ಬಹುತೇಕ ಹಿರಿಯರು ಇಂದು ಆಸರೆಯಿಲ್ಲದೆ, ಒಂಟಿಯಾಗಿ, ಅಸಹಾಯಕತೆ, ಅಭದ್ರತೆಯಿಂದ ಬದುಕುತ್ತಿದ್ದಾರೆ. ವೃದ್ಧರು ನೆಮ್ಮದಿಯ ಜೀವನ ನಡೆಸಲು ಪೂರಕ ಯೋಜನೆ ಈ ಆಸರೆಯಾಗಿದೆ.ಏನಿದು ಆಸರೆ ಯೋಜನೆ. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ‘ಇಳಿಸಂಜೆ’ ಅಂಕಣದಲ್ಲಿ ‘ಹಿರಿಯರಿಗಾಗಿ ‘ಆಸರೆ ಯೋಜನೆ’ ಕುರಿತು ತಪ್ಪದೆ ಮುಂದೆ ಓದಿ…
ಆಧುನಿಕ ಸಮಾಜದಲ್ಲಿ ವೃದ್ಧರ ನಿರ್ಲಕ್ಷಿಸುವ ಪ್ರಕರಣಗಳು ದಿನೆದಿನೇ ಹೆಚ್ಚುತ್ತಿವೆ. ದಿನವೂ ಸಾಮಾಜಿಕ ಜಾಲತಾಣ, ದಿನಪತ್ರಿಕೆ, ಚಾನಲ್‌ಗಳಲ್ಲಿ ವೃದ್ಧರ ಬವಣೆಗಳನ್ನು ಕೇಳುತ್ತಾ, ನೋಡುತ್ತಾ, ಓದುತ್ತಿದ್ದೇವೆ. ವಿದೇಶದಲ್ಲಿರುವ ಮಕ್ಕಳದ್ದು ಒಂದು ರೀತಿಯಾದರೆ, ನಗರ, ಪಟ್ಟಣ, ಹಳ್ಳಿಗಳಲ್ಲಿರುವ ವೃದ್ಧರ ನೋವು ಮತ್ತೊಂದು ರೀತಿಯದ್ದು. ಒಟ್ಟಾರೆ ಹಿರಿಯ ನಾಗರಿಕರ ಮಾನಸಿಕ ಹಿಂಸೆ ಮಿತಿ ಮೀರುತ್ತಿದೆ ಎಂದೇ ಹೇಳಬಹುದು.
ಇಂತಹ ಪ್ರಕರಣಗಳ ಒಳಗಿನ ಕತೆಗಳೇನೇ ಇದ್ದರು, ಅವರಿಗೂ ನಾಗರಿಕ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ. ಅವರನ್ನು ನೋಡಿಕೊಳ್ಳಬೇಕಾದುದು ಹೆತ್ತ ಮಕ್ಕಳ ಕರ್ತವ್ಯ, ಜವಾಬ್ದಾರಿ, ಹೊಣೆ. ಇದು ಆದಿಯಿಂದಲೂ ಪಾಲಿಸಿಕೊಂಡು ಬಂದಿರುವ ಸಾಮಾಜಿಕ ಕಾನೂನು ಎಂದೇ ಇಟ್ಟುಕೊಳ್ಳೋಣ. ಆದರೆ, ಸಾಮಾಜಿಕ ಕಾನೂನನ್ನೂ ಮೀರಿದ್ದು ಒಂದಿದೆ. ಅದುವೇ ಮಾನವೀಯತೆ. ಅದು ಇಂದಿನ ದಿನಗಳಲ್ಲಿ ಹೇಳಕ್ಕೂ ಕೇಳಕ್ಕೂ ಅಷ್ಟೇ ಚೆಂದ, ಪಾಲಿಸಲಿಕ್ಕಲ್ಲ ಎಂಬಂತಾಗಿದೆ. ಬಹುತೇಕ ಹಿರಿಯರು ಇಂದು ಆಸರೆಯಿಲ್ಲದೆ, ಒಂಟಿಯಾಗಿಯೋ, ದಂಪತಿಯೋ ಅಲ್ಲೋಇಲ್ಲೋ, ತಮ್ಮ ಅನಾರೋಗ್ಯ, ಅಸಹಾಯಕತೆ, ಅಭದ್ರತೆಯಿಂದ ಜೀವ ಅಂಗೈಯಲ್ಲಿಟ್ಟುಕೊಂಡು ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಹಿರಿಯರನ್ನು ಹೆತ್ತ ಮಕ್ಕಳೇ ವಿವಿಧ ರೀತಿಯ ಸಂಕಷ್ಟಗಳಿಗೆ ದೂಡುತ್ತಿರುವ ಕರುಳು ಹಿಂಡುವ ಭಯಾನಕ ಕತೆಗಳು ಬೆಳಕಿಗೆ ಬರುತ್ತಿವೆ.

