸಂಜೆ (ಭಾಗ-೭)

ಹಿರಿಯರದ್ದು ಮಕ್ಕಳ ಮನಸ್ಸಿದ್ದಂತೆ. ತುಂಬಾ ಸೂಕ್ಷ್ಮ, ಹಠ, ಮೊಂಡುತನ ಈ ವರ್ತನೆಗಳೆಲ್ಲಾ ಥೇಟ್‌ ಮಕ್ಕಳಂತೆ ಮಾಡುವುದು. ಮತ್ತೆ ನಾವು ಹೇಳಿದ್ದನ್ನು ಅವರು ಕೇಳುವುದಕ್ಕಿಂತ, ಅವರು ಹೇಳಿದ್ದೇ ಸರಿ ಎಂಬ ವಾದ. ಹಾಗೆಯೇ ನಡೆಯಬೇಕೆಂಬ ಹಠ. ಅವರನ್ನು ಉಪಚರಿಸುವವರಿಗೆ ಇವನ್ನೆಲ್ಲಾ ಸಹಿಸಿಕೊಳ್ಳು ತಾಳ್ಮೆ ತುಂಬಾ ತುಂಬಾ ಮುಖ್ಯ. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ‘ಇಳಿಸಂಜೆ’ ಅಂಕಣದಲ್ಲಿ ‘ಹಿರಿಯರ ಉಪಚಾರಕ್ಕೆ ತಾಳ್ಮೆ ಮುಖ್ಯ’, ತಪ್ಪದೆ ಮುಂದೆ ಓದಿ…

ಈ ಹಿರಿತನದಲ್ಲಿ ಅವರನ್ನು ಸುಧಾರಿಸುವುದು ಹೇಳಿದಷ್ಟು ಸುಲಭವಲ್ಲ. ಹಾಗಿದ್ದರೆ, ಅವರಿಗೆ ನೆಮ್ಮದಿ, ಸಂತೋಷ, ಖುಷಿ ಖುಷಿ ಆಗಿಡುವುದು ಹೇಗೆಂದು ಯೋಚಿಸುವವರಿಗೆ ಅದೊಂದು ಸವಾಲಿದ್ದಂತೆ. ಇವರ ಕಿರಿಕಿರಿಯ ಚೇಷ್ಟೆಗಳು ಬೆಳಗ್ಗೆ ಏಳುವಾಗಿಂದಲೇ ಶುರುವಾಗುತ್ತೆ. ಆಗಲೇ ಅವರ ಮೂಡನ್ನು ನಾವು ಗಮನಿಸಬಹುದು. ಎದ್ದೇಳಿ, ಬ್ರಷ್‌ ಮಾಡಿ, ಕಾಫಿ ಕುಡಿಯಿರಿ, ತಿಂಡಿ ತಿನ್ನಿ, ಸ್ನಾನ ಮಾಡಿ ಹೀಗೆ ನಾವು ಹೇಳ್ತಿದ್ದರೂ ಅವರು ಅದಕ್ಕೆ ತದ್ವಿರುದ್ಧವಾಗಿಯೋ, ಇಲ್ಲವೇ ಯದ್ವಾತದ್ವಾ ಮಾತಾಡಿ, ನಮಗೆ ಸಿಟ್ಟು ಬರಿಸುವಲ್ಲಿ ನಿಸ್ಸೀಮರು. ಏಕೆಂದರೆ, ನಾವು ಸಿಟ್ಟಲ್ಲಿ ಒಂದು ಮಾತಾಡಿದರೆ, ಇಡೀ ದಿನವೆಲ್ಲಾ ಆ ಮಾತು ಹಿಡಿದೇ ಗೊಣಗುತ್ತಲೇ ನಮ್ಮನ್ನು ಕಿರಿಕಿರಿ ಮಾಡುತ್ತಲೇ, ಅಂತೂ ನಮ್ಮ ತಲೆ ಬಿಟ್ಟು ಮೆದುಳಿಗೆ ಕೈಹಾಕಿಬಿಡುತ್ತಾರೆ. ಸಂಜೆಯಷ್ಟರಲ್ಲಿ ನಮ್ಮನ್ನು ಸಾಕು ಬೇಕೆನಿಸಿಬಿಡುತ್ತಾರೆ. ಅಪರಾಧಿಗಳನ್ನಾಗಿಸಿ ಬಿಡುತ್ತಾರೆ.

