ಸಂಶೋಧನೆಯ ಪ್ರಕಾರ ನೇರಳೆ ಹಣ್ಣು, ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು, ಮೂತ್ರ ಹಾಗೂ ಬೆವರಿನ ಮೂಲಕ ದೇಹದಲ್ಲಿನ ಕಲ್ಮಷಗಳನ್ನು ಹೊರದೂಡುವಲ್ಲಿ ಸಹಾಯ ಮಾಡುತ್ತದೆ. ಸೌಮ್ಯ ಸನತ್ ಅವರು ನೇರಳೆ ಹಣ್ಣಿನ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬಹಳಷ್ಟು ಜನ ನೈಸರ್ಗಿಕವಾಗಿ ನಮಗೆ ದೊರೆಯುವ ಪದಾರ್ಥಗಳನ್ನು ತಿಂದು ಉತ್ತಮ ಆರೋಗ್ಯವನ್ನು ಹೊಂದುವ ಬದಲಿಗೆ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ಪದಾರ್ಥಗಳನ್ನು ಕೊಂಡು ತರುತ್ತಾರೆ. ಆದರೆ ದೈವದತ್ತವಾಗಿ ನಮಗೆ ದೊರೆತಿರುವ ಹಣ್ಣುಗಳನ್ನು ನಾವೇಕೆ ಕಡೆಗಣಿಸಬೇಕು…? ಒಂದೊದು ಹಣ್ಣು ಒಂದೊಂದು ರೀತಿಯ ಆರೋಗ್ಯ ಲಾಭ ನೀಡುತ್ತದೆ. ಅದೇ ರೀತಿ ನೇರಳೆ ಹಣ್ಣು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ.
ನೀಲಿ ಬಣ್ಣಕ್ಕೆ ಹೆಸರುವಾಸಿಯಾದ ನೇರಳೆ ಹಣ್ಣು ಮೇ ಮತ್ತು ಜೂನ್‌ನಲ್ಲಿ ಸಿಗುವ ಸೀಸನಲ್ ಹಣ್ಣಾಗಿರುವುದರಿಂದ, ವರ್ಷದಲ್ಲಿ ಒಮ್ಮೆ ಮಾತ್ರ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಈ ಹಣ್ಣು ಅದರ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ಜನರು ಇದನ್ನು ಇಷ್ಟಪಡುತ್ತಾರೆ. ಆಯುರ್ವೇದ ಗುಣಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 100 ಗ್ರಾಂ. ನೇರಳೆ ಹಣ್ಣು ಕ್ಯಾಲರಿ (ಶೇ.6.2), ನಾರಿನಂಶ (ಶೇ.1.9), ಕಾಬೋಹೈಢ್ರೇಡ್ಸ್ (ಶೇ.14), ಖನಿಜಾಂಶ (ಶೇ.1.4), ಕಬ್ಬಿಣ (1.2 ಮಿ.ಗ್ರಾಂ.) ಕ್ಯಾಲ್ಸಿಯಂ (15 ಮಿ.ಗ್ರಾಂ.), ಮಿಟಮಿನ್ ‘ಸಿ’ (ಶೇ.18) ಮತ್ತು ಶೇ.83ರಷ್ಟು ನೀರಿನ ಅಂಶ ಹೊಂದಿರುತ್ತದೆ.
ಫೋಟೋ ಕೃಪೆ : GOOGLE
ನವಿರಾದ ನೇರಳೆ ಹಣ್ಣಿನಲ್ಲಿರುವ ನೂರೆಂಟು ಔಷದೀಯ ಗುಣಗಳು :
1. ನೇರಳೆ ಹಣ್ಣು, ಕ್ಯಾನ್ಸರ್ನಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನೇರಳೆ ಹಣ್ಣು, ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇವುಗಳಲ್ಲಿರುವ ಅಂಶಗಳು ದೇಹದಿಂದ ಫ್ರೀ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೂತ್ರ ಹಾಗೂ ಬೆವರಿನ ಮೂಲಕ ದೇಹದಲ್ಲಿನ ಕಲ್ಮಷಗಳನ್ನು ಹೊರದೂಡುವಲ್ಲಿ ಸಹಾಯ ಮಾಡುತ್ತದೆ.
2. ನೇರಳೆ ಹಣ್ಣು ನಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರ ಇರುತ್ತದೆ. ಕಿಡ್ನಿ ಕಲ್ಲುಗಳಿಂದ ಬಳಲುತ್ತಿರುವವರಿಗೆ ಕೂಡಾ ನೇರಳೆ ಹಣ್ಣು ಬಹಳ ಸಹಕಾರಿ. ಉರಿ ಮೂತ್ರ ಸಮಸ್ಯೆ ಇರುವವರಿಗೆ ಕೂಡಾ ನೇರಳೆ ಹಣ್ಣಿನ ರಸ ರಾಮಬಾಣ ಎನ್ನಲಾಗಿದೆ.
3. ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ನೇರಳೆ ಹಣ್ಣು ಬಹಳ ಉಪಯುಕ್ತವಾಗಿದೆ. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣು. ಆದ್ದರಿಂದ ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಹೆಚ್ಚಾಗಿ ನೇರಳೆ ಹಣ್ಣು ಉಪಯೋಗಿಸಿ.
ಫೋಟೋ ಕೃಪೆ : GOOGLE
4. ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ.
5. ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ನೇರಳೆ ಹಣ್ಣಿನೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.
6. ರುಚಿಯಾಗಿರುವ ನೇರಳೆ ಹಣ್ಣು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಮುಖ್ಯವಾಗಿ ಮೊಡವೆಗಳನ್ನು ನಿವಾರಿಸುವುದಲ್ಲಿ ಇದು ಪರಿಣಾಮಕಾರಿ. ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿ, ದೇಸಿ ಹಸುವಿನ ಹಾಲಿನಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗುತ್ತವೆ.
ಫೋಟೋ ಕೃಪೆ : GOOGLE
7. ನೇರಳೆ ಬೀಜಗಳನ್ನು ಚೆನ್ನಾಗಿ ಒಣಗಿಸಿ, ಸಿಪ್ಪೆ ತೆಗೆದು ಹಸಿರು ಬಣ್ಣದ ಭಾಗವನ್ನು ಮಾತ್ರ ಸಂಗ್ರಹಿಸಿ, ಬಿಸಿಲಲ್ಲಿ ಒಣಗಿಸಿ, ಸರಿಯಾಗಿ ಒಣಗಿದ ಬಳಿಕ ಅದನ್ನು ನಯವಾಗಿ ಪುಡಿಮಾಡಿ, ಒಂದು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಮಗ್ರ ಆರೋಗ್ಯ ಸುಧಾರಣೆ ಕಂಡುಬರುತ್ತದೆ.
8. ಋತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು. ಇದರಲ್ಲಿರುವ ಕಬ್ಬಿಣದ ಅಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ರಕ್ತ ಹೀನತೆಯಿಂದ ಮುಕ್ತಿ ನೀಡುತ್ತದೆ. ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ.
- ಸೌಮ್ಯ ಸನತ್