ಮಕ್ಕಳೇ ಸರ್ವಸ್ವ, ಅವರೇ ನಮ್ಮುಸಿರೆಂದು ಮಕ್ಕಳು ಹುಟ್ಟಿದಂದಿನಿಂದಲೂ ಅವರ ಒಳಿತನ್ನೇ ಬಯಸುವ ಹಿರಿಜೀವಿಗಳಿಂದು ಒಪ್ಪತ್ತಿನ ಊಟಕ್ಕೂ ಅವರ ಬಳಿ ಭಿಕ್ಷೆ ಬೇಡುವಂತಾಗಿದೆ. ಹಿರಿಯರು ಆಸ್ತಿ ಕೊಡಲಿಲ್ಲವೆಂದು ಮನೆಯಿಂದ ಹೊರಗಟ್ಟುವುದು, ಅವರಿಗೆ ಮಾನಸಿಕ ಕಿರುಕುಳ ನೀಡಿ ಕೊನೆಗೂ ಆಸ್ತಿ ಬರೆಯಿಸಿಕೊಂಡು, ಹೊರದಬ್ಬುವ ಕಸಾಯಿ ಮಕ್ಕಳನ್ನು ಕೂಡ ನಾವಿಂದು ಕಾಣುತ್ತಿದ್ದೇವೆ. ಹಾಗೆಯೇ ಮಕ್ಕಳ ಮೇಲಿನ ನಂಬಿಕೆಯಿಂದ ಇರೋಬರೋ ಆಸ್ತಿಪಾಸ್ತಿ ಎಲ್ಲಾ ಅವರಿಗೆ ಬರೆದುಕೊಟ್ಟು, ಅವರು ಹೊರ ಹಾಕುವ ಸ್ವಾರ್ಥ ಮಕ್ಕಳಿಗೇನೂ ಕಡಿಮೆಯಿಲ್ಲ. ಒಂದಷ್ಟು ಹಣ ಬಿಸಾಕಿ ಯಾವುದೋ ಒಂದು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ನಿರ್ದಯಿ ಮಕ್ಕಳು ಮತ್ತೆಂದೂ ಅತ್ತ ಹೆಜ್ಜೆ ಹಾಕುತ್ತಿಲ್ಲ.
ಇಂತಹ ಕಣ್ಣೀರ ಕಥೆ-ವ್ಯಥೆಗಳನ್ನು ಕಂಡು ಸರ್ಕಾರವೇ ಯೋಜನೆಯೊಂದನ್ನು ಹಿರಿಯರಿಗಾಗಿ ಜಾರಿಗೊಳಿಸಿದೆ. ಅದುವೇ “ಆಸರೆ” ಯೋಜನೆ. ಇದು ವೃದ್ಧರಿಗಾಗಿಯೇ ಜಾರಿಗೊಳಿಸಿರುವ ಯೋಜನೆ. ಯೋಜನೆಯ ಉದ್ದೇಶ ವೃದ್ಧರಲ್ಲಿ ಆತ್ಮಸ್ಥೈರ್ಯ ತುಂಬುವುದು. ಅಭದ್ರತೆ, ಅಸುರಕ್ಷತೆಯನ್ನು ಹೋಗಲಾಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಹೆಗಲು ಕೊಡುವುದು. ಅವರು ಸಮಾಜದಲ್ಲಿ ತಮ್ಮತಮ್ಮ ಮನೆಗಳಲ್ಲಿ ನಿರ್ಭಯವಾಗಿ ಬದುಕಲು ಆಸರೆ ನೀಡುವುದು.