ಅದಕ್ಕೆ ಅವರ ಮೂಡಿಗೆ ತಕ್ಕಂತೆ ನಾವೂ ಆ….ಊ… ಉತ್ತರಗಳು ಕೊಟ್ಟುಕೊಂಡು ಸುಮ್ಮನಿದ್ದುಬಿಟ್ಟರೆ, ಆಗ ಅವರಿಗೇ ನಾವ್ಯಾಕೆ ಏನು ಸಿಟ್ಟು ಮಾಡಿಲ್ಲವೆಂಬ ಚಿಂತೆ ಅವರ ತಲೆಗೆ ಹೊಕ್ಕು, ಸುಮ್ಮನಾಗುವುದೂ ಇದೆ. ಆದರೆ ಕೆಲವು ಮನೆಗಳಲ್ಲಿ ಪುರುಷ ಪ್ರಧಾನ ಪ್ರತಾಪವಿನ್ನು ಮುಂದುವರಿದಿದ್ದರೆ, ಅಂತಹ ಮನೆಗಳಲ್ಲಿ ಅತ್ತೆಯ ದರ್ಬಾರು ಒಂದು ಕೈ ಮುಂದೇ ಇರುತ್ತೆ. ಸೊಸೆ ಕುಂತರೂ, ನಿಂತರೂ ಕ್ಯಾತೆ ತೆಗೆದು ಮಗನ ಬಳಿ ದೂರುವುದು, ಅವರು ಅದನ್ನೇ ನಮ್ಮಮ್ಮಂಗೆ ಹಾಗೆ ಹೇಳಿದೆ, ಹೀಗೆ ಮಾಡಿದೆ. ಅವರು ಹಿರಿಯರು ಅವರು ಹೇಳಿದ್ದೇ ಸರಿ ಎಂದೆಲ್ಲಾ ತಮ್ಮ ಗಡುಸುತನ ತೋರುವುದಕ್ಕೇನು ಕೊರತೆ ಇರಲ್ಲ.

ಹಾಗೆಯೇ ಕೆಲ ಕುಟುಂಬಗಳಲ್ಲಿ ಮಹಿಳಾಗಟ್ಟಿದನಿಗಳು ಇಲ್ಲದಿಲ್ಲ. ಅಲ್ಲಿ ಅತ್ತೆಯ ಮಾತು ಮೂಲೆಯಲ್ಲಿ ಕಸಕ್ಕೆಸೆದಂತೆ. ಅವರೇನೆ ಹೇಳಿದರು, ಗಂಡನಿಗೆ ತಿರುಗಿಸಿ ಹೇಳಿ ತಮ್ಮನ್ನು ಸಮರ್ಥಿಸಿಕೊಳ್ಳುವ ಸೊಸೆಯಂದಿರ ಸಾಮರ್ಥ್ಯವೂ ಇಲ್ಲದಿಲ್ಲ.

ಇವೆಲ್ಲವನ್ನು ಪಕ್ಕಕ್ಕಿಟ್ಟರೆ, ಅತ್ತೆ-ಮಾವ ವಯಸ್ಸಾದವರು, ಏನೋ ಅವರ ಮನಸ್ಸಿನ ತೃಪ್ತಿಗೆ ಏನೋ ಮಾತಾಡಿಕೊಳ್ತಾರೆ ಎಂದು ಸುಮ್ಮನೆ ಅವರ ಮಾತಿಗೆ ಬೆಲೆ ಕೊಡುವ ಕಿರಿಯರು ಇದ್ದಾರೆ.

ಅದು, ಇದು ಎಲ್ಲವೂ ಬಿಟ್ಟು, ಹಿರೀಕರೊಂದಿಗೆ ಕಿರಿಯರು ಅನುಸರಿಸಿಕೊಂಡು ಹೋಗುವುದು ಹೇಗೆಂಬುದೇ ಇಲ್ಲಿ ವಿಷಯ. ವಯಸ್ಸಾದವರೊಂದಿಗೆ ದಿನವೂ ಎಂತ ಮಾತಾಡಲಿರುತ್ತೆ ಅಂತ ಯೋಚನೆ ಮಾಡುವ ಸೊಸೆಯಂದಿರು ಮಾಡಬೇಕಿರುವುದೇನೆಂದರೆ, ಅವರೊಂದಿಗೆ ಬೆಳಗ್ಗೆ ಎದ್ದಾಗಿಂದ ನಾಲ್ಕು ಸಕಾರಾತ್ಮಕ ಮಾತುಗಳನ್ನು ಆಡಿಕೊಂಡಿದ್ದರೆ, ಅವರು ಕೂಡ ಬಾರಿ ಉತ್ಸಾಹ, ಹುರುಪಿನಿಂದ ದಿನವೆಲ್ಲಾ ನಗುನಗುತಾ, ಖುಷಿಖುಷಿಯಾಗಿ ಕಳೆದುಬಿಡುವರು. ಇದು ನನ್ನ ಪ್ರಯೋಗವೂ ಹೌದು. ಇದರಿಂದ ಸೊಸೆಗೆ ಆಗುವ ನಷ್ಟವೇನೂ ಇಲ್ಲ. ಆದರೆ, ಇದಕ್ಕೆಲ್ಲಾ ತಾಳ್ಮೆಯ ಮನಸ್ಥಿತಿ ಮುಖ್ಯ. ಅದೊಂದಿದ್ದರೆ ಎಂತಹ ಅತ್ತೆ-ಮಾವನ್ನಾದರೂ ಸಂಭಾಳಿಸಬಹುದು. ಉದಾಹರಣೆಗೆ ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳು ಅಂದರೆ ಅವರಿಗೆ ಮಾಡುವ ಉತ್ಸಾಹವಿದ್ದಲ್ಲಿ, ತರಕಾರಿ ಹಚ್ಚುವುದು ಇಲ್ಲವೇ, ಶುದ್ಧ ಮಾಡುವುದು, ಸೊಪ್ಪು ಬಿಡಿಸುವುದು, ಕಾಳು, ಆಯ್ದುಕೊಡುವುದು ಇಂತಹ ಕೆಲಸಗಳನ್ನು ಕೊಟ್ಟುಬಿಟ್ಟರೆ ಅವರ ಪಾಡಿಗವರು ಕುಳಿತು ಈ ಕೆಲಸದಲ್ಲೇ ಲೀನವಾಗುವರು. ಅಲ್ಲದೆ, ಅವರ ಕಾಲದ ಕೆಲವು ವಿಚಾರಗಳನ್ನು ಹೇಳಿಕೊಳ್ತಾ ಖುಷಿಖುಷಿಯಿಂದ ಆ ಕೆಲಸದಲ್ಲಿ ತೊಡಗುವರು. ಗಂಡ-ಹೆಂಡತಿ ಇಬ್ಬರು ಇದ್ದರಂತೂ ಮತ್ತಷ್ಟು ಸುಲಭ. ಅವರಿಬ್ಬರೇ ಅವರ ಕಾಲದ ಯಾವುಯಾವುದೋ ವಿಚಾರಗಳನ್ನು ಹೇಳಿಕೊಂಡು, ಕತೆಗಳನ್ನು ನೆನಪಿಸಿಕೊಂಡು ಮಾತಾಡುತ್ತಲೇ ನಾವು ಕೊಟ್ಟ ಸಣ್ಣ ಕೆಲಸವನ್ನು ಮಾಡಿಕೊಡುತ್ತಾ ಇದ್ದುಬಿಡುವರು.