ಹಾಗೆಯೇ ನಿರ್ದಯಿ ಮಕ್ಕಳು, ಇಲ್ಲವೇ ಸಂಬಂಧಿಕರು, ನೆರೆಹೊರೆ.. ಹೀಗೆ ಯಾರೇ ಹಿರಿಯರಿಗೆ ಕಿರುಕುಳ, ಹಿಂಸೆ, ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯ ಮಾಡಿದರೂ ಕ್ರಮ ಕೈಗೊಳ್ಳುವ ವ್ಯವಸ್ಥೆ ಅವರಿಗೆ ಕಲ್ಪಿಸಿದೆ. ಹಿರಿಯರ ಆಸ್ತಿ ಪಡೆದು ಅವರನ್ನು ನಿರ್ಲಕ್ಷಿಸಿದರೂ ಅದಕ್ಕೊಂದು ಪರಿಹಾರ ಕಂಡುಕೊಡುವ ಹೊಣೆಯನ್ನು ಆಸರೆ ಯೋಜನೆ ಹೊತ್ತಿದೆ.
“ಆಸರೆ” ಅಂದರೇನು? ಯಾವ ರೀತಿ ಹಿರಿಯರಿಗೆ ಸಹಾಯವಾಗಲಿದೆ?

- ಪ್ರತಿ ಪೊಲೀಸ್ ಠಾಣೆಯಲ್ಲಿಯೂ ಹಿರಿಯರ ಸಹಾಯವಾಣಿ ಕೇಂದ್ರವಿರುತ್ತದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿರಿಯರು, ಒಂಟಿ ಮಹಿಳೆಯರ ಪಟ್ಟಿ ಮಾಡಿಕೊಳ್ಳಲಾಗುವುದು. ಅವರನ್ನು ಕೇಂದ್ರದ ಸಿಬ್ಬಂದಿ ಭೇಟಿ ಮಾಡಿ ಅವರ ಸಂಪೂರ್ಣ ಮಾಹಿತಿ ಪಡೆಯುವರು.
- ಪ್ರತಿ ವಾರಕ್ಕೊಮ್ಮೆ ಪೊಲೀಸರು ಒಂಟಿ ಹಿರಿಯರು ಅಥವಾ ಮಹಿಳೆಯರ ಮನೆಗೆ ಅಥವಾ ವಾಸಸ್ಥಳಕ್ಕೆ ಸೌಹಾರ್ದ ಭೇಟಿ ನೀಡುವರು. ಅವರ ಯೋಗಕ್ಷೇಮ ಕೇಳುವರು, ಅವರಿಗೆ ಯಾರಿಂದಳಾದರೂ ಸಮಸ್ಯೆ, ಕಿರುಕುಳವಿದ್ದರೆ, ಆರೋಗ್ಯ ಸಮಸ್ಯೆಗಳಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಲು ಸಹಕರಿಸುವರು. ಅವರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವರು.
- ಹಿರಿಯರು ಅಥವಾ ಒಂಟಿ ಮಹಿಳೆಯರ ನಿಯಮಿತ ಸಂಪರ್ಕಕ್ಕಾಗಿ ಅವರ ಮನೆಗಳ ಬಳಿ ಬೀಟ್ ಪಾಯಿಂಟ್ ಮತ್ತು ಪಾಯಿಂಟ್ ಬುಕ್‌ಗಳನ್ನಿಡುವರು. ಹೀಗೆ ಪೊಲೀಸರು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಹಾಗೆಯೇ ಹಿರಿಯರಿಗೆ ಯಾವುದೇ ಸಮಯದಲ್ಲಿ ಏನೇ ಆಪತ್ತು ಸಂಭವಿಸಿದರು, ಯಾರಾದರೂ ಕಿರುಕುಳ ಕೊಟ್ಟರೂ ಅಥವಾ ಏನೇ ಸಮಸ್ಯೆ ಬಂದರೂ ಪೊಲೀಸರಿಗೆ ಕರೆ ಮಾಡಿದ ಕೂಡಲೇ ಸ್ಪಂದಿಸಿ ಅವರ ಸಮಸ್ಯೆಯನ್ನು ಬಗೆಹರಿಸುವರು.
- ಹಿರಿಯರು ಅಥವಾ ಒಂಟಿ ಮಹಿಳೆಯರಿಂದ ಸಂಕಷ್ಟದಲ್ಲಿದ್ದೇವೆಂದು ತುರ್ತು ಕಾಲ್ ಬಂದರೆ, ಕೂಡಲೇ ಪೊಲೀಸರು ಸನ್ನದ್ದರಾಗಿ ಅವರ ನೆರವಿಗೆ ಧಾವಿಸುವರು.
- ಅನಾರೋಗ್ಯಕ್ಕೆ ತುತ್ತಾದರೂ ಕೂಡಲೇ ಸಮೀಪದ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಮತ್ತು ಆಂಬ್ಯುಲೆನ್ಸ್ ಸೇವೆ ಒದಗಿಸಲು ಪೊಲೀಸರು ಸಹಾಯ ಮಾಡುವರು.
- ಅನೇಕ ಮನೆಗಳಲ್ಲಿ ಸ್ವಂತ ಮಕ್ಕಳಿಂದ ನಿರ್ಲಕ್ಷ್ಯಕ್ಕೆ, ದೌರ್ಜನ್ಯಕ್ಕೆ ಒಳಪಟ್ಟರೆ, ಅಂತಹ ಸಮಯದಲ್ಲಿ ಹಿರಿಯರು ಹಿಂಜರಿಯದೆ ಪೊಲೀಸರಿಗೆ ಮಾಹಿತಿ ತಿಳಿಸಿದರೆ, ಕುಟುಂಬದ ಸದಸ್ಯರನ್ನು ಕರೆದು ಅವರೊಂದಿಗೆ ಸಮಾಲೋಚಿಸಿ, ಹಿರಿಯರ ಸಮಸ್ಯೆಯನ್ನು ಬಗೆಹರಿಸಿ ಅವರಿಗೆ ರಕ್ಷಣೆ ಕಲ್ಪಿಸುವರು.
- ಹಿರಿಯರು, ಮಹಿಳೆಯರು, ವಿಧವೆಯರಿಗೆ ಸರ್ಕಾರದ ಕಲ್ಯಾಣ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ಮತ್ತು ಆ ಯೋಜನೆಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲು ಪೊಲೀಸರು ಸಹಾಯ ಮಾಡುವರು.
- ಹಿರಿಯರನ್ನು ಪಾಲನೆ, ಪೋಷಣೆ ವಿಚಾರದಲ್ಲಿ ವಂಚನೆ ಮಾಡಿದರೆ, ಆಸ್ತಿ ವಿಚಾರಗಳಿದ್ದರೆ, ಹಿರಿಯರಿಂದ ಆಸ್ತಿ ಬರೆಸಿಕೊಂಡು ಅವರಿಗೆ ಮೋಸ, ಅನ್ಯಾಯ, ವಂಚನೆ ಮಾಡಿದರೆ ಅಂತಹ ಸಮಯದಲ್ಲಿ ಪೊಲೀಸರು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ನ್ಯಾಯ ತೀರ್ಮಾನ ಮಾಡುವರು. ಅದು ಸಾಧ್ಯವಿಲ್ಲದ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿ ವಿಚಾರಣೆ ಮಾಡಿ ನ್ಯಾಯ ದೊರಕಿಸಿಕೊಡುವರು.
ಈಗಾಗಲೇ ಕೆಲವು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಕಾರ್ಯಾಚರಣೆಯಲ್ಲಿರುವ ಆಸರೆ ಯೋಜನೆಯಡಿ, ಅನೇಕ ವೃದ್ಧರಿಗೆ ನ್ಯಾಯ ಒದಗಿಸಿಕೊಟ್ಟಿದೆ. ವೃದ್ಧರು ನೆಮ್ಮದಿಯ ಜೀವನ ನಡೆಸಲು ಪೂರಕ ಯೋಜನೆ ಈ ಆಸರೆ. ಹಿರಿಯರೆ ನಿಮ್ಮ ನೋವು, ವಂಚನೆ, ಅನ್ಯಾಯಗಳಿದ್ದಲ್ಲಿ ಪೊಲೀಸರೊಂದಿಗೆ ಹಂಚಿಕೊಂಡು ನೆಮ್ಮದಿ ಜೀವನ ಕಂಡುಕೊಳ್ಳಿ, ನಿಮಗಾಗಿ ನಿಮ್ಮ ಆಸರೆ.
- ಹಿಂದಿನ ಸಂಚಿಕೆಗಳು :
- ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.