ಈ ವೇಳೆ ಅವರಿಗೆ ಆಗಾಗ ಅವರಿಗೆ ಅಗತ್ಯ ಕಾಫಿಯೋ, ಟೀನೋ ಕೊಟ್ಟುಬಿಟ್ಟುರಂತೂ ಸೊಸೆಯ ಮುಂದೆ ಮಗಳ ವ್ಯಾಮೋಹವವನ್ನೇ ಮರೆತು ಬಿಡುವರು. ಮನೆಗೆ ಸೊಸೆಯ ಕಡೆಯ ಅಮ್ಮನೋ, ತಂಗಿಯೋ ಬಂದಾಗಲೂ ಅವರನ್ನೊಮ್ಮೆ ಚೆನ್ನಾಗಿದ್ದೀರಾ ಅಂತ ಮಾತನಾಡಿಸಿಟ್ಟರಷ್ಟೇ ಸಾಕು, ಅವರಿಗೆ ತುಂಬಾ ತೃಪ್ತಿ. ಆದರೆ, ಕೆಲವು ಮನೆಗಳಲ್ಲಿ ಸೊಸೆಯ ಕಡೆಯ ನೆಂಟರಿಷ್ಟರು ಅತ್ತೆ-ಮಾವನ್ನ ಮಾತನಾಡಿಸುವುದು ತುಂಬಾ ಕಡಿಮೆ. ಆಗ ಅವರಲ್ಲಿ ಇವರ ಮೇಲೆ ದ್ವೇಷ, ಅಸೂಯೆ, ಕೋಪತಾಪ ಹುಟ್ಟುತ್ತೆ. ನಮ್ಮ ಒಂದು ಮಾತಿನಿಂದ ಎರಡು ಜೀವಗಳು ಸಂತೃಪ್ತಿ, ಸಂತೋಷ ಅನುಭವಿಸುವುದಾದರೆ ನಾವೇಕೆ ಮಾತನಾಡಬಾರದು ಅಂತ ಸ್ವಯಂ ಇಚ್ಚೆಯಿಂದ ಮಾತನಾಡುವುದು ಉತ್ತಮ.

ಬಹುತೇಕ ಸೊಸೆಯ ತವರಿನವರು ಅತ್ತೆ ಮೇಲೆ ಕಾಳಜಿ ವಹಿಸುವುದಿಲ್ಲ. ಅವರ ಮಗನೊಂದಿಗೆ ನಮ್ಮ ಮಗಳು ಬಾಳು ಹಂಚಿಕೊಂಡಿದ್ದಾಳೆ ಅನ್ನುವ ವಿವೇಚನೆ ಇಲ್ಲದೆ, ಸೊಸೆಗೆ ಅತ್ತೆಯ ಮೇಲೆ ಕೆಲವು ಸಲ್ಲದ ವಿಚಾರಗಳನ್ನು ಹೇಳಿ ಸೊಸೆಯ ಮನದಲ್ಲಿ ಗೊಂದಲ ಹುಟ್ಟಿಸುವ ಮನಸ್ಥಿತಿಗಳು ಇವೆ. ವಿಚಾರವಂತ ಸೊಸೆಯಾದರೆ ಅದಕ್ಕೆಲ್ಲಾ ಸೊಪ್ಪು ಹಾಕಲ್ಲ. ಅವರೆಷ್ಟೇ ಹೇಳಿದರೂ ತಾನು ತನ್ನ, ಸಂಸಾರ, ಕರ್ತವ್ಯ, ಬಾದ್ಯತೆ ಹೀಗಿ ಸಕಾರಾತ್ಮಕವಾಗಿ ಯೋಚಿಸಿ ಅವರು ಹೇಳುವುದನ್ನು ಅಲ್ಲಿಯೇ ಗಾಳಿಗೆ ಬಿಟ್ಟು, ತಾನು ಮಾತ್ರ ಅತ್ತೆ-ಮಾವನೊಂದಿಗೆ ಎಂದಿನಂತೆ ಚೆನ್ನಾಗಿಯೇ ವರ್ತಿಸುವರು. ಇಂತಹ ಮನಸ್ಥಿತಿ ಇರುವವರು ವಿರಳವೆಂದೇ ಹೇಳಬಹುದು. ಆದರೆ, ಎಲ್ಲರೂ ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡಾಗ ಹಿರಿಯರೊಂದಿಗೆ ಬೆರೆಯುವುದು ತುಂಬಾ ಸುಲಭ. ಭಗವಂತ ಎಲ್ಲಾ ಸೊಸೆ, ಅತ್ತೆ-ಮಾವಂದಿರೊಂದಿಗೆ ಬೆರೆತು ಅನ್ಯೋನ್ಯವಾಗಿ ನಡೆದುಕೊಳ್ಳಬೇಕೆಂದೇ ಬಯಸೋಣ.

ಹಿಂದಿನ ಸಂಚಿಕೆಗಳು :


  • ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW